ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸೆಯದಿರಿ ನುಡಿಯ ನಂಜು

Last Updated 25 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಯಾರು ಏನೇ ಹೇಳಿದ್ರೂ ನಂದೊಂದೇ ಹಟ. ನನಗೆ ಬೇಡ. ಅಕಾಲದಲ್ಲಿ ಪತಿಯನ್ನು ಕಳೆದುಕೊಂಡು ಕುಂಕುಮ ಅಳಿಸಿ ಹೋಯಿತು.  ಕಿರಿಯ ವಯಸ್ಸಿನಲ್ಲಿಯೇ ವಿಧವೆಯ ಪಟ್ಟ, ನಾನು  ಹಣೆಗೆ ಕುಂಕುಮ ಬೇಡವೇ ಬೇಡ ಎಂದಿದ್ದೆ.  ಅಪ್ಪ, ಅಮ್ಮ, ಸಂಬಂಧಿಕರು ಮನವೊಲಿಸಿದರೂ ಕುಂಕುಮ ಹಚ್ಚುವುದನ್ನು ವಿರೋಧಿಸಿದ್ದೆ.

ಮೀಟಿಂಗು, ಕಾರ್ಯಕ್ರಮ ಹಾಗೂ ಕೆಲಸದ ನಿಮಿತ್ತ ಊರಿಗೆ  ಹೋಗುವಾಗ ಎಲ್ಲರದೂ ಒಂದೇ ಪ್ರಶ್ನೆ. ಯಾಕೆ ಮೇಡಂ ಬಿಂದಿ ಇಟ್ಟುಕೊಂಡಿಲ್ಲ? ಇಲ್ಲ ಮರೆತು ಬಂದೆ, ಎಂದರೆ ನನ್ನ ಹತ್ತಿರ ಇದೆ ಎಂದೂ, ನಾನು ಇಟುಕೊಳ್ಳುವುದಿಲ್ಲವೆಂದರೆ ಏನಾಗಿತ್ತು ನಿಮ್ಮ ಯಜಮಾನರಿಗೆ? ನಿಮ್ಮನ್ನು ನೋಡಿದ್ರೆ ಅಯ್ಯೋ ಪಾಪ ಅನಿಸುತ್ತಿದೆ. ಏನು ಕೆಲಸ ಮಾಡುತ್ತಿದ್ರು? ಎಷ್ಟು ಮಕ್ಕಳು? ಗಂಡೆಷ್ಟು? ಹೆಣ್ಣೆಷ್ಟು? ಮದುವೆಯಾಗಿ ಎಷ್ಟು ವರ್ಷವಾಗಿತ್ತು? ಉತ್ತರ ತೇಲಿಸಿದಷ್ಟು ಕೆದಕುವವರಿಂದ ಮನಸ್ಸು ರೋಸಿ ಹೋಗಿತ್ತು. ಹಣೆ, ಕುತ್ತಿಗೆ, ಕಾಲುಗಳತ್ತ ಅವರು ನೋಡುವ ದೃಷ್ಟಿ ಕೂರಲಗಿನಂತೆ ಬಾಧಿಸುತ್ತಿತ್ತು
ಕುಂಕುಮ ಹಚ್ಚುವ ಸೌಭಾಗ್ಯ ಹೆಣ್ಣಿಗೆ ಮದುವೆ ಆದ್ಮೇಲೆ ಬಂದಿಲ್ವಲ್ಲ. ಮೊದಲೇ ಇರುವಂಥದ್ದು. ನೀವೇಕೆ ಹಚ್ಚುವ ಧೈರ್ಯ ಮಾಡಿಲ್ಲ.

ವಿದ್ಯಾವಂತರಾಗಿದ್ದರೂ ಸಂಪ್ರದಾಯದ ಮೊರೆ ಹೋಗಿದ್ದೀರಿ. ನೀವು ಇನ್ನೂ ಯಾವ ಕಾಲದಲ್ಲದ್ದೀರಿ. ಲೇಖನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದೀರಿ. ನೀವೇ ಬದಲಾಗದಿದ್ದರೆ ಹೇಗೆ? ಎಂದು ಲಲಿತಾ ಹೊಸಪೇಟಿ ಮೇಡಂ ಪ್ರೀತಿಯಿಂದ ಗದರುತ್ತಲೇ ಇದ್ದರು.

ವೈಚಾರಿಕ ಯುಗಕ್ಕೂ ಮುತ್ತಿಕೊಂಡ ಸಂಪ್ರದಾಯದ ಆಳವಾದ ಬೇರುಗಳು ಹೇಗೆ ಸುತ್ತಿಕೊಂಡಿವೆ ಎಂಬುದಕ್ಕೆ ಸಾಂಪ್ರದಾಯಿಕವಾಗಿ ಪ್ರಗತಿಪರ ಯೋಚನೆಗಳಿಗೆ ಅಷ್ಟೇನೂ ಬೋಲ್ಡ್ ಆಗಿ ತೆರೆದುಕೊಳ್ಳದ ನಾನೇ ಜ್ವಲಂತ ಸಾಕ್ಷಿಯಾಗಿದ್ದೆ.

ಆತ್ಮೀಯರ ಮದುವೆಗೆ, ಸಂಬಂಧಿಗಳ ಮನೆಗೆ ಹೋದಾಗ ಬೋಳು ಹಣೆ ನೋಡಿ ಅವರು ಕೇಳುತ್ತಿದ್ದ ಪ್ರಶ್ನೆಗಳಿಂದ ಮನಸ್ಸು ಕದಡಿ ರಾಡಿಯಾಗುತ್ತಿತ್ತು. ಹಿಂಸೆ ಎನಿಸುತ್ತಿತ್ತು. ಅವರ ನುಡಿಯ ನಂಜು, ನಾನು ಕುಂಕುಮ ಹಚ್ಚಬಾರದೇಕೆ ಎಂಬ ಪರಿವರ್ತನೆಗೆ ಕಾರಣವಾಯಿತು. 

ಪತಿ ಕಳೆದುಕೊಂಡ ನಂತರ ಬದುಕಿಗೆ ವಿದಾಯ ಹೇಳುವುದಲ್ಲ. ಹೊಸ ಜೀವನವನ್ನು ಸ್ವಾಗತಿಸಬೇಕು. ಮಠ ಮಾನ್ಯಗಳು ಸಂಘ-ಸಂಸ್ಥೆಗಳು ಈ ದಿಶೆಯಲ್ಲಿ ಕ್ರಾಂತಿಕಾರಕ ಹೆಜ್ಜೆ ಯಿಡುತ್ತಿರುವಾಗ  ಮನುಷ್ಯರಾಗಿ, ಮನುಷ್ಯರನ್ನು, ಮನುಷ್ಯರಂತೆ ಕಾಣಬಾರದೇಕೆ?

ವೈಧವ್ಯ ಕೂಡಾ ಎಲ್ಲರಿಗೂ ಹೇಳಿ ಕೇಳಿ, ಒಂದೇ ತೆರನಾಗಿ ಬರುವುದಿಲ್ಲ. ಕೆಲವರಿಗೆ ಮಾನಸಿಕವಾಗಿ ಸನ್ನದ್ಧರಾಗುವಂತೆ ಮಾಡಿದರೆ, ಇನ್ನೂ ಕೆಲವರಿಗೆ  ಧುತ್ತೆಂದು ಚಂಡಮಾರಿಯಂತೆ ಅಪ್ಪಳಿಸಿದ್ದೂ  ಉಂಟು. ಅಂಥ ಸಂದರ್ಭದಲ್ಲಿ ಆ ಒಂಟಿ ಹೆಣ್ಣುಮಗಳಿಗೆ ಬೇಕಾಗಿರುವುದು ಅನುಕಂಪದ ಮಾತುಗಳಲ್ಲ.

ಬದಲಿಗೆ ಆತ್ಮಸ್ಥೈರ್ಯ ತುಂಬುವ ಭರವಸೆಯ ಮಾತುಗಳು. ಕೊಂಕು ನುಡಿಗಳಲ್ಲ, ಜೀವನ ಪ್ರೀತಿಯೆಡೆಗೆ ಹೊರಳಿಸಬೇಕಾದ ಮಾರ್ಗದರ್ಶನ. ಕಾಲಪ್ರವಾಹದಲ್ಲಿ  ನಾನು ಬದಲಾಗಲೊಲ್ಲೆ ಎಂಬ ಸಿನಿಕತನವನ್ನು ಬಿಟ್ಟು, ನಮ್ಮ ಅಸ್ಮಿತೆಯೊಂದಿಗೆ ಬದುಕಬೇಕಾದ ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT