ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಹಿ ಸತ್ಯದ ಕಥೆ, ವ್ಯಥೆ

Last Updated 8 ಜನವರಿ 2016, 19:30 IST
ಅಕ್ಷರ ಗಾತ್ರ

ರಾತ್ರಿ 9 ಗಂಟೆಗೆ ಆತ ತನ್ನ ಹೆಂಡತಿಗೆ ಫೋನ್ ಮಾಡಿದ. ನೀನು ಮಕ್ಕಳನ್ನು ಕರೆದುಕೊಂಡು ಊಟ ಮಾಡಿ ಮಲಗು. ನಾನು ಬರುವುದು ತಡವಾಗುತ್ತದೆ ಎಂದು ಹೇಳಿ ಫೋನ್ ಕಟ್ ಮಾಡಿದ. ಎರಡು ಕಡೆ ಕೆಲಸದ ಚಾರ್ಜ್‌ ಇದ್ದದ್ದು ಹಾಗೂ ಸಾಮಾನ್ಯವಾಗಿ ಕೆಲಸದ ಒತ್ತಡದಿಂದ ತಡವಾಗಿ ಬರುವುದು ಗೊತ್ತಿದ್ದ ಆಕೆ ತನ್ನ ಗಂಡ ಸೀದಾ ಮನೆಗೆ ಬರುವುದಿಲ್ಲ, ಇನ್ನೊಂದೆರಡು ತಾಸಿನಲ್ಲಿ ಆಸ್ಪತ್ರಗೆ ಒಯ್ಯಬೇಕಾಗುತ್ತದೆ ಎಂದು ಆಕೆ ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ.

ಆಫೀಸ್ ಕೆಲಸ ಮುಗಿಸಿಕೊಂಡು ರಾತ್ರಿ ಬೈಕ್ ಮೇಲೆ 40ರಿಂದ 50 ಕಿ.ಮಿ ದಾರಿ ಸವೆಸಿ  ಇನ್ನೇನು ಒಂದು ಕಿ.ಮೀ ದೂರ ಸಾಗಿದರೆ ಮನೆ ಬಂದು ಬಿಡುತ್ತದೆ ಎನ್ನುವಷ್ಟರಲ್ಲಿ ಹಿಂದಿನಿಂದ ಯಾರೋ ಬೈಕ್‌ಅನ್ನು ಎಳೆದಂತಾಯಿತು. ಹಿಂದೆ ಹೊರಳಿ ನೋಡಿದರೆ ಯಾರೂ ಇಲ್ಲ. ಮತ್ತೆ ಮುಂದಕ್ಕೆ ಹೋದಂತೆ ಅದೇ ರೀತಿಯ ಪುನಾರವರ್ತನೆ.

ರಸ್ತೆಯ ಬದಿಯಲ್ಲಿಯೇ ಸ್ಮಶಾನ ಬೇರೆ ಇತ್ತು. ಹೆದರಿಕೆಯಿಂದ ಬೇಗ ಮನೆ ಸೇರಿಕೊಂಡರೆ ಸಾಕು ಎಂದು  ಗಾಡಿಯ ವೇಗ ಹೆಚ್ಚು ಮಾಡಿ ತಿರುವು ರಸ್ತೆಯಲ್ಲಿ ಸಾಗುವಾಗ ಧುತ್ತೆಂದು ಒಮ್ಮೆಲೆ ಪ್ರತ್ಯಕ್ಷವಾದ ಟ್ರ್ಯಾಕ್ಟರ್ ಹೆಡ್ ಲೈಟ್ ಸೀದಾ ತನ್ನೆಡೆಗೆ ಕಣ್ಣಿಗೆ ಕುಕ್ಕಿ, ಬವಳಿ ಬಂದಂತಾಗಿ ಒಂದು ಕ್ಷಣದಲ್ಲಿ ಗಾಡಿ ಮರಕ್ಕೆ ಡಿಕ್ಕಿ ಹೊಡೆದು, ಅದೇ ರಭಸದಲ್ಲಿ ಹಿಂದೆ ಬಂದು ಕಂದಕಕ್ಕೆ ಧೊಪ್ಪೆಂದು ಬಿದ್ದ ವೇಗಕ್ಕೆ ಲಟ, ಲಟವೆಂದು ದೇಹದ ಅಂಗಾಂಗಗಳು ಮುರಿದುದರ ನೋವಿನ ನರಳಾಟದಲ್ಲಿಯೇ ಹೆಂಡತಿ ಹೆದರಿಕೊಂಡಳೆಂದು ಗೆಳೆಯರಿಗೆ ಫೋನ್ ಮಾಡಿದ. ಟ್ರ್ಯಾಕ್ಟರ್ ಸುಳಿವೇ ಇಲ್ಲ.

ಇದೆಲ್ಲ ದೆವ್ವದ ಕಿತಾಪತಿಯೇ ಎಂದು ನಡುಗುತ್ತಿರುವ ದೇಹದ ಮನಸ್ಸಿಗೆ ಅಂದುಕೊಳ್ಳುತ್ತಿರುವಾಗಲೇ 108 ವಾಹನ ಬಂದಾಗಿತ್ತು. ಇದು ಹೇಗಾಯ್ತು ಎಂದು ವೈದ್ಯರು ಕೇಳಿದ ಪ್ರಶ್ನೆಗೆ ಗೋಳಿಡುತ್ತಲೇ ಯಾರೋ ಗಾಡಿ ಜಗ್ಗಿದ್ದು, ಟ್ರ್ಯಾಕ್ಟರ್ ಎದುರಿಗೆ ಬಂದದ್ದು ಅಪಘಾತವಾಗಬಾರದೆಂದು ತಾನು ರಸ್ತೆ ಬದಿಗೆ ಸರಿದು ಬಿದ್ದ ಮೇಲೆ ಟ್ರ್ಯಾಕ್ಟರೂ ಇಲ್ಲ, ಹಿಂದೆ ಜಗ್ಗುವವರೂ ಇಲ್ಲ ಎಂದು ಅವನೇ ಸಾಧ್ಯಾಂತವಾಗಿ ವಿವರಿಸಿದಾಗ ನಮಗೆ ಎಲ್ಲ ಗೊತ್ತಾಗಿದ್ದದ್ದು.

ಬಲಗಾಲು, ಬಲಭುಜ, ಎರಡೂ ಪಕ್ಕಡೆಗಳ ರಿಪ್ಸ, ಹೀಗೆ 9 ಮೂಳೆಗಳು ಮುರಿದಿವೆ. ರೋಗಿಯ ಸ್ಥಿತಿ ಗಂಭೀರ ಇರುವುದರಿಂದ ಬೆಳಗಾಂವಿಗೆ ಒಯ್ಯಿರಿ ಎಂಬ ವೈದ್ಯರ ಧ್ವನಿ ನಮ್ಮನ್ನು ಅಧೀರರನ್ನಾಗಿಸಿತು. ಮುಂದೆ ಆ ದೊಡ್ಡ ಆಸ್ಪತ್ರೆಯಲ್ಲಿ 15 ದಿನದಲ್ಲಿ ದಿನದಿಂದ ದಿನಕ್ಕೆ ಇನ್‌ಫೆಕ್ಷೆನ್ ಜಾಸ್ತಿಯಾಗಿ ಮೂತ್ರಪಿಂಡ, ಹೃದಯಗಳಲ್ಲಿ ರಕ್ತ ಹೆಪ್ಪುಗಟ್ಟಿ ನನ್ನ ಚಿಕ್ಕಮ್ಮನ ಮಗ ಸಾವನ್ನಪ್ಪಿದ. 

ವಿಜ್ಞಾನದ ಸಂಶೋಧನೆಗಳ ಫಲವನ್ನು ಹಾಸುಂಡು ಇಂದು ನಾವು ಬದುಕುತ್ತಿದ್ದರೂ ಈ ಭೂತ, ಪಿಶಾಚಿ, ದೆವ್ವಗಳ ವಿಷಯದಲ್ಲಿ ಇಲ್ಲವೆಂದು ವಾದಿಸುತ್ತಲೇ ಬಂದ ನನಗೆ ಈ ಸನ್ನಿವೇಶ ಆಘಾತವನ್ನುಂಟು ಮಾಡಿದೆ. ಯಾವ ಅಗೋಚರ ಶಕ್ತಿ ಅದು? ಅತೃಪ್ತ ಆತ್ಮವೇ? ಎಂಟತ್ತು ವರ್ಷಗಳಿಂದ ನನ್ನ ತಮ್ಮ ಅದೇ ಹಾದಿಯಲ್ಲಿ ಸಂಚರಿಸುತ್ತಿದ್ದನಲ್ಲ. ಯಾಕೆ ಅಂದು ಹಾಗಾಯಿತು? ಎಂಬ ಮುಂತಾದ ಪ್ರಶ್ನೆಗಳಿಗೆ, ತಮ್ಮನನ್ನು ಕಳೆದುಕೊಂಡ ಕಹಿ ಸತ್ಯದ ವ್ಯಥೆ, ನೋವು ಬಿಟ್ಟರೆ ಇನ್ನೇನು ಉತ್ತರ ಕಂಡುಕೊಳ್ಳಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT