ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂದಲುದುರಲು ಕಾರಣ, ಪರಿಹಾರ

ಸ್ವಾಸ್ಥ್ಯ-ಸೌಂದರ್ಯ
Last Updated 30 ಮೇ 2014, 19:30 IST
ಅಕ್ಷರ ಗಾತ್ರ

ಭಾರತೀಯ ಮಹಿಳೆಯರಲ್ಲಿ ಕೂದಲುದರಲು ಮುಖ್ಯ ಕಾರಣವೆಂದರೆ ಹೈಪೊ ಥೈರಾಡಿಸಂ ಹಾಗೂ ಅಪೌಷ್ಟಿಕತನ ಎಂದು ಹೇಳಬಹುದು. ಈ ಎರಡೂ ಅಂಶಗಳಿಗೆ ಚಿಕಿತ್ಸೆ ಮತ್ತು ಆರೈಕೆ ಇದ್ದಲ್ಲಿ ಕೂದಲುದುರುವುದನ್ನು ತಡೆಯಬಹುದು.

ಇತರ ಕಾರಣಗಳೆಂದರೆ...
ಬೋಳುತನ: ತಲೆಯಲ್ಲಿ ಅಲ್ಲಲ್ಲೇ ಕೂದಲು ಉದುರುತ್ತ ಹೋಗುವುದು. ಮೊದಲು ಈ ಪ್ರದೇಶ ಪ್ಯಾಚ್‌ಗಳಂತೆ ಕಂಡರೂ ಆರು ತಿಂಗಳ ಅವಧಿಯಲ್ಲಿ ಬೋಳುತನ ಎದ್ದು ಕಾಣುತ್ತದೆ.

ಫಂಗಲ್‌ ಸೋಂಕು: ಮಕ್ಕಳಲ್ಲಿ ಈ ಸೋಂಕು ಕಂಡು ಬರುತ್ತದೆ. ಸೋಂಕಿತ ಪ್ರದೇಶವು ಕೆಂಪಾಗಿದ್ದು, ಕೆರೆತದಿಂದ ಕೂಡಿರುತ್ತದೆ.  ಆ ಪ್ರದೇಶದ ಕೂದಲು ಉದುರಿ ಹೋಗುತ್ತವೆ. ಆದರೆ ಸೋಂಕು ವಿರೋಧಿ ಚಿಕಿತ್ಸೆ ನೀಡಿದ ನಂತರ ಖಂಡಿತವಾಗಿಯೂ ಆ ಪ್ರದೇಶದಲ್ಲಿ ಮತ್ತೆ ಕೂದಲು ಹುಟ್ಟುತ್ತವೆ ಹಾಗೂ ಬೆಳೆಯುತ್ತವೆ. 

ಗರ್ಭಾವಸ್ಥೆ: ಗರ್ಭಾವಸ್ಥೆಯಲ್ಲಿ ಕೂದಲು ಅತಿ ಹೊಳಪಿನಿಂದ ಹಾಗೂ ದಟ್ಟವಾಗಿ ಕಾಣುತ್ತವೆ. ಮಹಿಳೆಯ ಹಾರ್ಮೋನುಗಳಲ್ಲಿ ಆಗುವ ಏರುಪೇರಿನಿಂದಾಗಿ ಹೀಗೆ ಕಾಣಿಸುತ್ತದೆ. ಆದರೆ ಹೆರಿಗೆಯ ನಂತರ ಮತ್ತೆ ಕೂದಲುದುರುತ್ತವೆ. ಇದಕ್ಕೂ ಹಾರ್ಮೋನುಗಳ ಸ್ಥಿತಿಯೇ ಕಾರಣ. 2–3 ವರ್ಷಗಳ ಅವಧಿಯಲ್ಲಿ ಕೂದಲು ಮತ್ತೆ ಮಾಮೂಲಿ ಸ್ಥಿತಿಗೆ ಮರಳುತ್ತದೆ. 

ಗರ್ಭ ನಿರೋಧಕ ಮಾತ್ರೆಗಳ ಸೇವನೆ: ನಿರಂತರವಾಗಿ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಕೂದಲು ಬೆಳೆಯುವುದು ಕ್ಷೀಣಗೊಳ್ಳುತ್ತದೆ. ಕ್ರಮೇಣ ಉದುರುವ ಸಾಧ್ಯತೆಯೂ ಇರುತ್ತದೆ.

ಕಟ್ಟುನಿಟ್ಟಿನ ಡಯಟ್‌: ತೂಕ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಡಯಟ್‌  ಕೈಗೊಂಡಿದ್ದರೆ, ಪ್ರೋಟಿನ್‌ನ ಕೊರತೆಯುಂಟಾದಲ್ಲಿ ಕೂದಲು ಉದುರಬಹುದು.  ಡಯಟ್‌  ಸಂದರ್ಭದಲ್ಲಿ ಸಪ್ಲಿಮೆಂಟ್‌ ಸೇವಿಸುವುದು ಉತ್ತಮ.

ಬಿಗಿಯಾದ ಕೇಶ ಶೈಲಿ: ಕೂದಲನ್ನು ಬಿಗಿಯಾಗಿ ಹೆಣೆಯುವುದು ಕೂದಲಿನ ಬುಡವನ್ನು ಶಿಥಿಲಗೊಳಿಸುತ್ತದೆ. ಆದಷ್ಟು ಸರಳ ಮತ್ತು ಸಡಿಲವಾದ ಕೇಶ ವಿನ್ಯಾಸ ಮಾಡಿಕೊಳ್ಳುವುದು ಕೂದಲಿನ ಆರೋಗ್ಯಕ್ಕೆ ಉತ್ತಮ.

ಕೇಶ ವಿನ್ಯಾಸಕ್ಕೆ ಹೇರ್‌ಸ್ಟ್ರೇಟ್ನಿಂಗ್‌, ಗುಂಗುರು ಮಾಡಿಸಿಕೊಳ್ಳುವುದು, ಮೃದುಗೊಳಿಸುವ ಕೆಮಿಕಲ್ ಆಧಾರಿತ ಚಿಕಿತ್ಸೆಗಳಿಗೆ ಒಳಗಾಗುವುದರ ಪರಿಣಾಮವಾಗಿಯೂ ಕೂದಲುದುರುವ ಸಮಸ್ಯೆಯನ್ನು ಎದುರಿಸಬಹುದು. ಕ್ಯಾನ್ಸರ್‌ ಚಿಕಿತ್ಸೆಗೆ ಒಳಪಡುತ್ತಿದ್ದಲ್ಲಿ, ರೇಡಿಯೇಷನ್‌, ಔಷಧಿ ಅಥವಾ ಕೀಮೊಥೆರಪಿಗೆ ಒಳಪಟ್ಟಿದ್ದಲ್ಲಿ ಕೂದಲುದುರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಅತಿಯಾದ ಒತ್ತಡ: ಅತಿಯಾದ ಒತ್ತಡವೂ ಕೂದಲುದುರಲು ಕಾರಣವಾಗುತ್ತದೆ. ಅದು ದೈಹಿಕವಾಗಿರಬಹುದು. ಮಾನಸಿಕ ಒತ್ತಡವಾಗಿರಬಹುದು.

ಚಿಕಿತ್ಸೆ: ಪೌಷ್ಟಿಕಾಂಶಗಳ ಮರು ಪೂರೈಕೆ ಚಿಕಿತ್ಸೆಯ ಒಂದು ಅಂಶವಾಗಬಹುದು. ಹಾರ್ಮೋನುಗಳಿಗಾಗಿಯೂ ಚಿಕಿತ್ಸೆ ಪಡೆಯಬಹುದು. ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವುದರಿಂದ ಕೂದಲಿನ ಬುಡಕ್ಕೆ ರಕ್ತ ಸರಬರಾಜು ಸರಾಗವಾಗಿ, ಕೂದಲು ಶಕ್ತವಾಗಿ. ನಿರಂತರ ಬೆಳವಣಿಗೆ ಕಾಣಬಹುದು.

ಕೂದಲಿನ ಸಾಂದ್ರತೆ ಕ್ಷೀಣಿಸಿದ್ದಲ್ಲಿ, ನಿಮ್ಮ ಮುಖದ ಆಕಾರಕ್ಕೆ ಹೊಂದುವ ಕೇಶ ವಿನ್ಯಾಶ ಮಾಡಿಸಿಕೊಳ್ಳಬಹುದು. ಬೋಳುತನ ಮರೆಮಾಚಲು ವಿಗ್‌ ಮೊರೆ ಹೋಗಬಹುದು. ಅಥವಾ ಕೂದಲು ಕಸಿ ಸಹ ಮಾಡಿಸಿಕೊಳ್ಳಬಹುದು. ಪರಿಹಾರವು ಸಮಸ್ಯೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಪ್ರತಿ ಪರಿಹಾರಕ್ಕೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಅತ್ಯಗತ್ಯ.

ಮನೆ ಚಿಕಿತ್ಸೆ: ಕೂದಲಿನ ಬುಡಕ್ಕೆ ಉಗುರು ಬಿಸಿ ಎಣ್ಣೆಯಿಂದ ವಾರಕ್ಕೆ ಒಮ್ಮೆ ಮಸಾಜ್‌ ಮಾಡಿ, ತಲೆ ಸ್ನಾನ ಮಾಡಬೇಕು. ಕನಿಷ್ಠ ಮೂರು ತಿಂಗಳವರೆಗಾದರೂ ಈ ಆರೈಕೆ ಮಾಡಬೇಕು. ತಲೆಗೆ ಎಣ್ಣೆ ಲೇಪಿಸಿದ ನಂತರ ಮೂರು ಗಂಟೆಗಿಂತ ಹೆಚ್ಚುಕಾಲ ಬಿಡಬಾರದು.
ಕೂದಲುದುರುತ್ತಿದ್ದರೆ ಹಣ್ಣಾಗಿರುವ ಬಾಳೆಹಣ್ಣಿಗೆ ನಿಂಬೆರಸ ಸೇರಿಸಿ, ಹೇರ್‌ ಪ್ಯಾಕ್‌ ಮಾಡಿಕೊಳ್ಳಬೇಕು. 15 ನಿಮಿಷಗಳ ನಂತರ ಸೂಕ್ತ ಶಾಂಪೂವಿನಿಂದ ತಲೆ ತೊಳೆಯಿರಿ.

ತಲೆಹೊಟ್ಟಿಗೆ ಬಾಚಣಿಕೆಯಿಂದ ಕೂದಲು ಬೇರ್ಪಡಿಸುತ್ತ ತಲೆ ಬುರುಡೆಗೆ ಮೊಸರು ಹಾಗೂ ನಿಂಬೆ ರಸ ಲೇಪಿಸಬೇಕು. 10 ನಿಮಿಷಗಳ ನಂತರ ತೊಳೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT