ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಕ್ಯಾನ್ವಾಸಿನಂತೆ ಪ್ಲೇನ್‌ ಸೀರೆ

ಅರಿವೆಯ ಹರಿವು
Last Updated 27 ಜೂನ್ 2014, 19:30 IST
ಅಕ್ಷರ ಗಾತ್ರ

ಯಾವುದೇ ಪ್ರಿಂಟ್‌, ಗೆರೆ, ಚುಕ್ಕಿ, ಚೌಕಳಿಗಳಿಲ್ಲದ ಖಾಲಿ ಕ್ಯಾನ್ವಾಸಿನಂತಹ ಸೀರೆಗಳಿವೆ. ಪ್ಲೇನ್‌ ಸೀರೆಗಳವು. ಇದೆಂಥ ಸೀರೆ? ಅಂಚಿಲ್ಲ, ಸೆರಗೂ ಇಲ್ಲ..ಸದ್ಯ ಸೀರೆಯಾದರೂ ಇದೆಯಲ್ಲ ಎಂದು ಮೂಗುಮುರಿಯುವ ಹಿರಿಯರ ಮಾತು ಕೇಳೇ ಇಲ್ಲ ಎನ್ನುವಂತೆ ಇದ್ದುಬಿಡುತ್ತೇವೆ. ಹೂ, ಬಳ್ಳಿ, ಎಲೆಗಳಿಲ್ಲದ ನೀರವ ಮೌನ ನೆನಪಿಸುವ ಈ ಬಗೆಯ ಸೀರೆಗಳು ಯಾವಾಗಲೂ ಟ್ರೆಂಡಿಯಾಗಿರುತ್ತವೆ.

ಫ್ಯಾಷನ್‌ ಹೋಗುವುದಿಲ್ಲ ಎಂಬ ಕಾರಣಕ್ಕೆ ಮಾತ್ರ ಕೊಳ್ಳುತ್ತೇವೆಯೆ ನಾವು? ಊಹ್ಞುಂ. ಆದರೆ ಮೌನಕ್ಕೂ ಅರ್ಥವಿದೆ. ಒಂದೊಂದು ಸಲದ ಮೌನವೂ ನಿರ್ದಿಷ್ಟವಾಗಿ ಮಾತನಾಡುತ್ತದೆ. ಅರ್ಥವಾಗದ ಕವನದಂತೆ ಕುತೂಹಲ ಮೂಡಿಸುತ್ತದೆ. ಅರ್ಥವಾಗದೆಯೂ ಇಷ್ಟವಾಗುತ್ತದೆ. ಒಗಟಿನಂತೆ ಕಾಡುತ್ತದೆ.

ಸಿನಿಮಾಗಳಲ್ಲಿ ಇಂಥ ಸೀರೆ ಉಟ್ಟ ನಾಯಕಿ ನಿಸರ್ಗದ ಮಡಿಲಲ್ಲಿ ಮೆಲುವಾಗಿ ಬಳುಕುತ್ತ ಹಾಡುತ್ತಿದ್ದಂತೆ ಒಂದೇ ಹಾಡಿನಲ್ಲಿ ಇಂಥ ಹತ್ತಾರು ತಿಳಿವರ್ಣದ ಸೀರೆಗಳು ಪರದೆ ಮೇಲೆ ಮೋಡಿ ಮಾಡುತ್ತವೆ. ಬಣ್ಣಗಳ ವಿನಾ ಅಲ್ಲೇನಿದೆ? ಯಾಕೆ? ಏನಿಲ್ಲ ಅಲ್ಲಿ?
ಸೀರೆ ವಿನ್ಯಾಸರಹಿತವಾಗಿರುವುದರಿಂದಲೇ ಆಕೆ ಇರುವ ಸನ್ನಿವೇಶದತ್ತ ಗಮನಹರಿಯುವಂತಾಗುತ್ತದೆ. ಸೀರೆಗಿಂತ ಆಕೆಯತ್ತ ಹೆಚ್ಚು ಲಕ್ಷ್ಯ ಹೋಗುತ್ತದೆ.

ಆಕೆಯ ಹಾವ ಭಾವಗಳು, ಹೆಚ್ಚು ಸ್ಪಷ್ಟವಾಗಿ ಉಲಿಯುತ್ತವೆ. ಹಾಗೆಂದು ಸೀರೆಯ ಅಸ್ತಿತ್ವ ಗೌಣವಾಗುವುದಿಲ್ಲ. ಬದಲಾಗಿ ಹೆಚ್ಚಿನ ಮಹತ್ವ ಪಡೆಯುತ್ತದೆ. ನವಿರಾಗಿ ಮೈ ಸೋಕುವ ಫ್ಲೋ ಗುಣ ಇರುವ ಬಟ್ಟೆಯ ಇಂಥ ಸೀರೆ ಪಾರದರ್ಶಕವಾಗಿ ಇದ್ದರಂತೂ ಭಾವೋತ್ಕಟತೆಯ ವಾಹಕದಂತೆ ಕಂಡುಬಿಡುತ್ತದೆ. ಹೆಣ್ತನವೇ ಮೈವೆತ್ತಂತೆ ಸೀರೆ ನುಲಿಯುತ್ತದೆ, ನಾಯಕ ಹತ್ತಿರ ಬಂದರೆ ನಲುಗುತ್ತದೆ.

ಪ್ಲೇನ್‌ ಸೀರೆಗಳು ಒಂಥರ ಬಿಳಿಹಾಳೆಯಂತೆ ಅದರಲ್ಲಿ ಏನು ಮೂಡುವುದನ್ನೂ ಯಾವ ಬರಹವನ್ನೂ ಕಲ್ಪಿಸಿಕೊಳ್ಳಬಹುದು. ಹಾಗಾಗೇ ಸಿನಿಮಾಗಳಲ್ಲೂ ಪ್ಲೇನ್‌ ಸೀರೆ ಬಿಳಿಯ ಬಣ್ಣದ್ದಾದರೆ ಸಂದರ್ಭಕ್ಕೆ ತಕ್ಕಂತೆ ಅಸಹಾಯಕ ಸಂಕಷ್ಟದಲ್ಲಿರುವ ಸ್ತ್ರೀಯ ರೂಪಕವಾಗುತ್ತದೆ. ವೈಧವ್ಯದ ಸಂಕೇತವಾಗುತ್ತದೆ.

ಕೋರಾ ಕಾಗಜ್‌ನಂತಹ ಖಾಲಿತನದ ಹೋಲಿಕೆಗೂ, ಶುದ್ಧತೆಗೂ, ಪ್ರಕೃತಿಯ ಆರಾಧನೆಗೂ ಇಂಥ ಸೀರೆಗಳು ಭಾವ ತುಂಬುತ್ತವೆ. ದಿನಕರನ ಎಳೆಬಿಸಿಲಿಗೆ ಹೊಳೆಯುವ ಹಿಮಾವೃತ ಪರ್ವತವಿರಲಿ, ಬೆಟ್ಟ, ಗುಡ್ಡಗಳ ಶ್ರೇಣಿಯ ಹಚ್ಚ ಹಸುರಿನ ತಪ್ಪಲಿರಲಿ, ಅಲ್ಲಿ ಜುಳುಜುಳು ಹರಿದು ಬರುವ ತಿಳಿನೀರ ನದಿಯಾಗಲೀ, ಹನಿಗಳ ಸಿಂಚನಗೈಯುತ್ತ ರಭಸದಿಂದ ಧುಮ್ಮಿಕ್ಕುವ ಹಾಲಿನಂತಹ ಜಲಪಾತವಿರಲಿ ಹಿನ್ನೆಲೆಯ ಸ್ವಭಾವವನ್ನೇ ಹೊದ್ದಂತೆ ಕಣ್ಸೆಸೆಳೆಯುತ್ತವೆ ಪ್ಲೇನ್‌ ಸೀರೆಗಳು.

ಅನವಶ್ಯಕವಾಗಿ ಗಮನಸೆಳೆಯುವ ಅಲಂಕಾರವೇ ಇಲ್ಲದಂತೆ ಕಾಣುವ ನಿರಾಭರಣ ಸುಂದರಿ ಬೆಳದಿಂಗಳ ತಣ್ಣನೆ ರಾತ್ರಿಯಲ್ಲಿ ಇಂಥ ಸೀರೆಯುಟ್ಟು ನಾಯಕನಿಗೆ ಉಸಿರು ತಾಕುವಷ್ಟು ಹತ್ತಿರವಾದಳೆಂದರೆ ಚಳಿಯಲ್ಲೂ ಬೆಚ್ಚನೆ ಅನುಭವ ಆಗದೆ? ಸಿನಿಮಾಗಳಲ್ಲಿ ಈ ಸೀರೆ ಯಾವ ಯಾವ ಸನ್ನಿವೇಶಗಳಲ್ಲಿ ಕಾಣುತ್ತೊ ಅವೆಲ್ಲವೂ ನಿಜವಾಗಿಯೂ ನಡೆಯುತ್ತವೊ ಇಲ್ಲವೊ, ಆದರೆ ಪ್ಲೇನ್‌ ಸೀರೆಯ ಮೋಹವಂತೂ ಗಂಡು, ಹೆಣ್ಣು ಇಬ್ಬರನ್ನೂ ಬಿಡದಂತೆ ಕಾಡುವುದಂತೂ ನಿಜ.

ಪಾರದರ್ಶಕ ಸೀರೆಯುಡಲು ಮುಜುಗರವೆನಿಸುವವರು, ಇಟಾಲಿಯನ್‌ ಕ್ರೇಪ್‌, ಕ್ರೇಪ್‌ ಸಿಲ್ಕ್‌ನಂತಹ ಸೀರೆಗಳ ಮೊರೆಹೋಗುತ್ತಾರೆ. ಸೀರೆಯ ಬಟ್ಟೆಯ ಗುಣ, ಬಣ್ಣ ಮಾತ್ರ ಎದ್ದುಕಾಣುವಂತಾಗುತ್ತದೆ. ಹಗುರವಾಗಿ ಅಪ್ಪಿಕೊಂಡೇ ಜತೆ ಸಾಗುವ ಶಿಫಾನ್‌, ಜಾರ್ಜೆಟ್‌ನ  ಪ್ಲೇನ್‌ ಸೀರೆಯಂತೂ ಅದ್ಭುತ ಲಹರಿಯಂತೆ... ಪ್ರಣಯಕ್ಕೆ ಮುನ್ನುಡಿಯಂತೆ ತೋರುತ್ತದೆ. ಆಕೆಯ ವ್ಯಕ್ತಿತ್ವ, ಸ್ವಭಾವ, ಭಾವನೆಗಳ ಸ್ಪಷ್ಟ ಅಭಿವ್ಯಕ್ತಿಯಂತೆ ಸೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT