ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಕ್ಕಾಗಿ ತಿರುಪೆ...

ಬಂಗಾರದ ಕಥಿ
Last Updated 23 ಮೇ 2014, 19:30 IST
ಅಕ್ಷರ ಗಾತ್ರ

ಬಂಗಾರದ ಕತೆ ಎಂದೊಡನೆ ನನಗೆ ಮೊದಲು ನೆನಪಾಗಿದ್ದು ನಮ್ಮೂರಿನ ಬಂಗಾರದ ತಿರುಪೆ ಕತೆ. ನಮ್ಮ ಹಳ್ಳಿಗಳಲ್ಲಿ ‘ಬಂಗಾರದ ತಿರುಪೆ’ಗೆ ಬರುವುದು ವಾಡಿಕೆ. ಹುಟ್ಟಿದ ಮಕ್ಕಳು ಬದುಕಿ, ಬಾಳಲಿ ಎಂಬ ಆಶಯದಲ್ಲಿ ಮನೆ ಮನೆಗಳಲ್ಲಿ ತಿರುಪೆಬೇಡಿ ಆ ಹಣದಿಂದ ಆಭರಣ ಮಾಡಿಸಿ ಹಾಕುವುದು ನಮ್ಮ ಹಳ್ಳಿಗಳಲ್ಲಿ ಪ್ರಚಲಿತದಲ್ಲಿರುವ ನಂಬಿಕೆ. 

ಇದು ತಾಯಿಯಿಂದ ಹೊಕ್ಕಳಬಳ್ಳಿ ಬೇರ್ಪಡಿಸುವ ಮೊದಲೇ ‘ಬಂಗಾರ’ ಧರಿಸಿ ಭೂಮಿಗೆ ಬರುವ ಮಕ್ಕಳ ಕತೆ. ತಾಯಿಗೆ ಬಂಗಾರದಂಥ ಮಗು ಹುಟ್ಟಿ ಬಾಳೇ ಬಂಗಾರವಾಗಿಸುವ ಧನ್ಯತೆಯ ಭಾವದ ಕತೆ. ನಮ್ಮ ಹಳ್ಳಿಗಳಲ್ಲಿ ಈಗಲೂ ಆಗೀಗ ಕಾಣಬರುವ ವಿಶೇಷ ಭಿಕ್ಷೆ ಇದು. ‘ತಿರುಪೆ ಮೇಟಿ ಬಂಗಾರ’ದ ಭಿಕ್ಷೆಯ ಬಗೆಗಿನ ನಂಬಿಕೆಯೇ ತಾಯ ಗರ್ಭದಲ್ಲಿರುವ ಮಗುವಿಗೆ ಹೊನ್ನ ಸ್ವಾಗತ ನೀಡುತ್ತದೆ.

ಮಕ್ಕಳು ಹುಟ್ಟಿ ಕಾರಣಾಂತರದಿಂದ ಹುಟ್ಟಿದ ತಕ್ಷಣ ಅಥವಾ ಅಲ್ಪ ಸಮಯದಲ್ಲೇ ಆ ಮಕ್ಕಳು ಕಾಲವಶವಾಗಿದ್ದರೆ, ಆ ಮನೆಯವರು ತಮ್ಮ ಮಕ್ಕಳಿಗೆ ಭೂಮಿಯ ಋಣವಿಲ್ಲ ಎಂದುಕೊಂಡು, ಆ ಹೆಣ್ಣು ಮತ್ತೊಮ್ಮೆ ಗರ್ಭಿಣಿಯಾದಾಗ, ಮೂರು ತಿಂಗಳು ತುಂಬಿದ ಬಳಿಕ ಅವಳ ತಾಯಿ ಅಥವಾ ಅತ್ತೆ ಸೂರ್ಯೋದಯದ ಸಮಯದಲ್ಲೇ ಭಿಕ್ಷೆ ಬೇಡಲು ಮನೆ ಮನೆಗೆ ಬರುತ್ತಾರೆ. ಎಲ್ಲರ ಮನೆಯಲ್ಲೂ ತಿರುಪೆ ಬೇಡಿ ತಂದ ಹಣದಿಂದ ‘ಮೇಟಿ’ ಎಂಬ ಹಗುರವಾದ ಬಂಗಾರದ ಆಭರಣವನ್ನು ಮಾಡಿಸಿ, ಹುಟ್ಟಿದ ಮಗು ಕುಪ್ಪೆಯಲ್ಲೋ, ತಿಪ್ಪೆಯಲ್ಲೊ ಬೆಳೆಯಲಿ ಎಂದುಕೊಂಡು ಆಭರಣವನ್ನು ಮನೆಯಲ್ಲಿಟ್ಟಿರುತ್ತಾರೆ. ಮಗು ಹುಟ್ಟಿದ ತಕ್ಷಣ ಹೊಕ್ಕಳು ಬಳ್ಳಿ ಕತ್ತರಿಸುವ ಮೊದಲೇ (ಭೂಮಿಯ ಋಣಕ್ಕೆ ಬೀಳುವ ಮೊದಲೇ) ಅದನ್ನು ಕಿವಿಗೆ ಚುಚ್ಚಿ ತೊಡಿಸುತ್ತಾರೆ.

ಈ ಮೊದಲು ಮನೆಯಲ್ಲೇ ಹೆರಿಗೆಯಾದಾಗ ಮಗುವಿಗೆ ಇದನ್ನು ಚುಚ್ಚುತ್ತಿದ್ದರು. ಈಗ ಆಸ್ಪತ್ರೆಯಲ್ಲಿ ಹೆರಿಗೆಯಾದರೂ ಕೆಲವೆಡೆ ಈ ನಂಬಿಕೆ ಚಾಲ್ತಿಯಲ್ಲಿದೆ.  ತಿರುಪೆ ಮೇಟಿಗೆ ಹಣ ಕೊಟ್ಟ ಆ ಎಲ್ಲರ ಋಣದಿಂದಲಾದರೂ ಮಗು ಆಯಸ್ಸು ಪಡೆಯಲಿ ಎಂಬುದು ಇದರ ಹಿಂದಿನ ಆಶಯವಾಗಿದೆ. ಮಕ್ಕಳು ಗಂಡಾಗಲಿ, ಹೆಣ್ಣಾಗಿರಲಿ ಅವರನ್ನು ಊರವರು ಚಿನ್ನಾ, ಬಂಗಾರಿ ಎಂದೇ ಕರೆಯತ್ತಿರುತ್ತಾರೆ.

ಚಿಕ್ಕ ಹಗುರ ಬಂಗಾರದ ಆಭರಣವೇ ಹೆತ್ತೊಡಲಿಗೆ ಸಕಾರಾತ್ಮಕ ಆಲೋಚನೆ ಬರಲು, ಆರೋಗ್ಯವಂತ ಮಗು ಜನಿಸಲು ಮನೋಸ್ಥೈರ್ಯ ತುಂಬುವುದನ್ನು ನೋಡಿದಾಗ ಮೂಢನಂಬಿಕೆ ಎನ್ನಲು ಮನಸ್ಸಾಗುವುದಿಲ್ಲ, ಬದಲಿಗೆ ಬಂಗಾರದಂತ ಮಗು ಜನಿಸಲಿ ಎಂದೇ ಮನಸ್ಸು ಹಾರೈಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT