ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀನ್ಸ್‌ ಕಾಳಜಿ ಹೇಗೆ?

ಅರಿವೆಯ ಹರವು
Last Updated 7 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮೊದಲೇ ಉಡುಗಿಸಿಟ್ಟರೂ ಜೀನ್ಸ್‌ಗಳು ಮತ್ತೆ ತೊಳೆದಾಗ ತುಸು ಉಡುಗುವ, ಬಣ್ಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಮತ್ತೆ ಇದನ್ನು ತೊಳೆಯುವ ರೀತಿ ಹೇಗೆ? ಜೀನ್ಸ್‌ನ ಕಾಳಜಿ ಹೇಗೆ? ಅದನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಕುತೂಹಲವೆ?

ಲೆವಿ ಸ್ಟ್ರಾಸ್‌ ಕಂಪೆನಿ ಸಾಧ್ಯವಾದಷ್ಟೂ ತೊಳೆಯದೇ ಇರಲು ಹೇಳುತ್ತದೆ. ಲೆವಿ ಸ್ಟ್ರಾಸ್‌ನ  ಬ್ರಾಂಡ್‌ ಮತ್ತು ವಿಶೇಷ ಪ್ರೊಜೆಕ್ಟ್‌ಗಳ ನಿರ್ದೇಶಕರಾದ ಕಾರ್ಲ್‌ ಷಿಯಾರಾ ಎಷ್ಟು ಕಡಿಮೆ ತೊಳೆಯುತ್ತೀರೊ ನಿಮ್ಮ ಜೀನ್ಸ್‌ ಅಷ್ಟೇ ಚೆನ್ನಾಗಿರುತ್ತದೆ ಎಂದವರು. ಅವರ ಈ ಮಾತೂ ಸೇರಿದಂತೆ ಜೀನ್ಸ್‌ ತೊಳೆಯುವುದನ್ನು ತಪ್ಪಿಸಿಕೊಳ್ಳುವ ಇಂಥ ಸಲಹೆಗಳಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

‘ಎಲ್‌ಎಸ್‌ಅಂಡ್‌ ಕಂ.ಅನ್‌ಜಿಪ್ಡ್‌’ ಎಂಬ ಪುಸ್ತಕದ ಸಂಪಾದಕರಾದ ಕೋರಿ ವಾರೆನ್‌ ಇಂಥ ಟೀಕೆಗಳಿಗೆ ಪ್ರತಿಕ್ರಿಯೆ ನೀಡುತ್ತ ಹೇಳಿದ್ದೇನು ಗೊತ್ತೆ? ‘ನಮ್ಮ ಉಪದೇಶ ಎಂದರೆ ಕಡಿಮೆ ಸಲ ಅಂತಷ್ಟೆ. ಆದರೆ ಸ್ಪಷ್ಟವಾಗಿ ಹೇಳುವುದಾದರೆ ಯಾವುದು ಸೂಕ್ತ ಎಂದು ನೀವೇ ನಿರ್ಧರಿಸಬೇಕು. ಬಿಸಿಲುಗಾಲ, ಬಟ್ಟೆ ಕೊಳೆಯಾಗುವಂತಹ ಕೆಲಸದಲ್ಲಿ ನಿರತರಾಗುವಂತಿದ್ದರೆ ವಾಶ್‌ ಮಾಡೀಪ್ಪಾ. ತೊಂದರೆಯಿಲ್ಲ. ಅಷ್ಟೇನೂ ಸೆಕೆಯಿಲ್ಲ, ಆರಾಮಾಗಿ ಆಫೀಸ್‌ ಕೆಲಸ ಮಾಡುತ್ತಿದ್ದೀರಿ ಎಂದರೆ ಇನ್ನೊಂದೆರಡು ಸಲ ಹಾಕಬಹುದು ಅದು ನೀರು ಕಾಣುವ ಮೊದಲು.

‘ವೈಯಕ್ತಿಕವಾಗಿ ಹೇಳಬೇಕೆಂದರೆ, ನಾನು ಶುಕ್ರವಾರ ಆಫೀಸಿಗೆ ಜೀನ್ಸ್‌ ಹಾಕಿದೆನೆಂದರೆ ವಾತಾವರಣವೂ ತಂಪಾಗಿದ್ದರೆ, ಮತ್ತೆ ಶನಿವಾರವೂ ಅದನ್ನೇ ಹಾಕುತ್ತೇನೆ. ಒಂದು ವೇಳೆ ಶನಿವಾರ ಹೊರಗೆಲ್ಲೂ ಹೋಗದಿದ್ದರೆ, ಅದರ ಮೇಲೆ ಆಹಾರವೇನೂ ಚೆಲ್ಲಿಕೊಳ್ಳದಿದ್ದರೆ ಭಾನುವಾರವೂ ಅದನ್ನೇ ಹಾಕಬಹುದು’.

ತೊಳೆಯಲು ಬಯಸದವರಿಗಾಗಿ ಕೆಟ್ಟವಾಸನೆ ಬೀರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಜೀನ್ಸ್‌ ಪ್ಯಾಂಟನ್ನೇ ಫ್ರೀಜ್‌ ಮಾಡುವ ಉಪಾಯವಿದೆ. ಆದರೆ ಇದು ಸರಿಯಾದ ವಿಧಾನವಲ್ಲ ಎಂದು ಇನ್ನು ಕೆಲವರು 250 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಹತ್ತು ನಿಮಿಷ ಬೇಕ್‌ ಮಾಡಲಿ ಎಂದವರೂ ಇದ್ದಾರೆ. ಸ್ಕಿನ್‌ಟೈಟ್‌ ಇರಲಿ, ಲೂಸ್‌ ಜೀನ್ಸ್‌ ಇರಲಿ, ಇದು ತಮ್ಮ ಎರಡನೇ ತ್ವಚೆ ಎಂಬಂತೆ ಬಿಡದೇ ದಿನವೂ ಧರಿಸುವವರಿದ್ದಾರೆ. ಎರಡನೇ ತ್ವಚೆ ಎಂದರೆ ಅದು ನಮ್ಮನ್ನಗಲಿ ಇರುವುದುಂಟೆ? ಛೆ, ಬಿಡ್ತು ಅನ್ರಿ. ಜೀನ್ಸ್‌ ಪ್ರಿಯೆಯೊಬ್ಬಳು 14 ತಿಂಗಳು ಸತತ ಧರಿಸಿದ ಜೀನ್ಸ್‌ಗೆ ಎರಡೇ ಸಲ ವಾಶಿಂಗ್‌ ಮೆಶಿನ್‌ನ ಸಂಗ ಒದಗಿಸಿದ್ದಾಳೆ.

ಎಷ್ಟು ಸಲ ತೊಳೆದರೂ ತೊಳೆಯದೇ ಇದ್ದರೂ ಯಾವ ಬಟ್ಟೆಯೂ ಜೀನ್ಸ್‌ನಷ್ಟು ಸುಂದರವಾಗಿ ಮುಪ್ಪಾಗುವುದಿಲ್ಲ. ಸಂಗೀತದಂತೆ ಆತ್ಮ ಧೋರಣೆ ಇರುವ ಬಟ್ಟೆ ಜೀನ್ಸ್‌ ಎನ್ನುತ್ತದೆ ಕಂಪೆನಿಯೊಂದು. ಎರಡಕ್ಕೂ ಸ್ಫೂರ್ತಿ ಒಂದೇ, ಕನಸಿನಿಂದ ಹೊಮ್ಮುವುದಂತೆ. ಜೀನ್ಸ್‌ ನಮ್ಮ ಜೀವನಶೈಲಿಯನ್ನೇ ಬದುಕುತ್ತದೆ. ಹೆಚ್ಚು ಹೆಚ್ಚು ಧರಿಸದಷ್ಟೂ ಅದಕ್ಕೂ ಪಾತ್ರ, ಧೋರಣೆ  ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT