ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಯಲ್ಲಿ ಬೆಳ್ಳಿಗೆರೆ: ಚಿಂತೆಯಲೆ

ಸ್ವಾಸ್ಥ್ಯಸೌಂದರ್ಯ
Last Updated 6 ಜೂನ್ 2014, 19:30 IST
ಅಕ್ಷರ ಗಾತ್ರ

ಶೇ.70ರಷ್ಟು ಮಹಿಳೆಯರು ಹಾಗೂ ಪುರುಷರು ತಲೆಯಲ್ಲಿ ಕಾಣುವ ಬೆಳ್ಳಿಗೆರೆಗೆ ಚಿಂತಿತರಾಗುತ್ತಾರೆ. ಮರೆಮಾಚಲು ಬಣ್ಣದ ಮೊರೆ ಹೋಗುತ್ತಾರೆ ಎಂದು ಒಂದು ಸಮೀಕ್ಷೆ ವರದಿ ಮಾಡಿದೆ. ಕೂದಲು ನೆರೆಯುವುದು ವಯಸ್ಸಾಗುವಿಕೆಯ ಒಂದು ಲಕ್ಷಣ. ಸಾಮಾನ್ಯವಾಗಿ ಮೂವತ್ತರ ಹೊಸ್ತಿಲಿನಲ್ಲಿ ಒಂದೊಂದೇ ಕೂದಲು  ಬೆಳ್ಳಿಗೆರೆಯಂತೆ ಇಣುಕುತ್ತವೆ.  

ಬಾಲ ನೆರೆ ಅಥವಾ ಅಕಾಲಿಕ ನೆರೆಗೆ ಕೆಲವು ವೈದ್ಯಕೀಯ ಕಾರಣಗಳೂ ಇವೆ.  ಥೈರಾಯ್ಡ್‌  ಹಾರ್ಮೋನಿನಲ್ಲಾಗುವ ಬದಲಾವಣೆ ಅಥವಾ ವಿಟಾಮಿನ್‌ ಬಿ. 12ನ ಕೊರತೆ ಈ ಸಮಸ್ಯೆಗೆ ಕಾರಣವಾಗಬಹುದು.

ಪರಿಹಾರಗಳೇನು?
ಸರಳ ಪರಿಹಾರವೆಂದರೆ ಕೂದಲು ಬಣ್ಣದ ಬಳಕೆ. ಆದರೆ ಇದು ಶಾಶ್ವತ ಪರಿಹಾರವಲ್ಲ. 6ರಿಂದ 8 ವಾರಗಳವರೆಗೆ ಪರಿಹಾರ ನೀಡಬಹುದು. ನಂತರ ಕೂದಲು ಬೆಳೆದಂತೆಲ್ಲ ಬುಡದಿಂದ ಬೆಳ್ಳಿ ಬಣ್ಣ ಇಣುಕಲು ಆರಂಭಿಸುತ್ತದೆ.

ಶಾಶ್ವತ ಬಣ್ಣ: ಕೂದಲಿನ ಬೇರುಗಳಿಗೇ ಬಣ್ಣವನ್ನು ನುಗ್ಗಿಸುವ ತಂತ್ರವೂ ಇದೀಗ ಚಾಲ್ತಿಯಲ್ಲಿದೆ. ಆದರೆ ಅಮೋನಿಯಂನಿಂದ ಕೂಡಿರುತ್ತದೆ. ಇದೂ ಶಾಶ್ವತವೆನಿಸಿದರೂ ಕೂದಲಿನ ಪ್ರಮಾಣ, ಆರೋಗ್ಯ ಕ್ಷೀಣಗೊಳಿಸುತ್ತದೆ. ಸಸ್ಯ ಜನ್ಯ ಬಣ್ಣಗಳನ್ನು ಬಳಸಬಹುದು. ಮೆಹೆಂದಿ ಡೈ ಉತ್ತಮ ಪರಿಹಾರವಾಗುವುದು. 

ಕೂದಲಿಗೆ ಬಣ್ಣ ಹಾಕುವ ಮುನ್ನ ಅಲರ್ಜಿ ಪರೀಕ್ಷೆಗೆ ಒಳಪಡುವುದು ಉತ್ತಮ. ಮುಂಗೈ ಅಥವಾ ಮೊಣಕೈ ಬಳಿ ಒಂದಷ್ಟು ಪ್ರಮಾಣದ ಬಣ್ಣವನ್ನು ಬಳಸಿ ನೋಡಿರಿ. ತುರಿಕೆಯಾಗದಿದ್ದರೆ, ಉರಿ ಕಾಣಿಸದಿದ್ದರೆ ಬಳಸಬಹುದು. ಬಣ್ಣ ಒಗ್ಗದಿದ್ದರೆ ಹಣೆ ಬಳಿ ಚರ್ಮ ಕಪ್ಪಾಗಬಹುದು. ಕಣ್ಣಿಗೆ ತೊಂದರೆಯೂ ಆಗಬಹುದು.

ಕೂದಲಿಗೆ ಪ್ಯಾಕ್‌: ಆಲೂಗಡ್ಡೆಯನ್ನು ತುರಿದು, ಕಿವುಚಿ, ರಸವನ್ನು ಹಿಂಡಿಕೊಳ್ಳಿರಿ. ಈ ರಸಕ್ಕೆ 2 ಚಮಚದಷ್ಟು ಲೋಳೆಸರವನ್ನು ಬೆರೆಸಿ. 2 ಚಮಚ ಜೇನುಹನಿ ಬೆರೆಸಿ. ಜೇನು ಕಲೆಯುವವರೆಗೂ ಚೆನ್ನಾಗಿ ಕಲಕಿ. ನಂತರ ಈ ಮಿಶ್ರಣವನ್ನು ತಲೆಕೂದಲಿನ ಬುಡಕ್ಕೆ ಲೇಪಿಸಿ, ಚೆನ್ನಾಗಿ ಮಸಾಜ್‌ ಮಾಡಿಕೊಳ್ಳಿ. ನಂತರ ಒಂದು ಶವರ್‌ ಕ್ಯಾಪ್‌ ಹಾಕಿಕೊಂಡು, ಟವಲ್‌ ಸುತ್ತಿಕೊಳ್ಳಿ. ಒಂದು ಗಂಟೆಯ ನಂತರ ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಒಮ್ಮೆ ಈ ಚಿಕಿತ್ಸೆ ಮಾಡಿಕೊಂಡಲ್ಲಿ, ಕೂದಲುದುರುವುದು ಗಣನೀಯವಾಗಿ ಕಡಿಮೆಯಾಗುವುದು.

ಮೆಹೆಂದಿ ಪ್ಯಾಕ್‌: ಮೆಹೆಂದಿಯನ್ನು ಒಂದು ದಿನ ಮೊದಲೇ ರಾತ್ರಿಯೇ ನೀರಿನ ಬದಲು ಈಕಪ್ಪು ಚಹಾದಲ್ಲಿ ಕಲೆಸಿ, ನೆನೆಸಿಡಿ. ನಂತರ ಇದಕ್ಕೆ ಒಂದು ಚಮಚೆಯಷ್ಟು ಆಲಿವ್‌ ಅಥವಾ ಕೊಬ್ಬರಿ ಎಣ್ಣೆಯನ್ನು  ಕಲಿಸಬೇಕು. ಒಂದರ್ಧ ಲಿಂಬೆಹಣ್ಣನ್ನೂ ಹಿಂಡಬೇಕು. ಬೆಳಿಗ್ಗೆ ಈ ನುಣುಪಾದ ಮಿಶ್ರಣಕ್ಕೆ ಅರ್ಧ ಕಪ್‌ ಹುಳಿ ಮೊಸರನ್ನೂ ಕಲೆಸಿಕೊಳ್ಳಬೇಕು. ಮೆಹೆಂದಿಯು ಕೂದಲಿಗೆ ಲೇಪಿಸುವ ಹದದಲ್ಲಿರಬೇಕು. ತಲೆಗೆ ಹಚ್ಚಿಕೊಂಡ ನಂತರ ಕನಿಷ್ಠವೆಂದರೂ ನಾಲ್ಕು ಗಂಟೆಯ ನಂತರ ತಲೆತೊಳೆದುಕೊಳ್ಳಬೇಕು. ಹೆಚ್ಚು ಕಾಲ ತಲೆಯಲ್ಲಿ ಬಿಟ್ಟಷ್ಟೂ ಉತ್ತಮ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT