ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಸ್ವಾತಂತ್ರ್ಯ

ನಿಮಗಿದು ತಿಳಿದಿರಲಿ
ಅಕ್ಷರ ಗಾತ್ರ

ಭಾರತದ ಆಖಂಡತೆಯ ಶಕ್ತಿ ಇರುವುದೇ ಅದರ ಧರ್ಮ ನಿರಪೇಕ್ಷತೆಯಲ್ಲಿ. ಭಾರತ ಯಾವುದೇ ಒಂದು ಧರ್ಮವನ್ನು ತನ್ನ ರಾಷ್ಟ್ರ ಧರ್ಮವೆಂದು ಘೋಷಿಸುವುದಿಲ್ಲ.

ಅದು ಎಲ್ಲ ಧರ್ಮಗಳ ಬಗ್ಗೆಯೂ ಒಂದೇ ಬಗೆಯ ತಾಟಸ್ಥ್ಯವನ್ನೂ ನಿಷ್ಪಕ್ಷಪಾತ ನಿಲುವನ್ನೂ ತಳೆಯುತ್ತದೆ. ಹಾಗಾಗಿ ಎಲ್ಲ ಧರ್ಮದವರಿಗೂ ತಂತಮ್ಮ ಧರ್ಮಗಳನ್ನು ಪಾಲಿಸುವ, ಅವರವರ ಧರ್ಮದ ಆಚರಣೆಗಳನ್ನು ಆಚರಿಸುವ ಮತ್ತು ಧರ್ಮ ಪ್ರಚಾರ ಮಾಡುವ ಸ್ವಾತಂತ್ರ್ಯ ಭಾರತದಲ್ಲಿ ಇದೆ. ಇದರ ಪರಿಣಾಮವಾಗಿ ತಮ್ಮ ತಮ್ಮ ನಂಬಿಕೆಗಳನ್ನು, ತಮ್ಮ ತಮ್ಮ ಸಂಪ್ರದಾಯಗಳನ್ನು ಅನುಸರಿಸುವ, ತಮ್ಮ ಧರ್ಮಗಳಿಗೆ ನಿಷ್ಠರಾಗಿರುವ ಮತ್ತು ತಮ್ಮ ದೈವಗಳನ್ನು ಪೂಜಿಸುವ ಸ್ವಾತಂತ್ರ್ಯ ಅವರಿಗೆ ದೊರೆತಿದೆ. ಆದರೆ, ಧರ್ಮದ ಹೆಸರಿನಲ್ಲಿ ಮಾನವ ಧರ್ಮಕ್ಕೆ ವಿರುದ್ಧವಾದುದನ್ನು ಮಾಡಲು ಸ್ವಾತಂತ್ರ್ಯವಿದೆ ಎಂದು ಇದರ ಅರ್ಥವಲ್ಲ.

ಈ ಸ್ವಾತಂತ್ರ್ಯ ಸಾರ್ವಜನಿಕ ಸುವ್ಯವಸ್ಥೆಯನ್ನು, ನೈತಿಕತೆಯನ್ನು ಹಾಗೂ ಆರೋಗ್ಯ ನೀತಿಯನ್ನು ಉಲ್ಲಂಘಿಸುವಂತಿಲ್ಲ. ಸಾರ್ವಜನಿಕ ನೀತಿ ಸಂಹಿತೆಗೆ ವಿರುದ್ಧವಾದುದನ್ನು ಯಾವುದೇ ಧರ್ಮದ ಹೆಸರಿನಲ್ಲೂ ಸಮರ್ಥಿಸಿಕೊಳ್ಳಲು ಬರುವುದಿಲ್ಲ. ಧರ್ಮದ ಹೆಸರಿನಲ್ಲಿ ನರ ಬಲಿ ಕೊಡಲು ಅಥವಾ ಹೆದ್ದಾರಿಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪೂಜೆ ನಡೆಸುವ ಮೂಲಕ ಶಾಂತಿ ಕದಡಲು ಸ್ವಾತಂತ್ರ್ಯವಿಲ್ಲ. ಸಂಪ್ರದಾಯದ ಹೆಸರಿನಲ್ಲಿ ಸಹಗಮನ ಪದ್ಧತಿಯಾಗಲೀ ಶಿಶು ಹತ್ಯೆಯಾಗಲೀ ಸಮರ್ಥನೀಯವಾಗುವುದಿಲ್ಲ.

ಧರ್ಮ ಪ್ರಚಾರ ಮಾಡುವ ಸ್ವಾತಂತ್ರ್ಯವಿದ್ದರೂ ಇತರ ಧರ್ಮೀಯರನ್ನು ಒತ್ತಾಯ ಪೂರ್ವಕವಾಗಿ ತನ್ನ ಧರ್ಮಕ್ಕೆ ಮತಾಂತರಗೊಳಿಸುವುದಕ್ಕೆ ಅಥವಾ ತನ್ನ ಧರ್ಮವನ್ನು ಮತ್ತೊಬ್ಬರ ಮೇಲೆ ಹೇರುವುದಕ್ಕೆ ಸ್ವಾತಂತ್ರ್ಯವಿಲ್ಲ.

ಎಲ್ಲ ಧಾರ್ಮಿಕ ಅಲ್ಪ ಸಂಖ್ಯಾತರಿಗೂ ತಮ್ಮ ಧರ್ಮ ಅಥವಾ ಭಾಷೆಯ ಆಧಾರದ ಮೇಲೆ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಡೆಸುವ ಸ್ವಾತಂತ್ರ್ಯವಿದೆ.

ಸಂವಿಧಾನ ತನ್ನ ಪ್ರಜೆಗಳಿಗೆ ನೀಡಿರುವ ಈ ಸ್ವಾತಂತ್ರ್ಯದಿಂದಾಗಿ ಸರ್ಕಾರವೂ ಕೆಲವೊಂದು ನಿರ್ಬಂಧಗಳಿಗೆ ಒಳಪಡುತ್ತದೆ ಮತ್ತು ಕೆಲವೊಂದು ಜವಾಬ್ದಾರಿಗಳನ್ನು ನಿರ್ವಹಿಸಲೂ ಬದ್ಧವಾಗುತ್ತದೆ. ಹಾಗೆಯೇ ಕೆಲವೊಂದು ನಿರ್ಬಂಧಗಳನ್ನು ಹೇರಲು ಸಹ ಅಧಿಕಾರ ಹೊಂದಿರುತ್ತದೆ. ಹಾಗಾಗಿ ಸರ್ಕಾರ,

* ಅವರದಲ್ಲದ ಯಾವುದೇ ಸಂಸ್ಕೃತಿಯನ್ನು ಯಾವುದೇ ಧರ್ಮ ಅನುಸರಿಸುವವರ ಮೇಲೆ ಹೇರುವುದಕ್ಕೆ ಸ್ವಾತಂತ್ರ್ಯವಿಲ್ಲ.

* ಶೈಕ್ಷಣಿಕ ಸಂಸ್ಥೆಗಳಿಗೆ ಅನುದಾನ ನೀಡುವಾಗ ಧರ್ಮದ ಆಧಾರದ ಮೇಲೆ ಅಥವಾ ಭಾಷೆಯ ಆಧಾರದ ಮೇಲೆ ಸರ್ಕಾರ ತಾರತಮ್ಯ ನೀತಿ ಅನುಸರಿಸುವಂತಿಲ್ಲ.  

* ಧರ್ಮದ ಕಾರಣಕ್ಕಾಗಿ ಮಾತ್ರವೇ ವ್ಯಕ್ತಿ ವ್ಯಕ್ತಿಗಳ ನಡುವೆ ಸಾಮಾಜಿಕ, ಆರ್ಥಿಕ ಹಾಗು ರಾಜಕೀಯ ರಂಗಗಳಲ್ಲಿ ತಾರತಮ್ಯವೆಸಗುವಂತಿಲ್ಲ.

* ಸರ್ಕಾರಿ ಉದ್ಯೋಗದಲ್ಲಿಯೂ ಸಹ ಧರ್ಮದ ಕಾರಣದ ಮೇಲೆ ತಾರತಮ್ಯ ಮಾಡುವಂತಿಲ್ಲ. ಇಂಥ ತಾರತಮ್ಯ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ.

* ಸರ್ಕಾರದಿಂದ ಮಾನ್ಯತೆ ಪಡೆದಿರುವ ಮತ್ತು ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಯಾವುದೇ ಶಿಕ್ಷಣ ಸಂಸ್ಥೆಯೂ ವಿದ್ಯಾರ್ಥಿಗಳಿಗೆ ಧರ್ಮ ಭೋದನೆ ಕಡ್ಡಾಯ ಮಾಡುವಂತಿಲ್ಲ.

* ಧಾರ್ಮಿಕ ಅಲ್ಪ ಸಂಖ್ಯಾತರನ್ನು ಹಾಗೂ ಅವರ ಸಂಸ್ಕೃತಿಯನ್ನು ರಕ್ಷಿಸುವ ಹೊಣೆ ಹೊಂದಿರುತ್ತದೆ.

 ಭಾರತದಷ್ಟು ವಿಭಿನ್ನ ಧಾರ್ಮಿಕ ಹಿನ್ನೆಲೆಯುಳ್ಳ ದೇಶ ಜಗತ್ತಿನಲ್ಲೇ ಮತ್ತೊಂದಿಲ್ಲ. ಆದ್ದರಿಂದ ಧಾರ್ಮಿಕ ಸ್ವಾತಂತ್ರ್ಯ ಅತ್ಯಂತ ಪ್ರಮುಖವಾದ ಮೂಲಭೂತ ಹಕ್ಕು ಕಾನೂನಿನ ಮುಂದೆ ಎಲ್ಲ ಧರ್ಮೀಯರೂ ಸಮಾನರು, ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ ಎಂಬ ತತ್ವವನ್ನು ನಮ್ಮ ಸಂವಿಧಾನ ಬಲವಾಗಿ ಪ್ರತಿಪಾದಿಸುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT