ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಗಳಿಗೆ ಬೇಕು ಆರೈಕೆ

ಸ್ವಾಸ್ಥ್ಯ ಸೌಂದರ್ಯ
Last Updated 27 ಜೂನ್ 2014, 19:30 IST
ಅಕ್ಷರ ಗಾತ್ರ

ನಮ್ಮ ಪಾದಗಳ ಬಗ್ಗೆ ಯಾವತ್ತಾದರೂ ಅಕ್ಕರೆ ತೋರಿದ್ದಿದೆಯಾ? ಯಾವತ್ತಿದ್ದರೂ ನಮ್ಮ ಭಾರವನ್ನು ಹೊತ್ತು ನವೆಯುವುದು, ಸವೆಯುವುದೇ ಪಾದಗಳ ಪಾಲಿಗಿರುವುದು. ಆದರೆ ಚಂದದ ಪಾದಗಳೆಂದರೆ ಮಾತ್ರ ಎಲ್ಲರಿಗೂ ಆಸೆ. ಪಾದಗಳಿಗೂ ಅಕ್ಕರೆಯ ಆರೈಕೆ ಅತ್ಯಗತ್ಯ. ಇಲ್ಲದಿದ್ದಲ್ಲಿ, ಹಿಮ್ಮಡಿಯ ಚರ್ಮ ಶುಷ್ಕವಾಗಿ ಒಡೆಯುವುದೇ ಹೆಚ್ಚು.

ಮುಂಗಾಲಿನ ಚರ್ಮ ಬಿಸಿಲಿನ ಝಳಕ್ಕೆ ಕಪ್ಪಾಗುವುದೂ ಸಾಮಾನ್ಯ. ಈ ವರ್ಣ ವೈವಿಧ್ಯದ, ಬಿರುಕಿರುವ ಪಾದಗಳಿಗೆ ಪಾಪ... ಮುಕ್ತಿ ಇದೆಯೇ? ಭಾರತೀಯ ಸಂಸ್ಕೃತಿಯಲ್ಲಂತೂ ಪಾದಗಳನ್ನು ಶಿಕ್ಷಿಸುವುದೇ ಆಗಿದೆ. ಬರಿಗಾಲಿನಲ್ಲಿ ನಡೆಯುವುದು ಪಾದಗಳಿಗೆ ನೀಡುವ ಶಿಕ್ಷೆಯೇ ಆಗಿದೆ. ಪಾದಗಳಿಗೂ ಆರೈಕೆ ಬೇಕು.

ಹಿಮ್ಮಡಿಗಳನ್ನು ಪ್ಯುಮಿಕ್ ಸ್ಟೋನ್‌ ಅಥವಾ ಕಲ್ಲಿನಿಂದ ಉಜ್ಜಿ, ಸ್ವಚ್ಛವಾಗಿಟ್ಟಷ್ಟೂ ಚಂದಗಾಣಿಸುತ್ತವೆ. ಆಗಾಗ ಪಾದಗಳಿಗೊಂದು ಪುಟ್ಟ ಸ್ನಾನ ನೀಡುವುದು ಅತ್ಯವಶ್ಯ. ಹತ್ತರಿಂದ ಹದಿನೈದು ನಿಮಿಷಗಳಷ್ಟು ಕಾಲ ನೀರಿನಲ್ಲಿ ಪಾದಗಳನ್ನು ನೆನೆಇಡಬೇಕು. ಇದು ಚರ್ಮವನ್ನು ಮೃದುಗೊಳಿಸುತ್ತದೆ. ನಂತರ ಕಲ್ಲಿನಿಂದ ಉಜ್ಜಿ, ಚರ್ಮದ ಒಣ ಭಾಗವನ್ನು ತೆಗೆಯಬಹುದು.

ಚರ್ಮದ ಮೃತ ಕೋಶಗಳನ್ನು ತೆಗೆಯಲು ಇದು ಸಹಾಯಕವಾಗುತ್ತದೆ. ಇದಾದ ನಂತರ ಪಾದಗಳಿಗೆ ಶಿಯಾ ಬಟರ್‌ ಅಥವಾ ಕೊಕೊ ಬಟರ್‌ ಅಂಶವಿರುವ ಕ್ರೀಮ್‌ ಅನ್ನು ಲೇಪಿಸಿದರೆ ಮಾಯಿಶ್ಚರೈಸ್‌ ಮಾಡಿದಂತೆ ಆಗುತ್ತದೆ. ಪಾದದ ರಕ್ಷಣೆಗೆ ಸಾಲಿಕ್ಲಿಕ್‌ ಆಸಿಡ್‌ ಅಥವಾ ಯೂರಿಯಾ ಅಂಶವಿರುವ ಕ್ರೀಮ್‌ ಅನ್ನು ಬಳಸಿದರೆ ಪಾದಗಳು ಕಾಂತಿಯುತವಾಗಿ ಕಾಣುತ್ತವೆ.

ಒಂದುವೇಳೆ ಹಿಮ್ಮಡಿ ಒಡೆದು, ಗಾಯವಾಗುವಷ್ಟು ಚರ್ಮ ಒಡೆದು ಹೋಗಿದ್ದರೆ, ಆಳವಾಗಿ ಹಿಮ್ಮಡಿ ಒಡೆದಿದ್ದರೆ ಚರ್ಮವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಿರಿ. ಆದರೆ ಹಿಮ್ಮಡಿಯ ಚರ್ಮ ಬಿರುಕು ಒಡೆದಿರದಿದ್ದಲ್ಲಿ ನೀವೇ ಆರೈಕೆ ಮಾಡಿಕೊಳ್ಳಲು ಸಾಕಷ್ಟು ಕ್ರೀಮ್‌ ಹಾಗೂ ಲೋಷನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅದಕ್ಕೂ ಮೊದಲು ಹಿಮ್ಮಡಿಯ ರಕ್ಷಣೆಗೆಂದೇ ವೈದ್ಯಕೀಯ ಪ್ಯಾಡ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅವನ್ನು ಬಳಸಬಹುದಾಗಿದೆ. ಈ ಪ್ಯಾಡ್‌ಗಳ ಬಳಕೆಯಿಂದಾಗಿ ಚರ್ಮ ಮೃದುವಾಗುವುದು. ಪೆಟ್ರೊಲಿಯಂ, ಲ್ಯಾಕ್ಟಿಕ್‌ ಆ್ಯಸಿಡ್‌ ಅಂಶವಿರುವ ಕ್ರೀಮುಗಳನ್ನು ಧಾರಾಳವಾಗಿ ಲೇಪಿಸಬೇಕು.

ಅಥ್ಲೀಟ್‌ ಫೂಟ್ಸ್‌ ಎಂದು ಕರೆಯಲಾಗುವ ಪಾದದ ಸಮಸ್ಯೆ ಹಾಗೂ ಹೆಬ್ಬೆರಳ ನಡುವೆ ಕಾಣಿಸಿಕೊಳ್ಳುವ ತೇವದ ಸಮಸ್ಯೆಗೆ ಆ್ಯಂಟಿ ಫಂಗ್ವಲ್‌ ಲೋಷನ್‌, ಪೌಡರ್‌ ಹಾಗೂ ಸ್ಪ್ರೇಗಳನ್ನು ಬಳಸಬಹುದಾಗಿದೆ. ಪಾದಲ್ಲಿ ಬರುವ ಫಂಗಸ್‌ ಅನ್ನು ಚಿಕಿತ್ಸೆ ಇಲ್ಲದೇ ಗುಣಪಡಿಸುವುದು ಅಸಾಧ್ಯ.

ಹೆಬ್ಬೆರೆಳ ಸಂದಿಯಲ್ಲಿ ಕೊಳೆತಂತೆ ಆಗುವ ಪಾದದ ಈ ಸಮಸ್ಯೆಯಿಂದ ಬಳಲುವವರು ಇಂಥ ಹಲವಾರು ಉತ್ಪನ್ನಗಳನ್ನು ಬಳಸಿರುತ್ತಾರೆ. ಆದರೆ ಇವು ಸಮಸ್ಯೆಯ ಮೊದಲ ಹಂತದ ನಿವಾರಣೆಗೆ ಮಾತ್ರ ಬಳಸಬಹುದಾಗಿದೆ. ಪಾದಗಳು ಬೆವರುತ್ತಿದ್ದರೆ ವೈದ್ಯಕೀಯ ಪೌಡರ್‌ ದೊರೆಯುತ್ತದೆ. ಒಂದು ವೇಳೆ ಅತಿ ಶುಷ್ಕ ಚರ್ಮವಾಗಿದ್ದರೆ ಆ್ಯಂಟಿ ಫಂಗಲ್‌ ಲೋಷನ್‌ ಬಳಸಬಹುದಾಗಿದೆ.

ಪೌಡರ್‌ ಅಥವಾ ಲೋಷನ್‌ ಯಾವುದೇ ಆಗಿರಲಿ, ಅದನ್ನು ಲೇಪಿಸುವ ಮೊದಲು ಪಾದ ಸಂಪೂರ್ಣವಾಗಿ ಒಣಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ನೀರಿನ ಅಂಶ ಉಳಿಯದಂತೆ ಒರೆಸಿಕೊಳ್ಳಬೇಕು. ನೈರ್ಮಲ್ಯ ಮತ್ತು ತೇವಾಂಶ ಉಳಿಯದಂತೆ ನೋಡಿಕೊಂಡರೆ ಪಾದದ ಈ ಸಮಸ್ಯೆ ಕಂಡು ಬರುವುದಿಲ್ಲ. ಆಗಾಗ ಪಾದ ತೊಳೆಯುತ್ತಿರಿ. ಒಣಗಿಸಿ, ಹೆಬ್ಬೆರಳು ಮತ್ತು ಬೆರಳುಗಳ ಸಂದಿಯನ್ನು ವಿಶೇಷವಾಗಿ ಗಮನವಹಿಸಿ. ಬ್ಯಾಕ್ಟೇರಿಯಾಗಳು ಹೆಚ್ಚಾಗಿ ನೆಲೆ ಕಾಣುವುದೇ ಈ ಸಂದುಗಳಲ್ಲಿ. ಪ್ರತಿ ದಿನವೂ ತೊಳೆದು, ಒಣಗಿಸಿದ ಸಾಕ್ಸುಗಳನ್ನೇ ಬಳಸಬೇಕು.

ಮುಂಗಾಲಿನ ಚರ್ಮ ರಕ್ಷಣೆಗೆ ಯಾವಾಗಲೂ ಸನ್‌ಸ್ಕ್ರೀನ್‌ ಲೋಷನ್‌ ಲೇಪಿಸಬೇಕು. ಬೀಚ್‌ನಲ್ಲಿದ್ದಾಗ ಅಥವಾ ಮುಂಗಾಲು ಕಾಣುವಂಥ ತೆರೆದ ಚಪ್ಪಲಿಗಳನ್ನು ಧರಿಸಿದಾಗ ಸನ್‌ಸ್ಕ್ರೀನ್‌ ಲೋಷನ್‌ ಲೇಪಿಸುವುದು ಅತ್ಯವಶ್ಯ.
(ಮಾಹಿತಿಗೆ: 76767 57575)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT