ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗೀಲಾರದ ಚಪ್ಲಾರ ಕತಿ...

Last Updated 2 ಮೇ 2014, 19:30 IST
ಅಕ್ಷರ ಗಾತ್ರ

ಬಂಗಾರದ ಕತಿ ಅಂದ ಕೂಡ್ಲೇ ನೆನಪಾತು ನನ್ನ ಬಂಗಾರದಂಥ ಒಂದು ಕತಿ. ಅದಕ್ಕಿನ್ನೂ ಕೊನಿ ಸಿಕ್ಕಿಲ್ಲ, ವರ್ಷ, ವರ್ಷವೂ ಹೊಸ ಹೊಸ ರೂಪ, ಹೊಸ ವರಸೆ ಅದರದು.

ಮೊನ್ನೆ ಕಳೀತಲ್ಲ, ಮಾರ್ಚ್ 14 ... ಆವತ್ತಿಗೆ ಬರೋಬ್ಬರಿ ಹತ್ತು ವರ್ಷ ಕಳೆದ್ವು ಆ ಬಂಗಾರದ ಕಥಿಗೆ.  ಮಾರ್ಚ್ 14, 2004ಕ್ಕ ಮದುವಿ ಫಿಕ್ಸ್ ಆಗಿತ್ತು. ಒಲ್ಲೆ ಒಲ್ಲೆ ಅನಕೋತ ಹೂಂ ಅಂದು ಬಿಟ್ಟಿದ್ಯಾ... ಇನ್ನೇನು ಮದುವಿಗಿ ವಾರ ಉಳಿದಿರಲಿಲ್ಲ. ಒಡವಿ, ಸೀರಿ, ಭಾಂಡಿ ಸಾಮಾನು ಖರೀದಿ ಭಾರೀ ಜೋರು ನಡಿದಿತ್ತು.

ಮದುವೆ ಮುಂದ ನನಗಂತ ಐದು ತೊಲಿ ಬಂಗಾರ ಹಾಕೂದು ಅಂತ ಮಾತಾಗಿತ್ತು. ನನಗ ಮಾಂಗಲ್ಯ ಕರೀ ಮಣಿದೇ ಇದ್ರೂ ಸಾಕು, ಪೂರ್ತಿ ಐದೂ ತೊಲಿದು ಚಪ್ಲಾರ ಬೇಕು ಅಂದ್ಯಾ. ‘ಅದರಾಗೇ ಒಂದು ಮಾಂಗಲ್ಯ ಸರ ತಗೊರವಾ... ಅಷ್ಟು ದೊಡ್ಡ ಚಪ್ಲಾರ ತಗೊಂಡು ಏನು ಮಾಡ್ತಿ? ಗೌಡಶಾನಿ ಆಗಾಕೇನು?’ಅಂತ ಅಣ್ಣ ಜೋಕ್ ಮಾಡಿದರೂ ಕೇಳಲಿಲ್ಲ.
* * *
ಆದ್ರ, ಅದರ ಹಿಂದಿರುವ ಖರೆ ಖರೆ ಗುಟ್ಟನ್ನ ಈಗ ಹೇಳ್ತೀನಿ...
ನಮ್ಮೂರಾಗ ‘ರತನಕ್ಕ’ ಅಂತ ಒಬ್ಬಾಕಿ ಗೌಡತಿ ಇದ್ಲು. ಎತ್ತರ, ದಪ್ಪಗ, ಬೆಳ್ಳಗ... ಚೆಂದ ಅಂದ್ರ ಚೆಂದ ಗೌಡತಿ. ಆಗೆಲ್ಲ ಹಿಂಗ ಕಡ್ಡಿಯಂಗ ಸಣ್ಣಗ ಫಿಗರ್ ಇರೊದು ಫ್ಯಾಶನ್ ಇರ್ಲಿಲ್ಲ.

ಒಂದು ಸಲ ಗೌಡರ ಜೋಡಿ ಮದುವಿಗೆ ಹೊಂಟು ನಿಂತ ಗೌಡತಿನ ನೋಡಿ ನಾನು ಅವಾಕ್ಕಾಗಿ ನಿಂತಿದ್ಯಾ. ಹಸಿರು ಬಣ್ಣದ ಇಳಕಲ್ ಸೀರಿ, ಕಟಗಿ ಬಣ್ಣದ ಬಾಡರ್ರು, ಸೆರಗಿನಾಗ ಒಂದು ದೊಡ್ಡದು ಒಂದು ಚಿಕ್ಕದು ಗರಿ ಬಿಚ್ಚಿದ ನವಿಲು, ಆ ಸೀರಿ ಬಾಡರಿಗೆ ಹೊಂದುವಂತಹ ಕಟಗಿ ಬಣ್ಣದ ಕುಬುಸ(ಕಂದು), ಮೂರ್ನಾಲ್ಕು ಎಳೆಯ ಚಪ್ಲಾರ, ಅಷ್ಟೇ ದೊಡ್ಡ ಬೆಂಡ್ವಾಲಿ,  ಝುಮುಕಿ, ಮೂಗುಬಟ್ಟ...

‘ನಾನೂ ಹೆಣ್ಣಾಗಿ ಹುಟ್ಟಿದ್ದಕ್ಕ ಸಾರ್ಥಕ ಆತು ಬಿಡು’ ಅನಿಸಿದ್ದು ಆಗಲೇ. ದೊಡ್ಡಾಕಿ ಆದ ಮ್ಯಾಲ ತೇಟ ಹಿಂಗೆ, ಇದೇ ತರ ಸೀರಿ, ಕುಬಸ, ಇದೇ ತರದ ಚಪ್ಲಾರ ಮತ್ತ ಇಂಥವೇ ಕಿವ್ಯಾಗಿನು ಖರೀದಿ ಮಾಡೇ ತೀರಬೇಕು ಅಂತ ನಿರ್ಧಾರ ಮಾಡಿದ್ದು ಆಗಲೇ. ಮನದೊಳಗ ಚಪ್ಲಾರದ ಬಿಂಬ ಪ್ರತಿಷ್ಠಾಪನ ಆಗಿದ್ದೂ ಆಗ.

ನಾನು ಮದುವಿ ಆಗೊ ಹೊತ್ತಿಗೆ ಇಳಕಲ್ ಸೀರೆ–ಕುಬುಸ ತೊಡಲಾರದ ಹಳೇ ಫ್ಯಾಶನ್ ಪಟ್ಟಿಗೆ ಸೇರಿದ್ವು... ಆದ್ರ ಚಪ್ಲಾರ! ಆವಾಗ ಬಂಗಾರದ ಆಭರಣದಾಗೂ ಹೊಸ ಹೊಸ ನಮೂನಿ ಬಂದಿದ್ವು. ಆದ್ರ ಚಪ್ಲಾರ ಅನ್ನೂದು ನನ್ನ ಕಣ್ಣಿನ್ಯಾಗ, ಮನಸ್ಸಿನ್ಯಾಗ ಯಾವತ್ತೂ ಹಳತಾಗದ ಕನಸಾಗಿ ಅಚ್ಚು ಒತ್ತಿತ್ತಲ್ಲ...

ಅಂತೂ ಹಟ ಮಾಡಿ ಪೂರ್ತಿ ಐದು ತೊಲಿದು ಚಪ್ಲಾರ ತಗೊಂಡ್ಯಾ. ಆದ್ರ ಅದರ ಜೊತಿಗೆ ಹೆಚ್ಚುವರಿಯಾಗಿ ಮಾಡಿಕೊಟ್ಟ ಝಮುಕಿ ಮಾತ್ರ ಆ ಗೌಡತಿ ಹಾಕಿದ್ದಳಲ್ಲ ಅಷ್ಟು ದೊಡ್ಡದೇನೂ ಇರ್ಲಿಲ್ಲ ಅನ್ನೊ ಅಸಮಾಧಾನ ಇವತ್ತಿಗೂ ಕಾಡ್ತದ.
* * *
ಹೂಂ, ಇಲ್ಲಿಗೆ ಬಂಗಾರದ ಕತಿ ಮುಗಿತು ಅಂತಲ್ಲ. ಇಲ್ಲಿಂದ ಆರಂಭ ಆತು ನನ್ನ ಬಂಗಾರದ ಕತಿ. ಮದುವಿ ಆಗಿ ಒಂದೆರಡು ತಿಂಗಳು ಕಳೆದಿರಲಿಲ್ಲ. ಒಂದಿನ ನನ್ನ ತಮ್ಮ ತವರಿಗೆ ಕರಿಯಾಕ ಅಂತ ಬಂದ. ಊಟ–ತಿಂಡಿ ಮುಗಿಸಿ ಅಟ್ಟದ ಮ್ಯಾಲ ಹೋಗಿ ಮಾತಿಗೆ ಕುಳಿತಾಗ ಕೇಳಿದ್ಯಾ– ಯಾಕೊ ಒಂತರಾ ಅದಿ? ಏನಾಯ್ತು? ಅಂತ.

ಸಣ್ಣ ಮುಖ ಮಾಡ್ಕೊಂಡು ಹೇಳಿದ. ‘ನಾನು ಮುಂಬೈಗೆ ಹೋಗಿ ಸಿನಿಮಾ ಕೋರ್ಸ್ ಮಾಡಬೇಕು ಅಂತ ಮಾಡಿದ್ಯಾ. ಅಣ್ಣ–ಅಪ್ಪ ಬೈದರು. ಈ ಸಿನಿಮಾ ಹುಚ್ಚ ಬಿಟ್ಟು ಏನಾರೆ ಮಾಡು ಅಂದ್ರು, ಆದ್ರ ನಿನ್ನ ಮುಂದ ಖರೆ ಹೇಳ್ತೀನಿ, ಸಿನಿಮಾ ಬಿಟ್ಟು ನಾನು ಬೇರೇನೂ ಮಾಡಾಕ ಸಾಧ್ಯಾನ ಇಲ್ಲ. ಏನಾದ್ರೂ ಸಾಧಿಸಬೇಕು ಅಂತಂದ್ರ. ಅದು ಸಿನಿಮಾದಾಗೇ’ ಅಂದ. ‘ಅಯ್ಯ ಪಾಪ’ ಅನಿಸಿತು ನನಗ.

ಖರೆ ಅಂದ್ರ ನನಗೂ ಮನಸ್ಸಿನ ಯಾವುದೊ ಮೂಲ್ಯಾಗ ಸಿನಿಮಾ ಹುಚ್ಚಿತ್ತು. ಅದರ ಬಗ್ಗೆ ಬಾಯಿ ಬಿಡಾಕೂ ಧೈರ್ಯ ಮಾಡಲಿಲ್ಲ ನಾನು. ಅವನು ಅಲ್ಲೇನೊ ಮಾಡ್ತೀನಿ ಅಂತಾನ, ಮಾಡಲಿ... ಅನಸ್ತು. ಆದ್ರ ‌ಇರೊ ಒಂದು ನೌಕರಿನೂ ಬಿಟ್ಟು ಮದುವಿ ಆಗಿದ್ಯಾ. ಅವನಿಗೆ ಏನಂತ ಸಹಾಯ ಮಾಡಲಿ ನಾನು? ಆ ಕ್ಷಣಕ್ಕ ನನ್ನ ಕಣ್ಣ ಮುಂದ ಬಂದಿದ್ದು ಆ ಚಪ್ಲಾರ. ಆಗಿನ ಕಾಲಕ್ಕೆ ಒಂದು ತೊಲಿಗೆ ಹನ್ನೊಂದು ಸಾವಿರ ರೂಪಾಯಿ ಬೆಲೆ ಇತ್ತು. ಹೆಚ್ಚು ಕಡಿಮೆ ಎಲ್ಲಾ ಬಂಗಾರ ಅವನಿಗೆ ಕೊಟ್ರ ಐವತ್ತು ಸಾವಿರ ಬರಬಹುದೇನೊ... ‘ಆಗಬಹುದಲ್ಲ?’ ಅಂದೆ. ಇಷ್ಟಗಲ ಮುಖ ಮಾಡಿ ‘ಹೂಂ, ಸದ್ಯಕ್ಕ ಅಷ್ಟ ಸಾಕು’ ಅಂದ.

‘ಆದ್ರ ಆ ಕೋರ್ಸ್ ಮುಗಿಸಿ, ನೌಕರಿ ಹಿಡಿದು  ನನ್ನ ಬಂಗಾರಾ ನನಗ ಕೊಡಾಕ ಎಷ್ಟ ವರ್ಷ ಬೇಕು?’ ಅಂತ ಕೇಳೂದೇನೂ ನಾ ಮರೀಲಿಲ್ಲ. ‘ಒಂದೇ ವರ್ಷ ಸಾಕು, ಐದಲ್ಲ, ಹತ್ತು ತೊಲಿ ಬಂಗಾರ ಹಾಕ್ತೀನಿ ನಿನಗ’ ಅಂದ.
* * *

ಅವನ ಕೋರ್ಸ್ ಮುಗಿತು. ನಾಲ್ಕಾರು ನೌಕರಿನೂ ಮಾಡಿದ. ಒಂದು ವರ್ಷ ಅಂದೋನು... ಎರಡಾತು, ಮೂರಾತು ನಾಲ್ಕು, ಐದು... ಎಂಟು ವರ್ಷ ಕಳದ್ವು. ಹೂಂ ಹೂಂ... ಬಂಗಾರದ ಮಾತೇ ಇಲ್ಲ. ಕೇಳಿದಾಗೆಲ್ಲ. ಮುಂದಿನ ವರ್ಷ ದೀಪಾವಳಿಗೆ ಕೊಡ್ತಿನಿ, ಯುಗಾದಿಗೆ ಕೊಟ್ಟೇ ಕೊಡ್ತೀನಿ, ಸಂಕ್ರಾಂತಿಗೆ ಮರಿಯೂದೇ ಇಲ್ಲ ಅನ್ಕೋತಾ ಬಂದವ. ಅಷ್ಟೊತ್ತಿಗಾಗಲೇ ನನ್ನ ಗಂಡಗಂತೂ ಸತ್ಯಾ ಗೊತ್ತಾಗಿ ಹೋಗಿತ್ತು. ಆದ್ರ ಅತ್ತಿ... ಅತ್ತಿ ಕೇಳಿದಾಗೆಲ್ಲ ‘ನನ್ನ ತಂಗಿ ಹಂತ್ಯಾಕ ಇಟ್ಟೇನ್ರಿ, ಅಕ್ಕನ ಮಗಳಿಗೆ ಹಾಕೋಳಾಕ ಕೊಟ್ಟೇನ್ರಿ, ಬ್ಯಾಂಕ್ ಲಾಕರ್‌ನ್ಯಾಗ ಐತಿ ಬಿಡ್ರಿ...’ ಏನೊ ಸುಳ್ಳು, ಏನೊ ನೆಪ, ಹಿಂಗೇ ಸಾಗಿತ್ತು ಸುಳ್ಳಿನ ಕಥಿ... ಎಷ್ಟು ವರ್ಷ ಅಂತ ನಡೀದಿತು? ಒಂದಿನ ಅತ್ತಿ ಜಗಳಾನೂ ಮಾಡಿದಳು. ಖರೆ ಒಪ್ಗೊಂಡು ಬಿಟ್ಯಾ. ಆಗೂದಾಗಲಿ ಅಂತ...
* * *
ತಮ್ಮನ ಮದುವಿ ಬಂತು. ‘ನೀ ನನ್ನ ಬಂಗಾರ ಕೊಡದ ಅದ್ಹೆಂಗ ಮದುವಿ ಆಕ್ಕಿ ನೋಡ್ತೀನಿ’ ಅಂತ ತುಸು ಜೋರೇ ಜಗಳ ಹಿಡಿದ್ಯಾ. ಅಣ್ಣ–ಅಕ್ಕ ಅಡ್ಡ ಬಂದು, ‘ಇದು ಜಗಳಾ ಮಾಡೊ ಟೈಂ ಅಲ್ಲ, ಮದುವಿ ಮುಗಿಲಿ, ಮದುವ್ಯಾಗ ಅವನಿಗೆ ಆಯೇರಿ ಬರೊ ಬಂಗಾರ ಎಲ್ಲಾ ನೀನೇ ತಗೊ ಆತಿಲ್ಲೊ?’ ಅಂದ್ರು. ಅದೂ ಹೌದು ಅಂತ ನನಗೆ ನಾನು ಸಮಾಧಾನ ಮಾಡಿಕೊಂಡು ಸುಮ್ಮನಾದೆ.

ತಮ್ಮನ ಮದುವಿ ದಿನ ಅಲಂಕಾರ ಮಾಡ್ಕೊಂಡು, ಸೀರೆ ಉಟ್ಕೊಂಡು ಲಗುಬಗಿಯಿಂದ ಹೋಗಿ ಅವನ ಮಗ್ಗಲಕ್ಕ ನಿಂತೆ. ಒಂದೊಂದು ಉಂಗುರ ಆಯೇರಿ ಬಂದಾಗಲೂ ನೋಡಿ ಅದು ಖರೇ ಬಂಗಾರನೇ ಅಂತ ಕಣ್ಣಲ್ಲಿ ಅಳೆದು ಲೆಕ್ಕ ಹಾಕಿಟ್ಟುಕೊಂಡೆ. ನಾಲ್ಕಾರು ಉಂಗುರ ಬಂದ್ವು. ಅಂತೂ ನನ್ನ ಬಂಗಾರ ಸಿಕ್ಕಂಗಾತು ಅಂದುಕೊಂಡು ಹಿಗ್ಗಿದೆ. ಆದ್ರ ಅಳ್ಯಾತನ ಮುಗಿಸಿಕೊಂಡು ಬಂದ ತಮ್ಮನ ಕೈಯಲ್ಲಿ ಒಂದೇ ಒಂದು ಉಂಗುರ ಇಲ್ಲ!
* * *
ಆಮೇಲಾಮೇಲೆ ‘ನನ್ನ ಬಂಗಾರ ಕೊಡೊ ಮಾರಾಯಾ’ ಅಂತ ಗಂಟ ಬಿದ್ದಾಗೆಲ್ಲ ‘ಯಾವಾಗ ನೋಡಿದ್ರೂ ಬಂಗಾರ ಬಂಗಾರ ಅಂತ ಸಾಯ್ತಿಯಲ್ಲ... ತಡಕೊ... ನಿನ್ನ ಬಂಗಾರ ಏನ್ ಮುಳುಗಿಸಂಗಿಲ್ಲ’ ಅಂತ ರೇಗಾಕ ಶುರು ಮಾಡಿದ. ಮನಸ್ಸಿಗೆ ಭಾಳ ನೋವಾತು. ಹತ್ತು ವರ್ಷ ಆತು, ಇನ್ನೂ ತಡಿ ಅಂತಾನಲ್ಲ... ಅನ್ನೊ ಬ್ಯಾಸರ. ‘ನನಗೇ ತಡ್ಕೊ ಅಂತಿಯಲ್ಲೊ... ಹತ್ತು ವರ್ಷ ಆಯ್ತೊ... ಇನ್ನೂ ತಡಿಬೇಕಾ?’ ಅನ್ನೂವಷ್ಟರಲ್ಲಿ ನನ್ನ ದನಿ ನಡುಗಿ ಹೋಗಿತ್ತು. ಕಣ್ಣೀರು ಮಾತ್ರ ಬರಲಿಲ್ಲಷ್ಟ.

ಬೇರೆ ದಾರಿ ಇಲ್ಲದ ಅವನ ಹೆಂಡತಿಗೆ ಎಲ್ಲಾ ವಿಷಯ ಹೇಳಿದ್ಯಾ. ಆಕಿನೂ  ನಮ್ಮನಿ ಹುಡುಗಿನೇ, ಹೊರಗಿನಾಕಿ ಏನಲ್ಲ. ಪಾಪ, ನನ್ನ ಪಾಡು ಕೇಳಿ ಮರ ಮರ ಅಂದ್ಲು. ‘ಹಿಂಗಾತ? ನೀ ಏನ್ ಚಿಂತಿ ಮಾಡಬ್ಯಾಡ ಚಿಗು(ಚಿಕ್ಕಮ್ಮ), ನಾನೆಲ್ಲ ಹೇಳ್ತೀನಿ, ಮೊದ್ಲು ನಿನ್ನ ಬಂಗಾರ ಕೊಟ್ಟ ಮ್ಯಾಲ ಮುಂದಿನ ಮಾತು’ ಅಂದ್ಲು.
* * *
ಆ ದಿನ ಹೊಸ ಮನಿ ಲೀಸ್‌ಗೆ ಹಾಕ್ಕೊಬೇಕಿತ್ತು. ಇನ್ನೂ ಎರಡು ಲಕ್ಷ ರೂಪಾಯಿ ಕಡಿಮಿ ಬಿದ್ದಿತ್ತು. ಮಕ್ಕಳ ಶಾಲಿಗೆ ಲಕ್ಷಾಂತರ ಡೋನೇಶನ್ ಕಟ್ಟಿ ಕೈ ಖಾಲಿ ಆಗಿತ್ತು. ಏನು ಮಾಡೋದು ಅನ್ನೊ ಚಿಂತ್ಯಾಗ ಇದ್ವಿ.

ನನ್ನ ಶ್ರೀಮಾನ್ ಸಹೋದರ ಮಹಾಶಯ ದಡದಡ ಬಂದವನೇ ಹೊಡ್ಯಾಕ ಬಂದಂಗ ಬಾಗಿಲು ದೂಡಿಕೊಂಡು ಒಳಗೆ ಬಂದವ. ‘ತಗೊ...’ ಅಂತ ದುಡ್ಡಿನ ಬ್ಯಾಗನ್ನ ನನ್ನ ಮುಂದ ಹಿಡಿದವ ‘ಸಮಾಧಾನ ಆಯ್ತಾ?’ ಅಂದ.

‘ಎಷ್ಟದಾವು?’ ಅಂದೆ. ‘ಪೂರ್ತಿ ಒಂದೂವರೆ ಲಕ್ಷ ಅದಾವು ಎಣಿಸ್ಕೊ. ನಿನ್ನ ಬಂಗಾರ ಮಾರಿದಾಗ ನನಗೆ ಬಂದಿದ್ದು ಬರೀ 47 ಸಾವಿರ. ಈಗ ನಾನು ನಿನಗ ಕೊಡಾಕತ್ತಿದ್ದು ಒಂದೂವರೆ ಲಕ್ಷ. ಬಡ್ಡಿ, ಚಕ್ರ ಬಡ್ಡಿ ಎಲ್ಲಾ ಆತಲ್ಲ?’ ಅಂದ. ಮತ್ತದೇ ಪ್ರಾಬ್ಲಮ್, ಮನಸ್ಸಿಗೆ ನೋವಾದ್ರೂ ಕಣ್ಣೀರು ಬರಲಿಲ್ಲ ಅಷ್ಟ.

‘ನಾನೇನು ಬಡ್ಡಿ ಕೇಳಿಲಲ್ಲೊ ಮಾರಾಯ, ನನ್ನ ಬಂಗಾರ ತಗೊಂಡಿ, ತಗೊಂಡಷ್ಟು ಬಂಗಾರ ವಾಪಸ್ ತಂದುಕೊಡು ಸಾಕು’ ಅಂದೆ.
‘ಆಯ್ತು ಬಿಡು, ಎಲ್ಲಾ ಮುಗಿತಲ್ಲ? ಇನ್ನಾದ್ರೂ ಸಮಾಧಾನದಿಂದ ಇರು’ ಅಂದವ ಹೊರಟು ನಿಂತ. ‘ನಿಂದ್ರೊ ಬಿಸಿ ರೊಟ್ಟಿ ಮಾಡ್ತೀನಿ, ಉಂಡು ಹೋಗು ಅಂದ್ಯಾ’ ಅಂವ ರೊಕ್ಕ ಕೊಟ್ಟ ಅಂತಲ್ಲ. ‘ಕೊಡಾಕ ಆಗಂಗಿಲ್ಲ’ ಅಂತ ಜಗಳಾ ಮಾಡಿದಾಗೂ ನಾ ಅವನಿಗೆ ಈ ಮಾತು ಹೇಳೂದೇನೂ ಬಿಡುತ್ತಿರಲಿಲ್ಲ ಅನ್ನೂದು ಅವನಿಗೂ ಗೊತ್ತು. ‘ಎರಡು ರೊಟ್ಟಿ ಹಾಕಿ ಕೊಡು’ ಅಂದವ ಕೈತೊಳೆದು ಬಂದು ಕುಳಿತ.
***
‘ಆಯ್ತು ಬಿಡ್ರಿ, ದೇವರು ಸರಿಯಾದ ಸಮಯಕ್ಕ ಅವನಿಗೆ ಬುದ್ಧಿ ಕೊಟ್ಟ. ಈಗೇನು ಸಾಲ ಮಾಡೂದು ತಪ್ತಲ್ಲ? ನಡಿರಿ ಲೀಸ್ ಹಣ ಕೊಟ್ಟು ಬರೂನು’ ಅಂದೆ ಯಜಮಾನರಿಗೆ. ‘ನಿನ್ನ ಕನಸಿನ ಚಪ್ಲಾರದ ದುಡ್ಡದು. ಮದುವಿ ಆಗಿ ಎರಡು ತಿಂಗಳೂ ಅದನ್ನ ಹಾಕಾಕ ಆಗಲಿಲ್ಲ ನಿನಗ. ನೀನು ಆ ದುಡ್ಡಿಲೆ ಬಂಗಾರಾನೇ ತಗೊ. ಮನಿಗೆ ನಾನು ಏನಾದ್ರೂ ಮಾಡ್ತೀನಿ’ ಅಂದ್ರು.
‘ನಾನು ಈ ದುಡ್ಡಿಲೇ ಬಂಗಾರ ತಗೊಬೇಕು, ನೀವು ಮನಿ ಲೀಸ್‌ಗೆ ಸಾಲ ಮಾಡಿ, ಬಡ್ಡಿ ಕಟ್ಟಬೇಕು... ಯಾವ ಸುಖ ಐತಿ ಬಿಡ್ರಿ, ಮೊದಲು ಈಗ ಈ ದುಡ್ಡೂ ಸೇರಿಸಿ ಲೀಸ್ ಕೊಟ್ಟು ಬರೂನು. ಹ್ಯಾಂಗಿದ್ರೂ ಇನ್ನ ಮ್ಯಾಲ ಬಾಡಿಗಿ ಅಂತೂ ಇರಲ್ಲ. ತಿಂಗಳು–ತಿಂಗಳು ಬಂಗಾರದ ಅಂಗಡಿಗೆ ಸ್ಕೀಮ್ ಕಟ್ಟಿ ಕೊನಿಗೆ ಬಂಗಾರ ತಗೊತಿನಿ. ಆದ್ರ ಈ ಸಲ ಚಪ್ಲಾರ ಮಾತ್ರ ಬ್ಯಾಡ್ರಿ. ಬೇರೆ ಏನಾರಾ ತಗೊಂಡ್ರಾತು...’ ಅಂದ್ಯಾ.
ಇವರ ಕಣ್ಣು ಹಸಿಯಾದಂಗಾತು, ಇತ್ತ ನಂದೂ...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT