ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಭೂತ ಕರ್ತವ್ಯಗಳು

ನಿಮಗಿದು ತಿಳಿದಿರಲಿ
Last Updated 11 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಭಾರತದ ಸಂವಿಧಾನ ಮೂಲಭೂತ ಹಕ್ಕುಗಳನ್ನು ಕೊಡುವುದಷ್ಟೇ ಅಲ್ಲದೆ ಮೂಲಭೂತ ಕರ್ತವ್ಯ ಗಳನ್ನೂ ವಿಧಿಸುತ್ತದೆ. ಸ್ವಸ್ಥ ಜೀವನಕ್ಕೆ ಮೂಲಭೂತ ಹಕ್ಕುಗಳ ಬಗ್ಗೆ ತಿಳಿದಿರುವುದು ಎಷ್ಟು ಅಗತ್ಯವೋ, ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿದಿರಬೇಕಾದುದೂ ಅಷ್ಟೇ ಅಗತ್ಯ. ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಹೊರತು ಪಡಿಸಿ ಇನ್ನೊಂದಿಲ್ಲ.

ಮೂಲಭೂತ ಕರ್ತವ್ಯಗಳ ಉಲ್ಲಂಘನೆಗೆ ಶಿಕ್ಷೆಯನ್ನು ವಿಧಿಸುವ ಯಾವುದೇ ಉಪಬಂಧವನ್ನು ಸಂವಿಧಾನದಲ್ಲಿ ಸೇರಿಸಿಲ್ಲ. ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದರೆ ನ್ಯಾಯಾಲಯಕ್ಕೆ ಮೊರೆಹೋಗಿ ಉಲ್ಲಂಘಿಸದಂತೆ ತಡೆಯಬಹುದು. ಆದರೆ ಮೂಲಭೂತ ಕರ್ತವ್ಯಗಳನ್ನು ಪಾಲಿಸದಿದ್ದರೆ ನ್ಯಾಯಾಲಯಕ್ಕೆ ಮೊರೆ ಹೋಗಲು ಅವಕಾಶವಿಲ್ಲ. ಆದರೆ ‘ಕರ್ತವ್ಯ’ ಎಂಬ ಪದವೇ ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂಬುದನ್ನು ಸೂಚಿಸುತ್ತದೆ. ಹಕ್ಕುಗಳನ್ನು ಚಲಾಯಿಸುವ ವ್ಯಕ್ತಿ ಕರ್ತವ್ಯ ಪಾಲನೆಗೂ ಬದ್ಧನಾಗುತ್ತಾನೆ. ತನ್ನ ಕರ್ತವ್ಯಗಳನ್ನು ಪಾಲಿಸದ ವ್ಯಕ್ತಿ ಹಕ್ಕುಗಳನ್ನು ಚಲಾಯಿಸಲು ಯೋಗ್ಯನಾಗುವುದಿಲ್ಲ.

ಭಾರತದ ಸಂವಿಧಾನ ಜಾರಿಗೊಂಡಾಗ ಅದರಲ್ಲಿ ಮೂಲಭೂತ ಕರ್ತವ್ಯಗಳ ಸೇರ್ಪಡೆ ಆಗಿರಲಿಲ್ಲ. 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡುವ ಮೂಲಕ ಅದನ್ನು ಸೇರ್ಪಡೆ ಮಾಡಲಾಯಿತು.

ನಮ್ಮ ಭಾರತದ ಸಂವಿಧಾನದಲ್ಲಿ ನಿರೂಪಿಸಿರುವ ಮೂಲಭೂತ ಕರ್ತವ್ಯಗಳೆಂದರೆ-
ಭಾರತದ ಸಾರ್ವಭೌಮತ್ವವನ್ನು, ಐಕ್ಯತೆಯನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಮತ್ತು ಸಂರಕ್ಷಿಸುವುದು;
ದೇಶವನ್ನು ರಕ್ಷಿಸುವುದು ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಕರೆ ಬಂದಾಗ ರಾಷ್ಟ್ರ ಸೇವೆ ಮಾಡುವುದು;

ಧಾರ್ಮಿಕ, ಭಾಷಿಕ, ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಭಿನ್ನತೆಗಳಿಂದ ಅತೀತವಾಗಿ, ಭಾರತದ ಎಲ್ಲ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು ಮತ್ತು ಸ್ತ್ರೀಯರ ಗೌರವಕ್ಕೆ ಕುಂದುಂಟು ಮಾಡುವ ಆಚರಣೆಗಳನ್ನು ಬಿಟ್ಟುಬಿಡುವುದು;

ನಮ್ಮ ಸಮ್ಮಿಶ್ರ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಗೌರವಿಸುವುದು ಮತ್ತು ಕಾಪಾಡುವುದು;
ಅರಣ್ಯಗಳು, ಸರೋವರಗಳು, ನದಿಗಳು ವನ್ಯ ಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಮತ್ತು ಅಭಿವೃದ್ಧಿಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸುವುದು;

ವೈಜ್ಞಾನಿಕ ಮನೋಭಾವನೆ, ಮಾನವೀಯತೆ ಮತ್ತು ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದು;
ಸಾರ್ವಜನಿಕ ಆಸ್ತಿ ಪಾಸ್ತಿಗಳ ರಕ್ಷಣೆ ಮಾಡುವುದು ಮತ್ತು ಹಿಂಸೆಯನ್ನು ತ್ಯಜಿಸುವುದು;

ವೈಯಕ್ತಿಕ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ ಸರ್ವ ಶ್ರೇಷ್ಠತೆಯನ್ನು ಗಳಿಸಿಕೊಳ್ಳಲು ಪ್ರಯತ್ನ ಮಾಡಿ ರಾಷ್ಟ್ರವನ್ನು ಸತತವಾಗಿ ಪ್ರಗತಿಯತ್ತ ಮತ್ತು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು.

ಮೇಲೆ ಹೇಳಿದ ಯಾವುದೇ ಕರ್ತವ್ಯದ ಉಲ್ಲಂಘನೆಯನ್ನು ನೇರವಾಗಿ ಅದರ ಉಲ್ಲಂಘನೆಗಾಗಿ ಶಿಕ್ಷಿಸಲಾಗದು. ಏಕೆಂದರೆ, ಒಂದು ಕೃತ್ಯ ಅಪರಾಧವೆನಿಸಬೇಕಾದರೆ ಆ ಸಮಯದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಆ ಕೃತ್ಯ ಅಪರಾಧವಾಗಿರಬೇಕು. ಆಗ ಮಾತ್ರ ಅಂಥ ಅಪರಾಧಕ್ಕಾಗಿ ಆ ವ್ಯಕ್ತಿಯನ್ನು ಶಿಕ್ಷಿಸಬಹುದು ಎಂದು ಸಂವಿಧಾನ ಸ್ಪಷ್ಟಪಡಿಸುತ್ತದೆ. ಆದ್ದರಿಂದ ಮೇಲೆ ಹೇಳಿದ ಯಾವುದೇ ಕರ್ತವ್ಯದ ಉಲ್ಲಂಘನೆ ಜಾರಿಯಲ್ಲಿರುವ ಯಾವುದೇ ಕಾನೂನಿನ ಪ್ರಕಾರ ಅಪರಾಧವಾಗಿದ್ದರೆ ಮಾತ್ರ ಅದು ದಂಡನೀಯವಾಗುತ್ತದೆ. ಮೇಲಿನ ಬಹುಪಾಲು ಎಲ್ಲ ಕರ್ತವ್ಯಗಳ ಸಂಬಂಧದಲ್ಲಿ ಅವುಗಳ ಉಲ್ಲಂಘನೆಯನ್ನು ಅಪರಾಧವನ್ನಾಗಿಸುವ ಪ್ರತ್ಯೇಕ ಕಾನೂನುಗಳು ಜಾರಿಯಲ್ಲಿವೆ.

ಇವಲ್ಲದೆ ದೇಶದ ಆಡಳಿತ ನಿರ್ವಹಣೆಯಲ್ಲಿ ಮೂಲಭೂತವಾಗಿ ಪಾಲಿಸಬೇಕಾದ ತತ್ವಗಳು ಯಾವುವು ಎಂಬುದನ್ನು ಸಹ ಸಂವಿಧಾನದಲ್ಲಿ ನಿರೂಪಿಸಲಾಗಿದೆ. ಕಾನೂನುಗಳನ್ನು ರಚಿಸುವಾಗ ಈ ತತ್ವಗಳನ್ನು ಅನ್ವಯಿಸುವುದು ದೇಶದ ಕರ್ತವ್ಯವಾಗಿರುತ್ತದೆ. ಇವನ್ನು ರಾಜ್ಯ ನೀತಿ ನಿರ್ದೇಶಕ ತತ್ವಗಳು ಎನ್ನಲಾಗುತ್ತದೆ.

ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ರಾಜ್ಯ ನೀತಿ ನಿರ್ದೇಶಕ ತತ್ವಗಳು ಪರಸ್ಪರ ಪೂರಕವಾದವುಗಳು.
ತಮ್ಮ ತಮ್ಮ ಕರ್ತವ್ಯ ಪಾಲನೆಯಿಂದ ಇತರರ ಮಾನವ ಹಕ್ಕುಗಳನ್ನು ಗೌರವಿಸುತ್ತಿದ್ದೇವೆಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಏಕೆಂದರೆ ಪ್ರತಿಯೊಂದು ಹಕ್ಕೂ ಒಂದು ಕರ್ತವ್ಯವನ್ನು ಸೃಜಿಸುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಬಾರದು ಎಂದರೆ ಕರ್ತವ್ಯಗಳ ಕಟ್ಟುನಿಟ್ಟಿನ ಪಾಲನೆ ಅತ್ಯಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT