ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾತ್ಸಲ್ಯಮಯಿ..

Last Updated 17 ಜುಲೈ 2015, 19:30 IST
ಅಕ್ಷರ ಗಾತ್ರ

ಪ್ರೀತಿ, ಕರುಣೆ, ಮಮತೆ, ವಾತ್ಸಲ್ಯ ಈ ಎಲ್ಲ ಸದ್ಗುಣಗಳ ಸಾಕಾರಮೂರ್ತಿಯೇ ನನ್ನಪ್ಪ ಎಂದರೆ ಖಂಡಿತ ಅತಿಶಯೋಕ್ತಿ ಯಾಗಲಾರದು. ಈ ಎಲ್ಲ ಸದ್ಗುಣಗಳ ಭದ್ರಕೋಟೆಯಲ್ಲಿ ಬೆಳೆದ ನನಗೆ ಭಯ, ಬೈಗುಳ, ಅಸಹನೆ, ಧಿಕ್ಕಾರ ಈ ಎಲ್ಲದರ ಅರಿವೇ ಆಗಲಿಲ್ಲ. ಬಾಲ್ಯದಿಂದಲೂ ಅಪ್ಪ ಎಂದರೆ ಕೇಳಿದ್ದನ್ನು ತಂದುಕೊಡುವ ವಾತ್ಸಲ್ಯಮೂರ್ತಿ.

ಅವರ ಸೈಕಲ್ಲಿನ ಬಾರ್ ಮೇಲೆ ಒಂದು ದಿಂಬನ್ನು ಕಟ್ಟಿ, ಅದರ ಮೇಲೆ ಕೂರಿಸಿಕೊಂಡು ಸವಾರಿ ಮಾಡುತ್ತಾ ಸಂಜೆಯ ಟೆಂಟ್ ಸಿನಿಮಾ, ಸರ್ಕಸ್ ಎಂದು ಕರೆದೊಯ್ಯುತ್ತಿದ್ದ ಅಪ್ಪ ನನಗೆ ಬಲು ಅಚ್ಚು ಮೆಚ್ಚು. ಬಣ್ಣದ ಸಿಹಿ ಸೋಡಾ ನೀರನ್ನು ಕೇಳಿದಾಗ ಕೊಡಿಸುತ್ತಲಿದ್ದ ಅಪ್ಪ; ನಾನು ಒಮ್ಮೆ ಹೊಟ್ಟೆ ನೋವಿನಿಂದ ನರಳುತ್ತಿದ್ದಾಗ ಇಡೀ ರಾತ್ರಿ ನನ್ನ ಹೊಟ್ಟೆಯನ್ನು ಹಿಡಿದುಕೊಂಡೇ ಕುಳಿತಿದ್ದ. ಆ ನೋವಿನಲ್ಲಿ ನಾನು ಬೇಡಿದ ಉಗುರಿನ ಬಣ್ಣವನ್ನು ಮರುದಿನ ಬೆಳಗ್ಗೆಯೇ ಕೊಂಡು ತಂದು ಕೊಟ್ಟಿದ್ದ ಅಪ್ಪ.

ನಾನು ಶಾಲೆಗೆ ಹೋಗುತ್ತಿದ್ದಾಗ  ಪಿಕ್‌ನಿಕ್‌ಗೆ ಹೋಗುತ್ತಿದ್ದ ಸಮಯ. ಶಾಲೆಯಿಂದ ಎಲ್ಲಿಗೆ ಹೋದರೂ ಸರಿಯೇ ಅಲ್ಲಿಗೆ  ನನಗೂ ನನ್ನ ಸ್ನೇಹಿತೆಯರಿಗೂ ಸಾಕಾಗುವಷ್ಟು ತಿಂಡಿಯ ಪೊಟ್ಟಣಗಳನ್ನು ತರುತ್ತಿದ್ದ ಅಪ್ಪ. ತಿಂಡಿಯ ನೆಪ ಮಾಡಿಕೊಂಡು ಅವರು ನಾನು ಎಲ್ಲಿ, ಹೇಗಿದ್ದೇನೆ ಎಂದು ತಿಳಿಯಲು ಬರುತ್ತಿದ್ದರೆಂಬ ನನ್ನ ಗುಮಾನಿ ದಿಟವಾಗಿದ್ದು ಅನೇಕ ವರುಷಗಳ ನಂತರ. ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗಿನ ಒಂದು ಪ್ರಸಂಗ ನಡೆಯಿತು.

ನಾನು ಎನ್.ಸಿ.ಸಿ. ಕೇಡೆಟ್ ಆಗಿದ್ದುದರಿಂದ ಒಮೆ ಊರಾಚೆ ಕ್ಯಾಂಪ್‌ನಲ್ಲಿಯೇ 10 ದಿನ ಉಳಿದುಕೊಳ್ಳ ಬೇಕಾಯಿತು. ಅಲ್ಲಿ ಟೆಂಟಿನಲ್ಲ್ಲಿ ವಾಸ. ತಟ್ಟೆ ಹಿಡಿದು ಸರದಿ ಪ್ರಕಾರ ಆಹಾರ ಪಡೆದು ಕೊಳ್ಳುವ ನಿಯಮ. ಬಳ್ಳಾರಿ ಬಿಸಿಲ ಬೇಗೆ, ಕಸರತ್ತು, ಕವಾಯತು ಎಂದು ಸಾಕಷ್ಟು ದೇಹ ದಂಡಿಸಲಾಗಿತ್ತು. ಇವೆಲ್ಲದರಿಂದ ನಾನು ಸೊರಗಿದ್ದು ನಿಜ. ಅದೇ ಸಮಯದಲ್ಲಿ ನನ್ನನ್ನು ನೋಡಲು ಅಪ್ಪ ಬಂದು ಬಿಡಬೇಕೆ? ನನ್ನ ಅವತಾರವನ್ನು ನೋಡಿ ಅವರಿಗೆ ಕಣ್ಣಲ್ಲಿ ನೀರು. ಈ ಕ್ಯಾಂಪ್ ಸಾಕು ಮನೆಗೆ ಬಂದುಬಿಡು, ನಾನು ನಿಮ್ಮ ಮೇಡಮ್‌ಗೆ ಹೇಳುತ್ತೇನೆ ಎಂದು ಒತ್ತಾಯ ಬೇರೆ. ಶಾಲೆಯ ವಿದ್ಯಾರ್ಥಿನಿಯರ ನಾಯಕಿಯಾದ ನಾನು ವಾಪಸ್ಸು ಹೋಗುವುದುಂಟೇ? ಹಟಹಿಡಿದ ನಾನು ಪೂರ್ಣ ಅವಧಿ ಕ್ಯಾಂಪ್‌ನಲ್ಲಿ ಉಳಿಯಲು ಹರಸಾಹಸ ಮಾಡಬೇಕಾಯಿತು.

ಎಲ್ಲರೂ ನನ್ನನ್ನು ಹಾಸ್ಯ ಮಾಡಲು ಸಿಕ್ಕ ವಿಷಯವೇ ಇದು. ನಿನ್ನ ಮದುವೆಯಾದ ಮೇಲೆ ನಿಮ್ಮ ತಂದೆ ನಿನ್ನನ್ನು ಹೇಗೆ ಬಿಟ್ಟಿರುತ್ತಾರೆಂದು? ಹೌದು; ಅದೂ ನಡೆಯಿತು. ಹೊಸಪೇಟೆಯಿಂದ ಮುಂಬೈ ಏನು ಮಹಾ ದೂರ ಎನ್ನುತ್ತ, ನಮ್ಮ ತಾಯಿ  ಅವರ ಜೊತೆಯಲ್ಲಿ ಬರದಿದ್ದರೂ ಸಹಾ, ‘ನನಗೆ ಮಗಳ ಮನೆಗೆ ಹೋಗಿ ಇರಲು ಏನೂ ಸಂಕೋಚ ಇಲ್ಲ; ಏಕೆಂದರೆ ನನ್ನ ಅಳಿಯ ಅಪರಂಜಿ’ ಎನ್ನುತ್ತಾ ಆಗಾಗ್ಗೆ ಬಂದು ಸಂತೋಷದಿಂದ ಇದ್ದು ಹೋಗುತ್ತಿದ್ದರು.

ಅಂತಹ ಸಮಯದಲ್ಲಿ, ನಾನು ಗರ್ಭಿಣಿ ಯಾದಾಗಿನ ಒಂದು ಸಂದರ್ಭ. ಗ್ಯಾಸ್ ಒಲೆಯ ಮೇಲಿಂದ  ಕುದಿಯುತ್ತಿದ್ದ ನೀರನ್ನು ಕೆಳಗಿಳಿಸುವಾಗ, ಅದು ನನ್ನ ಪಾದಗಳ ಮೇಲೆಲ್ಲ ಚೆಲ್ಲಿದಾಗ ನನ್ನ ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತಿದ್ದ ಅಪ್ಪನ ನೆನಪು ಇನ್ನೂ ಹಸಿರಾಗಿದೆ.

ನನ್ನ ಹೆರಿಗೆಯ ಸಮಯ. ಆಸ್ಪತ್ರೆಗೆ ಸೇರಿಸಿದ ನಂತರ ನನ್ನಪ್ಪ ಊರಲ್ಲಿದ್ದ ತನ್ನ ಎಲ್ಲ ವೈದ್ಯ ಮಿತ್ರರನ್ನು ಭೇಟಿಮಾಡಿ ಇನ್ನೂ ಎಷ್ಟುಹೊತ್ತು ಇವಳು ಹೀಗೆ ನೋವು ಅನುಭವಿಸಬೇಕೆಂದು ಕೇಳಿದ್ದರಂತೆ. ಅಪಾರ ಶ್ರೀಮಂತಿಕೆ ಇಲ್ಲದಿದ್ದರೂ ತಮ್ಮ ಇಬ್ಬರು ಮಕ್ಕಳನ್ನು ಯಾವ ಕುಂದು ಕೊರತೆಯೂ ಇಲ್ಲದಂತೆ ಬೆಳೆಸಿ , ಪೋಷಿಸಿದ ನನ್ನ ಅಪ್ಪನ ಅನುರೂಪವಾದ ಸಹಧರ್ಮಿಣಿ ನನ್ನಮ್ಮ. ಮಕ್ಕಳ ಒಳಿತಿಗಾಗಿ ಅವರು ಏನೆಲ್ಲ ತ್ಯಾಗ ಮಾಡಿದ್ದರೆಂದು ನಮಗೆ ಅರಿವಾಗಲು ವರುಷಗಳು ಬೇಕಾದುವು. ಇಂತಹ ಅಪ್ಪ ಅಮ್ಮ ಎಲ್ಲರಿಗೂ ಸಿಗಲೆಂದು ಪ್ರಾರ್ಥಿಸುತ್ತಾ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT