ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶುಪೀಡನೆಯೆಂಬ ಮನೋರೋಗ

Last Updated 17 ಜನವರಿ 2014, 19:30 IST
ಅಕ್ಷರ ಗಾತ್ರ

ಕುಡಿದು ಬರುವ ತಂದೆ ತನ್ನ ಪುಟ್ಟ ಮಗನಿಗೆ ಬೆಲ್‌್ಟನಿಂದ ಮನಬಂದಂತೆ ಥಳಿಸುತ್ತಾನೆ. ‘ಅಪ್ಪಾ ಹೊಡೀಬೇಡಾ ..... ನೋವಾಗುತ್ತೆ’ ಎಂಬ  ಪುಟ್ಟ ಮಗನ ಆಕ್ರಂದನ ಅವನ ಕಿವಿಗಳಿಗೆ ಕೇಳಿಸುವುದೇ ಇಲ್ಲ. ಅಸಹನೆ, ಕೋಪದ ಭೂತ ಅವನ ಮೈಮೇಲೆ ಬಂದಿರುತ್ತದೆ. ಬಿಡಿಸಲು ಹೋದ ತಾಯಿಗೂ ಏಟು ಬೀಳುತ್ತವೆ. ಕೈ ಸೋತ ಮೇಲೆ ಬೆಲ್‌್ಟ ಬಿಸಾಡಿ ಸುಸ್ತಾದವನಂತೆ ತಂದೆ ಕುಳಿತರೆ, ತಾಯಿಯ ಅಪ್ಪುಗೆಯಲ್ಲಿ ಮಗು ನೋವು – ಅಪಮಾನದಿಂದ ಅಳುವುದಕ್ಕೂ ಹೆದರಿ ಕಣ್ಣು ಮುಚ್ಚಿ­ಕೊಂಡು, ನಡಗುತ್ತಾ ಬಿಕ್ಕ­ಳಿಸುತ್ತಿರುತ್ತದೆ. ನಿರ್ಭಾವುಕ ಪೀಡನೆ ಅದು.

ಘಟನೆ – 2
ತಂದೆಯೊಬ್ಬ ಮಗಳನ್ನು ಗರ್ಭಪಾತಕ್ಕಾಗಿ ಕರೆದುಕೊಂಡು ಬಂದಿದ್ದ. ಹದಿನೇಳರ ಬಾಲಕಿ! ಅದು ಮೂರನೆಯ ಬಾರಿ!! ತಂದೆಗೆ ತಿಳಿಸಿ ಹೇಳಿ ಸಾಕಾಗಿದ್ದ ವೈದ್ಯೆ ಆ ಹುಡುಗಿಗೇ  ಕೇಳಿದ್ದರು. ‘ಯಾರೀ ಕೆಲಸ ಮಾಡುವವರು?’ ಎಂದು. ಆ ಹುಡುಗಿ ತನ್ನ ತಂದೆಯೆಂದೇ ಹೇಳಿದ್ದಳು. ತಾಯಿ ಸತ್ತು ಹೋದ ಮೇಲೆ ಉಳಿದ ಪುಟ್ಟ ಮೂರು ಮಕ್ಕಳನ್ನು ಸಾಕುವ ಹಾಗೂ ತಾಯಿಯ ಜಾಗದಲ್ಲಿ ಅಪ್ಪನೊಂದಿಗೆ ಮಲಗುವ ಏರ್ಪಾಡಾಗಿತ್ತು. ಪ್ರಪಂಚದ ಅರಿವಿರದ ಹಿರಿಯ ಮಗಳಿಗೆ ಎಲ್ಲ ತಂದೆಯರೂ ಹೀಗೆಯೇ ಮಲಗುತ್ತಾರೆಂಬ ಭಾವನೆ. ಇದೆಂಥಾ ಪೀಡನೆ?

ಇವು ಉದಾಹರಣೆ ಮಾತ್ರ.  ಮುಗ್ಧ, ಕೋಮಲ ದೇಹದ ಮಕ್ಕಳಿಗೆ ದೈಹಿಕವಾಗಿ ಹಿಂಸೆ ನೀಡುವುದರಿಂದ ಮಕ್ಕಳು ನೀತಿವಂತರಾಗುತ್ತಾರೆ, ಬುದ್ಧಿವಂತರಾಗುತ್ತಾರೆಂಬ ಕೆಟ್ಟ ನಂಬಿಕೆ ಕೆಲವು ಪೋಷಕರಲ್ಲಿ ಕಂಡು ಬರುತ್ತದೆ. ಆ ನಂಬಿಕೆ ತಮ್ಮ ಹಿರಿಯರಿಂದ ನೋಡಿ ಕಲಿತದ್ದು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಈ ಅಭ್ಯಾಸಗಳನ್ನು ರೂಢಿಯನ್ನಾಗಿ ಮಾಡಿಕೊಳ್ಳುವುದೂ ಒಂದು ಮನೋರೋಗ.

ಉದಾಹರಣೆಗೆ, ಸಣ್ಣ ಸಣ್ಣ ಕಾರಣಕ್ಕಾಗಿ ಮಕ್ಕಳನ್ನು ಹೊಡೆಯುವುದು, ಕಿವಿ ಹಿಡಿದು ಕೂಡಿಸುವುದು, ಉಪವಾಸ ಹಾಕಿ, ಕತ್ತಲು ಕೋಣೆಯಲ್ಲಿ ಕೂಡಿ ಹಾಕುವುದು.

ಇವು ಮನೋರೋಗದ ಲಕ್ಷಣಗಳಲ್ಲದೇ ಇರಬಹುದು. ಅಪ್ಪ – ಅಮ್ಮ ಎನ್ನುವ ಅಧಿಕಾರದ ವ್ಯವಹಾರ ತಮ್ಮಿಂದ ಮಕ್ಕಳು ಹುಟ್ಟಿವೆಯೇ ಹೊರತು ತಮಗಾಗಿಯಲ್ಲ ಎಂಬುದನ್ನು ತಿಳಿಯದವರ ವರ್ತನೆ. ಆದರೆ ಪುಟ್ಟ ಮಕ್ಕಳ ಮೇಲೆ ಮಾಡುವ ಲೈಂಗಿಕ, ಪೀಡನೆ, ಅತ್ಯಾಚಾರ ಮಾತ್ರ ಬೀಭತ್ಸ!
ಇಂತಹ ಕೃತ್ಯ ಮಾಡುವವರಿಗೆ ಶಿಶು ಪೀಡಕರು ಎನ್ನುತ್ತಾರೆ. ಆಂಗ್ಲ ಭಾಷೆ­ಯಲ್ಲಿ ಚೈಲ್‌್ಡ ಮಾಲೆಸ್ಟರ್‌್ಸ, ‘ಪೀಡೊ ಫೈಲ್‌್ಸ’ ಎಂದು ಹೇಳುತ್ತಾರೆ. ದೊಡ್ಡವರು ಮಕ್ಕಳ ಮೇಲೆಸಗುವ ವಿಕೃತ ಕಾಮವಿದು. ಇದಕ್ಕೇ ಮಹಿಳೆಯರೂ ಹೊರತಲ್ಲ.

ಈ ಶಿಶು ಪೀಡಕರಿಗೆ ಲೈಂಗಿಕ ಉದ್ವೇಗ ಉಂಟಾದಾಗ ಸುಲಭವಾಗಿ ಸಿಗುವ, ಅಸಹಾಯಕ ಪುಟ್ಟ ಮಕ್ಕಳು ಬಲಿಯಾಗುವುದು ದುರದೃಷ್ಟಕರ.  ಅನುವಂಶಿಕತೆ ಹಾಗೂ ಪರಿಸರ, ಪೋಷಕರ ನಿರ್ಲಕ್ಷ್ಯ ತಿರಸ್ಕಾರ, ಬಡತನ, ಹಿರಿಯರಿಂದ ಕಂಡು ಕಲಿತ ಪರಿಣಾಮ ಎನ್ನುತ್ತಾರೆ.

ಅನುವಂಶೀಯತೆ ಎಂದರೆ ತಂದೆ ತಾಯಿಗಳಿಂದ ಮಕ್ಕಳಿಗೆ ಬರುವ ಶಾರೀರಿಕ ಹಾಗೂ ಮಾನಸಿಕ ಗುಣಗಳು. ಇದೊಂದು ಪೀಳಿಗೆಯ ಹಸ್ತಾಂತರ. ಇದನ್ನು ಡಾರ್ವಿನ್‌ ಮೆಂಟಲ್‌, ಗಾಲ್ಟ ಪ್ರಿಯಸ್‌ ವಿಸ್‌ ಮನ್‌ ವಿದ್ವಾಂಸರು ಪ್ರತಿಪಾದಿಸಿದ್ದಾರೆ. ಹಾಗೆಯೇ ಕಾರ್ಲ್ನೆಯರ್‍ಸನ್‌ ಕೂಡಾ ನಿಶ್ಚಿತ ಪ್ರಮಾಣದಲ್ಲಿ ಮುಂದಿನ  ಪೀಳಿಗೆಯಲ್ಲಿ ಗೋಚರವಾಗುತ್ತದೆಯೆಂದು ಹೇಳಿದ್ದಾರೆ.

ಇಂತಹ ಗುಣಗಳನ್ನು ಡಿ.ಎನ್‌.ಎ. ಮೂಲಕ ಪತ್ತೆ ಹಚ್ಚಬಹುದು. ಡಿ.ಎನ್‌.ಎ. ಎಂಬುದು ಮಾನವ ಶರೀರದ ‘ಬ್ಲೂಪ್ರಿಂಟ್‌’ ಎಂದರೆ ತಪ್ಪಾಗಲಾರದು. ತಂದೆ­ಯಿಂದ ಪ್ರತ್ಯೇಕ ಡಿ. ಎನ್‌.ಎ. ಮತ್ತು ತಾಯಿಯಿಂದ ಪಡೆದ ಪ್ರತ್ಯೇಕ ಡಿ.ಎನ್‌.ಎ. ಕೂಡಿಕೊಂಡು, ಹುಟ್ಟುವ ಮಕ್ಕಳಲ್ಲಿ ಪ್ರತ್ಯೇಕವಾದ ಡಿ.ಎನ್‌.ಎ. ಸೃಷ್ಟಿಯಾಗುತ್ತದೆ. ಮಾನವನ ವರ್ಣತಂತುಗಳಲ್ಲಿರುವ ‘ಜೀನ್‌್ಸ’ ಅಂದರೆ ವಂಶವಾಹಿಗಳ ಸರಪಳಿಗೆ ‘ನ್ಯೂಕ್ಲಿಯೋಟೈಡ್ಸ್’ಗಳು ಮುಖ್ಯವಾಗಿರುತ್ತವೆ.

ಇವುಗಳು ಜೋಡಿಯ ರೂಪ­ದಲ್ಲಿದ್ದು ಇವುಗಳಲ್ಲಿ ಕಾಣುವ ಏರುಪೇರು, ಸರಿಯಾಗಿರದ ಜೋಡಣೆಗಳೇ ಮನುಷ್ಯನ ಅಪರಾಧ ಮನೋವೃತ್ತಿಗೆ ಕಾರಣವಾಗುತ್ತವೆ. ಪ್ರತಿಯೊಬ್ಬ ವ್ಯಕ್ತಿ­ಯಲ್ಲೂ ಬೇರೆ ತರಹದ್ದೇ ಜೋಡಣೆಗಳಿರುವುದರಿಂದ ಪತ್ತೆ ಹಚ್ಚಬಹುದಾಗಿದೆ.  ಹಾಗೆಯೇ ಕಾರ್ಲ್ರಾಥನ್‌ ಮೆಂಡೆಲಿಯನ್‌, ಅಪರಾಧಗಳು ಮಾನಸಿಕ ನ್ಯೂನ್ಯತೆ, ಅಸ್ಥಿರ ಸ್ವಭಾವ, ಶಾರೀರಿಕ ನೂನ್ಯತೆ ಇತ್ಯಾದಿ ಕಾರಣವಾಗುತ್ತಾನೆ’ ಎಂದು ಹೇಳಿದ್ದಾನೆ.

ಡಹಲ್‌ ಸ್ಟ್ರೋಮಾ ಕೂಡಾ, ಲೈಂಗಿಕ ಮತ್ತು ಇತರೆ ಅಪರಾಧಗಳಿಗೆ ಆನುವಂಶೀಯತೆಯಿದ್ದರೂ ಹೆಚ್ಚು ಪ್ರಭಾವ ಬೀರುವುದು ಸಾಮಾಜಿಕ ಪರಿಸರದ ಪರಿಣಾಮ  ಎಂದು ಹೇಳಿದನು. ಹೀಗೆ ಆನುವಂಶಿಕ ಗುಣಗ­ಳೊಂದಿಗೆ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿರುವ, ಮನೆ, ಪೋಷಕರು, ಶಾಲೆ, ಪರಿಸರ ಹಾಗೂ ಸಮಾಜಗಳು ಕೂಡಿಕೊಂಡು ಅಪರಾಧಗಳಿಗೆ ಪ್ರೇರಕವಾಗಬ­ಹುದು ಎಂಬುದನ್ನು ಅನೇಕರು ಸ್ಪಷ್ಟಪಡಿಸಿದ್ದಾರೆ. ಇದೊಂದು ಮನೋಕ್ಷೋಭೆ. ಇಂಥ ವ್ಯಕ್ತಿಗಳಲ್ಲಿ ಅಸಹಜ ಭಾವನೆಗಳು ಹುಟ್ಟುತ್ತಿರುತ್ತವೆ. ನೋವು, ಅನಾದರ, ಸೋಲು ಅಸಮಾನ, ಬಡತನ, ಪೋಷಕರ ನಿರ್ಲಕ್ಷ್ಯಗಳಿಂದ, ಕೀಳರಿಮೆಯುಂಟಾಗಿ ಮನಸ್ಸಿನ ಉದ್ವೇಗ ಹೆಚ್ಚಿ, ಅಸ್ಥಿರತೆಯಿಂದ ತಲ್ಲಣಿಸುತ್ತದೆ. ಕೀಳರಿಮೆಯಿಂದ ಬಳಲುವ ವ್ಯಕ್ತಿ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಪ್ರಯತ್ನಿಸುವಾಗ ಅವನ ಮನಸ್ಸಿನೊಳಗೆ ಹುದುಗಿದ್ದ  ಕೆಟ್ಟ ಭಾವನೆಗಳು ಅಪರಾಧಗಳನ್ನು ಮಾಡುವಂತೆ ಮಾಡುತ್ತವೆ.

ಮಕ್ಕಳನ್ನು ಅಸಹಾಯಕರು ಎಂಬ ಗುಂಪಿಗೆ ಸೇರಿಸಿ ಅವರಿಂದ ತಮಗೇನೂ ತೊಂದರೆಯಾಗದು, ಪ್ರತಿಭಟಿಸ­ಲಾರರೆಂಬ ತರ್ಕ, ದುಷ್ಟ ಮನಸ್ಸಿಗೆ ಬಂದಿರತ್ತದೆ. ತಮ­ಗೇನು ಮಾಡುತ್ತಿದ್ದಾರೆ, ಏನಾಗ್ತಿದೆಯೆಂದು ಹೇಳಲು ಮಕ್ಕಳಿಗೆ ಸಾಧ್ಯವಾ­ಗದು.  ಭಯ, ಸಿಹಿತಿನಿಸುಗಳ, ಒಲುಮೆಯ ಮಾತುಗಳ ಆಮಿಷಗಳಿಗೆ ಒಳಗಾಗಲೂ­ಬಹುದು; ಲೈಂಗಿಕಕ್ರಿಯೆ ಮಾತ್ರವಲ್ಲದೆ, ಕೋಮಲ ದೇಹಕ್ಕೆ ವಿಚಿತ್ರ ರೀತಿಯಲ್ಲಿ ಹಿಂಸಿಸು ಮನೋವಿಕಾರಿಗಳೂ ಇದ್ದಾರೆ. ಮಕ್ಕಳ ದೇಹದ, ಗುಪ್ತಾಂಗಗಳ ಮೇಲೆ ಮೂತ್ರ ವಿಸರ್ಜಿಸು­ವುದು, ಬೆರಳುಗಳು, ವಸ್ತುಗಳನ್ನು ತೂರಿಸಿ ಮಕ್ಕಳು ನರಳಿ ಅತ್ತರೆ ವಿಕೃತ ಆನಂದ ಪಡೆಯು­ವುದು, ಬೆತ್ತಲೆ ಮಾಡಿ ನೋಡು­ವುದು ಮುಂತಾದ ಪೀಡನೆಗಳಿಂದ ಹಿಂಸಿಸುತ್ತಾರೆ.

ಗುರುತಿಸುವುದು ಹೇಗೆ?
ದೈಹಿಕವಾಗಿ, ಸಿಗರೇಟಿನ ತುದಿಯಿಂದ ಸುಟ್ಟಗಾಯ್ಳು, ತರಚುಗಾಯಗಳು, ಹಲ್ಲುಗಳಿಂದ ಕಚ್ಚಿದ ಗುರುತುಗಳು, ಮೂಳೆ ಮುರಿತ, ಮುಂತಾದವುಗಳನ್ನು ಗುರುತಿಸುವ ಜಾಣ್ಮೆ ಇರಬೇಕು. ಮಗು ಮಾನಸಿಕವಾಗಿ ಕುಗ್ಗಿ ಹೋಗಿರುತ್ತದೆ. ಬೆಚ್ಚಿ ಬೀಳುತ್ತವೆ, ಮೂಲೆ ಸೇರಿಬಿಡುತ್ತವೆ. ಗೆಳೆಯರೊಂದಿಗೆ  ಬೆರೆಯಲಾರರು. ಮನೆಗೆ ಹೋಗಲು ಹೆದುರುವರು, ಸಿಡುಕಿ  ಜಗಳ ಆಡುವುದು, ಅಪನಂಬಿಕೆ, ಓದಿನಲ್ಲಿ ನಿರಾಸಕ್ತಿ ಎದುರಾಡುವುದು, ನಿರಾಕರಣೆ ಮುಂತಾದುವುಗಳಿಂದ ಪ್ರತ್ಯೇಕವಾಗಿಯೇ ಕಾಣುತ್ತಾರೆ. ಕೆಲವು ಮಕ್ಕಳಲ್ಲಿ,  ಜನನಾಂಗದಲ್ಲಿ ರಕ್ತಸ್ರಾವ, ಗಾಯ ತುರಿಕೆ, ಉರಿಮೂತ್ರ, ನೋವು ಕಾಣುತ್ತವೆ. 

ಮನೋರೋಗಿಗಳೆಂದೇ ಗುರುತಿಸಲಾಗುವ ವಿಕೃತ ಕಾಮಿಗಳಿಗೆ ಆತ್ಮಸಾಕ್ಷಿ, ಪಶ್ಚಾತ್ತಾಪ, ನಾಚಿಕೆ, ಭಯ ಇರುವುದಿಲ್ಲ. ಶಿಕ್ಷೆಗಳಿಂದ ಹುತ್ತ ಮಾತ್ರ ಒಡೆದಂತಾಗುತ್ತದೆ. ಹಾವನ್ನಲ್ಲ. ಚಾಣಕ್ಯ ನೀತಿಯಂತೆ ಬುಡವನ್ನೇ ಕಿತ್ತೆಸುವ ಕಾರ್ಯವಾಗಬೇಕು. ಮೊದಲು ಕಾರಣವಾದ ಮನೋರೋಗವನ್ನು ಪತ್ತೆ ಹಚ್ಚಿ ನಂತರ ಶಿಕ್ಷೆಯ ಭಯ ತಟ್ಟುವಂತೆ ಮಾಡಬೇಕು. ಇಲ್ಲದಿದ್ದರೆ ಈ ಶನಿಸಂತಾನ, ಬೆಳೆಯುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT