ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಣೆಯ ವಿರುದ್ಧ ಹಕ್ಕು

ನಿಮಗಿದು ತಿಳಿದಿರಲಿ
ಅಕ್ಷರ ಗಾತ್ರ

ನಮ್ಮ ಸಂವಿಧಾನ ಮನುಷ್ಯರಿಂದ ಮನುಷ್ಯರ ಮೇಲೆ ನಡೆಯುವ ಎಲ್ಲ ಬಗೆಯ ಶೋಷಣೆಗಳ ವಿರುದ್ಧ ರಕ್ಷಣೆ ನೀಡುತ್ತದೆ. ಶೋಷಣೆಯ ವಿರುದ್ಧ ವ್ಯಕ್ತಿಗೆ ರಕ್ಷಣೆಯಿಲ್ಲದಿದ್ದರೆ ಸಂವಿಧಾನ ಕೊಡಮಾಡಿರುವ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅರ್ಥವೇ ಇರುವುದಿಲ್ಲ. ಆದ್ದರಿಂದ ಸಂವಿಧಾನ ನಮಗೆ ನೀಡಿರುವ ಈ ಹಕ್ಕು ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಘನತೆಯಿಂದ ಬಾಳುವ ಹಕ್ಕುಗಳಿಗೆ ಪೂರಕವಾಗಿದೆ.

ನಾಗರಿಕತೆಯ ಉದಯವಾದಾಗಿನಿಂದಲೂ ಪ್ರತಿ ಸಮಾಜದಲ್ಲಿಯೂ ದುರ್ಬಲ ವರ್ಗಕ್ಕೆ ಸೇರಿದವರು ಶೋಷಣೆಗೆ ಗುರಿಯಾಗುತ್ತಲೇ ಇದ್ದಾರೆ. ಮನುಷ್ಯರ ಮಾರಾಟ- ಅದರಲ್ಲೂ ಹೆಣ್ಣು ಮಕ್ಕಳ ಮಾರಾಟ, ಕಳ್ಳ ಸಾಗಾಣಿಕೆ, ಜೀತ ಕಾರ್ಮಿಕ ಪದ್ಧತಿ ಮುಂತಾದ ವಿವಿಧ ರೀತಿಯ ಶೋಷಣೆಗೆ ಗುರಿಯಾಗುತ್ತಲೇ ಬಂದಿದ್ದಾರೆ. ಭೂಮಿಯ ಒಡೆಯ ಭೂಮಿ ಇಲ್ಲದವನನ್ನು ಉಚಿತವಾಗಿ ತನ್ನ ಭೂಮಿಯಲ್ಲಿ ದುಡಿಸಿಕೊಳ್ಳುವುದೂ ಶೋಷಣೆ ಎನಿಸಿಕೊಳ್ಳುತ್ತದೆ.

ಮಹಿಳೆಯನ್ನು ವೇಶ್ಯಾ ವೃತ್ತಿಗೆ ತಳ್ಳುವುದು ಮಹಿಳೆಯ ವಿರುದ್ಧ ಎಸಗುವ ಅತ್ಯಂತ ಹೇಯ ಕ್ರೌರ್ಯವಾಗಿದೆ. ಯಾವುದೇ ಒತ್ತಾಯಕ್ಕೆ ಒಳಪಡಿಸಿ ಯಾರೇ ವ್ಯಕ್ತಿಯಿಂದ ಯಾವುದೇ ಕೃತ್ಯವನ್ನು ಮಾಡಿಸುವುದೂ ಕ್ರೌರ್ಯವೆನಿಸಿಕೊಳ್ಳುತ್ತದೆ. ಸ್ವತಂತ್ರ ಭಾರತದಲ್ಲಿ ಎಲ್ಲ ವ್ಯಕ್ತಿಗಳಿಗೂ, ಯಾವುದೇ ಒತ್ತಾಯ ಒತ್ತಡಗಳಿಗೆ ಮಣಿಯದೆ ತಮಗಿಷ್ಟ ಬಂದಂತೆ ಬದುಕಲು ಮತ್ತು ಕಾನೂನು ಬಾಹಿರವಲ್ಲದಂಥ ಯಾವುದೇ ಕೆಲಸ ಮಾಡಲು ಸಾಧ್ಯವಾಗುವಂಥ ಪರಿಸರ ನಿರ್ಮಾಣ ಮಾಡುವುದು ಕಾನೂನು ರಕ್ಷಕರ  ಕರ್ತವ್ಯವಾಗಿರುತ್ತದೆ. ಆದರೆ ಸರ್ಕಾರವೇ ದೇಶಕ್ಕಾಗಿ ಸೇವೆ ಸಲ್ಲಿಸುವಂತೆ ಕರೆ ನೀಡುವುದು ಒತ್ತಾಯವೆನಿಸಿಕೊಳ್ಳುವುದಿಲ್ಲ. ಆಗಲೂ ಸ್ತ್ರೀ ಪುರುಷರ ನಡುವೆಯಾಗಲೀ. ಧರ್ಮ, ಜಾತಿ, ಮತ, ಪಂಗಡಗಳ ನಡುವೆಯಾಗಲೀ ತಾರತಮ್ಯ ವೆಸಗುವಂತಿಲ್ಲ.

ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಲು, ಅದರಲ್ಲೂ ಮಹಿಳೆಯರನ್ನು ಮತ್ತು ಹೆಣ್ಣು ಮಕ್ಕಳನ್ನು ಅನೈತಿಕ ವ್ಯವಹಾರಗಳಿಗೆ ಬಳಸಿಕೊಳ್ಳುವುದಕ್ಕಾಗಿ ಅಪಹರಿಸುವುದನ್ನು, ಮಾರಾಟ ಮಾಡುವುದನ್ನು ಹಾಗೂ ಕಳ್ಳತನದಿಂದ ಅವರನ್ನು ಸಾಗಿಸುವುದನ್ನು ತಡೆಯುವುದಕ್ಕಾಗಿ ಅನೈತಿಕ ವ್ಯವಹಾರಗಳಿಗಾಗಿ ಕಳ್ಳಸಾಗಾಣಿಕೆ(ತಡೆಗಟ್ಟುವಿಕೆ) ಅಧಿನಿಯಮವನ್ನು ಸರ್ಕಾರ ಜಾರಿಗೊಳಿಸಿದೆ. ಅಲ್ಲದೆ, ಅದಕ್ಕೆ ಕಾರಣಗಳು, ಇಂಥ ಶೋಷಣೆಗೆ ಸುಲಭವಾಗಿ ಗುರಿಯಾಗುವವರು, ಅನೈತಿಕ ವ್ಯವಹಾರಗಳಲ್ಲಿ ತೊಡಗಿರುವವರನ್ನು ರಕ್ಷಿಸುವುದು ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವುದು ಮುಂತಾದ ಎಲ್ಲ ವಿಷಯಗಳನ್ನೊಳಗೊಂಡ ಒಂದು ಸಮಗ್ರ ಕ್ರಿಯಾ ಯೋಜನೆಯನ್ನು ಸಹ ಸರ್ಕಾರ ರೂಪಿಸಿದೆ.

ನಮ್ಮ ಸಂವಿಧಾನ, ಸಮಾಜದ ಮತ್ತೊಂದು ಅತಿ ಹೇಯ ಕ್ರೌರ್ಯ ಮತ್ತು ಶೋಷಣೆಯಾದ ಬಾಲ ಕಾರ್ಮಿಕ ಪದ್ಧತಿಯ ವಿರುದ್ಧವೂ ರಕ್ಷಣೆ ನೀಡಿದೆ. ನಮ್ಮ ಸಮಾಜದಲ್ಲಿ ತಾಂಡವವಾಡುತ್ತಿರುವ ಬಡತನ ಬಾಲ ಕಾರ್ಮಿಕ ಪದ್ಧತಿಗೆ ಮೂಲ ಕಾರಣವಾಗಿದೆ. ಅಲ್ಲದೆ ನಿಯೋಜಕರೂ ಸಹ ಅನೇಕ ಕೆಲಸಗಳಿಗೆ ಬಾಲಕ/ಬಾಲಕಿಯರನ್ನೆ ಕೆಲಸಕ್ಕೆ ತೊಡಗಿಸಿಕೊಳ್ಳಲು ಬಯಸುತ್ತಾರೆ. ಏಕೆಂದರೆ ಅದು ಅವರಿಗೆ ಅಗ್ಗವಾಗಿ ಸಿಗುವ ದುಡಿಮೆಯಾಗಿರುತ್ತದೆ. ಕಾರ್ಖಾನೆಗಳಲ್ಲಿ, ಹೋಟೆಲ್ಲುಗಳಲ್ಲಿ, ವಾಹನ ದುರಸ್ತಿ ಗ್ಯಾರೇಜುಗಳಲ್ಲಿ ಬಾಲಕರ ಶೋಷಣೆ ನಡೆದರೆ ಮನಗೆಲಸ, ಸಿದ್ಧ ಉಡುಪು ಕಾರ್ಖಾನೆಗಳು, ಬೀಡಿ ತಯಾರಿಕಾ ಘಟಕಗಳಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರ ಶೋಷಣೆ ಅವ್ಯಾಹತವಾಗಿ ನಡೆದಿದೆ.

ಬಡತನದ ಕಾರಣವನ್ನು ಬಳಸಿಕೊಂಡು ಬಾಲಕ ಬಾಲಕಿಯರನ್ನು ದುಡಿಮೆಗೆ ಹಚ್ಚುವುದು ಅಕ್ಷಮ್ಯ ಅಪರಾಧ. ಹಾಗೆ ದುಡಿಮೆಗೆ ತೊಡಗುವ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಆದರೆ ಬಡತನ ನಿರ್ಮೂಲನವಾಗದೇ, ನಮ್ಮ ಜನರ ಆರ್ಥಿಕ ಸ್ಥಿತಿ ಸುಧಾರಿಸದೇ ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನವಾಗುವುದು ಕಷ್ಟ. ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನಗೊಳಿಸಬೇಕೆಂಬ ಸಂವಿಧಾನದ ಆಶಯಕ್ಕೆ ಪೂರಕವಾಗಿ ಬಾಲ ಕಾರ್ಮಿಕ ನಿಷೇಧ ಅಧಿನಿಯಮವನ್ನೂ ಸಹ ಸರ್ಕಾರ ಜಾರಿಗೊಳಿಸಿದೆ ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT