ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಲೆ

Last Updated 27 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಾನತೆಯ ಆಶಯ, ಶೋಷಣೆ ಮುಕ್ತ ಬದುಕಿಗೆ ಎದುರಾಗುವ ಅಡೆತಡೆ ನಿವಾರಣೆಗೆ ಕಾನೂನು ಅರಿವಿನ ಕೊರತೆಯೇ? ಹಾಗಿದ್ದರೆ ನಿಮ್ಮ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಿ. ಈ ಅಂಕಣ ಪ್ರತಿ 15 ದಿನಗಳಿಗೊಮ್ಮೆ ಪ್ರಕಟವಾಗುತ್ತದೆ. 

ಮೇರಿ, ಬೆಂಗಳೂರು
ನಾವು ರೋಮನ್ ಕ್ಯಾಥೊಲಿಕ್ ಪಂಗಡಕ್ಕೆ ಸೇರಿದವರು.  ನನ್ನ ತಾತನಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು. ತಾತ 1968ರಲ್ಲಿ ನಿಧನರಾದರು. ಅವರ ಮಗಳಿಗೆ ಮದುವೆಯಾಗಿ ಒಬ್ಬ ಮಗ ಇದ್ದ. ಆದರೆ ಆಕೆ ಸಹ 1969ರಲ್ಲಿ ತೀರಿಕೊಂಡರು. ಈಗ ಅವರ ಮಗನಿಗೆ 40 ವರ್ಷ. ತಾತನಿಗೆ ನಾಲ್ಕು ಎಕರೆ ಜಮೀನಿತ್ತು. ಅವರ ಗಂಡು ಮಕ್ಕಳಿಬ್ಬರೂ ಜಮೀನನ್ನು ಸಮಪಾಲು ಮಾಡಿಕೊಂಡು ಅದನ್ನು ಬೇರೆಯವರಿಗೆ ಮಾರಿದ್ದಾರೆ.

ಆದರೆ ಸಹೋದರಿಯ ಮಗನಿಗೆ ಹಿಂದೆ ಆಸ್ತಿಯಲ್ಲಿ ಪಾಲು ಕೊಡುತ್ತೇವೆ ಎಂದಿದ್ದವರು, ಈಗ ಕೊಡಲು ನಿರಾಕರಿಸುತ್ತಿದ್ದಾರೆ. ಹೆಣ್ಣು ಮಗಳಿಗೆ ಪಾಲು ಕೊಡುವಂತಿಲ್ಲ ಎಂದು ಹೇಳುತ್ತಿದ್ದಾರೆ. ಈಗ ಈ ಸಹೋದರರ ಬಳಿ 30 ಎಕರೆ ಜಮೀನಿದೆ. ರೋಮನ್‌ ಕ್ಯಾಥೊಲಿಕ್ ಪಂಗಡದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡುವಂತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅದು ನಿಜವೇ? ಅಲ್ಲ ಎಂದಾದರೆ ಆಸ್ತಿ ಪಡೆಯಲು ನಾವು ಏನು ಮಾಡಬೇಕು?

ಭಾರತೀಯ ಕ್ರಿಶ್ಚಿಯನ್ನರಿಗೆ ಅನ್ವಯವಾಗುವ ಭಾರತೀಯ ವಾರಸಾ ಕಾಯ್ದೆಯ ಕಲಂ 31ರಿಂದ 49ರ ವರೆಗಿನ ವಿಧಿಗಳ ಪ್ರಕಾರ, ನಿಮ್ಮ ಅಜ್ಜ ಯಾವುದೇ ಮರಣಶಾಸನವನ್ನು ಬರೆಯದೇ ತೀರಿಕೊಂಡಿದ್ದಲ್ಲಿ, ಅವರ ನಾಲ್ಕು ಎಕರೆ ಜಮೀನಿನಲ್ಲಿ ಹೆಣ್ಣು ಮಗಳು ಸೇರಿದಂತೆ ಎಲ್ಲ ಮಕ್ಕಳಿಗೂ ಸಮಭಾಗ ಇರುತ್ತದೆ.

ಹೆಣ್ಣು ಮಗಳೂ ತೀರಿಕೊಂಡು ಅವರಿಗೆ ಮಗ ಅಥವಾ ಮಗಳಿದ್ದರೆ, ಆ ಮೊಮ್ಮಗುವಿಗೆ ತನ್ನ ತಾಯಿಯ ಭಾಗವನ್ನು ಪಡೆಯಲು ಹಕ್ಕಿರುತ್ತದೆ. ಆಕೆಯ ಪಾಲನ್ನೂ ಬಳಸಿಕೊಂಡು ಹೆಚ್ಚಿನ ಆಸ್ತಿಯನ್ನು ಗಳಿಸಿದ್ದಲ್ಲಿ, ಅದರಲ್ಲೂ ಸಹ ಪಾಲು ಕೇಳಬಹುದು.  ಹೆಣ್ಣು ಮಕ್ಕಳಿಗೆ ಭಾಗವಿಲ್ಲ ಎನ್ನುವುದು ಸರಿಯಲ್ಲ. ಕಾನೂನು ರೀತ್ಯಾ ಕ್ರಮ ಪ್ರಾರಂಭಿಸಲು ಮೊದಲು ನೀವು ಕೂಡಲೇ ವಕೀಲರನ್ನು ಭೇಟಿ ಮಾಡಿ.

ಹೆಸರು ಬೇಡ, ರಾಯಚೂರು
ನಮ್ಮ ತಂದೆ 17 ವರ್ಷದ ಹಿಂದೆ ಎರಡನೇ ಮದುವೆ ಮಾಡಿಕೊಂಡಿದ್ದು, ನಮ್ಮ ತಾಯಿಯಿಂದ 7 ಮಕ್ಕಳಿವೆ. ಅವರಲ್ಲಿ ಐವರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ಎರಡನೇ ಪತ್ನಿಯಿಂದ ಇಬ್ಬರು ಮಕ್ಕಳಿದ್ದಾರೆ. ನಮ್ಮ ತಾಯಿ ಗೃಹಿಣಿ. ತಂದೆಯ ಎರಡನೇ ಹೆಂಡತಿ ಶಿಕ್ಷಕಿಯಾಗಿದ್ದು, ಸ್ಥಿತಿವಂತರಾಗಿದ್ದಾರೆ.  ತಂದೆ ಸರ್ಕಾರಿ ನೌಕರರಾಗಿದ್ದು, ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ. 10 ವರ್ಷಗಳ ಹಿಂದೆ ಸೇವಾ ಸಾಂತ್ವನ ಕೇಂದ್ರದ ಮಹಿಳಾ ಸಹಾಯವಾಣಿ ಕೇಂದ್ರದ ಮೂಲಕ ಪ್ರಕರಣ ದಾಖಲಿಸಿದ್ದಾಗ, ತಂದೆಯ ಅರ್ಧ ಸಂಬಳವನ್ನು ನಮ್ಮ ತಾಯಿಗೆ ಕಳುಹಿಸುವಂತೆ ಒಪ್ಪಂದವಾಗಿತ್ತು. ಅದರಂತೆ ಅವರು ಹಣ ಕಳುಹಿಸುತ್ತಿದ್ದರು. ಆದರೆ, ಕಳೆದ 3 ವರ್ಷಗಳಿಂದ ಸರಿಯಾಗಿ ಹಣ ಕಳುಹಿಸುತ್ತಿಲ್ಲ.

ನಾವು ಮದುವೆ ವಯಸ್ಸಿಗೆ ಬಂದಿದ್ದು, ನಮ್ಮ ಇಬ್ಬರು ಅಕ್ಕಂದಿರ ಮದುವೆ ಆಗಿದೆ. ಅವರ ಮದುವೆಯಲ್ಲಿ ಇಂತಿಷ್ಟು ಹಣ ನೀಡಿ ‘ಹೇಗಾದರೂ ಮಾಡ್ಕೊಳ್ಳಿ’ ಎಂದು ಹೇಳಿ ನುಣುಚಿಕೊಂಡಿದ್ದರು. ನಮಗೆ ಬೇರೆ ತರಹದ ಯಾವುದೇ ಆದಾಯಗಳಿಲ್ಲ. ಏನಾದರೂ ಕೇಳಿದರೆ ಮತ್ತು ಒಪ್ಪಂದವನ್ನು ನೆನಪಿಸಿದರೆ ‘ನೌಕರಿಗೆ ರಾಜೀನಾಮೆ ಕೊಡುತ್ತೇನೆ ಆಗ ಭಿಕ್ಷೆ ಬೇಡಿ’ ಎಂದು ಹೇಳುತ್ತಾರೆ.

ಯಾವುದಕ್ಕೂ ಹೇಸುವುದಿಲ್ಲ. ಅವರು ನೌಕರಿ ಬಿಟ್ಟರೆ  ನಮ್ಮಲ್ಲಿ ಯಾರಿಗಾದರೂ ಆ ಕೆಲಸ ಸಿಗಬಹುದೇ? ನಾವು ಮುಂದೆ ಯಾವ ಕ್ರಮ ಕೈಗೊಳ್ಳಬೇಕು? ಸೇವಾ ಸಾಂತ್ವನದಿಂದ ಹೂಡಿದ್ದ ದಾವೆಯನ್ನು ಮರು ಚಾಲನೆ ಮಾಡಬಹುದೇ? ನಮ್ಮದು ಮುಸ್ಲಿಂ ಕುಟುಂಬವಾದ್ದರಿಂದ ನಾಲ್ಕು ಮದುವೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಸಕಾರಣ ನೀಡಿದರೆ ಕಾನೂನು ಪ್ರಕಾರವೂ ಯಾವುದೇ ತೊಂದರೆಯಿಲ್ಲ. ಮೇಲಾಗಿ ನಮ್ಮ ತಾಯಿಗೆ ಮೊದಲು ಐವರು ಹೆಣ್ಣು ಮಕ್ಕಳಾಗಿದ್ದರಿಂದಲೇ ಎರಡನೇ ಮದುವೆ ಮಾಡಿಕೊಂಡೆ ಎಂದು ತಂದೆ ನೆಪವೊಡ್ಡುವ ಸಾಧ್ಯತೆ ಇದೆ.


ನಿಮ್ಮ ತಂದೆ ನೌಕರಿ ತ್ಯಜಿಸಿದರೆ ನಿಮಗ್ಯಾರಿಗೂ ಅದು ದೊರಕುವುದಿಲ್ಲ. ನೀವು ಈಗಿನ ಸಂದರ್ಭದಲ್ಲಿ, ಮತ್ತೆ ಒಪ್ಪಂದದಂತೆ ಜೀವನಾಂಶಕ್ಕೆ ಹಾಗೂ ಇಂದಿನ ಏರುತ್ತಿರುವ ಬೆಲೆಗಳ ಹಿನ್ನೆಲೆಯಲ್ಲಿ ಬೇಕಿದ್ದರೆ ಜೀವನಾಂಶವನ್ನು ಹೆಚ್ಚಿಸುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ನಿಮ್ಮ ತಂದೆ ಖಂಡಿತಾ ನೌಕರಿ ಬಿಡುತ್ತಾರೆ ಎಂಬುದು ತಿಳಿದು ಬಂದಲ್ಲಿ, ಅವರು ನೌಕರಿ ಬಿಟ್ಟಾಗ ಯಾವುದೇ ಸೇವಾ ಲಾಭಗಳನ್ನು ಅವರಿಗೆ ಸಂದಾಯ ಮಾಡಬಾರದೆಂದೂ ಹಾಗೂ ಸಂದಾಯ ಮಾಡುವ ಮೊದಲು ನಿಮ್ಮ ಜೀವನಾಂಶದ ವಿಷಯ ಇತ್ಯರ್ಥ ಮಾಡಬೇಕೆಂದೂ ಕೋರಿ ಕೂಡಲೇ ದಾವಾ ಸಲ್ಲಿಸಿ ತಾತ್ಕಾಲಿಕ ನಿರ್ಬಂಧಕಾಜ್ಞೆಗೆ ಕೋರಬಹುದು ಅಥವಾ  ಸೇವಾ ಸಾಂತ್ವನ ಕೇಂದ್ರವನ್ನೇ ಮತ್ತೆ ಸಂಪರ್ಕಿಸಿ, ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಬಹುದು.

ಸವಿತಾ, ಇಲಕಲ್ಲ
ನಮ್ಮ ತಂದೆಗೆ ನಾವು ನಾಲ್ವರು ಹೆಣ್ಣು ಮಕ್ಕಳು ಮತ್ತು ಐವರು ಗಂಡು ಮಕ್ಕಳು. ಎಲ್ಲರಿಗೂ ಮದುವೆಯಾಗಿದೆ. ನನ್ನ ಗಂಡ ತೀರಿಕೊಂಡಿದ್ದಾರೆ. ಈಗ ನನ್ನ ಅಣ್ಣಂದಿರು ತಂದೆಯ ಜಮೀನು ಮಾರಲು ಹೊರಟಿದ್ದಾರೆ. ತಂದೆಗೆ 12 ಎಕರೆ ಜಮೀನಿತ್ತು. ಅವರು 1996ರಲ್ಲಿ ಅದನ್ನು ಐವರು ಗಂಡು ಮಕ್ಕಳಿಗೆ ತಲಾ ಎರಡು ಎಕರೆಯಂತೆ ಭಾಗ ಮಾಡಿ ಕೊಟ್ಟಿದ್ದರು. ತಮ್ಮ ಹೆಸರಿನಲ್ಲಿ ಎರಡು ಎಕರೆಯನ್ನು ಉಳಿಸಿಕೊಂಡಿದ್ದರು. ಅವರು ತೀರಿಕೊಂಡ ಮೇಲೆ ಆ ಜಮೀನು ತಾಯಿಗೆ ವರ್ಗಾವಣೆಯಾಗಿದೆ. ತಂದೆಯ ಹೆಸರಿನಲ್ಲಿದ್ದ 12 ಎಕರೆ ಜಮೀನಿನಲ್ಲಿ ಐದು ಎಕರೆಯು ಅವರ ಸ್ವಂತ ದುಡಿಮೆಯಿಂದ ಕೊಂಡಿದ್ದಾಗಿದ್ದು, ಇನ್ನುಳಿದ 7 ಎಕರೆ ಅವರ ತಂದೆಯಿಂದ ಬಳುವಳಿಯಾಗಿ ಬಂದಿದ್ದು.

ಆದರೆ ನಮ್ಮ ತಂದೆ ಗಂಡು ಮಕ್ಕಳಿಗೆ ಮಾತ್ರ ಪಾಲು ಮಾಡಿ ಹೆಣ್ಣು ಮಕ್ಕಳಿಗೆ ಕೊಟ್ಟಿಲ್ಲ. ಈಗ ಗಂಡು ಮಕ್ಕಳು ತಮಗೆ ಕೊಟ್ಟ ಜಮೀನಿನಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಬರುವುದಿಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ ತಾಯಿಯ ಹೆಸರಿನಲ್ಲಿ ಇರುವ ಎರಡು ಎಕರೆಗೆ ಮಾತ್ರ ನಮಗೆ ಸಂಬಂಧ ಇದೆಯೇ? ಉಳಿದ ಜಮೀನಿನಲ್ಲೂ ನಮಗೆ ಪಾಲು ಇದೆ ಎಂದಾದರೆ ಅದನ್ನು ಪಡೆಯಲು ನಾವು ಯಾವ ರೀತಿ ದಾವಾ ಹೂಡಬೇಕು?


ನಿಮ್ಮ ತಂದೆಯ 5 ಎಕರೆ ಸ್ವಯಾರ್ಜಿತ ಭೂಮಿಯನ್ನು ನಿಮ್ಮ ಸೋದರರಿಗೆ ಹಂಚಿದ ಬಗ್ಗೆ ನೀವು ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಅವರ ಪಿತ್ರಾರ್ಜಿತ 7 ಎಕರೆ ಭೂಮಿ ಸೇರಿದಂತೆ ನೋಂದಾಯಿತ ವಿಭಾಗ ಪತ್ರದ ಮೂಲಕ ಆಸ್ತಿಯು ನಿಮ್ಮ ಸೋದರರಿಗೆ 1996ರಲ್ಲಿ ವರ್ಗಾವಣೆಯಾಗಿದ್ದಲ್ಲಿ, ಹಿಂದೂ ವಾರಸಾ ಕಾಯ್ದೆಯ 2005ರ ತಿದ್ದುಪಡಿಯಂತೆ ಅದರ ಬಗ್ಗೆಯೂ ನೀವು ಹಕ್ಕು ಒತ್ತಾಯಿಸಲು ಬರುವುದಿಲ್ಲ.

ಆದರೆ 20.12.2004ರ ಮೊದಲು ನೋಂದಾಯಿತ ವಿಭಾಗ ಪತ್ರ ಇಲ್ಲದಿದ್ದರೆ ನಿಮ್ಮ ತಂದೆಯ  7 ಎಕರೆ ಪಿತ್ರಾರ್ಜಿತ ಆಸ್ತಿಯಲ್ಲಿ ನೀವು ಈಗ ಭಾಗ ಕೇಳಬಹುದು. ನಿಮ್ಮ ತಂದೆ ಅವರ ಹೆಸರಿನಲ್ಲಿ ಉಳಿಸಿಕೊಂಡಿದ್ದ 2 ಎಕರೆ ಜಮೀನಿನಲ್ಲಿ ಎಲ್ಲರಿಗೂ ಸಮಪಾಲು ಬರುತ್ತದೆ. ಇದನ್ನೆಲ್ಲ ಪರಿಗಣಿಸಿ ನಿಮ್ಮ ಹಕ್ಕಿನ ಪಾಲು ಕೇಳಿ ದಾವಾ ಹೂಡಬಹುದು. ವಕೀಲರ ಸಹಾಯ, ಸಲಹೆ, ಸೂಚನೆಗಳ ಮೇರೆಗೆ ದಾವಾ ಹೂಡಿ.
ವಿಳಾಸ: ಸಂಪಾದಕರು, ‘ಸಬಲೆ’ , ಭೂಮಿಕಾ ವಿಭಾಗ, ಪ್ರಜಾವಾಣಿ, ನಂ ೭೫, ಎಂ.ಜಿ. ರಸ್ತೆ, ಬೆಂಗಳೂರು-- – -೫೬೦೦೦೧ ಇ-ಮೇಲ್bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT