ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಲೆ

Last Updated 22 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮಾನತೆಯ ಆಶಯ, ಶೋಷಣೆ ಮುಕ್ತ ಬದುಕಿಗೆ ಎದುರಾಗುವ ಅಡೆತಡೆ ನಿವಾರಣೆಗೆ ಕಾನೂನು ಅರಿವಿನ ಕೊರತೆಯೇ? ಹಾಗಿದ್ದರೆ ನಿಮ್ಮ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಿ. ಈ ಅಂಕಣ ಪ್ರತಿ 15 ದಿನಗಳಿಗೊಮ್ಮೆ ಪ್ರಕಟವಾಗುತ್ತದೆ.

ಮಂಜುಳಾ, ಬೆಂಗಳೂರು
ನಮ್ಮ ತಂದೆ ತಾಯಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ. ನಾನು ದೊಡ್ಡ ಮಗಳು. ನನ್ನ ಮದುವೆಯಾದ ನಂತರ ನಮ್ಮ ಸ್ವಗಳಿಕೆಯಿಂದ 20x30 ಅಳತೆಯ ಬಿಡಿಎ ನಿವೇಶನವನ್ನು ಬೆಂಗಳೂರಿನಲ್ಲಿ ನನ್ನ ಹೆಸರಿಗೆ ಖರೀದಿ ಮಾಡಲಾಯಿತು. ನಮ್ಮ ತಂದೆ ನಾನು ಖರೀದಿಸಿದ ನಿವೇಶನವನ್ನು ನನ್ನ ತಂಗಿಗೆ ಮದುವೆಯಾದ ನಂತರ ಅವಳ ಹೆಸರಿಗೆ ಕೊಡಿಸಿದರು. ಅದಕ್ಕೆ ಬದಲಾಗಿ, ತಾವು ನಿವೃತ್ತಿ ಹೊಂದಿದಾಗ ತಮ್ಮ ಇಲಾಖೆಯಿಂದ ಬಂದ
30x40 ಅಳತೆಯ ಬಿಡಿಎ ನಿವೇಶನವನ್ನು ನನ್ನ ಹೆಸರಿಗೆ ನೋಂದಣಿ ಮಾಡಿಸಿದರು. ಈಗ ನನ್ನ ತಮ್ಮನಿಗೆ ಮದುವೆಯಾಗಿದೆ. ಆಸ್ತಿ ವಿಷಯಕ್ಕೆ ಬಂದಾಗ ಅವನು ಮತ್ತು ಅವನ ಹೆಂಡತಿ ನಮ್ಮ ತಂದೆ ನನಗೆ ನೀಡಿದ ನಿವೇಶನಕ್ಕೆ ಸಂಬಂಧಿಸಿದಂತೆ ಏನಾದರೂ ತೊಂದರೆ ಮಾಡಬಹುದೇ? ನಮ್ಮ ತಂದೆ ತಾಯಿ ಇಬ್ಬರೂ ಜೀವಂತವಾಗಿ ಇದ್ದಾರೆ.


-– ನಿಮ್ಮ ಹೆಸರಿಗೆ ಮಾಡಿರುವ ನಿವೇಶನವು ನಿಮ್ಮ ತಂದೆ ತಾವು ನಿವೃತ್ತರಾದಾಗ  ಬಂದಂತಹ ಹಣದಿಂದ ಗಳಿಸಿರುವ ಸ್ವಯಾರ್ಜಿತ ಆಸ್ತಿ. ಹೀಗಿರುವಾಗ, ಅದರ ಬಗ್ಗೆ ಬೇರಾರೂ ಹಕ್ಕೊತ್ತಾಯ ಮಾಡಲಾಗದು. ತಂದೆ ತಾಯಿ ಇನ್ನೂ ಜೀವಂತ ಇದ್ದಾಗಲಂತೂ ಸ್ವಯಾರ್ಜಿತ ಆಸ್ತಿಯ ಬಗ್ಗೆ ಮಕ್ಕಳು ಹಕ್ಕೊತ್ತಾಯ ಮಾಡುವುದು ವೃಥಾ ಮನಸ್ತಾಪಕ್ಕೆ ಎಡೆ ಮಾಡುತ್ತದೆ ಹೊರತು ಯಾವುದೇ ರೀತಿ ಹಕ್ಕು ಇರುವುದಿಲ್ಲ.

ಸ್ವಯಾರ್ಜಿತ ಆಸ್ತಿಯನ್ನು ತಾವು ಜೀವಂತ ಇರುವಾಗಲೇ ತಮಗೆ ಬೇಕಾದಂತೆ ವಿಲೇವಾರಿ ಮಾಡುವ ಹಕ್ಕು ಆ ಆಸ್ತಿಯ ಮಾಲೀಕರದ್ದು.  ಆದರೆ ತೊಂದರೆ ಮಾಡಬಹುದೇ ಎಂಬ ಬಗ್ಗೆ ಹೇಳಲಾಗದು.  ಹಕ್ಕು ಇರಲಿ ಇಲ್ಲದಿರಲಿ ತೊಂದರೆ ಮಾಡಬೇಕೆಂಬ ಮನೋಭಾವ ಇದ್ದಲ್ಲಿ ಅಥವಾ ತನಗೂ ಭಾಗ ಬೇಕೆಂಬ ಆಸೆಯಿದ್ದಲ್ಲಿ ಅಂತಹ ವ್ಯಕ್ತಿ ಏನಾದರೂ ತಕರಾರು ಮಾಡಬಹುದೇ ಇಲ್ಲವೇ ಎಂದು ಹೇಳುವುದು ಕೇವಲ ಊಹಾಪೋಹ ಆಗುತ್ತದೆ.  ಅಂತಹ ಸಮಯ ಬಂದಾಗ ಕಾನೂನು ನಿಮ್ಮ ಸಹಾಯಕ್ಕೆ ಇರುತ್ತದೆ. ಚಿಂತಿಸದಿರಿ.

ಹೆಸರು, ಊರು ಬೇಡ
ನನಗೆ 58 ವರ್ಷ. 1972ರಲ್ಲಿ ವಿವಾಹವಾಗಿ ಗಂಡನ ಮನೆಯಲ್ಲಿದ್ದೇನೆ. ನಮ್ಮ ಐವರು ಮಕ್ಕಳು ಉದರ ಪೋಷಣೆಗೆ ಬೇರೆ ಬೇರೆ ಕಡೆ ಇದ್ದಾರೆ. 1985ರಲ್ಲಿ ನನ್ನ ಉಳಿಕೆ ಹಾಗೂ ನನ್ನ ತಂದೆಯ ಆರ್ಥಿಕ ನೆರವಿನಿಂದ 2.4 ಎಕರೆ ಕೃಷಿ ಜಮೀನನ್ನು ಶುದ್ಧ ಕ್ರಯಕ್ಕೆ ಕೊಂಡಿದ್ದೇನೆ. ಸ್ವಯಾರ್ಜಿತಕ್ಕೆ ಪೂರಕವಾದ ಎಲ್ಲ ದಾಖಲೆಗಳೂ ಇವೆ. ಆಗಿನಿಂದ ನಾನೇ ಸ್ವತಃ ಸಾಗುವಳಿ ಮಾಡಿ ಮಳೆ ಆಶ್ರಿತ ಬೆಳೆ ಪಡೆಯುತ್ತಿದ್ದೇನೆ. ಆ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ವಿವಾದ ಇಲ್ಲ. ಹೀಗಿದ್ದೂ ಈ ನನ್ನ ಜಮೀನಿನಲ್ಲಿನ ಮರಗಳ ಫಲ ಹಾಗೂ ಜಮೀನಿನಲ್ಲಿ ಗೆಯ್ಮೆ ಮಾಡಿ ಬೆಳೆ ಪಡೆಯದಂತೆ ಈಚೆಗೆ ನನ್ನ ಗಂಡನ ಅಣ್ಣ ಮತ್ತು ತಮ್ಮ ತಡೆದಿದ್ದಾರೆ. ಅವಾಚ್ಯವಾಗಿ ನಿಂದಿಸುವುದು, ಹೆದರಿಕೆ ಹುಟ್ಟಿಸುವುದು, ಕೊಲೆ ಬೆದರಿಕೆ ಹಾಕುವುದಲ್ಲದೆ ಹಲ್ಲೆಯನ್ನೂ ನಡೆಸಿದ್ದಾರೆ.

ಈ ಬಗ್ಗೆ ಸ್ಥಾನಿಕ, ತಾಲ್ಲೂಕು, ಜಿಲ್ಲಾ ಹಾಗೂ ಬೆಂಗಳೂರುವರೆಗೂ ಎಲ್ಲ ಪೊಲೀಸರು, ತಹಶೀಲ್ದಾರರು, ಜಿಲ್ಲಾಧಿಕಾರಿ, ಜೊತೆಗೆ ರಾಜ್ಯ ಮಹಿಳಾ ಆಯೋಗಕ್ಕೂ ರಕ್ಷಣೆ ಕೋರಿ ದೂರು ಸಲ್ಲಿಸಿದ್ದೇನೆ. ಇದು ಸಿವಿಲ್‌ ಸ್ವರೂಪದ ವ್ಯಾಜ್ಯ ಆಗಿರುವುದರಿಂದ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ಅನೇಕ ಬಾರಿ ಪೊಲೀಸರು ಹಿಂಬರಹ ಕೊಟ್ಟಿದ್ದಾರೆ. ಹಾಗಿದ್ದರೆ ನನ್ನ ಆಸ್ತಿಗಾಗಿ ನಾನೇ ನ್ಯಾಯಾಲಯಕ್ಕೆ ಹೋಗಬೇಕೇ? ದಿಕ್ಕು ತೋಚುತ್ತಿಲ್ಲ, ರಕ್ಷಣೆ ಸಿಕ್ಕಿಲ್ಲ, ಬೆಳೆ ಪಡೆಯಲು ದಯವಿಟ್ಟು ಮಾರ್ಗ ತೋರಿಸಿ.


–ನೀವು ನಿಮ್ಮ ಉಳಿಕೆ ಹಾಗೂ ನಿಮ್ಮ ತಂದೆಯ ನೆರವಿನಿಂದ ಪಡೆದಂತಹ ಆಸ್ತಿಯ ಮೇಲೆ ನಿಮ್ಮ ಹೊರತು ಬೇರಾರೂ, ಅದರಲ್ಲೂ ನಿಮ್ಮ ಭಾವ, ಮೈದುನಂದಿರು ಹಕ್ಕು ಚಲಾಯಿಸಲಾಗದು. ಅವರು ನಡೆಸುತ್ತಿರುವ ದಬ್ಬಾಳಿಕೆಯ ವಿರುದ್ಧ ನಿಮ್ಮ ಇತರ ಪ್ರಯತ್ನಗಳೆಲ್ಲ ವಿಫಲವಾಯಿತು ಎಂದಿದ್ದೀರಿ. ನಿಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು, ನಿಮ್ಮ ಹಕ್ಕನ್ನು ರಕ್ಷಿಸಿಕೊಳ್ಳಲು ಸಿವಿಲ್ ನ್ಯಾಯಾಲಯದ ಮೂಲಕ ಕಾನೂನಿನ ಪ್ರಕಾರ ಪ್ರಯತ್ನಿಸಲು ಹಿಂಜರಿಯಬೇಡಿ.

ಬೆಳೆ ಕೊಯ್ಲು ಮಾಡಲು ಅಡ್ಡಿ ಬಾರದಂತೆ ಅವರ ವಿರುದ್ಧ ತಾತ್ಕಾಲಿಕ ನಿರ್ಬಂಧಕಾಜ್ಞೆ ಕೋರಿ ಹಾಗೂ ನಿಮ್ಮ ಆಸ್ತಿಯ ಸ್ವಾಧೀನಾನುಭವದಲ್ಲಿ ಹಸ್ತಕ್ಷೇಪ ಮಾಡದಂತೆ ಆದೇಶಗಳನ್ನು ಕೋರಿ ದಾವಾ ಹೂಡಲು ಕ್ರಮ ಕೈಗೊಳ್ಳಬಹುದು. ನಿಮ್ಮ ಆಸ್ತಿಯನ್ನು ನೀವು ನಿರಾತಂಕದಿಂದ ಅನುಭವಿಸಲು ಕಾನೂನಿನ ನೆರವು ಪಡೆಯುವುದರಲ್ಲಿ ತಪ್ಪಿಲ್ಲ. ಸಮಾಜದಲ್ಲಿ ಬದುಕುವಾಗ ಕೆಲವೊಮ್ಮೆ ನೆಮ್ಮದಿ ಕೆಡಿಸುವ ಸಂದರ್ಭಗಳು ಉಂಟಾಗುತ್ತವೆ ಮತ್ತು ವಿನಾಕಾರಣ ತೊಂದರೆಗಳಾಗುತ್ತವೆ. ‘ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯಾ...’ ಎಂಬ ಸಾಲುಗಳನ್ನು ನೀವು ಕೇಳಿಯೇ ಇರುತ್ತೀರಿ. ಯಾವುದಕ್ಕೂ ಕೂಡಲೇ ವಕೀಲರನ್ನು ಸಂಪರ್ಕಿಸಿ.

ಹೆಸರು ಬೇಡ, ವಿಜಾಪುರ
ನಾನು ವೃತ್ತಿಯಲ್ಲಿ ಕೆ.ಎಸ್.ಆರ್‌.ಟಿ.ಸಿ. ನಿರ್ವಾಹಕ. ನನ್ನ ಹೆಂಡತಿ ನಮಗೆ ಮೂವರು ಮಕ್ಕಳಾದ ನಂತರ ಮತ್ತೊಬ್ಬ ವ್ಯಕ್ತಿಯ ಜೊತೆ ವಾಸ ಮಾಡುತ್ತಿದ್ದಾಳೆ. ಮಕ್ಕಳನ್ನು ಸಹ ಅವಳ ಹತ್ತಿರವೇ ಇಟ್ಟುಕೊಂಡಿದ್ದಾಳೆ. ಈಗ ಕೋರ್ಟ್‌ ಮೆಟ್ಟಿಲೇರಿ ನನ್ನಿಂದ ಜೀವನಾಂಶ ಕೇಳುತ್ತಿದ್ದಾಳೆ. ಅವಳಿಂದ ಮಾನಸಿಕವಾಗಿ ನಾನು ಬಹಳ ನೊಂದಿದ್ದೇನೆ. ಅವಳು ಕೇಳುತ್ತಿರುವುದು ನ್ಯಾಯಬದ್ಧವಾಗಿ ಇದೆಯೇ?


– ನಿಮ್ಮ ಪತ್ನಿ ಜೀವನಾಂಶ ಕೋರಿ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅವರ ವಾದ ಏನೆಂದು ತಿಳಿಯಬೇಕಾಗುತ್ತದೆ.  ನಿಮ್ಮ ಪ್ರಕಾರ ಆಕೆ ಮತ್ತೊಬ್ಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಾರೆ.  ನಿಮ್ಮ ಪ್ರತಿವಾದಿಗಳ ಹೇಳಿಕೆಯನ್ನು ನೀವು ಈಗ ನ್ಯಾಯಾಲಯದ ಮುಂದೆ ಸಲ್ಲಿಸಬೇಕು. ತಕರಾರು ನ್ಯಾಯಾಲಯದ ಮುಂದೆ ಇರುವುದರಿಂದ ನಿಮ್ಮ ಪತ್ನಿಯ ಕ್ಲೇಮು ನ್ಯಾಯಬದ್ಧವೇ ಅಥವಾ ಅಲ್ಲವೇ ಎಂಬ ಅಂಶದ ಬಗ್ಗೆ ತಿಳಿಯಲು ನೀವು ನ್ಯಾಯಾಲಯದ ತೀರ್ಪಿಗಾಗಿ ಕಾಯಬೇಕಾಗುತ್ತದೆ. ಈ ಮಧ್ಯೆ, ನಿಮ್ಮ ವಾದವನ್ನು ನೀವು ಸಾಕ್ಷ್ಯದ ಆಧಾರದಿಂದ ಸಾಬೀತು ಪಡಿಸಬೇಕಾಗುತ್ತದೆ. ಹಾಗೆ ಸಾಬೀತಾದ ನಂತರ, ನಿಮ್ಮ ಪತ್ನಿ ಕೋರುತ್ತಿರುವ ಪರಿಹಾರಕ್ಕೆ ಅರ್ಹರೇ ಎಂಬುದು ತೀರ್ಮಾನವಾಗುತ್ತದೆ.

ದಂಡ ಪ್ರಕ್ರಿಯಾ ಸಂಹಿತೆಯ 125ನೇ ಕಲಂ  ಹಾಗೂ ಜೀವನಾಂಶಕ್ಕೆ  ಸಂಬಂಧಿಸಿದ ಇನ್ನಿತರ ಕಾನೂನಿನ ಪ್ರಕಾರ, ಪರ ಪುರುಷನೊಂದಿಗೆ  ಅನೈತಿಕ ಸಂಬಂಧ ಹೊಂದಿ ಬದುಕುತ್ತಿದ್ದರೆ, ಇಲ್ಲವೇ ಸಾಕಷ್ಟು ಆದಾಯ ಹೊಂದಿ ತನ್ನ ಜೀವನವನ್ನು ತಾನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದರೆ ಅಥವಾ ಸಕಾರಣ ಇಲ್ಲದೆ ಪತಿಯಿಂದ ದೂರವಾಗಿದ್ದರೆ, ಪತಿ– ಪತ್ನಿ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಅಂತಹ ಪತ್ನಿಯು ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ವಿಧಿಸಲಾಗಿದೆ. ಆದರೆ ನಿಮ್ಮ ಮಕ್ಕಳ ಜೀವನಾಂಶದ ಜವಾಬ್ದಾರಿ ನಿಮ್ಮದಾಗಿರುತ್ತದೆ. 

    ನಿಮ್ಮಿಬ್ಬರ ನಡುವಿನ ಮನಸ್ತಾಪಕ್ಕೆ ಮಕ್ಕಳನ್ನು ತೊಂದರೆಗೆ ಈಡು ಮಾಡುವುದು ಸರಿಯಲ್ಲ. ‘ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು’ ಎಂಬ ಗಾದೆ ಮಾತನ್ನು ನೀವು ಕೇಳಿಯೇ ಇರುತ್ತೀರಿ ಅಲ್ಲವೇ? ಅಲ್ಲದೆ ಮಕ್ಕಳು ತಮ್ಮ ತಂದೆಯಿಂದ ಜೀವನಾಂಶ ಪಡೆಯಲು ಇರುವ ಹಕ್ಕಿಗೆ ಯಾವುದೇ ರೀತಿ ಬಾಧೆ ಉಂಟಾಗದು. ನೀವು ಸಹ ವಕೀಲರ ಸಲಹೆ, ಸಹಾಯ ಪಡೆದು ನ್ಯಾಯಾಲಯದ ಮುಂದಿರುವ ನಿಮ್ಮ ಮೊಕದ್ದಮೆಯನ್ನು ನಡೆಸಲು ಅವಕಾಶವಿದೆ.  ಸಂಧಾನ ಪ್ರಕ್ರಿಯೆಯ ಮೂಲಕ ನಿಮ್ಮ ನಡುವಿನ ವ್ಯಾಜ್ಯವನ್ನು ಇತ್ಯರ್ಥ ಮಾಡಿಕೊಂಡು ಮಕ್ಕಳ ಭವಿಷ್ಯವಾದರೂ ಹಸನಾಗುವಂತೆ ಗಮನ ಹರಿಸಿದರೆ ಸರ್ವರಿಗೂ ಕ್ಷೇಮವಾಗುತ್ತದೆ.

ಪ್ರಶ್ನೆಗಳನ್ನು ಕಳುಹಿಸಬೇಕಾದ ವಿಳಾಸ: ಸಂಪಾದಕರು, ‘ಸಬಲೆ’, ಭೂಮಿಕಾ ವಿಭಾಗ, ಪ್ರಜಾವಾಣಿ, ನಂ ೭೫, ಎಂ.ಜಿ. ರಸ್ತೆ,
ಬೆಂಗಳೂರು-೫೬೦೦೦೧
ಇ-ಮೇಲ್:  bhoomika@prajavani.co.in      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT