ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಲೆ

Last Updated 9 ಮೇ 2014, 19:30 IST
ಅಕ್ಷರ ಗಾತ್ರ

ಹೆಸರು ಬೇಡ, ಬಂಟ್ವಾಳ, ದ.ಕ.
ನಾನು 18 ವರ್ಷದ ಮುಸ್ಲಿಂ ಯುವತಿ. ತಂದೆಗೆ ಇಬ್ಬರು ಪತ್ನಿಯರು. ನನ್ನ ತಾಯಿ ಎರಡನೇ ಪತ್ನಿಯಾಗಿದ್ದು, ಅನಾಥರಾಗಿದ್ದ ಅವರನ್ನು ಮಸೀದಿಯಲ್ಲೇ ನಿಖಾಹ್‌ ಮಾಡಿಕೊಡಲಾಗಿತ್ತು. ಹೃದ್ರೋಗಿ ತಂದೆ; ತಾಯಿಯೇ ಬೀಡಿ ಕಟ್ಟಿ ಸಂಸಾರ ನಡೆಸುತ್ತಾರೆ. ಮನೆಯ ಸ್ಥಿತಿ ಉಸಿರುಕಟ್ಟಿಸುತ್ತಿದ್ದು, ಮಲತಾಯಿಯ ಚುಚ್ಚುಮಾತು, ನಿಂದನೆಯಿಂದ ಜೀವನವೇ ಸಾಕಾಗಿದೆ. ಎಸ್‌ಎಸ್ಎಲ್‌ಸಿ, ಪಿಯುಸಿಯಲ್ಲಿ 85% (ಪಿಯುಸಿ ವಿಜ್ಞಾನ, ಪಿಸಿಎಂಬಿ) ಅಂಕ ಗಳಿಸಿದ್ದರೂ ತಂದೆ–ತಾಯಿ – ಮಲತಾಯಿಯ ಚುಚ್ಚು ಮಾತುಗಳೇ ನನಗೆ ಸಿಕ್ಕಿದ ಉಡುಗೊರೆ. ಯಾರು ಏನೇ ಹೇಳಿದರೂ ಉನ್ನತ ವ್ಯಾಸಂಗಕ್ಕೆ ಖಂಡಿತಾ ಕಳುಹಿಸುವುದಿಲ್ಲ. ಆದಷ್ಟು ಬೇಗ, ನನ್ನ ಇಷ್ಟಕ್ಕೆ ವಿರುದ್ಧವಾಗಿ ಕಡಿಮೆ ಖರ್ಚಿನಲ್ಲಿ ಯಾರಿಗಾದರೂ ಗಂಟು ಹಾಕುವ ತಯಾರಿಯಲ್ಲಿದ್ದಾರೆ. ಸರ್ಕಾರಿ ಪ್ರೌಢಶಾಲಾ ಶಿಕ್ಷಕರೊಬ್ಬರು ನನ್ನ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಆತ ಪರಿಶಿಷ್ಟ ಜಾತಿಗೆ ಸೇರಿದ್ದು, ಅವರ ತಂದೆಯೂ ಸರ್ಕಾರಿ ಹುದ್ದೆಯಲ್ಲಿದ್ದಾರೆ. ಮುಂದೆ  ಡಾಕ್ಟರ್‌ ಓದಿಸೋಕೆ ಉತ್ಸುಕರಾಗಿದ್ದಾರೆ. ನಾವಿಬ್ಬರು ಪ್ರೀತಿಸುತ್ತಿದ್ದೇವೆ. ನಾನು ಪ್ರೀತಿಸುವ ಹುಡುಗನ ಜೊತೆ ಹೋದರೆ ತೊಂದರೆಗಳಿವೆಯೇ? ಮನೆಯವರ/ ಸಮಾಜದ ವಿರೋಧ ಎದುರಿಸಬಲ್ಲೆ. ಆದರೆ ಇದರಲ್ಲಿರುವ ತೊಡಕುಗಳೇನು?

-ಮನೆಯಲ್ಲಿ ಸಿಗದ ಪ್ರೀತಿಯನ್ನು ನೀವು ಹೊರಗೆ ಅರಸುತ್ತಿದ್ದೀರೋ ಅಥವಾ ನಿಮ್ಮ ಡಾಕ್ಟರ್ ಓದಿನ ಸಲುವಾಗಿ ಆಸರೆ ಬಯಸುತ್ತಿದ್ದೀರೋ ಎಂದು ಮೊದಲು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟ ಪಡಿಸಿಕೊಳ್ಳಿ. ನಿಮ್ಮ ಪತ್ರ ನೋಡಿದಲ್ಲಿ ನಿಮಗೆ ಏನಾದರೂ ಸಾಧನೆ ಮಾಡಲು ಸಹಾಯ ಹಾಗೂ ಭಾವನಾತ್ಮಕ ಆಸರೆಗಳು ಬೇಕೆಂದು ವ್ಯಕ್ತವಾಗುತ್ತದೆ. ನಿಮಗೆ ಓದಲು ಸಹಾಯ ಮಾಡುತ್ತಿರುವ ಶಾಲಾ ಶಿಕ್ಷಕರ ಕುಟುಂಬದ ವಿಶಾಲ ಮನೋಭಾವವನ್ನು ನೀವು ಪ್ರೀತಿಯಾಗಿ ಅರ್ಥ ಮಾಡಿಕೊಂಡಿರುವಂತೆ ಕಾಣುತ್ತದೆ. ಡಾಕ್ಟರ್ ಓದಲು ಈಗ ಅವರಿಂದ ದೊರೆಯುತ್ತಿರುವ ಮಾನವೀಯ ಸಹಾಯವೇ ಸಾಕೆನಿಸುತ್ತದೆ. ಮದುವೆ ಎಂಬ ಬಂಧನ ಓದಿಗೆ ಅಡ್ಡಿಯಾಗಬಹುದು ಹಾಗೂ ಬೇರೆ ರೀತಿಯ ತೊಂದರೆಗಳಿಗೆ ಎಡೆಯಾಗಬಹುದು.  ಪ್ರೀತಿ, ಮದುವೆಗಳು ಸಾಮಾನ್ಯವಾಗಿ ಓದಿಗೆ ಅಡ್ಡಿಯಾಗುತ್ತವೆ ಏಕೆಂದರೆ ಅದು ಭಾವನಾತ್ಮಕ ಸಂಬಂಧಗಳನ್ನು ಹುಟ್ಟುಹಾಕಿ ಓದಿನಿಂದ ಮನಸ್ಸನ್ನು ವಿಚಲಿತಗೊಳಿಸುತ್ತದೆ. ಅದರಲ್ಲೂ ನೀವು ಹಿಂದೂ ಹುಡುಗನನ್ನು ಪ್ರೀತಿಸುತ್ತಿದ್ದೀರಿ. ಮನೆಯಿಂದ ಹೊರಬಂದು, ಈ ಪ್ರೀತಿಯನ್ನು ಡಾಕ್ಟರ್ ಓದು ಮುಗಿಯುವವರೆಗೆ ಹಾಗೇ ಉಳಿಸಿಕೊಂಡು, ನಂತರದಲ್ಲಿ ಮದುವೆಯಾಗುವುದು ಸೂಕ್ತ.

ಪದ್ಮ, ಸಾಗರ
ನನ್ನ ತಾಯಿ ಸುಮಾರು 60 ವರ್ಷದಿಂದ ಒಬ್ಬರ ಖಾಸಗಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಅವರ ಬಳಿಯೇ ಕೆಲಸ ಮಾಡಿಕೊಂಡು ಬರುತ್ತಿದ್ದರು. ಈಗ ನಮ್ಮ ತಾಯಿ ತೀರಿ ಹೋಗಿದ್ದಾರೆ. ನಾವು ಅಲ್ಲಿಯೇ ವಾಸಿಸುತ್ತಿದ್ದು, ಅವರ ಹೆಸರಿನಲ್ಲಿ ‘ಮನೆ ತೆರಿಗೆ’ ಕಟ್ಟುತ್ತ ಬಂದಿದ್ದೇವೆ (ತಾಯಿ ಹೆಸರಿನಲ್ಲಿ). ಈಗ ನನ್ನ ಹೆಸರನಲ್ಲಿ ತೆರಿಗೆ ಕಟ್ಟುತ್ತಿದ್ದೇನೆ. ಕಾನೂನಿನ ಚೌಕಟ್ಟಿನಲ್ಲಿ ಈ ಜಾಗವನ್ನು ಸ್ವಂತವಾಗಿಸಲು ಸಾಧ್ಯವೇ. ದಯಮಾಡಿ ಮಾಹಿತಿ ನೀಡಿ.

–ಬೇರೊಬ್ಬರಿಗೆ ಸೇರಿದ ಆಸ್ತಿಯನ್ನು ನಿಮ್ಮ ಹೆಸರಿಗೆ ಕಾನೂನಿನ ಚೌಕಟ್ಟಿನಲ್ಲಿ ಮಾಡಿಕೊಳ್ಳಬೇಕಾದರೆ ಅದರ ಮಾಲೀಕರು ಆ ಆಸ್ತಿಯನ್ನು ನಿಮಗೆ ವರ್ಗಾಯಿಸಬೇಕು. ಅದು ವಿಲ್ ಮುಖಾಂತರ ಅಥವಾ ಬಳುವಳಿ / ಉಡುಗೊರೆ / ಗಿಫ್ಟ್‌ ಪತ್ರದ ಮುಖಾಂತರ ಇಲ್ಲವೆ ನೀವೇ ಅದನ್ನು ಕ್ರಯಕ್ಕೆ ಖರೀದಿಸಿದಾಗ ಆಗಬಹುದು. ಮನೆ ತೆರಿಗೆ ಕಟ್ಟುವುದರಿಂದ ಆ ಜಾಗದ ಮಾಲೀಕತ್ವವನ್ನು ಕ್ಲೇಮು ಮಾಡಲಾಗದು. ಮನೆ ಕಟ್ಟಲು ನಿಮ್ಮ ತಾಯಿ ಖರ್ಚು ಮಾಡಿರಬಹುದು. ಆದರೆ ಬೇರೆಯವರ ಜಾಗದಲ್ಲಿ ಮನೆ ಕಟ್ಟುವುದರಿಂದ ಆ ಜಾಗಕ್ಕೇ ಮಾಲೀಕರಾಗಲಾಗದು ಹಾಗೂ ಅದು ಅಕ್ರಮವಾದದ್ದು. ಆ ಜಾಗದ ಮಾಲೀಕರು ಒಪ್ಪದಿದ್ದಲ್ಲಿ ಮನೆಯನ್ನೇ ಕೆಡುವಲು ನ್ಯಾಯಾಲಯದ ನಿರ್ದೇಶನ ಕೋರಬಹುದು. ಆ ಬಗ್ಗೆ ವಿವಾದ ಬಂದಾಗ ಮನೆ ನಿರ್ಮಾಣದ ಖರ್ಚನ್ನೋ ಅಥವಾ ಮಾಲೀಕರು ಉದಾರಿಗಳಾಗಿದ್ದರೆ ಮನೆಯನ್ನು ನಿಮ್ಮ ಹೆಸರಿಗೆ ಬರೆಸಿಕೊಳ್ಳಲೂ ಪ್ರಯತ್ನಿಸಬಹುದು.

ಚಿನ್ಮಯಿ, ತುಮಕೂರು
ನನ್ನ ಪತಿ 2008ರಲ್ಲಿ ಒಂದು ನಿವೇಶನ ಕೊಂಡು ಅವರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ಆ ನಿವೇಶನ ಒಬ್ಬ ಸ್ತ್ರೀಯದು (ಅವರ ಪತಿ ಜೀವಂತವಾಗಿದ್ದಾರೆ) ಆ ನಿವೇಶನ ಆಕೆಯ ಸ್ವಯಾರ್ಜಿತ ಆಸ್ತಿಯಾದ ಕಾರಣ ನೋಂದಣಿ ಮಾಡುವಾಗ ಆಕೆ ಮತ್ತು ಅವರ ಮಗ ಮಾತ್ರ ನೋಂದಣಿಯಲ್ಲಿ ಸಹಿ ಮಾಡಿರುತ್ತಾರೆ. ಆದರೆ ಆಕೆಯ ಪತಿ ಸಹಿ ಹಾಕಿರುವುದಿಲ್ಲ. ನಮ್ಮ ಯಜಮಾನರು ಈಗ ಆ ನಿವೇಶನದಲ್ಲಿ ಅವರ ಸಂಬಂಧಿಕರೊಬ್ಬರಿಗೆ ಅರ್ಧ ಭಾಗವನ್ನು ನೋಂದಣಿ ಮಾಡಿಕೊಡಲು ಇಚ್ಛಿಸಿರುತ್ತಾರೆ. ಅದಕ್ಕೆ ನನ್ನ ಒಪ್ಪಿಗೆಯೂ ಇದೆ. ಆದರೆ ನನ್ನ ಪ್ರಶ್ನೆ:

*ನಮ್ಮ ಯಜಮಾನರು ಇಚ್ಛಿಸಿದಂತೆ ಅರ್ಧ ನಿವೇಶನವನ್ನು ನಮ್ಮ ಸಂಬಂಧಿಕರಿಗೆ ನೋಂದಣಿ ಮಾಡುತ್ತಿದ್ದಾರೆ. ನೋಂದಣಿ ಸಮಯದಲ್ಲಿ ನಾನೂ ಕೂಡ ಸಹಿ ಮಾಡಬೇಕಾ? ನಮ್ಮ ಮಕ್ಕಳೂ ಮಾಡಬೇಕಾ? (ಅವರಿನ್ನೂ 10 ವರ್ಷದ ಒಳಗಿನವರು).
*ಅದಕ್ಕೆ ನಾನು ಅರ್ಹಳಲ್ಲವೆ? ನಮ್ಮ ಯಜಮಾನರು ನಿನ್ನ ಸಹಿಯ ಅಗತ್ಯವಿಲ್ಲ ಎನ್ನುತ್ತಿದ್ದಾರೆ.
* 2008 ರಲ್ಲಿ ನಮ್ಮ ಯಜಮಾನರು ಸ್ವಯಾರ್ಜಿತವಾಗಿ ಕೊಂಡಿರುವುದರಿಂದ ಆಕೆಯ ಪತಿ ಸಹಿ ಮಾಡಿರುವುದಿಲ್ಲ. ಮುಂದೆ ಏನಾದರೂ ಅವರು ಪಾಲು ಕೇಳಲು ಅರ್ಹರಾಗಿರುತ್ತಾರೆಯೇ?
*ಆಕೆಯ ಹೆಣ್ಣು ಮಕ್ಕಳು ಕೂಡ ಸಹಿ ಹಾಕಿರುವುದಿಲ್ಲ. ಈಗ ನಾವೇನು ಮಾಡಬೇಕು. ದಯವಿಟ್ಟು ಪರಿಹಾರ ತಿಳಿಸಿ.

ನಿಮ್ಮ ಯಜಮಾನರ ಸ್ವಯಾರ್ಜಿತ ಕೊಂಡಿರುವ ನಿವೇಶನವನ್ನು ಮಾರಾಟ ಮಾಡಲು ನಿಮ್ಮ ಸಹಿಯ ಅಗತ್ಯವಿಲ್ಲ. ಒಂದು ವೇಳೆ ಕೊಳ್ಳುವವರು ತಮ್ಮ ಎಚ್ಚರಿಕೆಗಾಗಿ ನಿಮ್ಮ ಸಹಿ ಕೇಳಿದಲ್ಲಿ ನೀವು ಸಾಕ್ಷಿಯಾಗಿ ಸಹಿ ಮಾಡಿಕೊಡಬಹುದು. ನಿಮಗೆ ನಿವೇಶನ ಮಾರಾಟ ಮಾಡಿದವರ ಪತಿಗೆ ಅದರಲ್ಲಿ ಪಾಲು ಕೇಳುವ ಹಕ್ಕು ಇರುವುದಿಲ್ಲ ಏಕೆಂದರೆ ಅದು ಆಕೆಯ ಸ್ವಯಾರ್ಜಿತವೆಂದು ನೀವು ಹೇಳಿದ್ದೀರಿ. ಮಹಿಳೆಯಬ್ಬರು ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಹೇಗೆ, ಯಾರಿಗೆ ಬೇಕಿದ್ದರೂ ವರ್ಗಾಯಿಸುವ ಸಂಪೂರ್ಣ ಹಕ್ಕು ಹೊಂದಿರುತ್ತಾರೆ. ಆ ಆಸ್ತಿಯ ಮೇಲೆ ಆಕೆಯ ಹೆಣ್ಣು ಮಕ್ಕಳಿಗಾಗಲೀ, ಗಂಡು ಮಕ್ಕಳಿಗಾಗಲೀ ಅಥವಾ ಪತಿಗಾಗಲೀ ಯಾವುದೇ ರೀತಿಯ ಹಕ್ಕು ಬರುವುದಿಲ್ಲ.

ಗೀತಾ, ಮೈಸೂರು
ನಾವಿಬ್ಬರೂ ಅಂತರ್ಜಾತಿ ವಿವಾಹವಾಗಿದ್ದು, ನಮಗೆ ಜನಿಸುವ ಮಗುವಿನ ಶಾಲಾ ದಾಖಲೆ ಮತ್ತು ಇತರೆ ದಾಖಲೆಗಳಲ್ಲಿ ಜಾತಿ ಕಾಲಂನಲ್ಲಿ ತಂದೆಯ ಜಾತಿಯನ್ನು ಬರೆಸಬೇಕೆಂಬ ನಿಯಮವಿದೆಯೇ? ಜಾತಿ ಕಾಲಂನಲ್ಲಿ ‘ಭಾರತೀಯ’ ಎಂದು ಬರೆಸಲು ಅವಕಾಶವಿದೆಯೇ? ಈ ರೀತಿ  ಬರೆಸಿದರೆ ಮಗುವಿನ ಭವಿಷ್ಯಕ್ಕೆ ತೊಡಕಾಗುವುದೇ? ಇದರ ಬಗ್ಗೆ ಸವಿಸ್ತಾರವಾಗಿ ತಿಳಿಸಿ.
-ಭಾರತೀಯ ಎಂಬುದು ಜಾತಿಯಲ್ಲ. ಅದು ಸಾಮಾನ್ಯವಾದ ರಾಷ್ಟ್ರೀಯತೆಯನ್ನು ಸೂಚಿಸುತ್ತದೆ. ಯಾವ ರಾಷ್ಟ್ರಕ್ಕೆ ಸೇರಿದವರೆಂಬುದನ್ನು ಸೂಚಿಸುತ್ತದೆ.  ಓರ್ವ ಭಾರತೀಯನು ಯಾವ ಸಾಮಾಜಿಕ ಸಮುದಾಯಕ್ಕೆ ಸೇರಿದವನೆಂಬುದನ್ನು ಜಾತಿ ಸೂಚಿಸುತ್ತದೆ. ಜಾತಿ ಬೇರೆ, ರಾಷ್ಟ್ರೀಯತೆ ಬೇರೆ. 

ನಮ್ಮ ದೇಶದಲ್ಲಿ ಜಾತೀಯತೆಯು ಸಮಾಜದಲ್ಲಿ ಹಾಸುಹೊಕ್ಕಾಗಿರುವುದರಿಂದ ಸಮಾನತೆಯನ್ನು ತರುವ ಪ್ರಯತ್ನಕ್ಕಾಗಿ ಹಲವಾರು ಸರ್ಕಾರಿ ಯೋಜನೆಗಳ ಜಾರಿಮಾಡಲು ಸಹಾಯಕವಾಗುವುದೆಂಬ ಉದ್ದೇಶದಿಂದಲೋ ಏನೋ ಜಾತಿ ಸೂಚಕ ಕಾಲಂ ಇನ್ನೂ ಉಳಿಸಿಕೊಂಡಿದ್ದು, ಅದರಲ್ಲಿ ಜಾತಿಯನ್ನು ಬರೆಯಬೇಕಾಗುತ್ತದೆ. ಪುರುಷಪ್ರಧಾನ ಸಮಾಜವಾದ್ದರಿಂದ ಎಲ್ಲರೂ ಸಾಮಾನ್ಯವಾಗಿ ತಂದೆಯ ಜಾತಿಯನ್ನು ಬರೆಯುತ್ತಾರೆ. ನೀವು ಅಂತರ್ಜಾತೀಯ ವಿವಾಹವಾಗಿರುವುದರಿಂದ, ಮಗುವಿನ ಜಾತಿ ತಾಯಿಯದ್ದೋ ತಂದೆಯದ್ದೊ ಎಂದು ನೀವು ಮಗುವಿನ ಭವಿಷ್ಯದ ದೃಷ್ಟಿಯಲ್ಲಿ ನಿರ್ಧರಿಸಿ ಜಾತಿ ಕಾಲಂ ತುಂಬಬಹುದಾಗಿದೆ.

ಈಗೀಗ ಜಾತಿ ಬರೆಯುವುದರಿಂದ ಸಿಗಬಹುದಾದ ಶಿಕ್ಷಣದಲ್ಲಿನ ಆದ್ಯತೆ,  ಮೀಸಲಾತಿ ಸೌಲಭ್ಯ, ಸರ್ಕಾರಿ ನೌಕರಿಯಲ್ಲಿ ಆದ್ಯತೆ, ರಾಜಕೀಯದಲ್ಲಿ, ಸಾಮಾಜಿಕ ಕ್ಷೇತ್ರಗಳಲ್ಲಿ ದೊರಕಬಹುದಾದ ಅನುಕೂಲಗಳು ಇದೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳುವುದು ಜೀವನದಲ್ಲಿ ಮುಖ್ಯವಾಗುತ್ತಿದೆ. ಜಾತಿ ಬೇಡವೆಂದರೂ, ಜಾತಿ ಬರೆಯದಿದ್ದಲ್ಲಿ ಅಕಸ್ಮಾತ್ ಜಾತಿಯ ಆಧಾರದ ಮೇಲೆ ಬರುವ ಸರ್ಕಾರಿ ಸವಲತ್ತುಗಳನ್ನು  ಮುಂದೆ ಪಡೆಯಲು ಸಾಧ್ಯವಾಗದಿರಬಹುದು ಎಂಬ ಕಾರಣದಿಂದ ಜಾತಿ ಸೂಚಿಸ ಬೇಕಾದಂತಹ ಅಗತ್ಯದ ಸನ್ನಿವೇಶವೂ ಇದೆ. ಈ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ನಿಮ್ಮ ಮಗುವಿನ ಜಾತಿಯನ್ನು ನಮೂದಿಸಬಹುದಾಗಿದೆ. 1956ರ ನಂತರ ಜನಿಸಿದ ಹೆಣ್ಣು ಮಕ್ಕಳಿಗೆ ವಾರಸಾ ಹಕ್ಕು ಇರುವುದಿಲ್ಲವೆಂಬ ನಿಮ್ಮ ಗ್ರಹಿಕೆ ಸರಿಯಲ್ಲ. 17/6/1956 ರ ನಂತರ ಜನಿಸಿದ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹುಟ್ಟಿನಿಂದ ಬರುವ ವಾರಸಾ ಹಕ್ಕು ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT