ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಲೆ

Last Updated 4 ಜುಲೈ 2014, 19:30 IST
ಅಕ್ಷರ ಗಾತ್ರ

ರಾಜೇಶ್ವರಿ ಬಿನೂರ, ಅಫಜಲಪೂರ
ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ಪಡೆಯಲು ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿ (2011) ಮೂರು ವರ್ಷಗಳಾದವು. ಪದೇ ಪದೇ ಅಧಿಕಾರಿಗಳನ್ನು ಭೇಟಿ ಮಾಡಿದಾಗ ಮೊದಲು ನೀಡಿದ ಅರ್ಜಿ ಕಳೆದಿದೆ ಮತ್ತೊಂದು ಅರ್ಜಿ ಸಲ್ಲಿಸಿ ಎಂದರು. 2012 ರಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದೆ. ಮತ್ತೆ ಯಥಾಪ್ರಕಾರ ಅಧಿಕಾರಿಗಳಿಗೆ ನನ್ನ ಅರ್ಜಿಯ ಬಗ್ಗೆ ವಿಚಾರಿಸಿದಾಗ ಅದೂ ಕಾಣೆಯಾಗಿದೆ ಎಂದು ಹೇಳಿದರು. ನಾನು ಫೆಬ್ರುವರಿ 2013ರಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ನನ್ನ ವೈಯಕ್ತಿಕ ಯೋಜನಾ ಪ್ರಮಾಣ ಪತ್ರ ನೀಡದೇ ಇರಲು ಕಾರಣ ಕೇಳಿ ಅರ್ಜಿ ಸಲ್ಲಿಸಿದೆ. 9 ತಿಂಗಳಾದರೂ ಯಾವುದೇ ಉತ್ತರ ಸಿಗಲಿಲ್ಲ. ವ್ಯಕ್ತಿಯ ಬಹುಮುಖ್ಯ ಜೀವನಾಂಶದ ಮಾಹಿತಿಯನ್ನು ಅಧಿಕಾರಿಗಳು ಎಷ್ಟು ದಿನಗಳ ಅವಧಿಯೊಳಗೆ ಮಾಹಿತಿ ನೀಡಬೇಕು? ನಾನು ಕಳೆದ ಸಾಲಿನ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಿಂದ ವಂಚಿತಳಾಗಿದ್ದು (ಯೋಜನಾ ನಿರಾಶ್ರಿತರ ಪ್ರಮಾಣ ಪತ್ರವಿದ್ದರೆ ಆ ಕೋಟಾದಡಿ ನೇಮಕವಾಗುತ್ತಿದ್ದೆ) ಸರ್ಕಾರಿ ಹುದ್ದೆ ತಪ್ಪಿಸಿದ ಅಧಿಕಾರಗಳ ಮೇಲೆ ತೆಗೆದುಕೊಳ್ಳಬೇಕಾದ ಕ್ರಮಗಳೇನು ತಿಳಿಸಿ.


–ಮಾಹಿತಿ ಹಕ್ಕು ಅಧಿನಿಯಮ,2005 ರ ಪ್ರಕಾರ ನಿಗದಿಗೊಳಿಸಿರುವಂತೆ ಮಾಹಿತಿ ಪಡೆಯಲು ಇಚ್ಛಿಸುವವರು ಬರವಣಿಗೆಯಲ್ಲಿ ಅಥವಾ ತಂತ್ರಜ್ಞಾನ ಸಾಧನದ ಮೂಲಕ ತನ್ನ ಅರ್ಜಿಯನ್ನು, ಬೇಕಿರುವ ಮಾಹಿತಿಯ ವಿವರಗಳನ್ನು ನಮೂದಿಸಿ, ನಿಗದಿತ ಶುಲ್ಕದೊಂದಿಗೆ ಸಂಬಂಧಪಟ್ಟ ಸಾರ್ವಜನಿಕ ಪ್ರಾಧಿಕಾರದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಇಲ್ಲವೇ ರಾಜ್ಯ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸಲ್ಲಿಸಬೇಕಾಗುತ್ತದೆ. ಮಾಹಿತಿ ಅರ್ಜಿಯಲ್ಲಿ ತನ್ನ ಹೆಸರು ವಿಳಾಸ ಮೊದಲಾದ ವಿವರಗಳನ್ನು, ಆತನನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ಕೊಡತಕ್ಕದ್ದು. 

ಒಂದು ವೇಳೆ ಅರ್ಜಿಯು ಇನ್ನೊಂದು ಸಾರ್ವಜನಿಕ ಪ್ರಾಧಿಕಾರವು ಹೊಂದಿರುವ ಮಾಹಿತಿಗೆ ಸಂಬಂಧಿಸಿದ್ದಾದರೆ ಅಥವಾ ಬೇರೊಂದು ಸಾರ್ವಜನಿಕ ಪ್ರಾಧಿಕಾರವು ಆ ಅರ್ಜಿಯನ್ನು ಸಂಬಂಧಪಟ್ಟ  ಪ್ರಾಧಿಕಾರಕ್ಕೆ ವರ್ಗಾಯಿಸಿ ಅರ್ಜಿದಾರರಿಗೆ ಆ ಬಗ್ಗೆ ತಿಳಿಸಬೇಕಾಗಿದೆ. ಆರ್ಜಿ ಸಲ್ಲಿಸಿ, ನಿಗದಿತ ಶುಲ್ಕ ಪಾವತಿಯಾದಂದಿನಿಂದ ಗರಿಷ್ಠ 30 ದಿನಗಳೊಳಗಾಗಿ, ಅರ್ಜಿದಾರನಿಗೆ ಮಾಹಿತಿಯನ್ನು ಒದಗಿಸಬೇಕು  ಇಲ್ಲವೆ ಕಲಂ 7(1) ರ ಪ್ರಕಾರ ಅರ್ಜಿಯನ್ನು ತಿರಸ್ಕರಿಸಲು ಕಾರಣವಿದ್ದಲ್ಲಿ ಆ ಬಗ್ಗೆ ನಿರ್ಧಾರವನ್ನಾದರೂ ಕಾರಣಗಳ ಸಮೇತ ತಿಳಿಸಬೇಕು. ಹಾಗೂ ಆ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದ್ದು ಯಾವ ಪ್ರಾಧಿಕಾರಕ್ಕೆ ಸಲ್ಲಿಸಬೇಕೆಂಬುದರ ಬಗ್ಗೆಯು ಮಾಹಿತಿ ನೀಡಬೇಕು. ಅಥವಾ ಹೆಚ್ಚು ಶುಲ್ಕ ನೀಡಬೇಕಿದ್ದಲ್ಲಿ ಅದರ ಬಗ್ಗೆ ಅರ್ಜಿದಾರರಿಗೆ ತಿಳಿಸಬೇಕು.

ಹೀಗೆ ನಿಗದಿತ ಸಮಯ ಎಂದರೆ 30 ದಿವಸಗಳೊಳಗೆ ಏನೂ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ, ಅಂತಹ ಅರ್ಜಿಯನ್ನು ತಿರಸ್ಕರಿಸಲಾಗಿದೆಯೆಂದು ಭಾವಿಸಲಾಗುವುದು. ಮತ್ತು ಅರ್ಜಿದಾರರು ಆ ಅವಧಿ ಮುಗಿದ ದಿನಾಂಕದಿಂದ 30 ದಿವಸಗಳೊಳಗಾಗಿ ಮೇಲಿನ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಮೇಲ್ಮನವಿಯನ್ನು ಸಹ ಗರಿಷ್ಠ 45 ದಿವಸಗಳೊಳಗೆ ತೀರ್ಮಾನಿಸಬೇಕಾಗುತ್ತದೆ.

ದೂರು ನೀಡಿದವರಿಗೆ ನಷ್ಟ ಅಥವಾ ತೊಂದರೆಯುಂಟಾಗಿದ್ದಲ್ಲಿ ನಷ್ಟ ಪರಿಹಾರ ಕೊಡುವಂತೆ ಆದೇಶಿಸುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳು ಹೊಂದಿವೆ.

ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ಒದಗಿಸದಿದ್ದರೆ ಕೇಂದ್ರ ಅಥವಾ ರಾಜ್ಯ ಮಾಹಿತಿ ಆಯೋಗ ದಂಡ ವಿಧಿಸಬಹುದಾಗಿದೆ. ಮಾಹಿತಿ ಕೊಡಲು ತಪ್ಪಿದಾಗ, ಮಾಹಿತಿ ಕೊಡಬೇಕಾದವರಿಗೆ ದಿವಸಕ್ಕೆ 250 ರೂಪಾಯಿಗಳಂತೆ, ಗರಿಷ್ಟ 25,000 ರೂಪಾಯಿಗಳವರೆಗೂ ದಂಡ ವಿಧಿಸಬಹುದಾಗಿದೆ.

ನೀವು ಮಾಹಿತಿ ಕೋರಿ ಈ ಪ್ರಕಾರವಾಗಿ ಅರ್ಜಿ ಸಲ್ಲಿಸಿದ್ದಲ್ಲಿ,  ಮಾಹಿತಿ ಬರದೆ 9 ತಿಂಗಳುಗಳಾಗಿವೆ. ಮೇಲ್ಮನವಿ ಸಮಯ ಮೀರಿದೆ. ಆದರೆ ಏಕೆ ಸಮಯ ಮೀರಿತೆಂದು ಸೂಕ್ತ ಕಾರಣ ವಿವರಿಸಿ ಮೇಲ್ಮನವಿ ಸಲ್ಲಿಸಬಹುದು. ಅಥವಾ ಕಾನೂನು ರೀತ್ಯ ಮತ್ತೊಮ್ಮೆ ಅರ್ಜಿ ಸಲ್ಲಿಸಿ, ನಿಗದಿತ ಸಮಯದೊಳಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದು. ಯಾವುದಕ್ಕೂ ವಕೀಲರನ್ನು ಸಂಪರ್ಕಿಸಿ ಅವರ ಸಹಾಯದೊಂದಿಗೆ ಮುಂದಿನ ಕ್ರಮ ಕೈಗೊಳ್ಳಿರಿ. ನೀವು ಮಹಿಳೆಯಾದ್ದರಿಂದ ನಿಮಗೆ ರಾಜ್ಯ ಉಚಿತ ಕಾನೂನು ಸೇವಾ ಪ್ರಾಧಿಕಾರದ ಸಹಾಯ ಪಡೆಯುವ ಅರ್ಹತೆ ಇದ್ದು, ಆ ಪ್ರಾಧಿಕಾರದ ಸಹಾಯದಿಂದ, ಉಚಿತ ಕಾನೂನು ಸೇವೆಯನ್ನು ಪಡೆಯಬಹುದು. 

ಇತ್ತೀಚೆಗೆ ರಾಜ್ಯ ಸರ್ಕಾರವು ಕರ್ನಾಟಕ  ಪ್ರಜೆಗಳಿಗೆ ಖಚಿತ ಸೇವೆಯ ಕಾಯಿದೆ (ಸಕಾಲ) ಜಾರಿಗೆ ತರುವುದರ ಮೂಲಕ ಪ್ರಜೆಗಳಿಗೆ ನಿಗದಿತ ಕಾಲದಲ್ಲಿ ಸೇವೆ ಒದಗಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಕಾಯಿದೆಯನ್ನು 2012ರಿಂದ ಜಾರಿಗೆ ತರಲಾಗಿದೆ. ನಿಮ್ಮ ಅರ್ಜಿಗಳು ಈ ಕಾಯಿದೆಯ ಪ್ರಕಾರ ಸಮಯಕ್ಕೆ ಸರಿಯಾಗಿ ವಿಲೇವಾರಿ ಆಗದಿರುವುದು ದುರದೃಷ್ಟಕರವಾದ ಸಂಗತಿ. ಈ ಕಾಯಿದೆಯಡಿಯೂ ಸಹ ನೀವು ಮುಂದೆ ಮತ್ತೊಮ್ಮೆ ಪ್ರಯತ್ನಿಸಬಹುದು .

ಪ್ರಶ್ನೆಗಳನ್ನು ಕಳುಹಿಸಬೇಕಾದ ವಿಳಾಸ:
ಸಂಪಾದಕರು, ‘ಸಬಲೆ’, ಭೂಮಿಕಾ ವಿಭಾಗ, ಪ್ರಜಾವಾಣಿ,
ನಂ. ೭೫, ಎಂ.ಜಿ. ರಸ್ತೆ, ಬೆಂಗಳೂರು 560 001

ಇ-ಮೇಲ್: bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT