ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಲೆ

Last Updated 10 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಜಯಮ್ಮ, ಹಾಸನ
ನಾನು 8–3–2004 ರಂದು ಒಂದು ಫೈನಾನ್ಸ್‌ನಲ್ಲಿ ಇಪ್ಪತ್ತೈದು ಸಾವಿರ ಸಾಲ ಪಡೆದಿದ್ದೆ. ಭದ್ರತೆಗಾಗಿ ನನ್ನಿಂದ ಎರಡು ಖಾಲಿ ಚೆಕ್‌ ಮತ್ತು ಮೂರು ಖಾಲಿ ಸ್ಟಾಂಪ್ ಪಡೆದುಕೊಂಡಿದ್ದರು. ಆದರೆ ನಾನು ಬಡ್ಡಿ ಮತ್ತು ಅಸಲನ್ನು ತೀರಿಸಿದರೂ ನನ್ನ ಖಾಲಿ ಚೆಕ್‌ ಕೊಟ್ಟಿಲ್ಲ. ನಿನ್ನನ್ನು ಕೋರ್ಟಿಗೆ ಕಳುಹಿಸುತ್ತೇನೆ, ಜೈಲಿಗೆ ಕಳುಹಿಸುತ್ತೇನೆ ಎಂದು ನನಗೆ ಬೆದರಿಕೆಯೊಡ್ಡಿ ನನ್ನಿಂದ ಒಟ್ಟು ಮೂರು ಪಟ್ಟು ಹಣ ವಸೂಲಿ ಮಾಡಿರುತ್ತಾರೆ. ರಸೀದಿ ಕೊಡಲಿಲ್ಲ. ಹಣ ಬರೆಯದೆ ಬರೀ ಗೀಟು ಹಾಕಿ ಸಹಿ ಮಾಡಿರುತ್ತಾರೆ. ಉಳಿಕೆ ಹಣ ಎಷ್ಟಿದೆ ಎಂದು ಬರೆಯಲಿಲ್ಲ. ಪಾಸ್‌ ಬುಕ್‌ನಲ್ಲಿ ಅಕೌಂಟ್‌ ನಂಬರ್‌, ಮುಕ್ತಾಯ ದಿನಾಂಕ ಬರೆಯಲಿಲ್ಲ. ಆದುದರಿಂದ ಈ ಫೈನಾನ್ಸ್‌ನವರ ವಿರುದ್ಧ ಯಾರ ಬಳಿ ದೂರು ಕೊಡಲಿ ತಿಳಿಸಿ?

ಕೂಡಲೇ ಆ ಫೈನಾನ್ಸ್ ಸಂಸ್ಥೆಯನ್ನು ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಮೋಸ, ವಂಚನೆ, ನಂಬಿಕೆ ದ್ರೋಹ, ಬಲವಂತದಿಂದ ಹಣ ವಸೂಲಿ, ಇನ್ನೂ ಮೊದಲಾದ ಅಪರಾಧಗಳಿಗೆ ಭಾರತೀಯ ದಂಡ ಸಂಹಿತೆಯ ಕಲಂಗಳಡಿ ಪೊಲೀಸರಿಗೆ ದೂರು ನೀಡಬಹುದು, ಇಲ್ಲವೆ ನಿಮ್ಮ ಚೆಕ್ ಹಿಂದಿರುಗಿಸುವಂತೆ, ರಸೀದಿ ಕೊಡುವಂತೆ ಹಾಗೂ ಬೆದರಿಸಿ ವಸುಲಿ ಮಾಡಿದ್ದ  ಹೆಚ್ಚು ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸುವಂತೆ ವಕೀಲರ ಮೂಲಕ ಒಂದು ನೋಟೀಸು ಜಾರಿ ಮಾಡಿಸಿ, ಕ್ರಿಮಿನಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ಆ ಸಂಸ್ಥೆ ಕಂಪೆನಿಯೆಂದು ನೋಂದಾಯಿತವಾಗಿದ್ದಲ್ಲಿ, ಕಂಪೆನಿ ಕಾಯಿದೆಯಡಿ ಇಲ್ಲವೆ ಸಿವಿಲ್ ನ್ಯಾಯಾಲಯದಲ್ಲಿ ನಿಮ್ಮಿಂದ ಅವರು ವಸೂಲು ಮಾಡಿರುವ ಹೆಚ್ಚುವರಿ ಹಣದ ವಸೂಲಾತಿಗೆ ಕ್ರಮ ಕೈಗೊಳ್ಳಬಹುದು. ನೋಂದಾಯಿತ ಸಂಸ್ಥೆಯಾಗಿದ್ದಲ್ಲಿ ರಿಸರ್ವ್ ಬ್ಯಾಂಕಿಗೂ ಅದರ ಅವ್ಯವಹಾರಗಳ ಬಗೆಗೆ ದೂರು ನೀಡಬಹುದು.

ಸೈಯದ್‌ ಫಾರುಕ್‌, ಹರಿಹರ
ನನ್ನ ಅಜ್ಜನ ತಂದೆಯ ಆಸ್ತಿ ಇದೆ. ಇದರ ಒಡೆತನ ನನ್ನ ಅಜ್ಜನ ದೊಡ್ಡಣ್ಣರ ಮಗ ವಹಿಸಿಕೊಂಡಿದ್ದಾನೆ. ಹಾಗೂ ಇದರ ಒಡೆತನಕ್ಕಾಗಿ ಕೋರ್ಟಿನಲ್ಲಿ ದೊಡ್ಡಣ್ಣನ ಮಕ್ಕಳು ಕೇಸ್‌ ಹಾಕಿದ್ದಾರೆ. ನಮ್ಮ ಅಜ್ಜ ಹಾಗೂ ಅಣ್ಣಂದಿರು ನಾಲ್ಕು ಜನ ಇವರೆಲ್ಲರೂ ಮರಣ ಹೊಂದಿದ್ದಾರೆ. ನಮ್ಮ ಸ್ವಂತ ಮಾವ ಅವಿದ್ಯಾವಂತರಾಗಿದ್ದು, ಅವರಿಗೆ ಇದರ ಬಗ್ಗೆ ಏನೂ ಸುಳಿವು ಗೊತ್ತಿಲ್ಲ ಹಾಗೂ  ನಮ್ಮ ಅಜ್ಜನ ದೊಡ್ಡಪ್ಪನ ಮಕ್ಕಳು ಉಳಿದ ಅಜ್ಜನ ತಮ್ಮರ ಮಕ್ಕಳಿಗೆ ಕೋರ್ಟಿಗೆ ಕರೆಯುತ್ತಾರೆ. ನಮ್ಮ ಮಾವನವರಿಗೆ ಸುಳಿವು ಕೊಡುವುದಿಲ್ಲ. ನಮಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ನಾನು ತಿಳಿದ ಮಟ್ಟಿಗೆ ಈ ಕೇಸ್‌ ಇವರ ಪಾಲಿಗೆ ಆಗಬಹುದು ಎಂದು ತಿಳಿದಿದ್ದೆ. ಇದರ ಬಗ್ಗೆ ನಾವೇನು ಕ್ರಮ ತೆಗೆದುಕೊಳ್ಳಬಹುದು ತಿಳಿಸಿ ಹಾಗೂ ಹೇಗೆ ಹಕ್ಕನ್ನು ಹೊಂದಬಹುದು?

ಆ ಮೊಕದ್ದಮೆಯ ವಿವರಗಳನ್ನು ತಿಳಿಯದೆ ಏನೂ ಮಾಡಲಾಗುವುದಿಲ್ಲ. ಹಾಗೂ ನೀವುಗಳೂ ಅದರಲ್ಲಿ ಪಕ್ಷಕಾರರಾಗಿದ್ದಲ್ಲಿ ವಕೀಲರನ್ನು ನೇಮಿಸಿಕೊಂಡು ಮೊಕದ್ದಮೆ ನಡೆಸಬಹುದು. ಇಲ್ಲವಾದಲ್ಲಿ ನಿಮ್ಮನ್ನೂ ಪಕ್ಷಕಾರರಾಗಿ ಸೇರಿಸಲು ಮಧ್ಯಂತರ ಅರ್ಜಿ ಸಲ್ಲಿಸುವ ಮೂಲಕ ಕ್ರಮ ಕೈಗೊಳ್ಳಬಹುದಾಗಿದೆ. ನಿಮ್ಮ ಮಾವ ಅವರನ್ನು ಪಕ್ಷಕಾರರನ್ನಾಗಿ ಸೇರಿಸಿಲ್ಲದಿದ್ದಲ್ಲಿ, ಅವರು ಎಲ್ಲ ಆಸ್ತಿಗಳ ನಿರ್ವಹಣೆಗೆ(ಅಡ್ಮಿನಿಸ್ಟ್ರೇಶನ್) ಯಾವುದೇ ಸಾಲ ಅಥವಾ ಬಾಕಿ ಇದ್ದಲ್ಲಿ ಅದನ್ನು ತೀರಿಸುವುದೋ, ವಾರಸುದಾರರೆಲ್ಲರಿಗೂ ಆಸ್ತಿಯಲ್ಲಿ ಭಾಗ ನೀಡುವುದು ಮೊದಲಾದ ಅಂಶಗಳನ್ನು ನಡೆಸಲು ಆದೇಶ ಕೋರಿ ಪ್ರತ್ಯೇಕ ದಾವಾ ಹೂಡಬಹುದು.

ಲಕ್ಷ್ಮಿ, ತುಮಕೂರು
ನಾನು 1954ರ ಫೆಬ್ರುವರಿಯಲ್ಲಿ ಜನಿಸಿರುತ್ತೇನೆ. ತಂದೆ, ತಾಯಿ ಇಲ್ಲ. ಊರಿನಲ್ಲಿ ಪಿತ್ರಾರ್ಜಿತ ಆಸ್ತಿ ಇದೆ. ಅದು ಸಹೋದರನ ಸ್ವಾಧೀನದಲ್ಲಿದೆ. ಇನ್ನೂ ವಿಭಾಗವಾಗಿಲ್ಲ. ಈ ಪಿತ್ರಾರ್ಜಿತ ಆಸ್ತಿಯಲ್ಲಿ ನನ್ನ ಪಾಲು ಪಡೆಯಲು ನಾನು ಹುಟ್ಟಿದ ದಿನಾಂಕ (ನಾನು ಹುಟ್ಟಿದ್ದು 2–2–1954) ಅಡ್ಡ ಬರುತ್ತದೆಯಾ? ಕಾನೂನು ಏನು ಹೇಳುತ್ತದೆ?

ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಎಂದರೆ ಒಟ್ಟು ಕುಟುಂಬದ ಆಸ್ತಿಯಲ್ಲಿ ಗಂಡು ಮಕ್ಕಳಂತೆಯೇ ಹುಟ್ಟಿನಿಂದ ಸಮಾನಹಕ್ಕು ಬರುವಂತೆ ಹಿಂದು ವಾರಸಾ ಕಾಯಿದೆಗೆ ತಿದ್ದುಪಡಿ ಆಗಿದೆ. ಈ ತಿದ್ದುಪಡಿ 2005ರಿಂದ ಜಾರಿಯಲ್ಲಿದೆ. ಆದರೆ ಈ ತಿದ್ದುಪಡಿಯ ಕಾನೂನು ವಿಶ್ಲೇಷಣೆ ಮಾಡಿ ಹಿಂದು ವಾರಸಾ ಕಾಯಿದೆಯು ಮೊಟ್ಟಮೊದಲು ಜಾರಿಗೆ ಬಂದಾಗಿನಿಂದ ಎಂದರೆ 17.6.1956 ರಿಂದ ಪರಿಣಾಮ ಹೊಂದಿರುತ್ತದೆ ಎಂದು ನಮ್ಮ ರಾಜ್ಯ ಉಚ್ಚನ್ಯಾಯಾಲಯದ ತೀರ್ಪುಗಳಲ್ಲಿ ಅಭಿಪ್ರಾಯ ಪಡಲಾಗಿದೆ. ಈ ಅಂಶವು ಸರ್ವೋಚ್ಚ ನ್ಯಾಯಾಲಯದಲ್ಲಿ ಅಂತಿಮವಾಗಿ ನಿರ್ಧರಿತವಾಗುವವರೆವಿಗೂ ನಮ್ಮ ರಾಜ್ಯ ಉಚ್ಚನ್ಯಾಯಾಲಯದ ತೀರ್ಪು ಕಾನೂನಿನ ಪರಿಣಾಮ ಹೊಂದಿರುತ್ತದೆ. ಹೀಗಾಗಿ ಮೂಲ ಹಿಂದು ವಾರಸ ಕಾಯಿದೆ ಜಾರಿಗೆ ಬರುವ ಮೊದಲು ಜನಿಸಿದ ಹೆಣ್ಣು ಮಕ್ಕಳಿಗೆ ಎಂದರೆ 17.6.1956ಕ್ಕೆ ಮೊದಲು ಜನಿಸಿದವರಿಗೆ ಈ ತಿದ್ದುಪಡಿಯ ಅನುಕೂಲ ಲಭಿಸುವುದಿಲ್ಲ. ಈಗ ಸದ್ಯಕ್ಕೆ ಜಾರಿಯಲ್ಲಿರುವ ಈ ರಾಜ್ಯ ಉಚ್ಚನ್ಯಾಯಾಲಯದ ತೀರ್ಪುಗಳ ಪ್ರಕಾರ ನಿಮ್ಮ ಜನ್ಮ ದಿನಾಂಕ 1954 ಫೆಬ್ರುವರಿಯಾಗಿದ್ದು, ಈ ತಿದ್ದುಪಡಿಯ ಅನುಕೂಲ ನಿಮಗೆ ದೊರಕಲಾರದು. ಆದರೆ ಈ ಅಂಶವು ಇನ್ನೂ ಸರ್ವೋಚ್ಚ ನ್ಯಾಯಾಲಯದ ಪರಿಗಣನೆಯಲ್ಲಿರುವುದರಿಂದ ಈ ಬಗ್ಗೆ ಚಿಂತಿಸದೆ ನಿಮ್ಮ ಪಾಲು ವಿಭಾಗ ಕೋರಿ ದಾವಾ ಹೂಡಬಹುದಾಗಿದೆ. ಆದರೆ ಸರ್ವೊಚ್ಚ ನ್ಯಾಯಾಲಯದ ಅಂತಿಮ ನಿರ್ಧಾರಕ್ಕೆ ನಿಮ್ಮ ಹಕ್ಕು ಒಳಪಡುತ್ತದೆ. ನಿಮ್ಮ ಪ್ರಶ್ನೆಯನ್ನು ಓದಿದರೆ, ಈಗ ನಿಮ್ಮ ಸಹೋದರರ ಸ್ವಾಧೀನದಲ್ಲಿರುವ ಆಸ್ತಿಯು ನಿಮ್ಮ ತಂದೆಯವರದ್ದೆನಿಸುತ್ತದೆ. ಅದು ವಿಭಾಗವಾಗಿಲ್ಲ. ನಿಮ್ಮ ತಂದೆ ಅವರು ತಮ್ಮ ಆಸ್ತಿಯನ್ನು ನಿಮ್ಮ ಸಹೋದರನಿಗೆ ವಿಲ್ಲು, ದಾನ ಹೀಗೆ ಯಾವುದಾದರೂ ರೀತಿಯಲ್ಲಿ ವರ್ಗಾವಣೆ ಮಾಡಿರದಿದ್ದಲ್ಲಿ, ನಿಮಗೂ ಸಹ ಆ ಆಸ್ತಿಯಲ್ಲಿ ಸಮಪಾಲು ಪಡೆಯುವ ಹಕ್ಕು ಇದೆ. ಅದನ್ನು ಪಡೆಯಲು ನೀವು ನಿಮ್ಮ ಸಹೋದರರೊಂದಿಗೆ ಮಾತುಕತೆಯಾಡಿ. ಅದು ಯಶಸ್ವಿಯಾಗದಿದ್ದಲ್ಲಿ, ಕಾನೂನು ರೀತ್ಯ ವಿಭಾಗಕ್ಕೆ ಸಿವಿಲ್ ನ್ಯಾಯಾಲಯದಲ್ಲಿ ದಾವಾ ಹೂಡಬಹುದು. ದಾಖಲೆಗಳೊಂದಿಗೆ ವಕೀಲರನ್ನು ಸಂಪರ್ಕಿಸಿ. 

ಹೆಸರು, ಊರು ಬೇಡ
ನಾನೊಬ್ಬಳು ಮುಸ್ಲಿಂ ಮಹಿಳೆ. ಗಂಡನ ಮಾನಸಿಕ ಹಿಂಸೆಯಿಂದ ಬೇಸತ್ತು ಎರಡೂವರೆ ವರ್ಷದ ಹಿಂದೆ ತವರು ಮನೆಗೆ ಬಂದೆ. ನನಗೆ ಮೂವರು ಮಕ್ಕಳಿದ್ದಾರೆ. ತವರು ಮನೆಗೆ ಬಂದ ನಂತರ ಫೋನ್‌ ಮೂಲಕ ಸ್ವತಃ ನಾನೇ ಹಾಗೂ ನನ್ನ ಭಾವಂದಿರ ಮೂಲಕವೂ ತಲಾಕ್‌ಗೆ ಪ್ರಯತ್ನಿಸಿದ್ದೆ. ಆದರೆ ಆತ ತಲಾಕ್‌ ಕೊಡಲು ಒಪ್ಪಲೇಯಿಲ್ಲ. ಮಕ್ಕಳು ನನ್ನ ಜೊತೆಯೇ ಇದ್ದರು. ಮಕ್ಕಳ ಖರ್ಚು ವೆಚ್ಚ ಮಕ್ಕಳ ತಂದೆಯೇ ನೋಡಿಕೊಳ್ಳುತ್ತಿದ್ದರು. ಈ ನಡುವೆ ನನಗೆ ಒಬ್ಬರ ಪರಿಚಯವಾಗಿ ತುಂಬಾ ಹತ್ತಿರವಾದೆವು. ಈಗ್ಗೆ 8 ತಿಂಗಳ ಹಿಂದೆ ನನ್ನ ಭಾವಂದಿರು, ನನ್ನ ಗಂಡ ಹಾಗೂ ಕೆಲವು ಊರ ಹಿರಿಯರನ್ನು ಕರೆಸಿ ಪಂಚಾಯ್ತಿ ನಡೆಸಿ ನನ್ನನ್ನು ಗಂಡನ ಮನೆಗೆ ಹೋಗುವಂತೆ ಒತ್ತಾಯಿಸಿದರು. ನಾನು ಅದಕ್ಕೆ ಒಪ್ಪದೆ ತಲಾಕ್‌ ಕೊಡಿಸಿ ಮಕ್ಕಳನ್ನೂ ನನಗೆ ಕೊಡಿಸಿ, ಬೇರೆ ಮದುವೆಯಾಗುತ್ತೇನೆ ಎಂದೆ. ಇದಕ್ಕೆ ಒಪ್ಪದ ನನ್ನ ಅಕ್ಕ ಭಾವಂದಿರು ತವರು ಮನೆಯಿಂದ ಹೊರಹಾಕಿದರು. ಬೇರೆ ದಾರಿಯೇ ಇಲ್ಲದೆ ಮಕ್ಕಳನ್ನು ಬಿಟ್ಟು ಪ್ರೀತಿಸಿದವನ ಜೊತೆ ಬಂದೆ. ನಾವೀಗ ಒಂದೇ ಮನೆಯಲ್ಲಿದ್ದೇವೆ. ಆತ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇಲ್ಲಿಗೆ ಬಂದ ನಂತರವೂ ಫೋನ್‌ ಮಾಡಿ ತಲಾಕ್‌ ಕೊಡಿ ಎಂದು ಕೇಳಿದೆ. ಆತ, ನೀನು ನರಕದಲ್ಲಿ ಬೀಳಬೇಕು. ತಲಾಕ್‌ ಕೊಡುವುದಿಲ್ಲ. ಮಕ್ಕಳನ್ನು ಕಳುಹಿಸುವುದಿಲ್ಲ ಎಂದರು. ಮದುವೆ ಸಮಯದಲ್ಲಿ ತವರು ಮನೆಯಲ್ಲಿ 32 ತೊಲ ಚಿನ್ನ ಕೊಟ್ಟಿದ್ದರು. ಗಂಡನ ಕಡೆಯಿಂದ 7 ತೊಲ ಕೊಟ್ಟಿದ್ದರು. ಅದನ್ನು ಗಂಡ ಬ್ಯಾಂಕ್‌ನಲ್ಲಿ ಅಡವಿರಿಸಿ, 4–5 ವರ್ಷಗಳೇ ಆಗಿದೆ. ಬಿಡಿಸಿ ಕೊಡಲೇ ಇಲ್ಲ. ಈಗ ದೊಡ್ಡ ಮಕ್ಖಳಿಬ್ಬರನ್ನು ಹಾಸ್ಟೆಲ್‌ನಲ್ಲಿರಿಸಿ, ಸಣ್ಣ ಮಗುವನ್ನು ತನ್ನ ಜೊತೆಯಲ್ಲಿಯೇ ಇರಿಸಿಕೊಂಡು ಅವರ ಅಪ್ಪನೇ ಓದಿಸುತ್ತಿದ್ದಾರೆ. ಅವರು ಮದುವೆ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿಯಿದೆ. ನನ್ನ ಪ್ರಶ್ನೆಗಳೇನೆಂದರೆ, (1) ಮುಸ್ಲಿಂ ಕಾನೂನಿನಲ್ಲಿ ಮೊದಲ ಪತ್ನಿಯ ಒಪ್ಪಿಗೆಯಿಲ್ಲದೆ ಎರಡನೇ ವಿವಾಹವಾಗಬಹುದೇ? (2) ನನಗೆ ತಲಾಕ್‌ ಸಿಗುವುದಿಲ್ಲವೆ? (3) ಅನೈತಿಕ ಸಂಬಂಧವಿದೆ ಎಂಬ ಕಾರಣ ಒಡ್ಡಿ ನನ್ನ ಚಿನ್ನ ಹಾಗೂ ಮಕ್ಕಳನ್ನು ಕೊಡಲು ಮಕ್ಕಳ ತಂದೆ ತಕರಾರು ತೆಗೆಯುವ ಅವಕಾಶವಿದೆಯೇ?

ಇಸ್ಲಾಂ ಕಾನೂನಿನಲ್ಲಿ  ಒಬ್ಬ ಮುಸ್ಲಿಂ ಒಂದೇ ಸಮಯದಲ್ಲಿ ನಾಲ್ಕು ಪತ್ನಿಯರನ್ನು ಹೊಂದಬಹುದಾಗಿದೆ. ಎರಡನೆಯ ಮದುವೆಯಾಗಲು ಮೊದಲ ಪತ್ನಿಯ ಅನುಮತಿ ಯೇನೂ ಬೇಕಿಲ್ಲ. ಆದರೆ ಎಲ್ಲ ಪತ್ನಿಯರನ್ನೂ ಒಂದೇ ತೆರನಾದ ಪ್ರೀತಿ, ವಿಶ್ವಾಸ ಹಾಗೂ ಜೀವನ ನಿರ್ವಹಣೆಗಳನ್ನು ನೀಡಬೇಕಾದುದು ಅವನ ಧರ್ಮವಾಗುತ್ತದೆ. ತಲಾಕ್ ಎನ್ನುವುದು ಪತಿಯಿಂದ ಪತ್ನಿಗೆ ನೀಡುವ ವಿಚ್ಛೇದನ ಕ್ರಮ. ನಿಮ್ಮ ಪತಿ ತಲಾಕ್ ನೀಡಲು ನಿರಾಕರಿಸಿದರೆ, ನಿಮಗೆ ಪತಿಯೊಂದಿಗೆ ಜೀವನ ಸಾಧ್ಯವಿಲ್ಲವೆನಿಸಿದರೆ ನಿಮ್ಮ ಕಡೆಯಿಂದ ಖುಲಾ ನೀಡಬಹುದಾಗಿದೆ. ಆದರೆ ಖುಲ ನೀಡಿದ ಪತ್ನಿಯು ಮೆಹೆರ್ ಹಿಂಪಡೆಯುವ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ನೀವು ನಿಮ್ಮ ಪತಿಯ ವೈವಾಹಿಕ ಸಂಬಂಧ ಕೊನೆಗೊಳಿಸಿ ಕೊಂಡ ನಂತರ ಮತ್ತೊಬ್ಬರೊಂದಿಗೆ ಜೀವನ ಪ್ರಾರಂಭಿಸಬೇಕಿತ್ತು. ಹಾಗೆ ಮಾಡದಿರುವ ನಡವಳಿಕೆಯು ಕಾನೂನುಬಾಹಿರವಾಗುತ್ತದೆ. ವರದಕ್ಷಿಣೆ ನಿಷೇಧ ಕಾಯಿದೆ ಪ್ರಕಾರ ಮದುವೆ ಸಮಯದಲ್ಲಿ ನೀಡಿದ ಚಿನ್ನ ನಿಮಗೇ ಸೇರಬೇಕು ಹಾಗೂ ಅದನ್ನು ಮದುವೆ ಯಾದ ಮೂರು ತಿಂಗಳೊಳಗೇ ನಿಮಗೆ ಹಿಂತಿರುಗಿಸಬೇಕು. ಏಕೆಂದರೆ ಅಂತಹ ಉಡುಗೊರೆಗಳು ಆ ಮದುಮಗಳ ಅಥವಾ ಅವಳ ವಾರಸುದಾರರ ಒಳಿತಿಗಾಗಿ ಎಂದು ಆ ಕಾಯಿದೆಯಲ್ಲಿ ಹೇಳಲಾಗಿದೆ. ಆದರೆ ಈಗ ಅನೈತಿಕ ಸಂಬಂಧದ ಕಾರಣ ಒಡ್ಡಿ ನಿಮ್ಮ ಪತಿ ನಿಮಗೆ ಚಿನ್ನ ಮತ್ತು ಮಕ್ಕಳನ್ನು ಕೊಡಲು ತಕರಾರು ತೆಗೆಯುವ ಎಲ್ಲ ಅವಕಾಶಗಳೂ ಇವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT