ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಧಾನಕ್ಕೆ ಕಂಡುಕೊಂಡ ಮಾರ್ಗ...

Last Updated 25 ಮಾರ್ಚ್ 2016, 19:30 IST
ಅಕ್ಷರ ಗಾತ್ರ

‘ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ  ವಿಧಿಯ ಮಳೆ ಸುರಿಯೆ’... ಡಿ.ವಿ.ಜಿ.ಯವರ ಈ ಸಾಲುಗಳು ಸರ್ವಕಾಲಿಕ ಸತ್ಯ. ಮನುಷ್ಯ ಜೀವನದ ಏರಿಳಿತಗಳನ್ನು ಕೇವಲ ನಾಲ್ಕು ಸಾಲುಗಳಲ್ಲಿ ತಿಳಿಸಿರುವ ಅದರ ಗೂಢಾರ್ಥ ನಿಜಕ್ಕೂ ಅನುಕರಣೀಯವೇ. ಎಲ್ಲರ ಬದುಕೂ ಕೂಡಾ ಅವರು ಅಂದುಕೊಂಡಂತೆ ಆಗುವುದಿಲ್ಲ. ಆಸೆ–ಆಕಾಂಕ್ಷೆಗಳಿಗೆ ಬೇಲಿಯೆಂಬುದಿರುವುದಿಲ್ಲ. ಕಷ್ಟಗಳೇನೂ ಇಲ್ಲವೆಂಬುದಿಲ್ಲ. ಹಾಗೆಯೇ ನನ್ನ ಬದುಕಿನಲ್ಲಿಯೂ ಕೂಡಾ ಅಸಮಾಧಾನದ ಸಂಗತಿಗಳು ನಿತ್ಯವೂ ನಡೆಯುತ್ತಿದ್ದರೂ, ಅದರ ನಡುವೆಯೇ ಹೊಂದಾಣಿಕೆಯೆಂಬ ಮೂಲ ಮಂತ್ರವನ್ನಿಟ್ಟುಕೊಂಡು, ಜೀವನದಲ್ಲಿ ನನ್ನನ್ನು ನಾನು ಹುಡುಕುವ ಪ್ರಯತ್ನ ಮಾಡುತ್ತಿದ್ದೇನೆ.

ನನ್ನ ಕಲ್ಪನೆಯ ಬದುಕೇ ಬೇರೆ, ನನಗೆ ಸಿಕ್ಕಿದ ಜೀವನವೇ ಬೇರೆ. ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು, ನನ್ನ ಆತ್ಮಸಾಕ್ಷಿಗೆ ವಿರುಧ್ಧವಾಗಿ ನಡೆದುಕೊಳ್ಳಬಾರದು, ಎಂಬೆಲ್ಲಾ ಅದಮ್ಯ ಬಯಕೆಗಳನ್ನಿಟ್ಟುಕೊಂಡು ‘ಮದುವೆ’ಯೆಂಬ ಬಂಧನಕ್ಕೆ ಅಡಿಯಿಟ್ಟೆ. ಆದರೆ ಇಲ್ಲಿ ಬಂದ ಮೇಲೆಯೇ ಗುತ್ತಾಗಿದ್ದು, ಪ್ರೀತಿ–ವಿಶ್ವಾಸ, ಕಾಳಜಿಗಿಂತ ವ್ಯಾವಹಾರಿಕ ಬದುಕೇ ಮೇಲು ಅಂತ.  ಸ್ವಾಭಿಮಾನವನ್ನು ಬಿಟ್ಟು ಬದುಕಲು ನನ್ನಿಂದಾಗಲಿಲ್ಲ.

ನಾಲ್ಕು ದಶಕದ ಹಿಂದೆ ಯಾವ ರೀತಿ ಬದುಕು ಮಾಡುತ್ತಿದ್ದೇವೆಯೋ ಅದೇ ರೀತಿ ಈಗ ನೀವೂ ಬದುಕಬೇಕೆಂಬ ಉಧ್ಧಟತನಕ್ಕೆ ಎದುರಾಡಲೂ ಆಗದೆ, ಇತ್ತ ಆತ್ಮಸಾಕ್ಷಿಗೆ ವಿರುಧ್ಧವಾಗಿಯೂ ನಡೆದುಕೊಳ್ಳಲಾರದ ಮನಸ್ಥಿತಿಯಲ್ಲಿ ನಾನಿರುವಾಗಲೇ ನನ್ನವರ ಹಿತನುಡಿ ಮನಸ್ಸಿಗೆ ತುಸು ಚೇತನವನ್ನು ಕೊಟ್ಟಿದ್ದು ಸುಳ್ಳಲ್ಲ. ಯಾವಾಗಲೂ ಕೇವಲ ಕೊಟ್ಟಿಗೆ ಕೆಲಸ, ಅಡುಗೆ ಮನೆಯೇ ನಿನ್ನ ಬದುಕಲ್ಲ. ಅದರಿಂದ ಸ್ವಲ್ಪ ಹೊರಗೆ ಬಾ. ನಾನು ಬರೆದ ಕನ್ನಡ ಲೇಖನಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡು.

ಆ ತಾಕತ್ತು ನಿನ್ನಲ್ಲಿದೆ, ಎಂದು ಹುರಿದುಂಬಿಸಿದರು. ಅಲ್ಲಿಂದ ಶುರುವಾಯಿತು ನನ್ನ ಅಡುಗೆಮನೆಯಾಚೆಗಿನ ಬದುಕು. ಮದುವೆಯಾದ ಮೊದಲ ಮೂರು ವರ್ಷಗಳಲ್ಲಿ ಸುಮಾರಾಗಿ ಐವತ್ತರಿಂದ ಅರವತ್ತು ಕನ್ನಡ ಲೇಖನಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದೆ. ನಂತರ ಮಗಳು ಮಗ ಜನಿಸಿದ ಮೇಲೆ ಅವರ ಪಾಲನೆಯ ಮಧ್ಯೆ ಅಕ್ಕಪಕ್ಕದ ಮನೆಯ ಮಕ್ಕಳಿಗೆ ಇಂಗ್ಲಿಷ್ ಟ್ಯೂಷನ್‌ಅನ್ನು ನನ್ನ ಬಿಡುವಿನ ವೇಳೆಯಲ್ಲಿ ತೆಗೆದುಕೊಳ್ಳುತ್ತೇನೆ. ಇದಕ್ಕೆ ನಾನು ದುಡ್ಡಿನ ಬೆಲೆ ಯಾವತ್ತೂ ಕಟ್ಟಿಲ್ಲ. ಏಕೆಂದರೆ, ಆ ಮಕ್ಕಳ ಧನ್ಯತಾ ಭಾವವೇ ನನ್ನ ದಿನನಿತ್ಯದ ಶಾಂತಿ, ಸಮಾಧಾನವಾಗಿದೆ. ನನ್ನ ಬದುಕಿನ ನಿಜವಾದ ಸಂತೋಷವನ್ನು ಆ ಮಕ್ಕಳ ಮುಖದ ಮೇಲೆ ಕಾಣುವ ಪ್ರಯತ್ನ ಮಾಡುತ್ತೇನೆ. ಇಷ್ಟು ಸಾಕು ನನ್ನ ದಿನನಿತ್ಯದ ಲವಲವಿಕೆಯ ಬದುಕಿಗೆ.

ನಮ್ಮ ಹಳ್ಳಿ ಮನೆಗಳಲ್ಲಿ ದಿನದ ಇಪ್ಪತ್ನಾಲ್ಕು ಗಂಟೆ ದುಡಿದರೂ ಆ ಕೆಲಸಕ್ಕೆ ಕೊನೆಯೆಂಬುದಿರುವುದಿಲ್ಲ. ವೀಕೆಂಡಂತೂ ಇಲ್ಲವೇ ಇಲ್ಲ. ಹಾಗಾಗಿ, ನಮ್ಮ ಗೃಹ ಕಾರ್ಯಕ್ಕೂ ಚ್ಯುತಿ ಬರದ ರೀತಿಯಲ್ಲಿ ಅದರಿಂದಾಚೆಯ ನನ್ನ ಬದುಕನ್ನು ಹೊಸರುಚಿ, ಕಸೂತಿ, ಹೊಲಿಗೆ, ಹವ್ಯಾಸಕ್ಕಾಗಿ ಲೇಖನಗಳನ್ನು ಬರೆಯುತ್ತಾ ನಾನು ‘ನಾನಾಗು’ತ್ತಿದ್ದೇನೆ. ನಮ್ಮ ದಿನನಿತ್ಯದ ನೋವು ಏನೇ ಇರಲಿ, ಅದು ಹೊರಗಿನವರಿಗೆ ಗೊತ್ತಾಗದ ರೀತಿಯಲ್ಲಿ ನಮ್ಮ ಮನಸ್ಸನ್ನು ತಿಳಿಯಾಗಿಸಿಕೊಳ್ಳಬೇಕು.

ಎಲ್ಲರ ಮನಸ್ಸೂ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ನಿಷ್ಣಾತವಾಗಿರುತ್ತದೆ. ಅದನ್ನು ನಾವು ಗುರುತಿಸುವುದರಲ್ಲಿ ಎಡವಿರುತ್ತೇವೆ. ಈ ಪ್ರಪಂಚದ ನಿಯಮವೇನೆಂದರೆ ಹುಟ್ಟು ಅನಿವಾರ್ಯ, ಸಾವು ನಿಶ್ಚಿತ. ಈ ಅನಿವಾರ್ಯ–ನಿಶ್ಚಿತಗಳ ನಡುವೆ ನಮ್ಮನ್ನು ನಾವು ಆದಷ್ಟು ಹೊರಪ್ರಪಂಚಕ್ಕೆ ತೆರೆದುಕೊಳ್ಳಬೇಕು. ನಮ್ಮ ಜೀವನ ಬಾವಿಯೊಳಗಿನ ಕಪ್ಪೆಯಂತಾಗಬಾರದು. ಬದುಕಿನಲ್ಲಿ ತಿರಸ್ಕಾರಕ್ಕಿಂತ, ಸಮರ್ಪಣಾ ಭಾವವಿದ್ದರೆ ಸಮತೋಲನವನ್ನು ಕಾಯ್ದುಕೊಂಡು ಹೋಗಬಹುದೇನೊ. ಹಾಗೆಯೇ ಬದುಕಿನಲ್ಲಿ ಶಾಂತಿ ಕದಡುವ ಘಟನೆಗಳು ನಿತ್ಯವೂ ನಡೆದರೂ, ಅದನ್ನು ಮೆಟ್ಟಿ ನಿಲ್ಲಲು ಏನಾದರೂ ಹವ್ಯಾಸಗಳನ್ನು ರೂಢಿಸಿಕೊಂಡಾಗ ಮಾತ್ರ ಜೀವನ ಸುಂದರ ಎಂಬುದು ನನ್ನ ಅನುಭವಕ್ಕೆ ಸಿಕ್ಕ ಅಂಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT