ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ಮದುವೆಯ ಸೊಗಸು

ಸರಳ ವಿವಾಹ
Last Updated 8 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಸರಳ ಮದುವೆಯ ಸೌಂದರ್ಯ, ಸಂತೋಷ ಮತ್ತು ಪಾವಿತ್ರ್ಯದ ಸವಿಯನ್ನು ಉಂಡವರು ಸಹಜವಾಗಿಯೇ ಲವಲವಿಕೆ ಹಾಗೂ ನೆಮ್ಮದಿಯನ್ನು ಕಾಣುತ್ತಾರೆ. ಅಬ್ಬರ, ಆಡಂಬರ ಹಾಗೂ ಮೌಢ್ಯದ ಕಿಂಚಿತ್ ಸೋಂಕು ಇಲ್ಲದ ಈ ಬಗೆಯ ಬದುಕಿನ ಅಮೂಲ್ಯ ಕ್ಷಣಗಳ ಚಿತ್ರಣವನ್ನು ಮೊದಲಿಗೆ ಕಂಡವರು ವಿಶ್ವಮಾನವ ಚಿಂತನೆಯ ಕವಿ ಕುವೆಂಪು ಅವರು.

ತಮ್ಮ ಮಗ ಪೂರ್ಣಚಂದ್ರ ತೇಜಸ್ವಿ ಅವರ ಮದುವೆಗೆ ಅವರು ಹಾಕಿದ ಮೊದಲ ನಿಯಮ: ‘ಐವತ್ತು ಜನಗಳಿಗಿಂತ ಹೆಚ್ಚು ಜನ ಅಲ್ಲಿದ್ದಲ್ಲಿ ನಾನೇ ಬರುವುದಿಲ್ಲ’. ಹೀಗಾಗಿ ಕುವೆಂಪು ಚಿಂತನೆಯ ಸಹಜ ವಿಕಾಸದ ಪ್ರತಿರೂಪದಂತಿದ್ದ ತೇಜಸ್ವಿ ಮತ್ತು ರಾಜೇಶ್ವರಿ ಅವರ ಸರಳ ವಿವಾಹದಲ್ಲಿ ಆತ್ಮೀಯವಾಗಿ ಪಾಲುಗೊಂಡವರು ಎಲ್ಲಾ ಸೇರಿ ಮುವ್ವತ್ತಾರು ಜನರು ಮಾತ್ರ. ಆ ದಿನದ ಊಟ ಕೂಡ ಸಸ್ಯಾಹಾರ ಮತ್ತು ಮಾಂಸಾಹಾರವನ್ನು ಒಳಗೊಂಡಿತ್ತು.

ಆರೋಗ್ಯ, ಶಿಕ್ಷಣ, ಸ್ವಚ್ಛತೆ, ನಿರಾಳತೆಗಳನ್ನು ಕಡೆಗಣಿಸಿ ನಮ್ಮ ಜನ ಮೌಢ್ಯ, ಅವಿವೇಕ, ಅದ್ದೂರಿತನದ ಅಡ್ಡಹಾದಿಯಲ್ಲಿ ಸಾಗುತ್ತಾ ಉದ್ವಿಗ್ನತೆಯ ನರಕದಲ್ಲಿ ಬೇಯುವ ಪರಿಸ್ಥಿತಿಯಿಂದ ಪಾರಾಗುವುದು ಮುಖ್ಯವೆಂದು ಕುವೆಂಪು ಸೂಕ್ತವಾಗಿಯೇ ನಂಬಿದ್ದರು.
ನಲವತ್ತೆರಡು ವರ್ಷಗಳ ಹಿಂದೆ ಮೈಸೂರು- ಬೆಂಗಳೂರು ನಡುವಣ ಬಯಲುಸೀಮೆಯ ನನ್ನ ಹಳ್ಳಿಯಲ್ಲಿ ನಾನು ಮೇಲಿನ ತತ್ತ್ವಗಳ ಹಿನ್ನೆಲೆಯಲ್ಲಿಯೇ ಸರಳ ದಾಂಪತ್ಯ ಜೀವನಕ್ಕೆ ಕಾಲಿಟ್ಟೆ.

ವೈದಿಕ ಪುರೋಹಿತಷಾಹಿಯ ಕಟ್ಟಳೆಗಳ ಯಾವುದೇ ತೊಡಕಿಲ್ಲದಂತೆ ವೈಚಾರಿಕ ಚಿಂತನೆಯ ಸಮಾವೇಶದಲ್ಲಿ ನಡೆದ ಈ ಕಾರ್ಯಕ್ರಮದ ಅಂಗವಾಗಿ ನಾವೆಲ್ಲಾ ಒಟ್ಟಾಗಿ ಹಳ್ಳಿಯ ಜನರ ಆರೋಗ್ಯಕ್ಕೆ ಪೂರಕವಾಗಬಲ್ಲ ಆಸ್ಪತ್ರೆಯ ನಿರ್ಮಾಣದ ಸಲುವಾಗಿ ನಿಧಿಯನ್ನು ಆರಂಭಿಸಿದೆವು. ಈ ಸಮಾವೇಶದ ಸಂಪೂರ್ಣ ವಿವರ 9-6-1972ರ ‘ಪ್ರಜಾವಾಣಿ’ ಪತ್ರಿಕೆಯ ಮುಖಪುಟದಲ್ಲಿ ‘ಮೂಢಸಂಪ್ರದಾಯ ಹತ್ತಿಕ್ಕಲು ನಾಂದಿ: ಮಾದರಿ ವಿವಾಹ’ ಎಂಬ ಶೀರ್ಷಿಕೆಯ ಸಹಿತ ಪ್ರಕಟವಾಯಿತು.

ಶಾಲೆ, ವಿದ್ಯಾರ್ಥಿನಿಲಯ, ರಸ್ತೆ, ಕೆರೆಕಟ್ಟೆ ಮತ್ತು ಮರಗಿಡಗಳ ತಾಣದಂತಹ ಸರ್ವಜನೋಪಯೋಗಿ ಚಟುವಟಿಕೆಗಳಲ್ಲಿ ನಮ್ಮ ಶ್ರಮ ಮತ್ತು ಕಾಲ ಹೆಚ್ಚು ಹೆಚ್ಚಾಗಿ ಸದ್ಬಳಕೆಯಾಗಬೇಕೆನ್ನುವ ಅದಮ್ಯ ಆಶಯಗಳಲ್ಲಿ ನಾವಾಗ ತೊಡಗಿದ್ದೆವು. ಶುಭ, ಅಶುಭ, ವಾಸ್ತು, ಜಾತಕ, ವರದಕ್ಷಿಣೆ, ವರೋಪಚಾರಗಳ ಸಂಬಂಧದ ಯಾವುದೇ ರೂಢಿಗತ ಆಚರಣೆ ಅಥವಾ ಕಟ್ಟಳೆಗಳನ್ನು ಕೈಬಿಟ್ಟು ನಿರಾಯಾಸವಾಗಿ ಬಾಳುವುದರಲ್ಲಿ ಇರುವ ಆನಂದ, ನೆಮ್ಮದಿ ನಿಜಕ್ಕೂ ದೊಡ್ಡದು.

ಯಾರಿಗೆ ಯಾರೂ ಹೊರೆಯಾಗದಂತೆ ನಿಜಜೀವನದಲ್ಲಿ ಹೀಗೆ ನಾವೆಲ್ಲಾ ಬದುಕಲು ಕಷ್ಟವಾಗುತ್ತದಲ್ಲವೇ?- ಎಂದು ಅನೇಕ ನನ್ನ ಆಪ್ತರು ಆಗಾಗ ಪ್ರಶ್ನಿಸುತ್ತಲೇ ಇದ್ದಾರೆ. ಇದೇ ಬಗೆಯ ಸರಳತತ್ತ್ವದ ಆಧಾರದಲ್ಲಿಯೇ ನನ್ನ ಮಗಳು ಮತ್ತು ಇಬ್ಬರು ಗಂಡು ಮಕ್ಕಳ ಮದುವೆಗಳನ್ನು ನನ್ನ ಮನೆಯಲ್ಲೇ ಗೆಳೆಯರು ಮತ್ತು ರಕ್ತಸಂಬಂಧಿಗಳ ಸಮ್ಮುಖದಲ್ಲಿ ನಾವೆಲ್ಲ ನೆರವೇರಿಸಿದೆವು.

ಇದೆಲ್ಲಾ ಯಾವುದೇ ರೀತಿಯ ಸಾಹಸ ಅಥವಾ ದಿಗ್ವಿಜಯ ಖಂಡಿತಾ ಅಲ್ಲ. ಆದರೆ, ಈ ಬಗೆಯ ನಡವಳಿಕೆಗಳು ನಮ್ಮ ಮನಸ್ಸು ಮತ್ತು ದೇಹಕ್ಕೆ ನೀಡುವ ಉಲ್ಲಾಸ ಹಾಗೂ ವಿಕಾಸದ ಸ್ಥಿತಿಯು ನಿಜಕ್ಕೂ ತೃಪ್ತಿದಾಯಕವಾಗಿರುತ್ತದೆ. ಸಮಾಜದ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಈ ಬಗೆಯ ಸದಭಿರುಚಿಯ ಮತ್ತು ಸಂವೇದನಾಶೀಲ ಕಾರ್ಯಗಳು ಸಾಕಷ್ಟು ಸಂಖ್ಯೆಯಲ್ಲಿ ನೆರವೇರಬೇಕೆನ್ನುವುದೇ ಹೆಚ್ಚಿನವರ ಆಕಾಂಕ್ಷೆ ಆಗಿದೆ.

ಆದರೆ, ಖಾಸಗೀ ಬದುಕಿನ ಜಂಜಡ ಮತ್ತು ನೆರೆಕರೆಯವರ ಅನವಶ್ಯಕ ಮುಲಾಜು ಹಾಗೂ ಕಾಲ್ಪನಿಕ ಮುಜುಗರಗಳ ಹಿನ್ನೆಲೆಯಲ್ಲಿ ಹೆದರಿ ಹಿಂಜರಿಯುವವರ ದಂಡು ನಮ್ಮ ಸುತ್ತಲೂ ಹೆಚ್ಚುತ್ತಲೇ ಇದೆ. ಇಂತಹ ಅಂಜುಬುರುಕರ ತಂಡ ಕ್ರಮೇಣ ಈ ಬಗೆಗಿನ ಹೊಸ ಆಲೋಚನೆಗಳ ತೆಕ್ಕೆಗೆ ತಲುಪುವಂತೆ ಮಾಡುವ ಕರ್ತವ್ಯ ನಮ್ಮೆಲ್ಲರದಾಗಿದೆ.

ದಾಂಪತ್ಯ ಜೀವನ ಮುಖ್ಯ
ನಮ್ಮ ದೇಶದಲ್ಲಿ ಸರಳ ಮದುವೆಗಳಿಗಿಂತ ಅದ್ದೂರಿ ಮದುವೆಗಳ ಬಗ್ಗೆ ಹೆಚ್ಚು ಚರ್ಚೆ. ಮದುವೆ ಎಂಬ ಶಬ್ದ ಕೇಳಿ ಬಂದ ತಕ್ಷಣ ಎಷ್ಟು ಬಜೆಟ್ ಆಗಬಹುದು, ಎಷ್ಟು ಸಾಲ, ಎಲ್ಲಿಂದ ತರುವುದು, ಆಸ್ತಿಪಾಸ್ತಿ ಮಾರಿಯಾದರೂ ಮಗಳನ್ನು ಒಳ್ಳೆಯ ಕುಟುಂಬಕ್ಕೆ ಸೇರಿಸಬೇಕು ಇದೇ ಮಹತ್ವದ ವಿಚಾರವಾಗುತ್ತದೆ.

ಇದಕ್ಕೆಲ್ಲಾ ಪರಿಹಾರ ಸರಳ ಮದುವೆ. ಆದರೆ ನಮ್ಮಲ್ಲಿ ಬಡತನ ಕಿತ್ತು ತಿನ್ನುತ್ತಿದ್ದರೂ ಸರಳ ಮದುವೆ ಬಗ್ಗೆ ಆಲೋಚಿಸುವುದು ಕಡಿಮೆ. ಕಾರಣ ಮುಂದೆ ಬಂಧುಗಳಿಂದ, ಸ್ನೇಹಿತರಿಂದ ಅವಮಾನಕ್ಕೀಡಾಗಬಹುದೆಂಬ ಭಯ. ಈಗ ನಡೆದಿರುವ ಬಹುತೇಕ ಸರಳ ಮದುವೆಗಳು ನೋಡುವುದಕ್ಕೆ, ಕೇಳುವುದಕ್ಕೆ ಚೆನ್ನಾಗಿ ಕಂಡು ಬರುತ್ತಿವೆ. ಆದರೆ ತಮ್ಮವರಿಂದ ದಂಪತಿ ಬದುಕಿರವವರೆಗೂ ಕಿಡಿ ಮಾತುಗಳನ್ನ ಎದುರಿಸಿಕೊಂಡೆ ಬರಬೇಕಾಗುತ್ತದೆ.

ಜೀವನದಲ್ಲೊಮ್ಮೆ ಬರುವ ಮದುವೆಗೆ ಜಿಪುಣತನವೇಕೆ ಎನ್ನುವವರೆ ಹೆಚ್ಚು. ದಾಂಪತ್ಯ ಜೀವನದಲ್ಲಿ ಪರಸ್ಪರ ನಂಬಿಕೆ ಮುಖ್ಯ.  ನಂಬಿಕೆಗಳು ಕುಸಿಯ ತೊಡಗಿದರೆ ದಾಂಪತ್ಯ ಜೀವನದಲ್ಲಿ ಬಿರುಕಾಗುವುದು ಖಂಡಿತ. ವಿಚ್ಛೇದನ ಸಂದರ್ಭದಲ್ಲಿ ಸರಳ ಮದುವೆಯಾಗುವವರಿಗೆ ಕಾನೂನು ಬೆಂಬಲ ಸಿಗುವುದು ಕಷ್ಟ. ವಿವಾಹ ವಿಚ್ಛೇದನ ಆಗುವ ಸಂಭವವಿದ್ದಲ್ಲಿ ಸಾಕ್ಷ್ಯಗಳು ಸಿಗುವುದು ಕಷ್ಟ. ಎಲ್ಲರ ಸಮಕ್ಷಮದಲ್ಲಿ ಮದುವೆಯಾದರೂ ಕೆಲವೊಮ್ಮೆ ನ್ಯಾಯಾಲಯದಲ್ಲಿ ಸಾಕ್ಷ್ಯಗಳು ವ್ಯತಿರಿಕ್ತವಾಗಿರುವುದೆ ಹೆಚ್ಚು.

ಈಗ ಚಾಲ್ತಿಯಿರುವಂತೆ ಎರಡು ದಿವಸಗಳ ಮದುವೆ ಬದಲು ಒಂದು ದಿವಸಕ್ಕೆ ಸೀಮಿತ ಮಾಡಬೇಕು. ಮುಹೂರ್ತ ಹಾಗೂ ರಿಸೆಪ್ಷನ್ ಬದಲು ಧಾರಾ ಮುಹೂರ್ತಕ್ಕೆ ಸೀಮಿತಗೊಳಿಸಬೇಕು. ವಧು ವರನ ಕಡೆಯವರು ಪರಸ್ಪರ ಮಾತುಕತೆ ನಡೆಸಿ ದುಂದು ವೆಚ್ಚವನ್ನು ಕಡಿಮೆ ಮಾಡಬಹದು.

ನಮ್ಮೂರಿನಲ್ಲಿ ಒಬ್ಬರು ಮಂತ್ರ ಮಾಂಗಲ್ಯ ಮೂಲಕ ಮದುವೆಗಳನ್ನ ನೆರವೇರಿಸಿದರು. ಆದರೆ ತಮ್ಮ ಮನೆ ಮದುವೆಗಳನ್ನೆ ಅದ್ದೂರಿಯಾಗಿ ಮಾಡಿಸಿದರು. ಜೀವನದಲ್ಲಿ ಒಂದೇ ಸಾರಿ ಮದುವೆಯಾಗುವುದು. ಬಂಧು ಬಳಗ ಸಂತೋಷ ಪಡಬೇಕು. ಇಂತಹ ಮಂತ್ರ ಮಾಂಗಲ್ಯ ಪ್ರಚಾರಕ್ಕಾಗಿ ಎನ್ನುತ್ತಾರೆ.

ನಮ್ಮ ಸಂಬಂಧಿಕರ ಮಗಳ ಮದುವೆಗೆ ಆಹ್ವಾನ ಪತ್ರಿಕೆಯನ್ನು ಮಾಡಿಸಿರಲಿಲ್ಲ. ದೇವಾಲಯದಲ್ಲಿ ಮದುವೆ ಆಯಿತು. ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು ಆಯ್ತು. ಈಗ ವರನ ಕಡೆಯವರು ಎಲ್ಲಾ ಖರ್ಚು ಉಳಿಸಿದ್ದೇವೆ. ಅದನ್ನು ಗಂಟಾಗಿ ವರನಿಗೆ ಕೊಡಿ ಎನ್ನುತ್ತಿದ್ದಾರಂತೆ.. ಹೀಗಾಗಿ ಸರಳ ಮದುವೆ ಬಗ್ಗೆ ಜನರಿಗೆ ಇನ್ನು ನಂಬಿಕೆ ಬಂದಿಲ್ಲ. 

ರಿಜಿಸ್ಟರ್ ಮದುವೆ ಇಲ್ಲವೆ ಒಂದು ಧಾರಾ ಮುಹೂರ್ತಕ್ಕೆ ಮದುವೆ ಸೀಮಿತಗೊಳಿಸಿಕೊಂಡರೆ ಎಲ್ಲರಿಗೂ ಕಷ್ಟ ತಪ್ಪುತ್ತದೆ. ಆದರೆ ಈ ರೀತಿಯ ಸುಧಾರಣೆ ಹಾಗೂ ಬದಲಾವಣೆ ಬರಲು ಸಾಧ್ಯವೆ? ಮದುವೆ ಜೀವನದ ಮುಖ್ಯವಾದ ಘಟ್ಟ. ಎರಡು ಕುಟುಂಬಗಳ ಮತ್ತು ಬಂಧು ವರ್ಗದವರ ಬೆಸುಗೆ ಮುಖ್ಯವಾಗುತ್ತದೆ.

ಎಲ್ಲರ ಹಾರೈಕೆ ಸಿಗುವುದು ಮದುವೆಯಲ್ಲಿ ಮಾತ್ರ. ಜೀವನದಲ್ಲಿ ಕಷ್ಟಗಳು ಸಾಮಾನ್ಯ. ಅದರ ನಡುವೆ ಮದುವೆ ಸಂಭ್ರಮ ಎಲ್ಲವನ್ನು ಮರೆಸುವ ಮತ್ತು ಸಂಬಂಧಗಳ ಕೊಂಡಿಯಾಗುವುದರಿಂದ ಮದುವೆಗೆ ಸಲ್ಪ ಖರ್ಚು ಮಾಡಿದರೆ ತಪ್ಪೇನಿಲ್ಲ. ಸರಳ ಮದುವೆ ನೆಪದಲ್ಲಿ  ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳಬೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT