ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂವಿಧಾನಿಕ ಪರಿಹಾರಗಳು

ನಿಮಗಿದು ತಿಳಿದಿರಲಿ
ಅಕ್ಷರ ಗಾತ್ರ

ಭಾರತದ ಸಂವಿಧಾನ ತನ್ನ ಪ್ರಜೆಗಳಿಗೆ ಅನೇಕ ಮೂಲಭೂತ ಹಕ್ಕುಗಳನ್ನು ನೀಡಿದೆ. ಮೂಲಭೂತ ಹಕ್ಕುಗಳು ವ್ಯಕ್ತಿಯ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಅತ್ಯಂತ ಅಗತ್ಯವಾದ ಹಕ್ಕುಗಳು. ಆದರೆ ಆ ಹಕ್ಕುಗಳನ್ನು ಜಾರಿಗೊಳಿಸಲು ಒಂದು ಪರಿಣಾಮಕಾರಿಯಾದ ವ್ಯವಸ್ಥೆ ಇಲ್ಲದಿದ್ದರೆ ಅವು ವ್ಯರ್ಥವಾಗುತ್ತವೆ. ಆದ್ದರಿಂದಲೇ ಅವುಗಳ ಉಲ್ಲಂಘನೆಯಾದಾಗ ಪರಿಹಾರವನ್ನು ಪಡೆಯಲು ಸಹ ಸಂವಿಧಾನ ಅವಕಾಶ ಕಲ್ಪಿಸಿದೆ. ಮೂಲಭೂತ ಹಕ್ಕಿನ ಉಲ್ಲಂಘನೆಯ ವಿರುದ್ಧ ಸಂವಿಧಾನಾತ್ಮಕ ಪರಿಹಾರ ಪಡೆಯುವ ಹಕ್ಕು ಕೂಡ ಒಂದು ಮೂಲಭೂತ ಹಕ್ಕು.

ತನ್ನ ಪ್ರಜೆಗಳ ಮೂಲಭೂತ ಹಕ್ಕಿನ ಉಲ್ಲಂಘನೆಯ ವಿರುದ್ಧ ರಕ್ಷಣೆ ನೀಡುವ ಸಂವಿಧಾನದ ಈ ಅನುಚ್ಛೇದವನ್ನು (32ನೇ ಅನುಚ್ಛೇದ) ಡಾ. ಅಂಬೇಡ್ಕರ್ ಅವರು ’ಸಂವಿಧಾನದ ಆತ್ಮ’ ಎಂದು ಕರೆದಿದ್ದಾರೆ. ಸಂವಿಧಾನದ ಈ ಅನುಚ್ಛೇದದ ಮೂಲಕ ಸರ್ವೋಚ್ಚ ನ್ಯಾಯಾಲಯಕ್ಕೆ ಮೂಲಭೂತ ಹಕ್ಕುಗಳ ಸಂರಕ್ಷಣೆಯ ಜವಾಬ್ದಾರಿಯನ್ನು ನೀಡಿದೆ ಮತ್ತು ಇಂಥ ಸಂರಕ್ಷಣೆಗೆ ಅಗತ್ಯವಾದ ಅತ್ಯಂತ ವ್ಯಾಪಕ ಅಧಿಕಾರಗಳನ್ನು ಸಹ ಸರ್ವೋಚ್ಚ ನ್ಯಾಯಾಲಯಕ್ಕೆ ಸಂವಿಧಾನ ನೀಡಿದೆ.

ತನ್ನ ಮೂಲಭೂತ ಹಕ್ಕಿನ ಉಲ್ಲಂಘನೆಯಾದಾಗ ವ್ಯಕ್ತಿ ನೇರವಾಗಿ ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಅಥವಾ ದೇಶದ ಅತ್ಯುನ್ನತ ನ್ಯಾಯ ಪ್ರಧಾನ ಸಂಸ್ಥೆಯಾಗಿರುವಂಥ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆಹೋಗಬಹುದು. ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿರುವ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಐದು ಬಗೆಯ ಆದೇಶಗಳನ್ನು ನೀಡಬಹುದು-

ಹೇಬಿಯಸ್ ಕಾರ್ಪಸ್:  ಹೆಚ್ಚು ಬಳಕೆಯಾಗುವ ಆದೇಶವಿದು. ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ವಿವಾಹವಾದ ಸಂದರ್ಭದಲ್ಲಿ ಅಥವಾ ಸ್ವಯಿಚ್ಛೆಯಿಂದ ತಾನು ಪ್ರೀತಿಸಿದವನೊಡನೆ ಓಡಿ ಹೋದ ಮಗಳನ್ನು ಪತ್ತೆಹಚ್ಚಲಾಗದಿದ್ದ ಸಂದರ್ಭಗಳಲ್ಲಿ ಇದರ ಬಗ್ಗೆ ಹೆಚ್ಚಾಗಿ ಕೇಳಿರುತ್ತೇವೆ. ಇಂಥ ಪ್ರಕರಣಗಳಲ್ಲಿ ಸಂಬಂಧಪಟ್ಟವರನ್ನು ಪತ್ತೆ ಮಾಡಿ ದೈಹಿಕವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯ ಆದೇಶ ನೀಡುತ್ತದೆ. ಆದ್ದರಿಂದ ಯಾರೇ ವ್ಯಕ್ತಿಯನ್ನು ಕಾನೂನು ಬಾಹಿರ ರೀತಿಯಲ್ಲಿ ಬಂಧಿಸಿಡುವಂತಿಲ್ಲ. ಹಾಗೆ ಬಂಧಿಸಿದರೂ ಅವನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಆದರೆ ಹಾಗೆ ಹಾಜರುಪಡಿಸದಿದ್ದು ಆತನ ಬಗ್ಗೆ ಏನೂ ತಿಳಿಯದಿದ್ದಾಗ ಈ ಆದೇಶ ಕೋರಿ ಅರ್ಜಿ ಸಲ್ಲಿಸಬಹುದು. ಈ ಆದೇಶ ವಿವೇಚನಾರಹಿತ ದಸ್ತಗಿರಿ ಮತ್ತು ಬಂಧನಗಳ ವಿರುದ್ಧ ಇರುವ ಬಲವಾದ ರಕ್ಷಣೆ.

ಮ್ಯಾಂಡಮಸ್: ಆಜ್ಞಾಪನೆ-ತನ್ನ ಕರ್ತವ್ಯವನ್ನು ನಿರ್ವಹಿಸುವಂತೆ ನೀಡಿದ ಆದೇಶ. ಹಾಗಾಗಿ ಇದನ್ನು ಕರ್ತವ್ಯ ಚ್ಯುತಿ ಮಾಡಿದವರ ವಿರುದ್ಧ ನೀಡುವ ಆದೇಶ.

ನಿಷೇಧ: ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಧಿಕಾರ ಚಲಾಯಿಸದಂತೆ ಕೆಳ ನ್ಯಾಯಾಲಯಗಳಿಗೆ ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಚ ನ್ಯಾಯಾಲಯಗಳು ನೀಡುವ ನಿಷೇಧಾಜ್ಞೆ.

ಸರ್‌ಶಿಯೋರರಿ: ತನ್ನಲ್ಲಿರುವ ದಾಖಲೆಗಳನ್ನು ಸಲ್ಲಿಸುವಂತೆ ಕೆಳ ನ್ಯಾಯಾಲಯಗಳಿಗೆ ಮೇಲಿನ ನ್ಯಾಯಾಲಯಗಳು ನೀಡುವ ಆದೇಶ.

ಕೊ ವಾರೆಂಟೊ: ಇದರರ್ಥ ‘ಏನು ಹಕ್ಕಿದೆ’ ಎಂದು. ಸರ್ಕಾರಿ ನೌಕರಿಗೆ ಒಬ್ಬ ವ್ಯಕ್ತಿಗೆ ಏನಿದೆ ಹಕ್ಕು ಎಂದು ಕೇಳುವ ಅದೇಶ. ಸರ್ಕಾರಿ ನೌಕರಿಗೆ ತನಗೆ ಹಕ್ಕಿದೆಯೆಂದು ಮಾಡುವ ಕ್ಲೇಮಿನ ಬಗ್ಗೆ ವಿಚಾರಣೆ ನಡೆಸುವುದು ಮತ್ತು ಅಂಥ ಕ್ಲೇಮು ಸಮರ್ಥನೀಯ ವಲ್ಲದಿದ್ದರೆ ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ನೀಡುವ ಆದೇಶ. ಅನಪೇಕ್ಷಿತ ಅಥವಾ ಅನರ್ಹ ವ್ಯಕ್ತಿ ಸರ್ಕಾರಿ ನೌಕರಿಯನ್ನು ಕಾನೂನು ಬಾಹೀರವಾಗಿ ಹೊಂದುವುದನ್ನು ತಡೆಯುವುದು ಇದರ ಉದ್ದೇಶ.

ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಕೆಲವು ನಿರ್ಬಂಧಗಳಿರುವಂತೆಯೇ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ನ್ಯಾಯಾಲಯದ ಮೊರೆಹೋಗಲೂ ಸಹ ಕೆಲವೊಂದು ನಿರ್ಬಂಧಗಳಿವೆ.

* ಸುರಕ್ಷಿತ ಬದುಕಿಗೆ ಮಹಿಳಾಪರ ಕಾನೂನು ಮಾಹಿತಿ ಈ ಅಂಕಣದಲ್ಲಿ...

bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT