ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಹಿತಾಸಕ್ತಿ ಅರ್ಜಿ-2

ನಿಮಗಿದು ತಿಳಿದಿರಲಿ
Last Updated 4 ಡಿಸೆಂಬರ್ 2015, 19:35 IST
ಅಕ್ಷರ ಗಾತ್ರ

ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರು ಅನುಭವಿಸುವ ಲೈಂಗಿಕ ಕಿರುಕುಳ ಮಹಿಳೆಯರು ಹೇಳಿಕೊಳ್ಳಲಾರದ, ಹೇಳಿಕೊಳ್ಳಲು ಇಚ್ಛಿಸದ ಮತ್ತು ಹೇಳಿಕೊಂಡರೂ ಪ್ರಯೋಜನವಾಗದ ದೌರ್ಜನ್ಯ.

ಅಂಥ ದೌರ್ಜನ್ಯವನ್ನು ನಮ್ಮ ಕಾನೂನು ಇತ್ತೀಚಿನವರೆಗೂ ಒಂದು ಅಪರಾಧವನ್ನಾಗಿಯೇ ಪರಿಗಣಿಸಿರಲಿಲ್ಲ ಮತ್ತು ಅಂಥ ದೌರ್ಜನ್ಯ ಉದ್ಯೋಗ ಸ್ಥಳದಲ್ಲಿ ಸುರಕ್ಷಿತ ವಾತಾವರಣವನ್ನು ಹೊಂದಿರಲು ಮಹಿಳೆಗಿರುವ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದೂ  ಪರಿಗಣಿಸಿರಲಿಲ್ಲ ಹಾಗಾಗಿ ಅಂಥ ದೌರ್ಜನ್ಯವೆಸಗುವವರಿಗೆ ಕಾನೂನಿನ ಭಯ ಲವಲೇಷವೂ ಇರಲಿಲ್ಲ ಮತ್ತು ಅದರಿಂದ ಮಹಿಳೆಯರಿಗೆ ರಕ್ಷಣೆಯೂ ಇರಲಿಲ್ಲ.

ಇದನ್ನು ವೈಯಕ್ತಿಕವಾಗಿ ಪ್ರಶ್ನಿಸುವುದಾಗಲೀ ಅಥವಾ ಅದರ ವಿರುದ್ಧ ವೈಯಕ್ತಿಕವಾಗಿ ಹೋರಾಡುವುದಾಗಲೀ ಶೋಷಿತ ಮಹಿಳೆಗೆ ಕಷ್ಟವಾದುದು. ಆದರೆ ಈ ಪರಿಸ್ಥಿತಿಯನ್ನು ಬದಲಾಯಿಸಿದುದು ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ. ವಿಶಾಖಾ ಎಂಬ ಮಹಿಳಾಪರ ಸಂಘಟನೆ ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ.

ಇದಕ್ಕೆ ಕಾರಣವಾದುದು ಉದ್ಯೋಗಸ್ಥ ಮಹಿಳೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ ಆಕೆಯ ಮೇಲಾದ ಅತ್ಯಾಚಾರದ ಘಟನೆ. ಬಾಲ್ಯ ವಿವಾಹವನ್ನು ತಡೆಯುವುದು ಭಾಂವ್ರಿ ದೇವಿ ಎಂಬ ರಾಜಸ್ತಾನದ ಮಹಿಳೆಗೆ ಅವಳ ಉದ್ಯೋಗದ ಒಂದು ಕರ್ತವ್ಯವಾಗಿತ್ತು. ಆದರೆ ಅದನ್ನು ತಡೆಯಲೆತ್ನಿಸಿದ ಆಕೆಯ ಮೇಲೆ ಬಾಲ್ಯ ವಿವಾಹವನ್ನು ಏರ್ಪಡಿಸಿದ್ದ ಮನೆಯ ಪುರುಷರು ಅದನ್ನು ವಿರೋಧಿಸಿ ಆಕೆಯ ಪತಿಯ ಎದುರಿನಲ್ಲೇ ಅತ್ಯಾಚಾರವೆಸಗಿದರು.

ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ಸರ್ವೋಚ್ಚ ನ್ಯಾಯಾಲಯ ‘ಸುರಕ್ಷಿತ ಕೆಲಸದ ವಾತಾವರಣವನ್ನು ಹೊಂದಿರುವುದು’ ಘನತೆಯಿಂದ ಜೀವಿಸಲು ಮಹಿಳೆಗಿರುವ ಮೂಲಭೂತ ಹಕ್ಕಿನ ಒಂದು ಭಾಗ ಮತ್ತು ಅವಳ ಮೇಲೆ ನಡೆದ ಅತ್ಯಾಚಾರ ‘ಉದ್ಯೋಗ ಸ್ಥಳದಲ್ಲಿ ನಡೆದ ಲೈಂಗಿಕ ಕಿರುಕುಳ’ ಎಂದು ಅಭಿಪ್ರಾಯಪಟ್ಟಿತು. ಈ ಸಂದರ್ಭದಲ್ಲಿ, ‘ಕೆಲಸದ ಸ್ಥಳಗಳಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ’ ಎಂಬುದನ್ನು ವ್ಯಾಖ್ಯಾನಿಸಿ, ಆಕೆ ಅಂಥ ಕಿರುಕುಳಕ್ಕೆ ಒಳಗಾಗದಿರುವಂತೆ ನೋಡಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತವಾದ ಮಾರ್ಗದರ್ಶಿ ಸೂತ್ರಗಳನ್ನು ಹಾಕಿಕೊಟ್ಟು, ಅವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿತು ಮತ್ತು ಆದಷ್ಟು ಬೇಗ ಈ ಬಗ್ಗೆ ಸಮಗ್ರವಾದ ಶಾಸನವನ್ನು ರಚಿಸುವಂತೆ ಆದೇಶಿಸಿತು.

ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ತದನಂತರದ ಮಹಿಳಾ ಸಂಘಟನೆಗಳ ಹೋರಾಟದ ಫಲವಾಗಿ ಇಂದು ಈ ಬಗ್ಗೆ ‘ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿವಾರಣೆ, ನಿಷೇಧ, ಮತ್ತು ಪರಿಹಾರ)ಅಧಿನಿಯಮ,2013’ ಎಂಬ ಕಾನೂನು ಜಾರಿಗೆ ಬಂದಿದೆ. ಇದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಶಕ್ತಿ.

ನಿಮಗೆ ಗೊತ್ತೆ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಇದ್ದೂ ಇಲ್ಲದಂಥ ಕಾನೂನಿಗೆ ರಾಷ್ಟ್ರಾದ್ಯಂತ ಚಾಲನೆ ನೀಡಿದುದು ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಿ ಹೊಗೆ ಮುಕ್ತ ಗಾಳಿಯನ್ನು ಸೇವಿಸಲು ಸಾಧ್ಯವಾಗುವ ಭಾಗ್ಯ ನಮಗೆ ದೊರೆತಿರುವುದೂ ಈ ಸಂಬಂಧವಾಗಿ ಕೇರಳದ ಮಹಿಳೆಯೊಬ್ಬಳು ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದ.

ಸರ್ವೋಚ್ಚ ನ್ಯಾಯಾಲಯವೂ ಕೇರಳ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿಯಿತು. ಶಾಲೆಗಳು, ಗ್ರಂಥಾಲಯಗಳು, ರೈಲು ನಿಲ್ದಾಣಗಳಲ್ಲಿರುವ ವಿಶ್ರಾಂತಿ ಕೊಠಡಿಗಳು, ಸಾರಿಗೆ ಬಸ್ಸುಗಳು ಎಲ್ಲದರಲ್ಲೂ ಧೂಮಪಾನ ಮಾಡುವುದನ್ನು ನಿಷೇಧಿಸಲಾಯಿತು ಮತ್ತು ಈ ನಿಷೇಧವನ್ನು ಜಾರಿಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾಗಳಿಗೆ ನಿರ್ದೇಶನ ನೀಡಿತು. ತನ್ನ ಹಕ್ಕುಗಳ ಬಗ್ಗೆ ಅರಿವಿರುವ ಒಬ್ಬ ಮಹಿಳೆ ಕೈಗೊಂಡ ಒಂದು ಕ್ರಮ ಲಕ್ಷಾಂತರ ವ್ಯಕ್ತಿಗಳ ಬದುಕನ್ನು ಸಹನೀಯವನ್ನಾಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT