ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ತ ಮನಸ್ಸಿನ ಸಪ್ತ ಭಾವಗಳ ಅನಾವರಣ

Last Updated 1 ಜನವರಿ 2016, 19:30 IST
ಅಕ್ಷರ ಗಾತ್ರ

ಈಗಿನ ಕಾಲದಲ್ಲಿ ನಮ್ಮ ಹಳ್ಳಿಯಲ್ಲಿರುವ ಹುಡುಗರಿಗೆ ಮದುವೆಯಾಗುವುದಿಲ್ಲವೆಂಬ ದೊಡ್ಡ ಸವಾಲಿನ ನಡುವೆಯೇ, ನಮ್ಮ ಸಂಬಂಧಿಕರ, ಹಳ್ಳಿಯಲ್ಲಿನ ಹುಡುಗನಿಗೆ ಮದುವೆಯಾಯಿತು. ಯಾವುದಕ್ಕೂ ಕಡಿಮೆಯಿಲ್ಲ, ಅತ್ತೆ–ಮಾವ, ಗಂಡ–ಹೆಂಡತಿ, ನಾಲ್ಕು ಜನರ ಸುಂದರ ಕುಟುಂಬವೇ ಆದರೂ ಮದುವೆಯಾಗಿ ಒಂದು ವರ್ಷದೊಳಗೆ ಮಗನ ಸಂಸಾರ ಡೈವೋರ್ಸ್‌ವರೆಗೆ ಬಂದು ನಿಂತಿದೆ. ಇಲ್ಲಿಯ ನಿಜವಾದ ಸಮಸ್ಯೆಯೆಂದರೆ, ಮದುವೆಯಾಗಿ ಮೂರು ತಿಂಗಳೊಳಗೆ ಮಗನಿಗೆ ಹಾಸಿಗೆ ಬಿಟ್ಟು ಮೇಲೇಳಲಾರದ ವಿಚಿತ್ರ ಪರಿಸ್ಥಿತಿ.

ಎಷ್ಟು ವೈದ್ಯರ ಹತ್ತಿರ ತೋರಿಸಿದರೂ ಆತನಿಗೆ ಯಾವ ಕಾಯಿಲೆಯೆಂದು ಪತ್ತೆ ಹಚ್ಚಲಾಗಲಿಲ್ಲ. ಕೊನೆಗೆ ಬೆಂಗಳೂರಿನಲ್ಲಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಆತನ ಕಾಯಿಲೆಯನ್ನು ಗುರುತಿಸಿ, ಸತತವಾಗಿ ಆರು ತಿಂಗಳು ಕಾಲ ನಿರಂತರ ಚಿಕಿತ್ಸೆಯಿಂದಾಗಿ ಬಂದ ರೋಗ ಗುಣವಾಯಿತಾದರೂ, ಆತನ ಸಂಸಾರ ಮಾತ್ರ ಮುರಿದು ಬಿದ್ದಿತ್ತು! ಈ ಆರೆಂಟು ತಿಂಗಳಿನಲ್ಲಿ ಭವಿಷ್ಯ ಹೇಳುವವರ ಬಾಯಿಂದ ಬಂದ ಮಾತೆಂದರೆ, ನಿಮ್ಮ ಸೊಸೆಯ ತವರು ಮನೆಯಲ್ಲಿ ತುಂಬಾ ವರ್ಷಗಳ ಹಿಂದೆ ಯಾರೋ ಮದುವೆಯಾಗದೆಯೇ ಸತ್ತು ಹೋಗಿದ್ದರು, ಆ ಅತೃಪ್ತ ಆತ್ಮ ಈಗ ನಿಮ್ಮ ಸೊಸೆಯ ಮೂಲಕ ನಿಮ್ಮ ಮಗನನ್ನು ಕಾಡುತ್ತಿದೆ.

ನಿಮ್ಮ ಕುಲದೇವರಿಗೆ ಸರಿಯಾದ ಮನ್ನಣೆ ಸಿಕ್ಕಿಲ್ಲ, ಹಾಗಾಗಿ ಹೀಗೆಲ್ಲಾ ಆಗುತ್ತಿದೆ. ಮೊದಲು ‘ಪ್ರೇತ ಸಂಸ್ಕಾರ’ ಮಾಡಿಸಿ, ಕುಲದೇವರನ್ನು ಗುರುತಿಸಿಕೊಂಡು, ಪೂಜಿಸಿ.. ಎಂದೆಲ್ಲ ಜ್ಯೋತಿಷಿಗಳ ಸಲಹೆಯಂತೆ  ಒಂದಲ್ಲ ಎರಡಲ್ಲ, ಎಲ್ಲವನ್ನೂ ಮಾಡಿದರೂ ಅತ್ತ ಡೈವೋರ್ಸ್ ಆಗುತ್ತಿಲ್ಲ, ಇತ್ತ ಸಂಸಾರವೂ ಇಲ್ಲವೆಂಬ ಪರಿಸ್ಥಿತಿಯಲ್ಲಿ ಆ ಸಂಸಾರವೀಗಲೂ ದಿನ ತಳ್ಳುತ್ತಿದೆ. ಯಾವುದೇ ಹೆಣ್ಣಾದರೂ, ಮದುವೆಯೆಂಬ ಬಂಧನಕ್ಕೆ ಬರುವಾಗಲೇ ತನ್ನ ಬದುಕಿನ ಬಗೆಗೆ ಸುಂದರ ಕನಸನ್ನು ಹೆಣೆದುಕೊಂಡು, ಗಂಡನಾದವನಿಂದ ಸುಖ ಶಾಂತಿ, ನೆಮ್ಮದಿಯನ್ನು ಅರಸುತ್ತಾಳೆಯೇ ಹೊರತು, ಅವರ ಆಸ್ತಿ, ತೋಟ, ಮನೆಯನ್ನಲ್ಲ.

ಬಂದ ಮನೆಯಲ್ಲಿ ತನಗೆ ಗಂಡನಿಂದ ಸುಖವಾಗಲಿ, ನೆಮ್ಮದಿಯಾಗಲಿ, ಇಲ್ಲವೆಂದ ಮೇಲೆ ಮದುವೆಯೆಂಬ ಬಂಧನದಿಂದ ಹೊರಬರಲು ನಿರ್ಧರಿಸುತ್ತಾಳೆ. ಇದಕ್ಕೆ ಜ್ಯೋತಿಷಿಯೆಂಬ ಆಧ್ಯಾತ್ಮ ವೈದ್ಯರಿಂದ ಸಿಗುವ ಉತ್ತರ ದೆವ್ವದ ಕಾಟ, ಪ್ರೇತ ತೊಂದರೆ.. ಇತ್ಯಾದಿ. ಹಾಗಂತ ಜ್ಯೋತಿಷ್ಯವನ್ನು ನಂಬಲೇಬಾರದು ಎನ್ನುವ ಗಟ್ಟಿತನವಿಲ್ಲ. ಅದು ಅವರವರ ಭಾವಕ್ಕೆ, ಅವರವರ ಭಕುತಿಗೆ ಸಂಬಂಧಿಸಿದ್ದಾದ್ದರಿಂದ ಅದರ ಮಿತಿಯಲ್ಲಿರುವುದು ಒಳಿತು. ಯಾವ ಸಂಸಾರದಲ್ಲಿಯೇ ಆಗಲಿ, ನೆಮ್ಮದಿ, ಆರೋಗ್ಯ, ಸುಖ ಎನ್ನುವುದು ತಾನಾಗಿಯೇ ಬರುವುದಿಲ್ಲ. ಮನುಷ್ಯ ಎಂದ ಮೇಲೆ ಆರೋಗ್ಯ ಕೆಡುತ್ತದೆ, ನೆಮ್ಮದಿ ಹಾಳಾಗುತ್ತದೆ, ಇದಕ್ಕೆಲ್ಲಾ ನಾವು ವೈದ್ಯರಲ್ಲಿ ಹೋಗದೆ, ಕೇವಲ ಜ್ಯೋತಿಷಿಗಳ ಮನೆಗೆ ಹೋದರೆ ಇರುವ ನೆಮ್ಮದಿಯೂ ಹಾಳಾಗುತ್ತದೆ!

ನಾವು ಹೊರಟಿರುವ ಮಾರ್ಗ ಸರಿಯಾಗಿದ್ದಲ್ಲಿ, ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ಒಡಹುಟ್ಟಿದವರಿಗೇ ಮೋಸ ವಂಚನೆ ಮಾಡಲು ಹೊರಟರೆ, ಕೊನೆಗೆ ತಮ್ಮ ಬುಡಕ್ಕೇ ಅನಾರೋಗ್ಯ ಬಂದಾಗ, ಇದು ಪ್ರೇತದ ಕಾಟವೆಂದರೆ ಅದನ್ನು ನಂಬಲು ಸಾಧ್ಯವೇ? ಇವರು ಮಾಡಿರುವ ಅಪರಾಧವೇ ‘ಪಾಪಪ್ರಜ್ಞೆ’ ರೂಪದಲ್ಲಿ ಇವರನ್ನೇ ಕಾಡುವ ಸಮಯದಲ್ಲಿ ಅದಕ್ಕೆ ಕೊಡುವ ನಾಮಧೇಯವೇ ‘ಇದು ಅತೃಪ್ತ ಆತ್ಮದ ಕಾಟ’. ಇಲ್ಲಿ ನಿಜ ಹೇಳಬೇಕೆಂದರೆ, ಸುಪ್ತ ಮನಸ್ಸಿನ ಸಪ್ತ ಭಾವನೆಗಳಲ್ಲಿ ಅಡಗಿರುವ ಅಪರಾಧಿ ಭಾವ ಕಾಡುತ್ತಿರುತ್ತದೆಯೇ ಹೊರತು ಯಾವ ಕಾಟವೂ ಇರುವುದಿಲ್ಲ!

ಒಟ್ಟಾರೆಯಾಗಿ ಹೇಳುವುದಾದರೆ ಯಾವ ಕುಟುಂಬದಲ್ಲಿಯೇ ಆಗಲಿ, ಎಲ್ಲವೂ ಸರಿಯಾಗಿದ್ದಾಗ ಈ ದೇವರು–ದೆವ್ವಗಳ ಅರಿವಿರುವುದಿಲ್ಲ, ಅವುಗಳ ನೆನಪಾಗುವುದಿಲ್ಲ. ಅಲ್ಲಿ ಏನಾದರೂ ಏರುಪೇರಾದಾಗ ಮಾತ್ರ ಮೊದಲು ನೆನಪಾಗುವುದು ದೇವರು-ದೆವ್ವ, ಆನಂತರ  ಜ್ಯೋತಿಷ್ಯ. ದೇವರೆಂಬ ಅಗೋಚರ ಶಕ್ತಿಯಿದೆ ಎಂದಮೇಲೆ, ದೆವ್ವವೆಂಬ ದುಷ್ಟ ಶಕ್ತಿಯೂ ಇರಬಹುದು! ಆದರೆ, ‘ವೈದ್ಯೋ ನಾರಾಯಣೋ ಹರಿ:’ ಎನ್ನುವಂತೆ, ಮೊದಲು ವೈದ್ಯರಲ್ಲಿಗೆ ಹೋಗಿ, ದೇವರ ಮೇಲೆ ನಂಬಿಕೆಯಿಟ್ಟು ನಮ್ಮ ಮನಸ್ಸೆಂಬ ಕುದುರೆಯನ್ನು ಹತೋಟಿಯಲ್ಲಿಟ್ಟುಕೊಂಡರೆ, ಅಲ್ಲಿ ಈ ದೆವ್ವವೆಂಬ ದುಷ್ಟ ಶಕ್ತಿಗೆ ಪ್ರವೇಶವಿರುವುದಿಲ್ಲ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT