ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಪುಕ್ಕ ಹುಡುಕಿಕೊಂಡು

ಸಂಕ್ರಾಂತಿ ಪ್ರಬಂಧ ಸ್ಪರ್ಧೆ- 2ನೇ ಬಹುಮಾನ
Last Updated 17 ಜನವರಿ 2014, 19:30 IST
ಅಕ್ಷರ ಗಾತ್ರ

ದಾವಣಗೆರೆಯ ಅತ್ತೆ ಮನೆಗೆ ಬಂದು ಹಬ್ಬ ಮುಗಿಸಿ ಮೈಸೂರಿಗೆ ಹೊರ­ಡುವ ಸಮಯದಲ್ಲಿ ಅತ್ತೆಯ ಮನೆ ಪಕ್ಕ ಖಾಲಿ ಇದ್ದ ಸೈಟಿನಲ್ಲಿ ಅನೇಕ ಗಿಡಮರಗಳು ಬೆಳೆದು­ಬಿಟ್ಟಿದ್ದವು. ಮರವೊಂದಕ್ಕೆ ಹಕ್ಕಿಗಳು, ಬಹುಶಃ ಗೀಜಗ ಇರಬಹುದು ಅನೇಕ ಗೂಡುಗಳನ್ನು ಕಟ್ಟಿದ್ದವು. ಕೊಂಬೆಗಳಲ್ಲಿ ತೂಗಾಡುತ್ತಿದ್ದ ಆ ಗೂಡುಗಳು ನೋಡಲಿಕ್ಕೆ ಯಾವುದೋ ಸುಂದರ ಕಲಾಕೃತಿಯಂತೆ ತೋರುತ್ತಿತ್ತು.

ಚಿಕ್ಕ ಮಗಳು ‘ಅಮ್ಮಾ ಒಂದು ಗೂಡು ಊರಿಗೆ ತಗೊಂಡು ಹೋಗೋಣ’ ಅಂತ ಒಂದೇ ಸಮ ಹಟ ಹಿಡಿದಳು. ಅದಕ್ಕೆ ಹಿರಿಯ ಮಗಳೂ ಜೊತೆಯಾದಳು. ‘ಅಯ್ಯೋ ಮಾರಾಯ್ತಿ ಅದರ ಒಳಗೆ ಹಕ್ಕಿಗಳ ವಾಸವಿರುತ್ತೆ. ಪಾಪ ಅದನ್ನು ಹೇಗೆ ತಗೊಂಡು ಹೋಗೋದು?’ ಎಂದೆ. ಪತಿಯ ಅಕ್ಕ ‘ಆ ಗೂಡಿನಲ್ಲಿ ಹಕ್ಕಿಗಳಿಲ್ಲ, ಎಲ್ಲಾ ಹಕ್ಕಿಗಳು ಬೇರೆ ಕಡೆ ಹಾರಿಹೋಗಿವೆ, ಖಾಲಿಯಾಗಿದೆ. ಬೇಕಾದ್ರೆ ಒಂದೆರಡು ತಗೊಂಡು ಹೋಗು. ಮಗಳು ಅಷ್ಟೊಂದು ಕೇಳ್ತಾ ಇದ್ದಾಳೆ’ ಅಂದರು.

‘ಹಾಗಾದ್ರೆ ಒಳ್ಳೇದೇ ಆಯ್ತು, ಒಂದು ಗೂಡು ತಗೊಂಡು ಹೋಗೋಣ ಪುಟ್ಟಾ’ ಎಂದೆ. ಸಮಾಧಾನದಿಂದ ತಲೆಯಾಡಿಸಿದಳು ಮಗಳು. ಅವಳ ಮಾವ ಹೋಗಿ, ಚೆನ್ನಾಗಿರುವ ಒಂದು ಗೂಡನ್ನು ನಿಧಾನವಾಗಿ ಕಿತ್ತು ತಂದರು. ಗಿಡದ ನಾರು, ಬೇರು, ಹತ್ತಿಯನ್ನು ಅದೆಲ್ಲಿಂದಲೋ ಹುಡುಕಿ ತಂದು ತನ್ನ ಕೊಕ್ಕು ಮತ್ತು ಕಾಲಿನ ಉಗುರುಗಳ ಸಹಾಯದಿಂದ ಗೂಡನ್ನು ಹೆಣೆದಿರುವ ಅದರ ಕೌಶಲಕ್ಕೆ, ಜಾಣ್ಮೆಗೆ ಬೆರಗಾದೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಮರಿಗಳನ್ನು ಕಾಪಾಡಲು ಅದು ತೆಗೆದುಕೊಂಡ ಕಾಳಜಿ, ಪ್ರೀತಿ ಮನುಷ್ಯರಿಗಿಂತೇನೂ ಕಡಿಮೆಯಿಲ್ಲ ಎನಿಸಿ ಆ ಹಕ್ಕಿಯ ಬಗ್ಗೆ ಪ್ರೀತಿ, ಗೌರವ ಉಂಟಾಯಿತು.
ಹಿರಿಯ ಮಗಳಂತೂ ಸಂಭ್ರಮದಿಂದ ಗೂಡನ್ನು ತಿರುಗಿಸಿ ಮುರುಗಿಸಿ ನೋಡಿ ಸಂತೃಪ್ತಿಯಿಂದ ಮುಗುಳ್ನಕ್ಕಳು. ಕಾರಿನ
ಡಿಕ್ಕಿ­ಯಲ್ಲಿ ಅದನ್ನು ಲಗೇಜಿನ ಜೊತೆ ಸುರಕ್ಷಿತ­ವಾಗಿಟ್ಟು ಮೈಸೂರಿನ ಕಡೆ ಹೊರಟೆವು. ಮಧ್ಯಾಹ್ನದ ಹೊತ್ತಿಗೆ ಒಂದೆಡೆ ಕಾರು ನಿಲ್ಲಿಸಿ ಮೆಸ್‌ನಲ್ಲಿ ಊಟ ಮುಗಿಸಿ ಮತ್ತೆ ಪ್ರಯಾಣ ಮುಂದುವರಿಸಿದೆವು. ಹಿಂದೆ ಕುಳಿತಿದ್ದ ಇಬ್ಬರು ಮಕ್ಕಳು ಅಂತ್ಯಾಕ್ಷರಿ ಹಾಡ್ತಾ ಖುಷಿಯಲ್ಲಿದ್ದರು. ಪತಿ ಡ್ರೈವಿಂಗ್‌ನ ಮೂಡ್‌ನಲ್ಲಿದ್ದರು. ನಾನು ಹೊರಗೆ ಹೊಲಗದ್ದೆ, ಆಕಾಶ ಮುಗಿಲುಗಳನ್ನು ಕಣ್ಣಲ್ಲಿ ತುಂಬಿಸಿಕೊಳ್ತಾ ಕುಳಿತೆ.

ಅದೇ ಸಮಯಕ್ಕೆ ಮಗಳ ಗೆಳತಿಯ ತಾಯಿಯ ಫೋನು. ಫೋನಿನ ಆ ಕಡೆಯಿಂದ ಆಕೆ ‘ಏನ್ರೀ ನಿಮ್ಮ ಮಗಳ ಪ್ರಾಜೆಕ್‌್ಟ ವರ್ಕ್‌ ಮುಗೀತಾ?’ ಅಂದ್ರು. ‘ಏನದು? ನಂಗೊತ್ತಿಲ್ವಲ್ಲಾ?’ ಅಂದೆ. ‘ಅದೇರೀ ಏಳು ಬಗೆಯ ಹಕ್ಕಿಗಳ ಪುಕ್ಕಗಳನ್ನು ಸಂಗ್ರಹಿಸಿ ಕಾರ್ಡ್‌ಬೋರ್ಡ್‌ ಶೀಟಿನಲ್ಲಿ ಅಂಟಿಸಿ, ಆಯಾಯ ಪುಕ್ಕಗಳ ಹಕ್ಕಿಗಳನ್ನು ಹೆಸರಿಸಿ ಕಳುಹಿಸಬೇಕಂತೆ. ಮಗಳು ಹೇಳಲಿಲ್ವಾ’ ಎಂದರು.

ನಾನು ಹಿಂದಕ್ಕೆ ತಿರುಗಿ ಅವರು ಹೇಳಿದ ವಿಷಯವನ್ನು ಪುನರಾವರ್ತನೆ ಮಾಡಿ ‘ಹೌದೇನೇ ಚಿನ್ನು?’ ಎಂದೆ. ‘ಹೂಂನಮ್ಮಾ ನಾನು ಆವತ್ತಿ­ನಿಂದಲೇ ಹೇಳ್ತಿದ್ದೀನಿ. ಸೆವೆನ್‌ ಟೈಪ್‌್ಸ ಆಫ್‌ ಬರ್ಡ್‌್ಸ ಫೆದರ್‌್ಸ ಕಲೆಕ್‌್ಟ ಮಾಡ್ಬೇಕೂಂತ. ನೀನು ಸರಿಯಾಗಿ ಕೇಳಿಸಿಕೊಳ್ತಾನೇ ಇಲ್ಲ’ ಅಂತ ಹೇಳಿ ಪುನಃ ಅಕ್ಕನೊಂದಿಗೆ ಆಟದಲ್ಲಿ ಮುಳುಗಿದಳು.

ನಾನು ಇತ್ತ ಆಕೆಗೆ ‘ಪಾಪೂ ಹೇಳಿದ್ದಳು. ನಾನೇ ಮರ್‍ತಿದ್ದೆ. ಅದ್ಸರಿ ಉಷಾ ನೀವು ಹೇಗೆ ಎಲ್ಲಿಂದ ಸಂಗ್ರಹಿಸಿದಿರಿ?’ ಎಂದೆ. ಅದಕ್ಕೆ ಅವರು ‘ಅಯ್ಯೋ ಇನ್ನೂ ಸಿಕ್ಕಿಲ್ಲಾರಿ, ಹುಡುಕಬೇಕು’ ಎನ್ನುತ್ತಾ ‘ಪೆಟ್‌ ಪ್ಲಾನೆಟ್‌ನಲ್ಲಿ ಸಿಗಬಹುದು ನೋಡಿ. ಅಲ್ಲೆಲ್ಲಾ ಮನೆಯಲ್ಲಿ ಸಾಕಬಹುದಾದ ಹಕ್ಕಿಗಳನ್ನು, ಪ್ರಾಣಿಗಳನ್ನು ಮಾರ್‍ತಾರೆ’ ಅಂದ್ರು. ‘ಥ್ಯಾಂಕ್ಸ್ ಉಷಾ, ಊರಿಗೆ ಬಂದ್ಮೇಲೆ ಹುಡುಕಲಿಕ್ಕೆ ಶುರು ಮಾಡ್ತೀನಿ’ ಅಂತ ಫೋನಿಟ್ಟೆ.

‘ಏನು ಸ್ಕೂಲಿನವರಪ್ಪಾ? ಈ ಕಾಲದಲ್ಲಿ
ಹಕ್ಕಿಗ­ಳನ್ನು ನೋಡೋದೇ ಕಷ್ಟ. ಇನ್ನದರ ಪುಕ್ಕಗಳನ್ನು ಹೇಗೆ ಸಂಗ್ರಹಿಸೋದು? ಇಂಥದ್ದನ್ನೆಲ್ಲಾ ಮಕ್ಕಳಿಗೆ ಪ್ರಾಜೆಕ್‌್ಟ ವರ್ಕ್ ಅಂತಾ ಕೊಟ್ಟುಬಿಡ್ತಾರೆ. ಆದ್ರೆ ಅದನ್ನು ಮಾಡೋದು ಮಾತ್ರ ಅವರ ತಂದೆ ತಾಯಿಗಳೇ. ಕೆಲ್ಸಕ್ಕೆ ಹೋಗೋ ತಂದೆ ತಾಯಿಗ­ಳಾದ್ರೆ ಅವರಿಗೆ ಇದೆಲ್ಲಾ ಮಾಡಿಕೊಡ್ಲಿಕ್ಕೆ ಹೇಗೆ ಸಾಧ್ಯ? ಮೈಸೂರಲ್ಲಾದ್ರೆ ಪರವಾಗಿಲ್ಲ ಹ್ಯಾಗೋ ನಡೆಯುತ್ತೆ. ಮರಗಿಡ, ಉದ್ಯಾನ ಕೆರೆಗಳ ಕಡೆ ಹುಡುಕಬಹುದು. ಬೆಂಗ್ಳೂರಲ್ಲೋ, ಬಾಂಬೇಲೋ ಆದ್ರೆ ಸಾಧ್ಯವೇ? ಇವರ ಸ್ಕೂಲಿ­ನವರಿಗೆ ತಲೇನೇ ಇಲ್ಲ’ ಅಂತ ಪತಿಯೆದುರು ನನ್ನ ಅಸಮಾಧಾನ ಹೊರಗೆಡವಿದೆ.

‘ಈಗ ಪುಕ್ಕಗಳನ್ನು ಹುಡ್ಕೋಕೆ ಶುರು ಮಾಡು, ಅದರಲ್ಲಿ ಒಂಥರಾ ಖುಷಿ ಸಿಗುತ್ತದೆ. ಎಂಜಾಯ್‌ ಇಟ್‌’ ಎಂದರು. ನನ್ನ ಕಷ್ಟ ಇವರಿಗೇನು
ಗೊತ್ತಾ­ಗುತ್ತೆ ಅಂತ ಗೊಣಗಿ ಸುಮ್ಮನಾದೆ.

ಒಮ್ಮೆ ಗೆಳತಿ ಶಾಂತಾಳ ಮನೆಗೆ ಹೋಗಿದ್ದೆ, ಆಕೆಯ ಮಗಳ ಕಾಲೇಜಿನಿಂದ ಪದವಿ ತರಗತಿಗೆ ಕೊಟ್ಟಿದ್ದ ಪ್ರಾಜೆಕ್‌್ಟ ಮನೆಯಲ್ಲಿ ಮಾಡಲಾಗದೆ, ಪ್ರಾಜೆಕ್‌್ಟ ಮಾಡಿಕೊಡುವುದನ್ನೇ ವೃತ್ತಿಯಾಗಿಸಿಕೊಂಡವ­ರಿಂದ ಎರಡು ಸಾವಿರ ರೂಪಾಯಿ ನೀಡಿ, ಮಾಡಿಸಿ ತಂದಿಟ್ಟಿದ್ದರು. ‘ಸಾರ್ಥಕ ಆಯ್ತು ಬಿಡು, ನಮ್ಮ ಶಿಕ್ಷಣದ ರೀತಿ ನೀತಿ ಹೇಗೆ ಸಾಗಿದೆಯಪ್ಪಾ ಭಗವಂತಾ?’ ಅಂತ ಮರುಗಿದ್ದೆ. ಇದೀಗ ನಾನು ಇಬ್ಬರು ಮಕ್ಕಳ ಪ್ರಾಜೆಕ್‌್ಟ ವರ್ಕ್‌ಗಳಲ್ಲಿ ಆಸಕ್ತಿಯಿಂದ ಭಾಗಿಯಾಗಿ ಅವರಿಗೆ  ಸಹಕರಿಸಿ ಮುಗಿಸಿಕೊಡುತ್ತಿದ್ದೆ. ಮುಂದೆ ನನ್ನದೂ ಅವರ ಸ್ಥಿತಿಯೇ ಆಗಬಹುದೇನೋ ಎಂದುಕೊಂಡೆ.

ಮೈಸೂರು ತಲುಪಿದ್ದಾಯ್ತು. ಮನೆಗೆ ಬಂದು ಲಗೇಜನ್ನೆಲ್ಲಾ ಮನೆಯೊಳಗೆ ತಂದಿಟ್ಟಾಯಿತು. ಹಕ್ಕಿ ಗೂಡನ್ನು ನಾನು ಕೈಲಿ ಹಿಡಿದು ಹಿಂದಕ್ಕೆ ಮುಂದಕ್ಕೆ ತಿರುಗಿಸಿ ನೋಡಿ ಹಕ್ಕಿಯ ಪುಕ್ಕ ಇದರಿಂದ ಉದುರಬಹುದೇನೋ ಎಂದು ನೋಡ­ತೊಡಗಿದೆ. ಊಹೂಂ, ಖಾಲಿ ಇದ್ದ ಅದನ್ನು ಮನೆಯ ಗೋಡೆಯ ಮೂಲೆಗೆ ನೇತು ಹಾಕಿದೆ. ಮನೆಯ ಹಾಲ್‌ಗೆ ಒಂದು ರೀತಿಯ ಕಳೆ ಬಂತು. ಮಕ್ಕಳು ಸಂತೋಷದಿಂದ ಅದನ್ನು ದಿಟ್ಟಿಸಿದರು. ನನ್ನೊಳಗೋ ಹಕ್ಕಿ ನಗುತ್ತಾ ಛೇಡಿಸುತ್ತಿತ್ತು.

ಊಟ ಮುಗಿಸಿ, ಸುಸ್ತಾಗಿದ್ದರಿಂದ ಮಕ್ಕಳು, ಪತಿ ಬೇಗನೇ ಮಲಗಿಬಿಟ್ಟರು. ಕಿಟಕಿಯ ಸರಳಿನ ಆಚೆಯ ಕತ್ತಲಿನಲ್ಲಿ ಚಂದ್ರ ಬೆಳಗುತ್ತಿದ್ದ.

ಸಣ್ಣಗೆ ತುಂತುರು ಹನಿಯ ಸಪ್ಪಳಕ್ಕೆ ಹೊರಗಿನ ಗಿಡಗಳ ಕೊಂಬೆ ರೆಂಬೆಗಳು ತಲೆದೂಗುತ್ತಿದ್ದವು. ನನ್ನ ಮುಚ್ಚಿದ ಕಣ್ಣರೆಪ್ಪೆಗಳ ಒಳಗೆ ಬಾಲ್ಯ ತೆರೆದುಕೊಂಡಿತು. ಬಾಲ್ಯದಲ್ಲಿ ಅಮ್ಮನ ಮನೆಯ ಹಿಂದೆ ದೊಡ್ಡದಾದ ಹಿತ್ತಲು ಇತ್ತು. ಗುಲಾಬಿ, ನೀಲಿ, ಬಿಳಿ ಬಣ್ಣದ ಸ್ಫಟಿಕದ ಹೂಗಳ ಗಿಡಗಳು, ಮಲ್ಲಿಗೆಯ ಬಳ್ಳಿ, ತೆಂಗು, ಸೀಬೆ, ಸೀತಾಫಲ, ಕರಿಬೇವು, ಪರಂಗಿ ಗಿಡಗಳು ಅಲ್ಲದೆ ಅನೇಕ ಆಲಂಕಾರಿಕ ಗಿಡಗಳಿದ್ದವು. ಬಹುತೇಕ ತಾನೇ ನೆಟ್ಟು ಆರೈಕೆ ಮಾಡಿ ಬೆಳೆಸಿದ್ದವು. ಅಲ್ಲಿಗೆ ಅನೇಕ ಹಕ್ಕಿಗಳು ಬರುತ್ತಿದ್ದವು. ಗಿಣಿಗಳಂತೂ ಸೀಬೇಹಣ್ಣನ್ನು ಅರ್ಧಂಬರ್ಧ ತಿಂದು ಹೋಗುತ್ತಿದ್ದವು. ಅವುಗಳ ಎಂಜಲಹಣ್ಣು ನನ್ನ ತುಟಿಯ ಮೇಲಿರುತ್ತಿತ್ತು. ಕಾಗೆ, ಗುಬ್ಬಚ್ಚಿ, ಅಳಿಲು ಬಣ್ಣ ಬಣ್ಣದ ಚಿಟ್ಟೆಗಳು, ಓತಿಕ್ಯಾತ, ಕೋಗಿಲೆ ಎಲ್ಲವುಗಳ ಕಲರವ ಕಿವಿತುಂಬುತ್ತಿತ್ತು.

ಶಾಲೆಯಿಂದ ಬಂದ ತಕ್ಷಣ ಓಡಿಬಂದು ಕಾಲಿಗೆ ಸುತ್ತಿಕೊಳ್ಳುತ್ತಿದ್ದ ಬೆಕ್ಕಿನ ಮರಿಯನ್ನು ಕೈಗೆತ್ತಿಕೊಂಡು ಮುದ್ದಿಸುತ್ತ ಹಿತ್ತಲಿನ ಗಿಡಗಳೊಂದಿಗೆ ಮಾತಾಡು­ತ್ತಿದ್ದೆ. ಗಿಡದ ಕೊಂಬೆರೆಂಬೆ, ಹೂವು, ಎಲೆಗಳನ್ನೆಲ್ಲ ಸವರಿ ಕೆನ್ನೆಗೊತ್ತಿಕೊಂಡರೆ ನನಗಾಗುವ ಸಮಾಧಾನಕ್ಕಿಂತ ನನ್ನ ಬರುವನ್ನೇ ಕಾಯುತ್ತಿದ್ದ ಅವುಗಳಿಗೆ ಆಗುತ್ತಿದ್ದ ಸಮಾಧಾನವೇ ಹೆಚ್ಚು ಎನಿಸುತ್ತಿತ್ತು. ನನ್ನ ಮಾತುಗಳನ್ನು ಕೇಳಿಸಿಕೊಳ್ತಾ ತಲೆ­ ಆಡಿ­ಸುತ್ತಿದ್ದ, ಅವುಗಳ ಹಾಗೂ ನನ್ನ ನಡುವೆ ವಿಚಿತ್ರ ಸಂಬಂಧವೇ ಏರ್ಪಟ್ಟಿತ್ತು.

ಅಂತಹ ಸುಂದರ ಸಂವೇದನೆಗಳಿಗೆ ಅವಕಾಶವಿತ್ತ ಬಾಲ್ಯವನ್ನು ಈ ಮಕ್ಕಳು ಅನುಭವಿಸಲು ಸಾಧ್ಯವಿರಲಿಲ್ಲವಾದರೂ, ಈಗಿನ ಮನೆಯ ಮುಂದಿನ ಚಿಕ್ಕ ಜಾಗದಲ್ಲಿ ಮಲ್ಲಿಗೆ, ದಾಸವಾಳ, ಕರಿಬೇವು, ನಿಂಬೆ, ಪಪ್ಪಾಯ, ದಾಳಿಂಬೆ ಗಿಡಗಳಿಗೆ ನೀರುಣಿಸಿ ತಲೆಸವರಿ ಸೊಂಪಾಗಿ ಬೆಳೆಸಿದ್ದೆ. ದಾಳಿಂಬೆ ಹಣ್ಣು ತಿನ್ನಲಿಕ್ಕೆ ಅನೇಕ ಬಣ್ಣ ಬಣ್ಣದ ಪುಟ್ಟ ಹಕ್ಕಿಗಳು ಬರುತ್ತಿದ್ದವು. ಅವುಗಳ ಚಿಂವ್‌ ಚಿಂವ್‌ ಶಬ್ದವಂತೂ ಅವು ನನ್ನೊಂದಿಗೆ ನಡೆಸುವ ಸಂಭಾಷಣೆಯಂತೆಯೇ ಅನಿಸುತ್ತಿತ್ತು.

ಬೀದಿಯ ಕೊನೆಯಲ್ಲಿದ್ದ ಕೆಂಪು ಹೂವಿನ ಮರದ ಮೇಲಂತೂ ಸಾಲುಗಿಣಿಗಳು ಕುಳಿತಿರುತ್ತಿದ್ದವು. ಈ ಮಕ್ಕಳಿಗೆ ಇಷ್ಟಾದ್ರೂ ಪ್ರಕೃತಿಯ ಸೊಬಗು ಸಿಗುತ್ತಿದೆಯಲ್ಲಾ ಎನ್ನುವುದೇ ತೃಪ್ತಿ.

ಎಲ್ಲಾ ಸರಿ ಆದರೆ ಈಗ ಹಕ್ಕಿಗಳ ಪುಕ್ಕವನ್ನು ಹೇಗೆ ಸಂಗ್ರಹಿ­ಸಲಿ? ಸಿಕ್ಕದೇ ಇದ್ರೆ ಮಗಳ ಕೋಪವನ್ನು ನೋಡಲು ಸಾಧ್ಯವಿಲ್ಲ. ‘ಏಳು ಪುಕ್ಕಾನೂ ಬೇಕು, ಒಂದು ಕಡಿಮೆ ಆದ್ರೂ ಸುಮ್ನಿರಲ್ಲ’ ಅಂತ ಬೆದರಿಕೆನೂ ಹಾಕಿದ್ದಳು ಮಗಳು.

ಮೂರನೆಯ ದಿನ ಮಕ್ಕಳಿಬ್ಬರನ್ನು ಸ್ಕೂಲಿಗೆ ರೆಡಿ ಮಾಡಿ ಬಾಕ್ಸಿಗೆ ತಿಂಡಿ ಹಾಕಿ ‘ನಿನ್ನ ಗೆಳತಿಯರನ್ನೆಲ್ಲಾ ಕೇಳು ಎಲ್ಲಿಂದ ಪುಕ್ಕ ತರ್‍ತಿದ್ದಾರೆ ಅಂತ, ನಾನೂ ಇಲ್ಲಿ ಸುತ್ತಮುತ್ತ ಹುಡುಕ್ತೀನಿ, ಒಟ್ಟಿನಲ್ಲಿ ನಿಂಗೆ ಏಳು ಪುಕ್ಕಾನೂ ಖಂಡಿತಾ ಹುಡುಕಿಕೊಡ್ತೀನಿ ಆಯ್ತಾ ಚಿನ್ನಾ?’ ಎಂದೆ. ಮಗಳು ಮುಖವರಳಿಸುತ್ತಾ ‘ಐ ಲವ್‌ ಯೂ ಅಮ್ಮಾ’ ಅಂತಾ ಕೆನ್ನೆಗೊಂದು ಪಪ್ಪಿ ಕೊಟ್ಟು ಓಡಿದಳು. ಹಿರಿಯ ಮಗಳಿಗೆ ‘ನೀನೂ ಯಾರ್‍ನಾದ್ರೂ ಹಕ್ಕಿ ಪುಕ್ಕದ ಬಗ್ಗೆ ವಿಚಾರಿಸು ಪುಟ್ಟಾ’ ಎಂದೆ.

ಮಕ್ಕಳನ್ನ ರೆಡಿ ಮಾಡಿ ಶಾಲೆ, ಕಾಲೇಜಿನ ಬಸ್ ಹತ್ತಿಸಿ ಬರುವಾಗ ಮಗಳ ಜೊತೆಗೆ ಬಸ್‌ನಲ್ಲಿ ಹೋಗುವ ಆಕೆಯ ಸಹಪಾಠಿ ಅರ್ಜುನ್‌ ‘ಆಂಟಿ, ನಮ್ಮ ಪ್ರಾಜೆಕ್‌್ಟ ಏನ್ಗೊತ್ತಾ? ಮರಗಳ ಎಲೆಗಳನ್ನು ಸಂಗ್ರಹಿಸಿ ಅಂಟಿಸಬೇಕು. ಅದೂ ಡಿಫರೆಂಟ್‌ ಶೇಪ್‌, ಸೈಜು, ಜಾತಿ ಇರ್‍ಬೇಕು’ ಅಂದ. ‘ಓಹ್‌ ನೈಸ್‌, ಅದನ್ನು ಕಲೆಕ್‌್ಟ ಮಾಡೋದು ಕಷ್ಟವಾಗಲ್ಲ ಕಣೋ, ಆದ್ರೆ ಇವರಿಗೆ ಹಕ್ಕಿ ಪುಕ್ಕ ಬೇಕಂತೆ’ ಎಂದೆ. ‘ನಂಗೇನಾದ್ರೂ ಸಿಕ್ರೆ ತಂದುಕೊಡ್ತೀನಿ ಆಂಟಿ’ ಎಂದ. ‘ನಾನೂ ಅಷ್ಟೆ ನಿನಗೆ ಸಿಗದ ಎಲೆಗಳು ನನ್ಗೆ ಸಿಕ್ಕರೆ ಕೊಡ್ತೀನಿ’ ಅಂದೆ ಅವನ ಕೆನ್ನೆ ಹಿಂಡುತ್ತಾ.

ಇತ್ತ ಮನೆಗೆ ಬಂದು ಮನೆಗೆಲಸ ಮುಗಿಸಿ ಮನೆಯ ಮುಂದಿನ ಗಿಡಗಳ ಬಳಿಗೆ ಹೋದೆ. ಅವುಗಳ ಕೊಂಬೆ, ರೆಂಬೆ, ಬೇರು ಎಲ್ಲಾ ಕಡೆ ಹುಡುಕುತ್ತಾ ನಿಂತೆ. ಎಷ್ಟೊಂದು ಹಕ್ಕಿಗಳು ದಿನಾ ಇಲ್ಲಿ ಬಂದು ಕೂಡುತ್ವೆ. ಒಂದಾದ್ರೂ ಅದರ ಗರಿ ಬಿದ್ದಿರಬಹುದೇನೋ ಅಂತ ಕಣ್ಣಾಡಿಸತೊಡಗಿದೆ. ಹತ್ತು ಹದಿನೈದು ನಿಮಿಷ ತಡಕಾಡಿದರೂ ಊಹೂಂ ಒಂದೂ ಪುಕ್ಕ ಪತ್ತೆ ಇಲ್ಲ, ನಿರಾಸೆಗೊಂಡೆ.

ಸಂಜೆ ಮಗಳು ಶಾಲೆಯಿಂದ ಮನೆಗೆ ಬಂದಾಗ ‘ಪುಟ್ಟಾ ನೀನು ಶಟಲ್‌ಕಾಕ್‌ ಆಡ್ತೀಯಲ್ಲಾ, ಅದರಿಂದ ಒಂದು ಗರಿ ಕಿತ್ಕೊಂಡ್ರೆ ಹೇಗೆ?’ ಅಂತ ಮಹಾಜಾಣೆ­ಯಂತೆ ಒಂದು ಐಡಿಯಾ ಕೊಟ್ಟೆ. ಅವಳು ನಂಗಿಂತಾ ಬಲು ಜಾಣೆ ‘ಏ ಪೆದ್ದು ಅಮ್ಮ ಅದು ಪ್ಲಾಸ್ಟಿಕ್‌ನದ್ದು, ಅದನ್ನು ಕಿತ್ಕೊಂಡು ತರ್‍ಬೇಡಿ ಅಂತ ಆಗ್ಲೇ ನಮ್ಮ ಮಿಸ್‌ ಹೇಳಿಬಿಟ್ಟಿದ್ದಾರೆ’ ಎಂದಳು. ‘ನನ್ನಂತೋರ ಪ್ಲಾನು ಅವರಿಗೆ ಮೊದಲೇ ಗೊತ್ತಿರುತ್ತೆ ಅಂತ ಈ ದಡ್ಡ ತಲೆಗೆ ಹೊಳೀಲಿಲ್ವಲ್ಲಾ’ ಅಂತ ಪೇಚಾಡಿದೆ. ‘ಸರಿ ನಿನ್ನ ಗೆಳತಿ ಅಮೃತಂಗೆ ಫೋನು ಮಾಡು, ಅವರಮ್ಮ ಎಲ್ಲಿಂದ ಪುಕ್ಕ ತಂದ್ರಂತೆ?’ ಎಂದೆ.

‘ಫೋನು ಮಾಡಿಕೊಡ್ತೀನಿ ನೀನೇ ಮಾತಾಡು, ಅವರು ಆಗಲೇ ನಾಲ್ಕು ಪುಕ್ಕ ಕಲೆಕ್‌್ಟ ಮಾಡಿದ್ದಾರಂತೆ ಗೊತ್ತಾ?’ ಎಂದಳು. ನನಗೆ ಅವಮಾನವಾದಂತಾಯಿತು. ಅವಳ ಗೆಳತಿಯ ತಾಯಿ ‘ನಮ್ಮ ಕಷ್ಟ ನೋಡಿ, ಈ ಮಕ್ಕಳ ಸಲುವಾಗಿ ಚಿಕನ್‌ ಸೆಂಟರ್‌ ಹತ್ರ ಹೋಗಿ ಕೋಳಿ ಪುಕ್ಕ ಇಸ್ಕೊಂಡು ಬರೋಹಾಗಾಯ್ತು’ ಎಂದರು.

ಶುದ್ಧ ಸಸ್ಯಾಹಾರಿಯಾಗಿದ್ದ ಅವರು, ಮಗಳಿಗಾಗಿ ಅಲ್ಲಿ ಹೋಗಿ ನಿಂತು ತಂದದ್ದು ಕೇಳಿ ನಾನು ‘ಹೌದಾ? ಹೋಗ್ಲಿಬಿಡಿ ಏನಾಯ್ತು. ಸದ್ಯ ಪುಕ್ಕ ಸಿಕ್ತಲ್ಲಾ ನಾನೂ ಅಲ್ಲಿ ಹೋಗಿ ನೋಡ್ತೇನೆ’ ಎಂದೆ. ಜೀವ ಹಿಡಿ ಮಾಡ್ಕೊಂಡು, ಮಗಳ್ನ ಕರ್‍ಕೊಂಡು ಚಿಕನ್‌ ಸೆಂಟರ್‌ ಮುಂದೆ ಹೋಗಿ ನಿಂತೆ. ಆತ ಏನು ಎಂಬಂತೆ ನೋಡಿದ. ಅಲ್ಲಿ ನೇತುಹಾಕಿದ್ದ ಮಾಂಸ, ಮೇಜಿನ ಮೇಲಿದ್ದ ದೊಡ್ಡ ಚಾಕು, ಮಚ್ಚುಗಳ ಜೊತೆ ಅದೆಂಥದ್ದೋ ವಾಸನೆಗೆ ನಾನು ತೊದಲಿ ಅಂಗಡಿಯವನಿಗೆ ‘ನೋಡಪ್ಪಾ... ಒಂದೆರಡು ಕೋ... ಕೋಳಿಪುಕ್ಕ ಬೇಕಿತ್ತು. ನನ್ನ ಮಗಳಿಗೆ ಅವರ ಶಾಲೆಯವರು ತರಲಿಕ್ಕೆ ಹೇಳಿದ್ದಾರೆ’ ಎಂದೆ.

ಆತ ‘ಓಹ್‌ ಅಷ್ಟೇನಾ ಸ್ವಲ್ಪ ಇರೀಮ್ಮಾ ಕೊಡ್ತೀನಿ’ ಎಂದ. ಅಷ್ಟರಲ್ಲಿ ನಮ್ಮನೆ ಸಮೀಪದಲ್ಲಿದ್ದ ಸ್ನೇಹಿತರೊಬ್ಬರು ದಾರಿಯಲ್ಲಿ ಸಿಕ್ಕು ಆಶ್ಚರ್ಯದಿಂದ ನೋಡುತ್ತಿದ್ದರು. ಇದೇನಪ್ಪಾ ಸಸ್ಯಾಹಾರಿಗಳಾದ ಇವರೇಕೆ ಇಲ್ಲಿ, ಹೀಗೆ ಅಂತ. ನಾನು ಅವರ ಬಳಿಯೂ ಪರಿಸ್ಥಿತಿ ಹೇಳಬೇಕಾಯಿತು.

ಇತ್ತ ಅಂಗಡಿಯವನು ಕಾಲುಗಳನ್ನು ಕಟ್ಟಿ ಒಂದೆಡೆ ಇಟ್ಟಿದ್ದ ಕೋಳಿಗಳ ಬಳಿ ಹೋದ. ಕೋಳಿಯೊಂದನ್ನು ಹಿಡಿದು ಥಟ್ಟನೆ ಎರಡು ಪುಕ್ಕಗಳನ್ನು ಜೋರಾಗಿ ಕಿತ್ತ. ನನ್ನ ಜೀವವೇ ಹಾರಿಹೋದಂತಾಗಿ ‘ಅಯ್ಯೋ ಏನಪ್ಪಾ ಸ್ವಲ್ಪ ಮೆಲ್ಲಗೆ ಕೀಳಪ್ಪಾ, ಪಾಪ ಅವಕ್ಕೆ ಎಲ್ಲಿ ನೋವಾಗುತ್ತೋ’ ಎಂದು ಮರುಗಿದೆ. ಅದಕ್ಕೆ ಆತ ‘ಅಮ್ಮಾ ಇವುಗಳಿರೋದೇ ಆಹಾರಕ್ಕಾಗಿ. ನೀವು ಇಷ್ಟೊಂದು ಬೇಜಾರು ಮಾಡಿಕೊಳ್ತಿ­ದ್ದೀರಲ್ಲಾ ತಗೊಳ್ಳಿ’ ಅಂತ ಎರಡು ಪುಕ್ಕಗಳನ್ನು ನನ್ನ ನಡುಗುತ್ತಿದ್ದ ಅಂಗೈಯಲ್ಲಿಟ್ಟ. ಅವುಗಳನ್ನು ನೋಡಲು ಮಗಳು ಕಾತರಿಸಿ ತನ್ನ ಕೈಗೆ ತೆಗೆದುಕೊಂಡಳು. ನಾನು ‘ಹುಷಾರು ಕಣೇ, ಗಾಳಿಗೆ ಹಾರಿಹೋದೀತು’ ಎಂದೆ. ನಂತರ ಅಂಗಡಿಯವನಿಗೆ ಥ್ಯಾಂಕ್‌್ಸ ಹೇಳಿ ಅವನ್ನು ಕ್ಷೇಮವಾಗಿ ತಂದು ನನ್ನ ಡೈರಿಯೊಳಗಿಟ್ಟೆ.

‘ನೀವು ಬೆಳಿಗ್ಗೆ ಕುಕ್ಕರಹಳ್ಳಿ ಕೆರೆ ಹತ್ರ ವಾಕಿಂಗ್‌ ಹೋಗ್ತೀರಲ್ಲ, ಅಲ್ಲೇನಾದ್ರೂ ಯಾವುದಾದ್ರೂ ಹಕ್ಕಿಪುಕ್ಕ ಸಿಗಬಹುದು. ನಡೆಯುವಾಗ ಸ್ವಲ್ಪ ಅಕ್ಕಪಕ್ಕ ಕಣ್ಣಾಡಿಸಿ ನೋಡಿ’ ಎಂದು ರಾತ್ರಿ ಮಲಗುವಾಗ ಪತಿಗೆ ದುಂಬಾಲು ಬಿದ್ದೆ.

ದಣಿದು ಬಂದಿದ್ದ ಆತ ‘ಸರಿ’ ಎಂದು ಮಗ್ಗುಲು ತಿರುಗಿದ. ನಾನು ಮಕ್ಕಳ  ಹೊದಿಕೆ ಸರಿಪಡಿಸಿ, ದೀಪ ಆರಿಸಲು ಹೋದಾಗ ಗೋಡೆಗೆ ನೇತುಹಾಕಿದ್ದ ಗೂಡಿನೆಡೆಗೆ ನೋಟ ಹರಿಯಿತು. ಅರೇ, ಆ ಗೂಡು ನನ್ನ ಕಡೆ ನೋಡಿ ತುಂಟ ನಗೆ ಬೀರ್‍ತಿದೆಯೇನೋ ಎನಿಸಿ ನನ್ನ ತುಟಿಯ ಮೇಲೆ ಸಣ್ಣದೊಂದು ಅರಳು.
ಮಾರನೆಯ ದಿನದಿಂದ ನಾನಂತೂ ಓದು, ಬರಹ, ಗೆಳತಿಯರೊಂದಿಗಿನ ಮಾತುಕತೆ ಎಲ್ಲಕ್ಕೂ ವಿರಾಮ ಕೊಟ್ಟು ಹಕ್ಕಿ ಪುಕ್ಕವನ್ನೇ ಧ್ಯಾನಿಸತೊಡಗಿದೆ.

ಬೆಳಿಗ್ಗೆ ವಾಕಿಂಗ್‌ ಹೋಗಿ ಬಂದ ಪತಿ ‘ಒಂದೂ ಪುಕ್ಕ ಸಿಕ್ಕಲಿಲ್ವೆ, ಪುನಃ ನಾಳೆ ಪ್ರಯತ್ನಿಸ್ತೀನಿ’ ಅಂದರು. ನಾನು ಗೆಳತಿಗೆ ಫೋನಾಯಿಸಿದೆ. ಮನೆಯ ಸಮೀಪದಲ್ಲಿ ಲಿಂಗಾಂಬುಧಿ ಕೆರೆ ಇತ್ತು. ಅಲ್ಲೇ ಶಾಲೆಯೊಂದಿತ್ತು. ಆಕೆ ಅಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ‘ವೀಣಾ, ನಿಮ್ಮ ಶಾಲೆ ಪಕ್ಕ ಇರೋ ಕೆರೆ ಹತ್ರ ಕೊಕ್ಕರೆ, ಬಾತುಕೋಳಿ, ಪಾರಿವಾಳ ತುಂಬಾ ಬರ್‍ತಿರುತ್ತೆ, ಯಾಕಂದ್ರೇ ನಾನೊಮ್ಮೆ ಮುಂಜಾನೆ ಪತಿ ಜೊತೆ ವಾಕಿಂಗ್‌ ಹೋದಾಗ ಸುಂದರವಾದ ಬೆಳಗಿನಲ್ಲಿ ಆ ಕೆರೆಯ ನೀರು ಬೆಳ್ಳಗೆ ಹೊಳೀತಿತ್ತು. ಅದರೊಳಗೆ ನಿಶ್ಶಬ್ದವಾಗಿ ಚಲಿಸುತ್ತಿದ್ದ ಬಾತುಕೋಳಿಗಳು, ಒಂದೆಡೆ ನಿಂತು ಧ್ಯಾನಿಸುತ್ತಿದ್ದ ಕೊಕ್ಕರೆಗಳು, ಅಲ್ಲೇ ಮೇಲೆ ಹಾರುತ್ತಿದ್ದ ಬೆಳ್ಳಕ್ಕಿಗಳು...’ ಅಂತಾ ನಾನು ಹೇಳ್ತಿದ್ದ ಹಾಗೇ ಆಕೆ ‘ಹಾಂ ಹೌದು ನೀವು ನಮ್ಮ  ಶಾಲೆಗೊಮ್ಮೆ ಬನ್ನಿ’ ಎಂದಳು. ನಾನು ‘ಬರ್‍ತೀನಿ ವೀಣಾ, ಆದ್ರೆ ಈಗ ಆ ಹಕ್ಕಿಗಳ ಪುಕ್ಕ ಏನಾದ್ರೂ ನಿಮ್ಮ ಕಣ್ಣಿಗೆ ಕಂಡ್ರೆ ತಂದ್ಕೊಡ್ತೀರಾ? ನನ್ನ ಮಗಳಿಗೆ ಅವ್ರ ಶಾಲೆಯಲ್ಲಿ ಹೇಳಿದ್ದಾರೆ’ ಎಂದೆ. ‘ನೋಡ್ತೀನಿ ಸಿಕ್ರೆ ತಂದುಕೊಡ್ತೀನಿ’ ಎಂದ ಆಕೆಗೆ ಥ್ಯಾಂಕ್‌್ಸ ಹೇಳಿ ಫೋನಿಟ್ಟೆ.

ಮತ್ತೊಬ್ಬ ಗೆಳತಿಗೆ ಫೋನ್‌ ಮಾಡಿ ‘ಪುಕ್ಕ ಸಿಕ್ತಾ?’ ಎಂದೆ. ಆಕೆ ‘ಎರಡೋ ಮೂರೋ ಸಿಕ್ಕಿದೆ. ಒಂದು ಕೆಲ್ಸ ಮಾಡೋಣ. ಬೆಳಿಗ್ಗೆ ತಿಂಡಿ ತಿಂದು ಪ್ರಾಣಿ ಸಂಗ್ರಹಾಲಯಕ್ಕೆ ಹೋಗೋಣ. ಅಲ್ಲಿ ದೇಶ ವಿದೇಶದ ಪಕ್ಷಿಗಳಿವೆ. ಅಲ್ಲಿಯ ಕೆಲಸಗಾರರಿಗೆ ಹೇಳಿದ್ರೆ ಆರಿಸಿಕೊಡ್ತಾರೆ ತಂದ್ರಾಯ್ತು’ ಎಂದರು.
ನಾನು ಮೊದಲಿಗೆ  ಸಂತೋಷಗೊಂಡರೂ ಆ ನಂತರ ಏನೂ ಕಷ್ಟಪಡದೇ ಸಂಗ್ರಹಾಲಯದಲ್ಲಿ ಕೂಡಿಹಾಕಿರುವ ಹಕ್ಕಿಗಳು ಉದುರಿಸಿರುವ ಪುಕ್ಕ ತಗೊಂಡು ಪ್ರಾಜೆಕ್‌್ಟ ಮಾಡೋಕೆ ಮನಸ್ಸು ಬರದೇ ಆ ಪ್ರಯತ್ನ ಕೈಬಿಟ್ಟೆ.

ಸಂಜೆ ಮಗಳು ಮನೆಗೆ ಬಂದಾಗ ‘ಎಲ್ರೂ ಐದಾರು ಪುಕ್ಕ ಸಂಗ್ರಹ ಮಾಡಿಬಿಟ್ಟಿದ್ದಾರೆ, ನೀನೆಷ್ಟು ಮಾಡ್ದೆ?’ ಎಂದಳು. ನಾನು ‘ಕೋಳಿಪುಕ್ಕ ಒಂದಾಯ್ತು, ಆಮೇಲೆ ನೋಡು ಕೃಷ್ಣನ ತಲೆಯ ಮೇಲಿರೋ ಆ ನವಿಲುಗರಿ ಎರಡಾಯ್ತು’ ಎಂದೆ ಉತ್ಸಾಹ ತೋರುತ್ತಾ. ಆಕೆ ‘ಅಷ್ಟೇನಾ ಇನ್ನೆರಡೇ ದಿನ ಬಾಕಿ ಇರೋದು...’ ಅಂತ ಅಳಲಿಕ್ಕೆ ಶುರುವಿಟ್ಟಳು. ಅವಳನ್ನು ಸಂತೈಸುತ್ತಾ ‘ಚಿನ್ನಾ, ಕಂದಾ, ನನ್ನ ಬಂಗಾರ ಅಳಬೇಡ ಕಣೋ, ಇನ್ನೆರಡು ದಿನದಲ್ಲಿ ಏಳೂ ಪುಕ್ಕ ಖಂಡಿತಾ ರೆಡಿ ಇರುತ್ತೆ ಪ್ರಾಮಿಸ್‌, ಈಗ ಅಳು ನಿಲ್ಲಿಸು, ತಗೋ ಹಾಲು ಕುಡಿದುಬಿಡು’ ಎಂದೆ ‘ನಿಜವಾಗ್ಲೂ ಸಿಗುತ್ತಾ? ನೀನು ಇನ್ನೊಮ್ಮೆ ಹೇಳು ಏಳೂ ಪುಕ್ಕ ಸಿಗುತ್ತೆ ಅಂತ. ನೀನು ಹೇಳಿದ್ದೆಲ್ಲಾ ಸಾಮಾನ್ಯವಾಗಿ ನಿಜ ಆಗುತ್ತೆ’ ಎಂದವಳಿಗೆ ನಾನು ನಗುತ್ತಾ ‘ಖಂಡಿತಾ ಸಿಗುತ್ತೆ, ನೆಮ್ಮದಿಯಿಂದ ಮಲಕ್ಕೋ, ರಾಮಂ ಸ್ಕಂದಂ ಹೇಳ್ಕೊ’ ಎಂದೆ ತಬ್ಬಿ.

ಬೆಳಿಗ್ಗೆ ಮಳೆ ಬಂದು ನಿಂತಿತ್ತು. ಚುರುಕು ಬಿಸಿಲು ಅಂಗಳದ ಗಿಡಗಳ ಮೇಲೆ, ಹುಲ್ಲಿನ ದಳದ ಮೇಲೆ, ಕಾಲುಚಾಚಿದ ರಸ್ತೆ ಮೇಲೆ ಮನೆ ಮಾಡು ಎಲ್ಲೆಡೆಯೂ ಬೆಳಗುತ್ತಿತ್ತು. ಮಕ್ಕಳನ್ನ ಶಾಲೆಗೆ ಕಳಿಸಿ ಹಳೇ ವಾಷಿಂಗ್‌ ಮೆಶೀನು ಕೊಟ್ಟು ಹೊಸ ತಂತ್ರಜ್ಞಾನದ ಬೇರೆ ಮೆಶೀನು ತಗೊಂಡು ಬರೋಣ ಅಂತ ಗಂಡನೊಂದಿಗೆ ಹೊರಟೆ. ರಸ್ತೆಯುದ್ದಕ್ಕೂ ಕಣ್ಣಾಡಿಸುವುದೇ ಕೆಲಸವಾಯ್ತು. ಬೇರೆ ಧ್ಯಾನವೇ ಇಲ್ಲ ಒಂದೇ ಒಂದು ಪುಕ್ಕನಾದ್ರೂ ಸಿಕ್ಕಿಬಿಟ್ಟಿದ್ರೆ ಆರ್ಕಿಮಿಡೀಸ್‌ ಕೂಗಿಕೊಂಡ ಹಾಗೆ ‘ಯುರೇಕಾ’ ಅಂತ ಜೋರಾಗಿ ಕಿರುಚಿಬಿಡ್ತಿದ್ದೆನೇನೋ. ಆದರೆ ಹಾಗೆ ಕೂಗುವ ಅವಕಾಶವೇ ಬರಲಿಲ್ಲ.

ವಾಷಿಂಗ್‌ ಮೆಶೀನಿನ ಅಂಗಡಿ ತಲುಪಿದ್ದಾಯ್ತು. ಬೇರೆ ಬೇರೆ ಕಂಪೆನಿಗಳ ತಂತ್ರಜ್ಞಾನದ ಮೆಶೀನುಗಳನ್ನ ನೋಡಿದ್ದಾಯ್ತು. ಒಂದಕ್ಕಿಂತ ಒಂದು ಮಾಡೆಲ್‌ ಹೊಸ ತಂತ್ರಜ್ಞಾನದ್ದಾಗಿತ್ತು. ಬಿಸಿನೀರು ಬರುವಂತಹದ್ದು, ಫ್ರಂಟ್‌ಡೋರ್‌ ಇರುವಂಥದ್ದು... ಹೀಗೆ ನೋಡ್ತಾ ಹೋಗುತ್ತಿದ್ದಂತೆಯೇ ಅಂಗಡಿಯ ಮಾಡಿನ ಕಡೆಗೆ ನನ್ನ ಕಣ್ಣು ಹೋಗಿದ್ದಷ್ಟೇ, ಅಲ್ಲೇ ನಿಂತುಬಿಟ್ಟಿತು. ಅದೇ ಸಮಯಕ್ಕೆ ಅಲ್ಲೊಂದು ಪಾರಿವಾಳ ಹಾರ್‍ಕೊಂಡು ಬಂದು ಅಲ್ಲಿದ್ದ ಗೂಡಿಗೆ ಹೋಯಿತು.

ನಾನು ಸಂಭ್ರಮದಿಂದ ಆ ಕಡೆಗೆ ನಡೆದೆ. ಮೇಲೆ ಸಂದುಗೊಂದಿನ ಮೂಲೆಯಲ್ಲಿ ಪಾರಿವಾಳಗಳು ಗೂಡುಗಳನ್ನು ಕಟ್ಟಿದ್ದವು. ಅದನ್ನು ತೋರಿಸಿ ನಾನು ಅಂಗಡಿಯಾತನಿಗೆ ‘ಹಕ್ಕಿಗಳು ದಿನಾ ಇಲ್ಲಿಗೆ ಬರುತ್ತಾ?’ ಅಂದೆ. ‘ಹೌದು’ ಎಂಬಂತೆ ಆತ ತಲೆಯಾಡಿಸಿದ ‘ಸರ್‌ ಇಫ್‌ ಯು ಡೋಂಟ್‌ ಮೈಂಡ್‌, ನಂಗೆ ಆ ಹಕ್ಕಿಯ ಪುಕ್ಕಗಳು ಬೇಕಿತ್ತಲ್ಲಾ, ಇಲ್ಲೇನಾದ್ರೂ ಬಿದ್ದಿದ್ರೆ...’ ಎಂದೆ. ದಢೂತಿಯಾದ ಆತ ಒಂದಿಂಚೂ ಕದಲದೆ ಕೆಲಸಗಾರನೊಬ್ಬನನ್ನು ಕರೆದು ಹುಡುಕಲು ಹೇಳಿದ. ಆತ ಆ ಕಡೆ ಹುಡುಕಿ ಕೊನೆಗೆ ‘ಇಲ್ಲ ಮೇಡಂ. ನಾಳೇನೋ ನಾಡಿದ್ದೋ ಬನ್ನಿ. ಸಿಕ್ರೆ ಎತ್ತಿಟ್ಟಿರ್‍ತೀನಿ’ ಎಂದ. ‘ಆಗಲೂ ಸಿಗದಿದ್ದರೆ...’ ಎಂದೆ. ‘ನೀವು ಪೆಟ್‌ ಪ್ಲಾನೆಟ್‌ಗೆ ಹೋಗಿ ನೋಡಿ ಅಲ್ಲಿ ಸಿಗಬಹುದು’ ಎಂದ ಮಾಲೀಕ. ನಾನು ಬೇಸರದಿಂದ ಮುಖ ಕೆಳಗೆ ಹಾಕಿಕೊಂಡು ಅಂಗಡಿಯೊಳಗೆ ಬಂದೆ. ಪತಿರಾಯನಂತೂ ಸಿಟ್ಟಾಗಿದ್ದರು. ‘ಏನು ಹುಚ್ಚು ಹಿಡಿದಿದೆ ನಿನಗೆ? ವಾಷಿಂಗ್‌ ಮೆಶೀನು ನೋಡಿ ಯಾವುದಾದ್ರೂ ಸೆಲೆಕ್ಟು ಮಾಡೋದು ಬಿಟ್ಟು ಹಕ್ಕಿ ಪುಕ್ಕ ಅಂತ ಹೋಗಿದ್ದೀಯಲ್ಲಾ ಸರಿಹೋಯ್ತು’ ಎಂದರು. ಕೊನೆಗೆ ವಾಷಿಂಗ್‌ ಮೆಶೀನು ಖರೀದಿಸಿ ಅಂಗಡಿಯಿಂದ ಹೊರಬರುವಾಗ ಪೆಟ್‌ ಪ್ಲಾನೆಟ್‌ ವಿಳಾಸ ತೆಗೆದುಕೊಳ್ಳುವುದು ಮರೆಯಲಿಲ್ಲ.

ಸರಿ, ಸಂಜೆ ಗಂಡನೊಂದಿಗೆ ಪೆಟ್‌ ಪ್ಲಾನೆಟ್‌ ಹುಡುಕೋಕೆ ಶುರು ಮಾಡಿದ್ದಾಯ್ತು. ಕುವೆಂಪು ನಗರದ ಡಬಲ್‌ ರೋಡಿನಲ್ಲೇ ಇದ್ದ ಪೆಟ್‌ ಪ್ಲಾನೆಟ್‌ನ್ನು ಹುಡುಕಿ ಹುಡುಕಿ ಸುಸ್ತಾಯಿತು. ಕೊನೆಗೆ ಗಂಡನನ್ನು ‘ಗಾಡಿ ಒಂದು ನಿಮಿಷ ಇಲ್ಲಿ ನಿಲ್ಲಿಸಿ’ ಎಂದೆ. ನಿಲ್ಲಿಸಿದ ಗಾಡಿಯಿಂದ ನೆಗೆದು ಎದುರಿನಲ್ಲಿ ಸಿಕ್ಕ ಮೆಡಿಕಲ್‌ ಶಾಪ್‌ ಹೊಕ್ಕೆ. ಅವರು ‘ಪೆಟ್‌ ಪ್ಲಾನೆಟ್‌ ಮೊದಲು ಇದೇ ರಸ್ತೆಯಲ್ಲಿತ್ತು. ಈಗ ಇಲ್ಲಿಲ್ಲ. ಅದೀಗ ವಿವೇಕಾನಂದ ನಗರದ ಡಿಪೋ ಹತ್ರ ಇದೆಯಂತೆ’ ಎಂದರು. ಮುಂದೆ ನಮ್ಮ ಪಯಣ ಡಿಪೋ ಕಡೆ ಸಾಗಿತು.

ಪತಿಗೆ ನಾನು ‘ನೀವು ಬಲಗಡೆ ಕಣ್ಣಾಡಿಸಿ, ನಾನು ಎಡಗಡೆ ನೋಡ್ತೇನೆ. ಯಾವ ಕಡೆಯಿಂದಾದ್ರೂ ಅಂಗಡಿ ಸಿಗಬಹುದು’ ಎಂದೆ. ಸ್ವಲ್ಪ ದೂರದ ನಂತರ ಪೆಟ್‌ ಪ್ಲಾನೆಟ್‌ ಸಿಕ್ಕೇಬಿಡ್ತು. ಸಡಗರದಿಂದ ಅಂಗಡಿಯೊಳಗೆ ಧಾವಿಸಿದೆ. ಒಳಗೆ ನೋಡಿದರೆ ಪ್ರಾಣಿಪಕ್ಷಿಗಳೇ ಇಲ್ಲ. ಅಂಗಡಿಯಲ್ಲಿದ್ದಾಕೆಗೆ ಖಾಲಿ ಇದ್ದ ಪಂಜರಗಳ ಕಡೆ ತೋರಿಸಿ ‘ಹಕ್ಕಿಗಳನ್ನು ಮಾರೋಲ್ವ?’ ಎಂದೆ. ಆಕೆ ‘ಇತ್ತು ಮೇಡಂ ಖಾಲಿಯಾಗಿವೆ. ಯಾವ ಹಕ್ಕಿ ಬೇಕಿತ್ತು ಹೇಳಿದ್ರೆ ಮುಂದಿನ ವಾರ ತರಿಸಿಕೊಡ್ತೀನಿ’ ಎಂದಳು. ‘ನಂಗೆ ಹಕ್ಕಿ ಬೇಡ, ಹಕ್ಕಿಪುಕ್ಕ ಬೇಕು. ನನ್ನ ಮಗಳಿಗೆ ಅವಳ ಶಾಲೆಯವರು ಹೇಳಿದ್ದಾರೆ ತರಲಿಕ್ಕೆ’ ಎಂದೆ ನಿರಾಸೆಯಿಂದ.

ಅದಕ್ಕೆ ಆಕೆ ‘ಸ್ಸಾರಿ ಮೇಡಂ. ಆದ್ರೆ... ಆ ಕೊನೇ ಪಂಜರದಲ್ಲಿ ಒಂದು ಜೊತೆ ಲವ್‌ಬರ್ಡ್‌್ಸ ಇದೆ ನೋಡಿ’ ಎಂದಳು. ನಾನು ನಿಧಾನವಾಗಿ ಆ ಕಡೆ ಕಾಲುಹಾಕಿದೆ. ಪಂಜರವೊಂದರಲ್ಲಿ ಸುಂದರವಾದ, ಅತಿ ಪುಟ್ಟದಾದ ಒಂದು ಜೊತೆ ಲವ್‌ಬರ್ಡ್‌್ಸಗಳು ಮರದ ಹಲಗೆ ಮೇಲೆ ಕುಳಿತಿದ್ದವು. ಎಂಥಾ ಚಂದ ಇದ್ದಾವಲ್ಲಾ ಎಂದು ನೋಡ್ತಿದ್ದ ಹಾಗೇ ಅಲ್ಲೇ ಕೆಳಗೆ ಅವುಗಳ ಅತಿ ಸಣ್ಣದಾದ ಒಂದೆರಡು ಪುಕ್ಕಗಳು ಉದುರಿದ್ದವು. ನಾನು ಸ್ವಲ್ಪ ಜೋರಾಗೇ ಕೂಗಿಕೊಂಡೆ ‘ಹಾಂ, ಇಲ್ನೋಡಿ ಇಲ್ಲಿ ಪುಕ್ಕಗಳಿವೆ ತೆಗೆದುಕೊಡ್ತೀರಾ ಪ್ಲೀಸ್‌’. ಆಕೆ ತೆಗೆದುಕೊಟ್ಟ ಅತಿ ಚಿಕ್ಕದಾದ ಪುಕ್ಕಗಳೆರಡನ್ನು ವ್ಯಾನಿಟಿಯಲ್ಲಿದ್ದ ಡೈರಿ ತೆಗೆದು ಅದರೊಳಗೆ ಸುರಕ್ಷಿತವಾಗಿ ಇರಿಸಿಕೊಂಡೆ. ‘ಥ್ಯಾಂಕ್ಯೂ ಮೇಡಂ’ ಎಂದೆ ಸಂತೋಷದಿಂದ. ಗಂಡನಿಗೂ ಸಂತೋಷವಾಗಿತ್ತು.

ಮನೆಗೆ ಬಂದ ಮಗಳು ಪುಕ್ಕಗಳ ಬಣ್ಣ ನೋಡಿ ಕುಣಿದಾಡುತ್ತಾ ‘ನಾನೆಷ್ಟೊಂದು ದಿನದಿಂದ ಒಂದು ಪಂಜರ ತಂದಿಟ್ಟುಕೊಂಡು ಹಕ್ಕಿ ಸಾಕೋಣ ಅಂದ್ರೆ ಬೇಡಾ ಅಂತಿದ್ದೆ. ಈಗ ನೋಡು ಎಷ್ಟೊಂದು ಕಷ್ಟ ಆಯ್ತು’ ಎಂದಳು ಮುಗ್ಧತೆಯಿಂದ. ಮಾರನೇ ದಿನ ಶಾಲೆಗೆ ಹೋಗುವಾಗ ‘ನಾಳೇನೇ ಸಬ್‌ಮಿಟ್‌ ಮಾಡ್ಬೇಕಮ್ಮಾ, ಸಂಜೆಗೆ ರೆಡಿಯಾಗಿರಬೇಕು ಆಯ್ತಾ?’ ಅಂತ ಧಮಕಿ ಹಾಕಿ ಹೋದಳು. ಐದನೇ ಕ್ಲಾಸಿನ ಮಕ್ಕಳಿಗೆ ಈ ರೀತಿ ಶಾಲೆಯವರು ತಲೆ ತಿಂದ್ರೆ ದೊಡ್ಡ ದೊಡ್ಡ ಓದು ಓದುವಾಗ ಏನು ಗತಿನಪ್ಪಾ ಭಗವಂತಾ ಅಂದ್ಕೊಂಡು ಹಿರಿ ಮಗಳಿಗೆ ‘ನೀನು ಕಾಲೇಜಿಗೆ ಹೋಗ್ತಿದ್ದೀಯಾ, ಪ್ರಾಜೆಕ್‌್ಟ ವರ್ಕ್‌ ಮಾಡಿಕೊಡು ಅಂತ ತಲೆ ತಿನ್ಬೇಡ. ಅದ್ಯಾರೋ ದುಡ್ಡು ತಗೊಂಡು ಮಾಡಿಕೊಡ್ತಾರಲ್ಲಾ ಅವರ ಕೈಲಿ ಮಾಡಿಸು ನಿನ್ನ ಕೈಲಿ ಮಾಡ್ಲಿಕ್ಕೆ ಸಾಧ್ಯವಾಗದೇ ಇರೋದನ್ನ’ ಎಂದೆ. ಆಕೆ ನನ್ನ ಟೆನ್ಷನ್‌ ನೋಡಿ ನಕ್ಕಳು. ಅಷ್ಟರಲ್ಲಿ ವಾಕಿಂಗ್‌ ಮುಗಿಸಿ ಬಂದ ಪತಿರಾಯರ ಕೈಯಲ್ಲಿ ಕಾಗೆ ಪುಕ್ಕವಿತ್ತು.

‘ವಾಕಿಂಗ್‌ ಮುಗಿಸಿ ಅಲ್ಲೇ ಮರದ ಕೆಳಗೆ ವ್ಯಾಯಾಮ ಮಾಡ್ತಿದ್ದೆ. ಅಲ್ಲಿ ಈ ಪುಕ್ಕ ಕಂಡೆ. ನೋಡಿದ ತಕ್ಷಣ ಬಂಗಾರವೇ ಸಿಕ್ಕ ಹಾಗೆ ಬಾಚಿ ಲಬಕ್ಕನೇ ಕೈಗೆ ತೆಗೆದುಕೊಂಡೆ. ಯಾರೋ ಬೀಳಿಸಿ ಹೋದ ಹಣವನ್ನೋ ಬೆಲೆ ಬಾಳುವ ವಸ್ತುವನ್ನೋ ಯಾರಿಗೂ ಕಾಣದಂತೆ ನಾನು ತೆಗೆದುಕೊಂಡೆನೇನೋ ಎಂಬ ರೀತಿಯಲ್ಲಿ ನನ್ನನ್ನು ಸುತ್ತಮುತ್ತಲಿನ ಜನ ನೋಡ್ತಿದ್ರು’ ಎಂದವರಿಗೆ ‘ಬೇರೆಯವರು ಏನಾದ್ರೂ ಅಂದುಕೊಳ್ಳಲಿ ಮಾರಾಯ ಪುಕ್ಕ ಅಂತೂ ಸಿಕ್ತಲ್ಲ’ ಅಂತ ಕೈಗೆ ತೆಗೆದುಕೊಂಡೆ. ಮತ್ತೆ ‘ಬೊಂಬೂ ಬಜಾರ್‌ ಹತ್ರ ಇರೋ ಪೌಲ್ಟ್ರಿ ಫಾರಂಗೆ ಸಂಜೆ ಹೋಗಿ ಬನ್ನಿ, ಪುಕ್ಕ ಸಿಗಬಹುದು ಮರೀಬೇಡಿ’ ಎಂದು ಎಚ್ಚರಿಸಿದೆ.

ರಾತ್ರಿ ಪತಿ ಮನೆಗೆ ಬಂದಾಗ ಲೇಟಾಗಿತ್ತು. ಆತನ ಕೈಯ್ಯಲ್ಲಿ ಎರಡು ಪುಕ್ಕ ಇದ್ದವು. ‘ಆ ಪೌಲ್ಟ್ರಿ ಫಾರಂನವ ಬಹಳ ಗಡಸು ವ್ಯಕ್ತಿ. ಇಲ್ಲಿ ಪುಕ್ಕಾನೂ ಇಲ್ಲ ಎಂಥಾದ್ದೂ ಇಲ್ಲ’ ಅಂದ. ಅಲ್ಲೇ ಇದ್ದ ಸಾಬರ ಹುಡುಗಿ, ಬಹುಶಃ ನಮ್‌ ಪಾಪೂ ವಯಸ್ಸಿನದ್ದು. ಆತನಿಗೆ ಕಾಣದ ಹಾಗೆ ಒಳಗೆ ಹೋಗಿ ಪಾರಿವಾಳದ ಎರಡು ಪುಕ್ಕಗಳನ್ನು ತಂದುಕೊಡ್ತು ಕಣೇ’ ಎಂದ ಗಂಡನ ಶ್ರಮಕ್ಕೆ ಸೆಲ್ಯೂಟ್‌ ಹೊಡೆ­ಯುತ್ತಾ ಆ ಗರಿಗಳನ್ನು ನನ್ನ ಅಂಗೈಗೆ ತೆಗೆದುಕೊಂಡೆ. ಗರಿಯೊಳಗೆ ಆ ಮಗುವಿನ ಮುಖ ಕಾಣಿಸಿದಂತಾಗಿ ಕೆನ್ನೆಗೆ ಒತ್ತಿಕೊಂಡೆ. ಹಿರಿಯ ಮಗಳೂ ತನ್ನ ಶಾಲೆ ಸುತ್ತ­ಮುತ್ತ ಮತ್ತೊಂದು ಗರಿ ಸಂಪಾದಿಸಿ ತಂದಿದ್ದಳು. ಕೊನೆಗೂ ಏಳು ವಿಧದ ಹಕ್ಕಿಗಳ ಪುಕ್ಕಗಳೂ ಸಿಕ್ಕಿದ್ದವು. ಅವನ್ನು ಕಾರ್ಡ್‌ಬೋರ್ಡ್‌ ಶೀಟಿನ ಮೇಲೆ ಅಂಟಿಸಿ ಆ ಪುಕ್ಕದ ಹಕ್ಕಿಯನ್ನು ಹೆಸರಿಸಿ, ಅದರ ಬಗ್ಗೆ ಒಂದೆರಡು ಸಾಲು ವಿವರಿಸಿ, ಬಣ್ಣ­ಬಣ್ಣದ ಇಂಕಿನಲ್ಲಿ ಸುತ್ತಲೂ ಚಿತ್ತಾರವನ್ನು ಮಾಡಿಸಿ ಶಾಲೆಗೆ ಕಳಿಸಿಕೊಟ್ಟೆ. ಮಗಳು ನೆಮ್ಮದಿಯಿಂದ ಶಾಲೆಗೆ ಹೋದಳು. ಪತಿ, ಮಕ್ಕಳೆಲ್ಲ ಹೊರಗೆ ಹೊರಟ ನಂತರ ಇತ್ತ ನಾನು ನೆಮ್ಮದಿಯಿಂದ ಮನೆಗೆಲಸ ಮುಗಿಸಿ ಓದಿನಲ್ಲಿ ಮುಳುಗಿದೆ.

ಮಧ್ಯಾಹ್ನ ಗೆಳತಿಯ ಫೋನು ‘ನಂಗೊಂದು ಸಹಾಯ ಬೇಕು ಕಣೇ’ ಎಂದಳು. ‘ಏನಪ್ಪಾ ನನ್ನಿಂದಾಗೋ ಅಂಥಾದ್ದು’ ಎಂದೆ. ‘ಏನಿಲ್ಲ, ಕಷ್ಟದ್ದಲ್ಲ. ಗುಬ್ಬಚ್ಚಿ ಏನಾದ್ರೂ ನಿಮ್ಮ ಏರಿಯಾದಲ್ಲಿ ಕಾಣುತ್ತಾ? ಕಂಡ್ರೆ ಆ ಸ್ಥಳದ ವಿವರಗಳು ಬೇಕು’ ಎಂದಳು. ನಾನು ‘ಯಾಕೆ?’ ಎಂದೆ. ಅದಕ್ಕೆ ಅವಳು ‘ಕಣ್ಮರೆಯಾಗ್ತಿರೋ ಗುಬ್ಬಚ್ಚಿಗಳ ಬಗ್ಗೆ ನನ್ನ ಬ್ಲಾಗಲ್ಲಿ ಬರೀತಿದ್ದೇನೆ’ ಎಂದಳು. ನಾನು ‘ಇಷ್ಟು ದಿನ ಹಕ್ಕಿ ಪುಕ್ಕ ಹುಡ್ಕಿ ಹುಡ್ಕಿ ಸಾಕಾಯ್ತು, ಈಗ ನೀನು ಹಕ್ಕೀನೇ ಹುಡ್ಕೊಡು ಅಂತಿದ್ದೀ... ಸರಿ ನೋಡಿ ಫೋನು ಮಾಡ್ತೇನೆ’ ಎಂದು ಫೋನಿಟ್ಟೆ. ಮೊಬೈಲ್‌ ತರಂಗಗಳ ಹಾವಳಿಗೆ ಸಿಲುಕಿ ಗುಬ್ಬಚ್ಚಿಗಳು ನಾಶವಾಗ್ತಿವೆ ಎಂಬ ಕೂಗು ಕೇಳಿದ್ದೆ. ನಾನೂ ಗಮನಿಸಿದ್ದಂತೆ ಮನೆಯ ಮುಂದೆ ಇದ್ದ ಗಿಡಮರಗಳಲ್ಲಿ ಬಣ್ಣ ಬಣ್ಣದ ಹಲವಾರು ಸುಂದರ ಹಕ್ಕಿಗಳನ್ನು ಕಾಣುತ್ತಿದ್ದೆ ಗುಬ್ಬಚ್ಚಿಯ ಹೊರತಾಗಿ.

ಕೆಲವು ತಿಂಗಳುಗಳ ನಂತರ ಕೆಳಗಿನ ಮನೆಯಿಂದ ಮೇಲಿನ ಮನೆಗೆ ಶಿಫ್‌್ಟ ಆದೆವು. ಸ್ವಲ್ಪ ದಿನಗಳು ಕಳೆದವು. ಮಧ್ಯಾಹ್ನ ಕಿಟಕಿಯ ಮೇಲೆ ಹಕ್ಕಿಗಳು ಕುಳಿತುಕೊಂಡಿರುವುದನ್ನು ಗಮನಿಸಿದೆ. ಸೂಕ್ಷ್ಮವಾಗಿ ನೋಡಿದಾಗ ಅರೇ! ಅವು ಗುಬ್ಬಚ್ಚಿಗಳು! ನಾನು ಜೋರಾಗಿ ಕಿರುಚಿದೆ. ಸಂತಸದಿಂದ ಮಕ್ಕಳಿಗೆ ಕರೆದು ತೋರಿಸಿದೆ. ಅವರೆಕಾಯಿ ಕಾಲದಲ್ಲಿ ನಾವೆಲ್ಲಾ ಅವರೆಕಾಯಿ ಬಿಡಿಸಿ ಒಳಗೆ ಸಿಕ್ಕ ಹುಳುಗಳನ್ನು ಹೊರಗೆ ಎಸೆದರೆ ಅವನ್ನು ತಿನ್ನಲು ಅನೇಕ ಗುಬ್ಬಚ್ಚಿಗಳು ಹಾರಿಕೊಂಡು ಬಂದು ಕೊಕ್ಕಿನಲ್ಲಿ ಕೊಂಡೊಯ್ಯುತ್ತಿದ್ದವು. ನಮ್ಮಜ್ಜಿ ಅಂತೂ ‘ನೋಡೀಗ ಗುಬ್ಬಚ್ಚಿಗಳಿಗೆ ಹಬ್ಬ’ ಅನ್ನೋರು.

ಅಮ್ಮ ಗೌರಿ ಹಬ್ಬದ ಹೊತ್ತಲ್ಲಿ ಗಂಗೆ ಪೂಜೆ ಮಾಡೋವಾಗ ಅಂಗಳದಲ್ಲಿದ್ದ ಬಾವಿಗೆ ಬಾಗಿನ ಅರ್ಪಿಸುವ ಹೊತ್ತಿನಲ್ಲಿ, ಬಾವಿಯ ಒಳಗೆ ಕಲ್ಲಿನ ಪೊಟರೆಯೊಳಗೆ ಗೂಡು ಕಟ್ಟಿಕೊಂಡಿರುತ್ತಿದ್ದ ಗುಬ್ಬಿಗಳು ಪುರ್ರನೆ ಹೊರಗೆ ಹಾರಿ ಬರುವುದು ನೋಡಲು ಸುಂದರ ದೃಶ್ಯವಾಗಿ ಕಾಣುತ್ತಿತ್ತು.

ಕೆಲ ದಿನಗಳ ಹಿಂದೆ ಮನೆಯ ಮಾಡಿಗೆ ಗೆಳತಿ ಕೊಟ್ಟಿದ್ದ ಗೂಡು ನೇತುಹಾಕಿ ನೀರಿಟ್ಟಿದ್ದೆವು. ಬೇರೆ ಹಕ್ಕಿಗಳು ಬಂದರೂ ಗುಬ್ಬಿಗಳ ಸುಳಿವಿರಲಿಲ್ಲ. ಕವಿಗಳು, ಪರಿಸರಪ್ರಿಯರು ಸಾಧು ಗುಬ್ಬಚ್ಚಿಗಳ ಇಂದಿನ ಅವಸ್ಥೆ ಬಗ್ಗೆ ದೊಡ್ಡ ದೊಡ್ಡ ಸಂಶೋಧನೇನೇ ನಡೆಸುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅನೇಕ ಗುಬ್ಬಚ್ಚಿಗಳು ಬಂದು ಕಿಟಕಿಯ ಮೇಲೆ ಕೂತು ನಾನು ಹಾಕಿದ್ದ ಧಾನ್ಯಗಳನ್ನು ತಿಂದು ಹಾರಾಡ್ತಿರುವುದನ್ನು ಕಂಡು ಅಚ್ಚರಿಗೊಂಡೆ.
ಹಕ್ಕಿ ಪುಕ್ಕಕ್ಕಾಗಿ ಅಲೆದಾಡಿದ್ದೆ. ಹಕ್ಕಿಯೇ ನನ್ನನ್ನು ಹುಡುಕಿಕೊಂಡು ಬಂದಿತಲ್ಲಾ! ಅದೂ ಗುಬ್ಬಚ್ಚಿ ಆಹಾ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT