ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಬಿಡುಗಡೆಗೆ ಕೈ ಕೊಟ್ಟ ನೆಟ್ಟಿಗರು..!

Last Updated 24 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ಮೊನ್ನೆ ನನ್ನ ಪತ್ರಕರ್ತ ಮಿತ್ರನೊಬ್ಬನ ಪುಸ್ತಕ ಬಿಡುಗಡೆ ಸಮಾರಂಭವಿತ್ತು. ಆತ ಒಂದು ದಿನ ಮುಂಚೆಯೇ ಕಾರ್ಯಕ್ರಮ ನಡೆಯುವ ಹಾಲ್‍ನ ಒಪ್ಪ ಓರಣ ಮಾಡಿಸಿದ್ದ. ಆಹ್ವಾನಿತರಿಗಾಗಿ ಸುಮಾರು 200 ಕುರ್ಚಿಗಳ ವ್ಯವಸ್ಥೆ ಮಾಡಿದ್ದ. ಸೂಸ್ಲಾ, ಮಿರ್ಚಿ ಜೊತೆಗೆ ಖಡಕ್ ಶುಂಟಿ ಚಹಾದ ವ್ಯವಸ್ಥೆಯಿತ್ತು. ಆತನ ಮಹತ್ವಾಕಾಂಕ್ಷೆಯ ಕೃತಿ ಬಿಡುಗಡೆಯಾಗುವದಿತ್ತು. ಹೀಗಾಗಿ ನಾಡಿನ ಹಿರಿಕಿರಿಯ ಲೇಖಕರನ್ನು ಆಮಂತ್ರಿಸಿದ್ದ. ಎಲ್ಲರೂ ಬರಲು ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿದ್ದರು. ಶುಭಾಶಯಗಳ ಸುರಿಮಳೆಯೊಂದಿಗೆ ಹಲವಾರು ರೀತಿ ಪ್ರೋತ್ಸಾಹಕರ ಕಮೆಂಟ್‍ಗಳನ್ನು, ಎಮೋಜಿಗಳನ್ನು ಹಾಕುವ ಮೂಲಕ ಎಫ್‍ಬಿ ಫ್ರೆಂಡ್ಸ್, ವ್ಯಾಟ್ಸ್‌ಅಪ್ ಗ್ರೂಪ್‍ ಸದಸ್ಯರು ದೊಡ್ಡ ರೀತಿಯ ಬೆಂಬಲ ಸೂಚಿಸಿದ್ದರು. ಫೇಸ್‌ಬುಕ್‌ನಲ್ಲಿ ಸುಮಾರು 400 ಕಮೆಂಟ್‍ಗಳು, 2000ದಷ್ಟು ಲೈಕ್‍ಗಳು ಬಂದಿದ್ದವು. ಶಿವಮೊಗ್ಗ, ಬೆಂಗಳೂರು, ಮೈಸೂರು ಮುಂತಾದ ಕಡೆಯ ಕವಯತ್ರಿಯರು, ಘಟ್ಟದ ಕಡೆಯ ಕಾವ್ಯಕನ್ನಿಕೆಯರು ‘ಹಾಂ.. ಬರುವಾ.., ನಿಮ್ಮ ಕತೆಗಳು ತುಂಬಾ ಛಂದಾ ಉಂಟು. ನಾವ್ ಬರ್ತೆ’ ಎಂದು ಹೇಳಿ ಇವನ ಎದೆಯಲ್ಲಿ ಅವಲಕ್ಕಿ ಕುಟ್ಟಿದ್ದರು. ಹೀಗಾಗಿ ನನ್ನ ಕಿರಿಯ ಮಿತ್ರನ ಎದೆ ಹಿಗ್ಗಿ 56 ಇಂಚು ಆಗಿತ್ತು. ತುಸು ಹೆಚ್ಚೇ ಹುರುಪುಗೊಂಡಿದ್ದ.

ಅವನು ಹಿಂದಿನ ದಿನವೇ ಮೆನ್ಸ್ ಬ್ಯೂಟಿ ಪಾರ್ಲರ್‌ಗೆ ಹೋಗಿ ಹೇರ್ ಕಟಿಂಗ್, ಫೇಸ್ ಮಸಾಜ್, ಫೇಸ್ ಪ್ಯಾಕ್ ಮಾಡಿಸಿಕೊಂಡು ಮದುಮಗನಂತೆ ರೆಡಿಯಾಗಿದ್ದ. ನಮ್ಮ ಉತ್ತರ ಕರ್ನಾಟಕದ ಕಡೆ ಏನಾದರೂ ಶಾಸ್ತಿ, ಅಥವಾ ತಕ್ಕ ಪಾಠ ಕಲಿಸುವುದಿದ್ದರೆ ‘ನಿನ್ನ ಮದುವಿನ ಮಾಡ್ತೈನಿ ಮಗನ’ ಎಂದು ಚೇಡಿಸುವ ಮಾತಿದೆ. ಮದುಮಗನಂತೆ ಶಿಂಗಾರಗೊಂಡ ನನ್ನ ಗೆಳೆಯನ ಪುಸ್ತಕ ಬಿಡುಗಡೆ ಎಂಬ ಮದುವೆಯೇ ಅಂದು ನಡೆಯುವದಿತ್ತು.

ಅವನ ಮೂಲ ಊರು ಕೊಪ್ಪಳ ಜಿಲ್ಲೆಯ ಒಂದು ಹಳ್ಳಿ. ಆದರೆ ಆತ ಕಲಿತದ್ದು, ವೃತ್ತಿ ಆರಂಭಿಸಿದ್ದು ಧಾರವಾಡದಲ್ಲಿ. ಮೇಲಾಗಿ ಧಾರವಾಡ ಒಂದು ಸಾಂಸ್ಕಂತಿಕ ರಾಜಧಾನಿ, ಉಕ ಜಿಲ್ಲೆಗಳಿಗೆ ಕೇಂದ್ರ ಸ್ಥಾನ. ಹೀಗಾಗಿ ಧಾರವಾಡದಲ್ಲಿ ಪುಸ್ತಕ ಬಿಡುಗಡೆ ಇಟ್ಟುಕೊಂಡರೆ ಒಳ್ಳೆಯ ಪೋಕಸ್, ಕವರೇಜ್ ಪುಸ್ತಕಕ್ಕೆ ಸಿಗುತ್ತದೆ. ಸಾಹಿತ್ಯ ಲೋಕದಲ್ಲಿ ನನ್ನ ಕಥಾ ಸಂಕಲನ ದೊಡ್ಡಮಟ್ಟದ ಹೆಸರು ಮಾಡುತ್ತದೆ. ಪ್ರಶಸ್ತಿ ಪುರಾಸ್ಕರಗಳು ಹುಡುಕಿಕೊಂಡು ಬಂದು, ನಾನೊಬ್ಬ ಮಹತ್ವದ ಸಾಹಿತಿಯಾಗಿ ನಾಡಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಮಹದಾಸೆಯನ್ನು ಇಟ್ಟುಕೊಂಡಿದ್ದ.

ಕಾಲಕಾಲಕ್ಕೆ ನನ್ನ ಹಲವು ಕೃತಿಗಳನ್ನು ಬಿಡುಗಡೆ ಮಾಡಿ ಮೆರೆದಿದ್ದ ನನಗೆ, ಇದೊಂದು ನಾಲ್ಕು ದಿನದ ಸಂಭ್ರಮ ಮತ್ತು ಭ್ರಮೆ ಹಾಗೂ ಕಾಲಮಾನದ ಹಳವಂಡ ಎಂಬುದು ಅನುಭವಕ್ಕೆ ಬಂದಿತ್ತು. ಚೊಚ್ಚಲ ಬಸುರಿಯಾಗಿ ಹೆರಿಗೆಯ ಬೇನೆ ತಿನ್ನುತ್ತಿರುವವಳಿಗೆ ಅವಳದೇಯಾದ ತವಕ, ನಿರೀಕ್ಷೆಗಳು ಇರುತ್ತವೆ. ಅಂಥ ಸಂದರ್ಭದಲ್ಲಿ ಬಲೂನಿಗೆ ಪಿನ್ನು ಚುಚ್ಚಿ ಟುಬ್ಬ್ ಎನ್ನಿಸುವುದು ಬೇಡ ಎಂದು ಅವನೊಂದಿಗೆ ಸುಮ್ಮನೆ ಸಾಥ್‌ ನೀಡಿದ್ದೆ.

ಅತಿಥಿ‌ಗಳ ಆಗಮನಕ್ಕೆ ಸನ್ನದ್ದವಾಗಿ ನಿಂತಿದ್ದ ನನ್ನ ಗೆಳೆಯ. ಕೆಲವು ಸೆಲಿಬ್ರಿಟಿ ಸಾಹಿತಿಗಳಿಗೆ ಹೈಟೆಕ್ ಲಾಜಿಂಗ್‍ನಲ್ಲಿ ಉಳಿಯುವ ವ್ಯವಸ್ಥೆ ಮಾಡಿದ್ದ. ಬೆಂಗಳೂರು ಸೇರಿದಂತೆ ಬೇರೆ ಕಡೆಯಿಂದ ಬಂದು ಹೋಗುವ ಅತಿಥಿಗಳಿಗೆ ಪ್ರಯಾಣದ ವ್ಯವಸ್ಥೆ ಮಾಡಿಸಿದ್ದ. ಇನ್ನು ಆಹ್ವಾನಿತರು ವ್ಯಾಟ್ಸಾಪ್, ಫೇಸ್ ಬುಕ್‍ನಲ್ಲಿಯೇ ಹೊರಟು ಬರುವ ಭರವಸೆ ನೀಡಿದ್ದರು.

ಮುಂಜಾನೆಯಿಂದ ಕಾತರದಿಂದ ಕಾಯುತ್ತಿದ್ದ ಸಮಯ ಹತ್ತಿರ ಬಂದೇಬಿಟ್ಟಿತು. ಹೋಟೆಲ್‌ಗಳಲ್ಲಿ ತಂಗಿದ್ದ ಮುಖ್ಯ ಅತಿಥಿಗಳನ್ನು ಸಮಾರಂಭಕ್ಕೆ ಕರೆದು ತಂದೆವು. ಜನ ಆಗ ಬರುತ್ತಾರೆ ಈಗ ಬರುತ್ತಾರೆ ಎಂದು ಸಭಾಂಗಣದ ಹೊರಗೆ ಹರಟೆ ಹೊಡೆಯುತ್ತ ಕಾಯುತ್ತಿದ್ದೆವು. ಆಹ್ವಾನಿತ ಸಾಹಿತ್ಯ ಬಳಗದ ಮುಖಗಳೇ ಕಾಣುತ್ತಿಲ್ಲ!

ಸಭಾಂಗಣ ಬಸ್ ಸ್ಟ್ಯಾಂಡ್ ಹತ್ತಿರವೇ ಇದ್ದ ಕಾರಣ ಬಸ್‍ಗಾಗಿ ಕಾಯುತ್ತಿರುವವರು, ‘ಇಷ್ಟು ಬೇಗ ಮನೆಗೆ ಹೋಗಿ ಏನು ಮಾಡುವುದು. ಸಂಘದ ಹಾಲ್‍ನಲ್ಲಿ ಏನಾದರೂ ಕಾರ್ಯಕ್ರಮಗಳು ಇದ್ದೇ ಇರುತ್ತವೆ, ಸಂಜೆಯ ಚಹಾ, ನಾಸ್ಟಾಕ ಏನು ಕೊರತೆ ಇರುವುದಿಲ್ಲ’ ಎಂದು ಸಭಾಂಗಣಕ್ಕೆ ಬಂದವರು ಹತ್ತಿಪ್ಪತ್ತು ಮಂದಿ. ಒಟ್ಟಾರೆ, ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಮರಳಿ ಹೋಗಲು ಅನುಕೂಲವಾಗಲೆಂದು ಕಾರ್ಯಕ್ರಮ ಆರಂಭ ಮಾಡಲಾಯಿತು.

ಧಾರವಾಡದಲ್ಲಿಯೇ ಇದ್ದ ಎಂಟಹತ್ತು ಗೆಳೆಯರನ್ನು ಹೊರತುಪಡಿಸಿದರೆ ಬರುತ್ತೇನೆಂದ ಫೇಸ್‍ಬುಕ್ ವಾಟ್ಸ್ಯಾಪ್‌ ಕಮೆಂಟ್‍, ವಾಟ್ಸ್ಯಾಪ್‌ ಆನ್‍ಲೈನ್ ಇಟ್ಟುಕೊಂಡ ತಮ್ಮ ಊರುಗಳಲ್ಲಿಯೇ ಕುಕ್ಕರು ಬಡಿದಿದ್ದರು.

ಅಂತೂ ಪುಸ್ತಕ ಬಿಡುಗಡೆ ನಿರಾತಂಕವಾಗಿ ನಡೆಯಿತು. ಪುಸ್ತಕದ ಕುರಿತು ಕಾಲಿ ಕುರ್ಚಿಗಳಿಗೆ ಸೋದಾಹರಣವಾಗಿ ಅತಿಥಿಗಳು ತಿಳಿಸಿಕೊಟ್ಟರು. ಆದರೆ ಕೃತಿಕಾರ ನನ್ನ ಗೆಳೆಯ ಫಸ್ಟ್ ನೈಟ್‍ನಲ್ಲಿ ಬಾಗಿಲಲ್ಲಿಯೇ ಜಾರಿಬಿದ್ದ ಗಾಯಾಳುವಿನಂತೆ ಆಗಿದ್ದ. ಪಾಪ ಅವನ ಸೋತು ಸುಣ್ಣವಾದ ಮುಖವನ್ನು ನನಗೆ ನೋಡಲಾಗಲಿಲ್ಲ. ‘ಈ ವಾಟ್ಸ್ಯಾಪ್‌, ಫೇಸ್‍ಬುಕ್‍ನಲ್ಲಿ ಕಾಲ ಕಳೆಯುವ ಪಾಲ್ತು ಜನರನ್ನು ನಂಬಬೇಡ. ಅವರು ಸತ್ತ ಹೆಣಕ್ಕ ಆಗುದಿಲ್ಲ, ಅಟ್ಟ ಅಡಿಗಿಗೆ ಆಗುದಿಲ್ಲ’ ಎಂದು ಹಿರಿಯ ಸಾಹಿತಿಯೊಬ್ಬರು ನನ್ನ ಗೆಳೆಯನಿಗೆ ಉ(ಖ)ಚಿತ ಸಲಹೆ ನೀಡುತ್ತಿದ್ದರು. ನೆಟ್ಟಿಗರು ಕೈ ಕೊಟ್ಟಿದ್ದು ನನ್ನ ಗೆಳೆಯನ ಮುಖವನ್ನು ಮಂಕಾಗಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT