ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು | ಟೊಮೆಟೊ ಕೃಷಿಯಲ್ಲಿ ಲಾಭ ಕಂಡ ಕೃಷಿಕ ಸಾಧಿಕ್‌

ಕೊಂಡ್ಲಹಳ್ಳಿ ಜಯಪ್ರಕಾಶ
Published 8 ಮೇ 2024, 7:13 IST
Last Updated 8 ಮೇ 2024, 7:13 IST
ಅಕ್ಷರ ಗಾತ್ರ

ಮೊಳಕಾಲ್ಮುರು: ನೀರಿನ ಕೊರತೆ ಹಾಗೂ ಬಿಸಿಲಿನ ಸಮಸ್ಯೆ ಮಧ್ಯೆಯೂ ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ರೈತರೊಬ್ಬರು ಟೊಮೆಟೊ ಕೃಷಿ ಕೈಗೊಂಡು ಉತ್ತಮ ಲಾಭ ಕಾಣುತ್ತಿದ್ದಾರೆ.

ಗ್ರಾಮದ ಮೊಹಿಯುದ್ದೀನ್‌ ಸಾಬ್ ಅವರ ಪುತ್ರ ಸಾಧಿಕ್‌ ಸಾಧನೆ ಮಾಡಿರುವ ಕೃಷಿಕ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ತಮ್ಮ ಜಮೀನಿನಲ್ಲಿ ಅವರು ನಿರಂತರವಾಗಿ ಟೊಮೆಟೊ ಕೃಷಿ ಮಾಡುತ್ತಾ ಬಂದಿದ್ದಾರೆ.

‘ಎರಡು ಎಕರೆ ಜಮೀನಿನಲ್ಲಿ ‘ಸಾಹೋ’ ತಳಿಯ ಟೊಮೆಟೊ ನಾಟಿ ಮಾಡಿದ್ದೆ. ಎಕರೆಗೆ 6,000 ಸಸಿಗಳಂತೆ 2 ಎಕರೆಯಲ್ಲಿ 12,000 ಸಸಿಗಳನ್ನು ನಾಟಿ ಮಾಡಬೇಕು. ಆದರೆ ನಾನು 2 ಎಕರೆಯಲ್ಲಿ 10,600 ಸಸಿಗಳನ್ನು ಮಾತ್ರ ನಾಟಿ ಮಾಡಿದ್ದೆ. ಎಕರೆಗೆ 15 ಕೆ.ಜಿ. ತೂಕವಿರುವ 3,000-3,500 ಬಾಕ್ಸ್‌ ಟೊಮೆಟೊ ಹಣ್ಣಿನ ಇಳುವರಿ ಬರುತ್ತದೆ. 2 ಎಕರೆಯಿಂದ ಒಟ್ಟು 11,000 ಬಾಕ್ಸ್‌ ಇಳುವರಿ ಸಿಕ್ಕಿದೆ. ತಲಾ ಬಾಕ್ಸ್‌ಗೆ ₹ 300-₹ 450ವರೆಗೂ ದರ ಸಿಕ್ಕಿತು. ಈ ಮೂಲಕ ₹ 10 ಲಕ್ಷಕ್ಕೂ ಹೆಚ್ಚು ಆದಾಯ ಸಿಕ್ಕಿದೆ’ ಎಂದು ರೈತ ಸಾಧಿಕ್‌ ವಿವರಿಸಿದರು.

ಟೊಮೆಟೊ ಕೃಷಿಗಾಗಿ ನೆಲ ಸಮತಟ್ಟು ಮಾಡಲು, ಹನಿ ನೀರಾವರಿ, ಕಟ್ಟಿಗೆ, ವೈರು, ಬೀಜ, ಗೊಬ್ಬರ, ಔಷಧ ಸೇರಿ ಅಂದಾಜು ₹ 1.50 ಖರ್ಚು ಬರುತ್ತದೆ. ಸಾಹೋ ತಳಿಯು ರಪ್ತು ಗುಣಮಟ್ಟ ಹೊಂದಿದೆ. ಜತೆಗೆ ದೀರ್ಘ ಬಾಳಿಕೆ ಬರುವ ಕಾರಣ ಬೇರೆ ತಳಿಗಳಿಗೆ ಹೋಲಿಸಿದಲ್ಲಿ ರೈತಸ್ನೇಹಿಯಾಗಿದೆ. ಮಾರುಕಟ್ಟೆ ಸಮಸ್ಯೆ ಇರುವುದಿಲ್ಲ. ನಮ್ಮ ರಾಜ್ಯದ ಬೇರೆ ನಗರದ ಮಾರುಕಟ್ಟೆಗಳಿಗೆ ಕಳುಹಿಸಲು ಈ ತಳಿ ಉತ್ತಮವಾಗಿದೆ ಎಂದು ತಿಳಿಸಿದರು.

‘ನಾವು ಹೆಚ್ಚಾಗಿ ಸಗಣಿ ಗೊಬ್ಬರ ಬಳಕೆ ಮಾಡಿದ್ದೇವೆ. ಇದರ ಜತೆಗೆ ಸ್ವಲ್ಪ ಕೋಳಿ ಗೊಬ್ಬರವನ್ನೂ ಹಾಕಿದ್ದೆವು. ಟೊಮೆಟೊ ಸಸಿಗಳನ್ನು ನಾಟಿ ಮಾಡುವುದಕ್ಕಿಂಲೂ ಮೊದಲು ನೆಲವನ್ನು 3-4 ಸಲ ಚೆನ್ನಾಗಿ ಉಳುಮೆ ಮಾಡಿಸಲಾಗಿತ್ತು. ಸಾಹೋ ತಳಿಯ ಸಿಜೆಂಟಾ ಕಂಪನಿ ಸಸಿಗಳನ್ನು ಆಯ್ಕೆ ಮಾಡಲಾಯಿತು. ಟೊಮೆಟೊ ಸಸಿಗಳು ಅತ್ಯಂತ ಸೂಕ್ಷವಿರುವ ಕಾರಣ ಮಕ್ಕಳಂತೆ ಪೋಷಣೆ ಮಾಡಬೇಕು. ಪ್ರತಿನಿತ್ಯ ತೋಟದಲ್ಲಿ ಓಡಾಡಿ ಗಿಡಗಳನ್ನು ವೀಕ್ಷಣೆ ಮಾಡಬೇಕು. ಯಾವುದಾದರೂ ಸಣ್ಣ ರೋಗ ಕಾಣಿಸಿಕೊಂಡರೂ ನಿರ್ಲಕ್ಷ್ಯ ಮಾಡದೇ ತಕ್ಷಣ ಪರಿಹಾರ ಕಂಡುಕೊಳ್ಳಬೇಕು’ ಎಂದು ಸಾಧಿಕ್‌ ಹೇಳಿದರು.

‘ಪ್ರತಿ 4-5 ದಿನಗಳಿಗೊಮ್ಮೆ ಗಿಡಗಳಿಗೆ ಮಿಶ್ರಣ, ಔಷಧಗಳ ಸಿಂಪಡಣೆ ಮಾಡುವುದು ಕಡ್ಡಾಯ. ಇದರಿಂದ ಯಾವುದೇ ರೋಗ ಬಾಧೆ ಕಾಡುವುದಿಲ್ಲ. ಗಿಡಗಳನ್ನು ನೆರವು ಕಟ್ಟಿಗೆಗಳಿಗೆ ಉತ್ತಮವಾಗಿ ಕಟ್ಟಿದಲ್ಲಿ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ’ ಎಂದು ತಿಳಿಸಿದ್ದಾರೆ.

ಟೊಮೆಟೊ ಗಿಡಗಳು
ಟೊಮೆಟೊ ಗಿಡಗಳು
ಮಾರುಕಟ್ಟಗೆ ಸಾಗಿಸಲು ಸಿದ್ಧವಾಗಿರುವ ಟೊಮೆಟೊ ಹಣ್ಣುಗಳು
ಮಾರುಕಟ್ಟಗೆ ಸಾಗಿಸಲು ಸಿದ್ಧವಾಗಿರುವ ಟೊಮೆಟೊ ಹಣ್ಣುಗಳು
ಯಾವುದೇ ಕೃಷಿ ಇರಲಿಕೂಲಿ ಆಳುಗಳ ಮೇಲೆಯೇ ಬಿಡದೇ ಮಾಲೀಕರೂ ಜವಾಬ್ದಾರಿ ತೆಗೆದುಕೊಂಡು ಗಿಡಗಳ ಆರೈಕೆ ಮಾಡಬೇಕು. ಆಗ ಮಾತ್ರವೇ ಉತ್ತಮವಾದ ಲಾಭ ಕಾಣಲು ಸಾಧ್ಯವಾಗುತ್ತದೆ.
ಸಾಧಿಕ್‌ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT