ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ನಲ್ಲಿ ಮಳೆ ಅಬ್ಬರ: ನೀರಿನಲ್ಲಿ ಮುಳುಗಿದ ಮನೆಗಳು

ಜನತಾ ಕಾಲೊನಿ ಸಂಪೂರ್ಣ ಶಿಥಿಲ
Published 8 ಮೇ 2024, 13:13 IST
Last Updated 8 ಮೇ 2024, 13:13 IST
ಅಕ್ಷರ ಗಾತ್ರ

ಕೆಜಿಎಫ್‌: ನಗರದಲ್ಲಿ ಬುಧವಾರ ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ನೂರಾರು ಮನೆಗಳಿಗೆ ಮಳೆ ನೀರು ನುಗ್ಗಿ, ಭಾರೀ ಪ್ರಮಾಣದ ಹಾನಿ ಉಂಟಾಗಿದೆ.

ನಗರದ ಊರಿಗಾಂಪೇಟೆ, ಫಿಶ್‌ಲೈನ್‌ನಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಮನೆಗಳಿಗೆ ನುಗ್ಗಿದ ನೀರು ಮನೆಯಲ್ಲಿದ್ದ ದವಸ ಧಾನ್ಯಗಳನ್ನು ಹಾಳು ಮಾಡಿದೆ. ರಾತ್ರಿ ಈಡೀ ನಿದ್ದೆಗೆಟ್ಟ ನಿವಾಸಿಗಳು ಮನೆಯೊಳಗೆ ನುಗ್ಗಿದ ನೀರನ್ನು ಹೊರ ಹಾಕುವಲ್ಲಿ ತೀವ್ರ ಪ್ರಯತ್ನಪಟ್ಟರು. ಮೈನಿಂಗ್‌ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಕೂಡ ನೀರು ನುಗ್ಗಿದೆ.

ಊರಿಗಾಂಪೇಟೆಯ ಮುಖ್ಯರಸ್ತೆಯಲ್ಲಿ ಕೂಡ ರಾಜಕಾಲುವೆಯಲ್ಲಿ ಹರಿಯುತ್ತಿದ್ದ ನೀರು ಮುಂಜಾನೆ ಹೊತ್ತಿಗೆ ರಾಜಕಾಲುವೆ ದಾಟಿ ರಸ್ತೆಗೆ ಬಂದಿತ್ತು. ವಾಹನಗಳು ಮತ್ತು ಸಾರ್ವಜನಿಕರು ನೀರಿನಲ್ಲಿ ಸಂಚರಿಸಬೇಕಾಯಿತು. ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣ ಮಾಡಿದ್ದ ರಾಜಕಾಲುವೆಯ ಒಂದು ಭಾಗ ನೆಲಕ್ಕುರಳಿದೆ. ಇದರಿಂದಾಗಿ ರಾಜಕಾಲುವೆ ಮೂಲಕ ಹಾದು ಹೋಗಬೇಕಾಗಿದ್ದ ಮಳೆ ನೀರು ಬಡಾವಣೆಗಳಿಗೆ ನುಗ್ಗಿದೆ. ಅಷ್ಟೇ ಅಲ್ಲದೆ ಹಲವಾರು ಅಂಗಡಿಗಳಿಗೆ ನೀರು ನುಗ್ಗಿದೆ.

ಸೂರ್ಯೋದಯದ ಸಮಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ, ರಾಜಕಾಲುವೆಯಲ್ಲಿ ನೀರಿನ ಮಟ್ಟ ಕಡಿಮೆಯಾಯಿತು. ಇಲ್ಲವಾದಲ್ಲಿ ಊರಿಗಾಂಪೇಟೆಯ ಬಹುತೇಕ ಭಾಗ ನೀರಿನಲ್ಲಿ ಮುಳುಗುತ್ತಿತ್ತು ಎಂದು ಬಡಾವಣೆಯ ಮುಜಾಹಿದ್‌ ಹೇಳಿದರು.

ಫಿಶ್‌ಲೈನ್‌ನಲ್ಲಿ ನಿರ್ಮಾಣವಾಗಿರುವ ಜನತಾ ಕಾಲೊನಿ ಸಂಪೂರ್ಣವಾಗಿ ನೀರಿನಿಂದ ಆವೃತವಾಗಿತ್ತು. ಕೆಲ ನಿವಾಸಿಗಳು ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗಳಿಗೆ ತೆರಳಿದರು. ಉಳಿದವರು ಮನೆಯೊಳಗೆ ನುಗ್ಗಿದ ನೀರನ್ನು ಹೊರ ಹಾಕುವಲ್ಲಿ ನಿರತರಾಗಿದ್ದರು.

ಪ್ರತಿ ಬಾರಿ ಮಳೆ ಬಂದಾಗ ಫಿಶ್‌ಲೈನಿನಲ್ಲಿ ಮಳೆ ನೀರು ನುಗ್ಗಿ ಸಾಕಷ್ಟು ಹಾನಿ ಮಾಡುತ್ತದೆ. ಮನೆಗಳ ಬಾಗಿಲಿಗೆ ಸಿಮೆಂಟಿನಿಂದ ಅಡ್ಡ ಗೋಡೆ ನಿರ್ಮಿಸಿದ್ದರೂ, ಅದನ್ನು ದಾಟಿ ನೀರು ಒಳಗೆ ಬರುತ್ತಿದೆ. ಬಡಾವಣೆಯಲ್ಲಿ ವಾಸ ಮಾಡುತ್ತಿರುವವರೆಲ್ಲರೂ ಕೂಲಿ ಕಾರ್ಮಿಕರು ಮತ್ತು ದಿನಗೂಲಿ ನಂಬಿ ಬದುಕುವವರು. ಎಷ್ಟೋ ಬಾರಿ ಮನವಿ ಮಾಡಿದ್ದರೂ ಯಾರೂ ನ್ಯಾಯ ಒದಗಿಸಿಲ್ಲ. ರಾತ್ರಿ ಇಂದ ಊಟ ಕೂಡ ಮಾಡಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಬಡಾವಣೆಗೆ ಪೌರಾಯುಕ್ತ ಪವನ್‌ಕುಮಾರ್‌ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್‌ ಭೇಟಿ ನೀಡಿ ಬಡಾವಣೆಗೆ ನುಗ್ಗಿದ ನೀರನ್ನು ಯಂತ್ರಗಳ ಮೂಲಕ ಬೇರೆಡೆಗೆ ತಿರುಗಿಸಿ, ನೀರಿನ ಮಟ್ಟವನ್ನು ಕಡಿಮೆ ಮಾಡಿದರು.

ಜನತಾ ಕಾಲೊನಿ ಸಂಪೂರ್ಣವಾಗಿ ಶಿಥಿಲವಾಗಿದೆ. ಅವರ ಬಳಿ ಮನೆಗಳ ದಾಖಲೆಗಳು ಕೂಡ ಇಲ್ಲ. ದಾಖಲೆಕೊಟ್ಟರೆ ಅವರ ಹೆಸರಿಗೆ ಖಾತೆ ಮಾಡಬಹುದು. ಬಡಾವಣೆ ಪಕ್ಕದಲ್ಲಿ ಕೆರೆ ಇದ್ದು, ಅದರ ಉಪಯೋಗ ಇಲ್ಲದೆ ಇರುವುದರಿಂದ ನೀರು ಬಡಾವಣೆಯಲ್ಲಿ ಸಂಗ್ರಹವಾಗುತ್ತಿದೆ. ನಗರಸಭೆಯಿಂದ ಕೆರೆ ಅಭಿವೃದ್ಧಿ ಮಾಡಲಾಗುವುದು. ನಂತರ ಬಡಾವಣೆಯಲ್ಲಿ ನೀರು ನುಗ್ಗುವ ಪ್ರಮಾಣ ಕಡಿಮೆಯಾಗಬಹುದು ಎಂದು ಪೌರಾಯುಕ್ತ ಪವನ್‌ಕುಮಾರ್‌ ತಿಳಿಸಿದರು.

ಕೆಜಿಎಫ್‌ ಊರಿಗಾಂಪೇಟೆಯ ರಾಜಕಾಲುವೆ ಒಡೆದುಹೋಗಿ ಬಡಾವಣೆಗೆ ನೀರು ನುಗ್ಗುತ್ತಿರುವುದು
ಕೆಜಿಎಫ್‌ ಊರಿಗಾಂಪೇಟೆಯ ರಾಜಕಾಲುವೆ ಒಡೆದುಹೋಗಿ ಬಡಾವಣೆಗೆ ನೀರು ನುಗ್ಗುತ್ತಿರುವುದು
ಕೆಜಿಎಫ್ ರಾಬರ್ಟಸನ್‌ಪೇಟೆಯ ಊರಿಗಾಂ ರಸ್ತೆಯಲ್ಲಿ ಮನೆಯೊಂದು ನೀರಿನಲ್ಲಿ ಮುಳುಗಿರುವುದು
ಕೆಜಿಎಫ್ ರಾಬರ್ಟಸನ್‌ಪೇಟೆಯ ಊರಿಗಾಂ ರಸ್ತೆಯಲ್ಲಿ ಮನೆಯೊಂದು ನೀರಿನಲ್ಲಿ ಮುಳುಗಿರುವುದು

ರಾಜಕಾಲುವೆಯಲ್ಲಿ ಹೂಳು

ಬಿಜಿಎಂಎಲ್‌ ಸೈನೈಡ್‌ ಗುಡ್ಡದ ಮೇಲಿಂದ ಬರುವ ಮಳೆ ನೀರು ಚರಂಡಿ ಮೂಲಕ ಹರಿಯುತ್ತಿದೆ. ಪ್ರತಿ ಬಾರಿ ಮಳೆ ಬಂದಾಗ ಕೂಡ ಸೈನೈಡ್ ಮಣ್ಣು ನೀರಿನಲ್ಲಿ ಮಿಶ್ರಣವಾಗುತ್ತಿರುವುದರಿಂದ ರಾಜಕಾಲುವೆಯಲ್ಲಿ ಹೂಳು ತುಂಬುತ್ತದೆ. ಜತೆಗೆ ಪ್ಲಾಸ್ಟಿಕ್‌ ವಸ್ತುಗಳು ಕೂಡ ಸೇರುವುದರಿಂದ ಭಾರೀ ಮಳೆ ಬಂದಾಗ ನೀರು ರಾಜಕಾಲುವೆ ಬಿಟ್ಟು ಹೊರ ಪ್ರದೇಶಗಳಿಗೆ ಹರಿಯುತ್ತಿದೆ ಎಂದು ಪೌರಾಯುಕ್ತ  ಪವನ್‌ಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT