ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಲೋಕಸಭಾ: ಮತದಾನದಲ್ಲಿ ಪುರುಷರೇ ಮುಂದು

ಚುನಾವಣೆ: ಗಂಗಾವತಿಯಲ್ಲಿ ಹೆಚ್ಚು, ಮಸ್ಕಿಯಲ್ಲಿ ಕಡಿಮೆ ಹಕ್ಕು ಚಲಾವಣೆ
Published 8 ಮೇ 2024, 16:35 IST
Last Updated 8 ಮೇ 2024, 16:35 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಪುರುಷರೇ ಹೆಚ್ಚು ಮತ ಚಲಾಯಿಸಿದ್ದು ವಿಶೇಷ.

ಕ್ಷೇತ್ರದಲ್ಲಿರುವ ಒಟ್ಟು 9,46,763 ಮಹಿಳಾ ಮತದಾರರ ಪೈಕಿ 6,55,275 ಜನ ಮತ ಚಲಾಯಿಸಿದರೆ, 9,19,499 ಪುರುಷ ಮತದಾರರ ಪೈಕಿ 6,69,583 ಮತದಾನ ಮಾಡಿ ಅಗ್ರಸ್ಥಾನದಲ್ಲಿದ್ದಾರೆ. ಜಿಲ್ಲಾ ಸ್ವೀಪ್‌ ಸಮಿತಿ ಮಹಿಳಾ ಮತದಾರರನ್ನೇ ಗುರಿಯಾಗಿರಿಸಿ ಸಾಕಷ್ಟು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.

ಗಂಗಾವತಿ ಮುಂದೆ: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಮತದಾನವಾಗಿದ್ದು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ. ಈ ಕ್ಷೇತ್ರದಲ್ಲಿದ್ದ ಒಟ್ಟು 2,09,250 ಮತದಾರರ ಪೈಕಿ 1,58,076 ಜನ ಮತದಾರರು ಹಕ್ಕು ಚಲಾಯಿಸಿದ್ದು, ಅಲ್ಲಿ ಶೇ 75.54ರಷ್ಟು ಮತದಾನವಾಗಿದೆ. ಇದು ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೇ ಕ್ಷೇತ್ರದಲ್ಲಿ ನಡೆದ ಗರಿಷ್ಠ ಮತದಾನವೆನಿಸಿದೆ.

ಮಸ್ಕಿ ಕ್ಷೇತ್ರದಲ್ಲಿ ಒಟ್ಟು 2,15,826 ಮತದಾರರು ಇದ್ದು, 1,39,547 ಜನ ಮತದಾನ ಮಾಡಿದ್ದು ಅಲ್ಲಿ ಶೇ. 64.66ರಷ್ಟು ಪ್ರಮಾಣ ದಾಖಲಾಗಿದೆ. ಇದು ಕ್ಷೇತ್ರ ವ್ಯಾಪ್ತಿಯ ಕನಿಷ್ಠ ಮತದಾನವೆನಿಸಿದೆ. ಎಲ್ಲ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು ತಲಾ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕೊಪ್ಪಳ ಕ್ಷೇತ್ರ ವ್ಯಾಪ್ತಿಯಲ್ಲಿ 1,00,006 ಜನ ಮತದಾನ ಮಾಡಿದ್ದಾರೆ. ಒಂದು ಕ್ಷೇತ್ರದಲ್ಲಿ ಆರಂಕಿಯ ಲೆಕ್ಕದಲ್ಲಿ ಮತದಾನವಾದ ದಾಖಲೆ ದಾಖಲಾಗಿದ್ದು ಈ ಕ್ಷೇತ್ರದಲ್ಲಿ ಮಾತ್ರ.     

ಪರೀಕ್ಷೆ ಗೆದ್ದ ಸ್ವೀಪ್‌ ತಂಡ: ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹಿಂದಿನ ಚುನಾವಣೆಗಿಂತಲೂ ಹೆಚ್ಚಿಸಲು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ ನೇತೃತ್ವದ ಜಿಲ್ಲಾ ಸ್ವೀಪ್‌ ತಂಡ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.

ಜಿಲ್ಲೆಯಲ್ಲಿರುವ ಕೊಪ್ಪಳ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಲವೆಡೆ ಮತದಾನ ಜಾಗೃತಿಗಾಗಿ ಮಾಧ್ಯಮದವರ ಜೊತೆ ಕ್ರಿಕೆಟ್‌ ಪಂದ್ಯ, ಮೇಣದ ಬತ್ತಿ ಹಚ್ಚಿ ಅದರ ಬೆಳಕಿನಲ್ಲಿ ನಡೆಯುವುದು, ಬೈಕ್‌ ರ್‍ಯಾಲಿ, ಜಾಗೃತಿ ನಡಿಗೆ, ನರೇಗಾ ಯೋಜನೆಯಡಿ ಕೆಲಸ ಮಾಡುವ ಸ್ಥಳದಲ್ಲಿ ಮತದಾನದ ಮಹತ್ವದ ಸಾರುವುದು ಮತ್ತು ಅಳವಂಡಿಯಲ್ಲಿ ಚಕ್ಕಡಿಗಳ ಮೇಲೆ ಓಡಾಡುವ ಮೂಲಕ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವೀಪ್‌ ತಂಡ ಮತದಾನ ಜಾಗೃತಿ ಕೆಲಸಗಳನ್ನು ಮಾಡಿತ್ತು.

ಜಿಲ್ಲಾಮಟ್ಟದ ಸ್ವೀಪ್‌ ಚಟುವಟಿಕೆಗಳ ತಂಡ ಒಂದೆಡೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೆ, ತಾಲ್ಲೂಕುವಾರು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣ ಹೆಚ್ಚಾಗಲು ಶ್ರಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT