ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ– ದೇವರಾಜೇಗೌಡ ಭೇಟಿಯಾಗಿದ್ದೇಕೆ: ಚಲುವರಾಯಸ್ವಾಮಿ ಪ್ರಶ್ನೆ

Published 9 ಮೇ 2024, 23:02 IST
Last Updated 9 ಮೇ 2024, 23:02 IST
ಅಕ್ಷರ ಗಾತ್ರ

ಮಂಡ್ಯ: ‘ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಈಚೆಗೆ ಭೇಟಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಅವರು ಯಾಕೆ ಭೇಟಿಯಾಗಿದ್ದರು? ಪೆನ್‌ಡ್ರೈವ್‌ ಪ್ರಕರಣಕ್ಕೂ ಅವರ ಭೇಟಿಗೂ ಸಂಬಂಧವಿದೆಯಾ ಎಂಬ ಬಗ್ಗೆ ತನಿಖೆಯಾಗಬೇಕು’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಗುರುವಾರ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ದೇವರಾಜೇಗೌಡರು ವರ್ಷದ ಹಿಂದೆ ವ್ಯಕ್ತಿಯೊಬ್ಬರಿಗೆ 5 ಜಿ.ಬಿಯಷ್ಟು ವಿಡಿಯೊಗಳುಳ್ಳ ಪೆನ್‌ಡ್ರೈವ್‌ ಕೊಟ್ಟಿದ್ದು, ಅದಷ್ಟೇ ಬಿಡುಗಡೆಯಾಗಿದೆ. ತಾನೇನಾದರೂ ಬಿಡುಗಡೆ ಮಾಡಿದ್ದರೆ ಇನ್ನೂ ಹೆಚ್ಚು ಬಿಡುಗಡೆ ಮಾಡುತ್ತಿದ್ದುದಾಗಿ ಪ್ರಜ್ವಲ್‌ ರೇವಣ್ಣ ಕಾರು ಚಾಲಕ ಕಾರ್ತಿಕ್‌ ತಿಳಿಸಿದ್ದಾರೆ. ಇದೇ ವೇಳೆ, ಕುಮಾರಸ್ವಾಮಿ ಅವರೂ ದೇವರಾಜೇಗೌಡರನ್ನು ಭೇಟಿಯಾಗಿರುವುದು ಅನುಮಾನ ಮೂಡಿಸಿದೆ’ ಎಂದರು.

‘ರೇವಣ್ಣ ಕುಟುಂಬ ಬೇರೆ, ತಮ್ಮದೇ ಬೇರೆ ಎನ್ನುವ ಕುಮಾರಸ್ವಾಮಿ ಯಾರ ಪರ ನಿಂತಿದ್ದಾರೆ? ಮಹಿಳೆಯರ ಮಾನ ತೆಗೆದವರು ಯಾರು? ಘಟನೆಗೆ ಯಾರ ಕುಟುಂಬ ಕಾರಣ? ಈಗ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ? ಅವರ ಮನೆಯ ಹುಡುಗ ಮಾಡಿದ್ದು ಸರಿ ಎನ್ನುವ ಸಂತೋಷಕ್ಕೆ ಪ್ರತಿಭಟನೆ ಮಾಡುತ್ತಿದ್ದಾರಾ’ ಎಂಬ ಪ್ರಶ್ನೆಗಳನ್ನು ಮುಂದಿಟ್ಟರು.

‘ಪೆನ್‌ಡ್ರೈವ್‌ ಪ್ರಕರಣದಿಂದ ರಾಜ್ಯವೇ ತಲೆತಗ್ಗಿಸುವಂತಾಗಿದೆ. ನಾವು ಈ ಬಗ್ಗೆ ಮಾತನಾಡಲೂ ಮುಜುಗರಪಡುತ್ತಿದ್ದೇವೆ. ಆದರೆ, ಮಾಜಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹಾದಿಬೀದಿಯಲ್ಲಿ ರಂಪಾಟ ಮಾಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಸಂತ್ರಸ್ತರು, ಸಂತ್ರಸ್ತರ ಸಂಬಂಧಿಕರು ಭೇಟಿಯಾಗಿ ನ್ಯಾಯ ಕೇಳಿದರೆ ತಪ್ಪೇನು’ ಎಂದು ಪ್ರಶ್ನಿಸಿದರು.

‘ಹೆಣ್ಣುಮಕ್ಕಳ ಮಾನ ಹಾಳು ಮಾಡಿದರೂ ‌ಕ್ಷಮೆ ಕೇಳಲಿಲ್ಲ, ಅನುಕಂಪ ತೋರಲಿಲ್ಲ. ತಪ್ಪೆಸಗಿದ ಸಂಸದ ಪ್ರಜ್ವಲ್‌ನನ್ನು ವಿದೇಶದಿಂದ ಕರೆಸಲು ಸಾಧ್ಯವಾಗಲಿಲ್ಲ. ಆರೋಪಿ ಸಾಮಾನ್ಯರಾಗಿದ್ದರೆ ಅವರ ಅಣ್ಣ, ತಮ್ಮ, ಸಂಬಂಧಿಕರನ್ನು ಬಂಧಿಸುತ್ತಿದ್ದರು. ಅದರಂತೆ ಈ ವಿಚಾರದಲ್ಲೂ ಕುಮಾರಸ್ವಾಮಿ ಅವರೇ ಜವಾಬ್ದಾರಿ ಹೊರಬೇಕು. ಅಣ್ಣನ ಮಗನನ್ನು ವಿದೇಶದಿಂದ ಕರೆಸಬೇಕು’ ಎಂದರು.

‘ಸಿಬಿಐನ ಬಹುತೇಕ ತನಿಖೆಗಳೆಲ್ಲವೂ ಮೂಲೆಗೆ ಸೇರಿವೆ. ಆರೋಪಿಗಳಿಗೆ ಕ್ಲೀನ್‌ ಚಿಟ್‌ ಕೊಡಲಾಗಿದೆ. ಈ ಹಿಂದೆ ಕುಮಾರಸ್ವಾಮಿಯವರೇ ರಾಜ್ಯದ ಪೊಲೀಸರನ್ನು ದಕ್ಷರು, ಸಮರ್ಥರು ಎಂದಿದ್ದರು. ರಾಜ್ಯದ ಪೊಲೀಸರು ಸಮರ್ಥವಾಗಿಯೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT