ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಇವಿಎಂ ತಿರುಚಲು ₹2.5 ಕೋಟಿಗೆ ಬೇಡಿಕೆಯಿಟ್ಟಿದ್ದ ಯೋಧನ ಬಂಧನ

Published 8 ಮೇ 2024, 6:15 IST
Last Updated 8 ಮೇ 2024, 6:15 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತಿರುಚುವ ಮೂಲಕ ನಿರ್ದಿಷ್ಟ ಅಭ್ಯರ್ಥಿಗೆ ನೆರವಾಗುವುದಾಗಿ ಶಿವಸೇನಾ (ಯುಬಿಟಿ) ಮುಖಂಡ ಅಂಬಾದಾಸ್ ದಾನ್ವೆ ಅವರ ಬಳಿ ₹2.5 ಕೋಟಿಗೆ ಬೇಡಿಕೆಯಿಟ್ಟಿದ್ದ ಯೋಧರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು 24 ವರ್ಷದ ಮಾರುತಿ ಢಾಕ್ನೆ ಎಂದು ಗುರುತಿಸಲಾಗಿದೆ. ಈತ ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚುವ ಮೂಲಕ ನಿರ್ದಿಷ್ಟ ಅಭ್ಯರ್ಥಿಗೆ ಹೆಚ್ಚು ಮತಗಳನ್ನು ಪಡೆಯಲು ಸಹಾಯ ಮಾಡುವುದಾಗಿ ಹೇಳಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾನೆ ಎಂದು ಆರೋಪಿಸಿ ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ದಾನ್ವೆ ಪೊಲೀಸರಿಗೆ ಲಿಖಿತ ದೂರು ನೀಡಿದ್ದರು.

ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಸಂಭಾಜಿನಗರದ ಕೇಂದ್ರ ಬಸ್ ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ಆರೋಪಿಯು, ರಾಜೇಂದ್ರ ದಾನ್ವೆ ಅವರನ್ನು ಭೇಟಿಯಾಗಿದ್ದ. ಕೂಡಲೇ ದಾನ್ವೆ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

‘ಘಟನೆ ಸಂಬಂಧ ಕ್ರಾಂತಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಸಾಲದ ಸಮಸ್ಯೆಗೆ ಸಿಲುಕಿದ್ದು, ಇದರಿಂದ ಹೊರಬರಲು ಈ ರೀತಿ ಕುತಂತ್ರ ಮಾಡಿದ್ದಾನೆ’ ಎಂದು ಪೊಲೀಸ್ ಆಯುಕ್ತ ಮನೋಜ್ ಲೋಹಿಯಾ ತಿಳಿಸಿದ್ದಾರೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರುತಿ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಪಥರ್ಡಿ ನಿವಾಸಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ ನಿಯೋಜನೆಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT