ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಸಮರ: ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಸಂಘರ್ಷ

Published 2 ಮೇ 2024, 13:55 IST
Last Updated 2 ಮೇ 2024, 13:55 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್: ಪ್ಯಾಲೆಸ್ಟೀನ್ ಪರ ಧರಣಿ ನಿರತರ ಮೇಲೆ ಪೊಲೀಸರು ದಾಳಿ ನಡೆಸಿದ ಬಳಿಕ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಸಂಘರ್ಷ ಉಂಟಾಗಿದೆ ಎಂದು ಕುಲಾಧಿಪತಿ ತಿಳಿಸಿದ್ದಾರೆ. ಮ್ಯಾಡಿಸನ್‌ನಲ್ಲಿನ ವಿಸ್ಕಾನ್ಸಿನ್‌ ವಿಶ್ವವಿದ್ಯಾಲಯದಲ್ಲಿ ಕೆಲವರು ಹಾಕಿಕೊಂಡಿದ್ದ ಡೇರೆಗಳನ್ನು ಪೊಲೀಸರು ಧ್ವಂಸಗೊಳಿಸಿದಾಗ, ಅವರು ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ.

ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಕಾರಣಕ್ಕೆ ಅಮೆರಿಕದ ಕೆಲವು ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಂಘರ್ಷ ಹೆಚ್ಚಾಗಿದೆ.

ಲಾಸ್‌ ಏಂಜಲೀಸ್‌ನಲ್ಲಿನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂಘರ್ಷದಲ್ಲಿ 15 ಮಂದಿಗೆ ಗಾಯಗಳಾಗಿವೆ. ಪ್ಯಾಲೆಸ್ಟೀನ್ ಪರವಾಗಿ ವಿಶ್ವವಿದ್ಯಾಲಯದಲ್ಲಿ ಡೇರೆಗಳನ್ನು ಹಾಕಿಕೊಂಡಿದ್ದವರ ಮೇಲೆ ದಾಳಿ ನಡೆಸಲು ಪ್ರಚೋದಕರ ಗುಂಪೊಂದು ಬಂದಾಗ, ವಿಶ್ವವಿದ್ಯಾಲಯದ ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹೊರಗಿನಿಂದ ನೆರವು ಪಡೆಯಬೇಕಾಯಿತು ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕುಲಾಧಿಪತಿ ಜೀನ್ ಬ್ಲಾಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎರಡು ಗುಂಪುಗಳ ನಡುವೆ ಒಂದೆರಡು ಗಂಟೆಗಳ ಕಾಲ ಹೊಡೆದಾಟ ನಡೆಯಿತು. ಇದಾದ ನಂತರ ಪೊಲೀಸರು ಎರಡೂ ಕಡೆಯವರನ್ನು ಪ್ರತ್ಯೇಕಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪ್ಯಾಲೆಸ್ಟೀನ್ ಪರವಾಗಿ ಧರಣಿ ನಡೆಸುತ್ತಿರುವವರು ಬುಧವಾರ ತಮ್ಮ ಡೇರೆಗಳ ಸುತ್ತ ತಾತ್ಕಾಲಿಕ ತಡೆಗೋಡೆಗಳನ್ನು ಹಾಕಿಕೊಂಡಿದ್ದಾರೆ. ಅವರನ್ನು ವಿರೋಧಿಸಿ ಯಾರೂ ಪ್ರತಿಭಟನೆ ನಡೆಸಿದ್ದು ಕಂಡುಬಂದಿಲ್ಲ.

ಮ್ಯಾಡಿಸನ್‌ನಲ್ಲಿ ಪೊಲೀಸರು ಒಂದು ಡೇರೆಯನ್ನು ಹೊರತುಪಡಿಸಿ, ಇತರ ಎಲ್ಲ ಡೇರೆಗಳನ್ನು ತೆರವುಗೊಳಿಸಿದರು. ಪ್ರತಿಭಟನೆಯಲ್ಲಿ ತೊಡಗಿದ್ದವರನ್ನು ಹೊರದಬ್ಬಿದರು. ಈ ಸಂದರ್ಭದಲ್ಲಿ ಪರಸ್ಪರ ನೂಕಾಟ ನಡೆಯಿತು. ಇದಾದ ಕೆಲವೇ ಗಂಟೆಗಳಲ್ಲಿ ಪ್ರತಿಭಟನಕಾರರು ವಿಸ್ಕಾನ್ಸಿನ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಇನ್ನಷ್ಟು ಡೇರೆಗಳನ್ನು ನಿರ್ಮಿಸಿದರು. 30ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಅವರಲ್ಲಿ ಹೆಚ್ಚಿನವರನ್ನು ನಂತರ ಬಿಡುಗಡೆ ಮಾಡಲಾಯಿತು. ನಾಲ್ಕು ಮಂದಿಯ ಮೇಲೆ ಹಲ್ಲೆ ಆರೋಪದ ಅಡಿ ಪ್ರಕರಣ ದಾಖಲಿಸಲಾಗಿದೆ.

ವಿಶ್ವವಿದ್ಯಾಲಯಗಳ ಆವರಣದಲ್ಲಿ ಡೇರೆಗಳನ್ನು ನಿರ್ಮಿಸಿಕೊಂಡವರು, ಇಸ್ರೇಲ್ ಜೊತೆ ಯಾವುದೇ ವಹಿವಾಟು ನಡೆಸಬಾರದು ಹಾಗೂ ಗಾಜಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಯುದ್ಧವನ್ನು ಬೆಂಬಲಿಸುತ್ತಿರುವ ಕಂಪನಿಗಳ ಜೊತೆ ಯಾವುದೇ ವಹಿವಾಟು ನಡೆಸಬಾರದು ಎಂಬ ಆಗ್ರಹದೊಂದಿಗೆ ಧರಣಿ ನಡೆಸುತ್ತಿದ್ದಾರೆ. ಇಂತಹ ಧರಣಿಗಳು ದೇಶದ ಎಲ್ಲೆಡೆ ನಡೆಯಲಾರಂಭಿಸಿವೆ. ಇದು ಈ ಶತಮಾನ ಕಂಡ ಇತರ ಯಾವುದೇ ವಿದ್ಯಾರ್ಥಿ ಚಳವಳಿಗಳಿಗಿಂತ ಭಿನ್ನವಾಗಿದೆ. ಇವರ ಮೇಲೆ ಪೊಲೀಸರು ಕೈಗೊಂಡಿರುವ ಕ್ರಮವು, ದಶಕಗಳ ಹಿಂದೆ ವಿಯೆಟ್ನಾಂ ಯುದ್ಧವನ್ನು ವಿರೋಧಿಸಿ ಹೋರಾಟ ನಡೆಸಿದವರ ಮೇಲೆ ಕೈಗೊಂಡ ಕ್ರಮಗಳನ್ನು ನೆನಪಿಸುವಂತಿದೆ.

ಲಾಸ್‌ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪ್ಯಾಲೆಸ್ಟೀನ್ ಪರ ಧರಣಿನಿರತರು ತಮ್ಮ ಡೇರೆಗಳನ್ನು ವಿಸ್ತರಿಸಲು ಮಂಗಳವಾರ ರಾತ್ರಿ ಯತ್ನಿಸಿದಾಗ, ಸಂಘರ್ಷ ಶುರುವಾಯಿತು. ಇಸ್ರೇಲ್ ಪರವಾಗಿ ಇರುವವರು ತಾತ್ಕಾಲಿಕ ತಡೆಗೋಡೆಗಳನ್ನು ಉರುಳಿಸಲು ಯತ್ನಿಸಿದರು. ಪ್ಯಾಲೆಸ್ಟೀನ್ ಪರ ಹಾಗೂ ಇಸ್ರೇಲ್ ಪರ ಇರುವ ಗುಂಪುಗಳ ನಡುವೆ ಘರ್ಷಣೆಯೂ ನಡೆಯಿತು. ಪ್ರತಿಭಟನೆ, ಧರಣಿಯಲ್ಲಿ ಪಾಲ್ಗೊಂಡಿದ್ದವರು ವಿದ್ಯಾರ್ಥಿಗಳಾ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. 

ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ, ಧರಣಿಗಳು ಯಹೂದಿಗಳ ವಿರೋಧಿ ಎಂದು ಇಸ್ರೇಲ್ ಪರವಾಗಿ ಇರುವವರು ಹೇಳಿದ್ದಾರೆ. ಆದರೆ, ವಿರೋಧಿಗಳ ಬಾಯಿ ಮುಚ್ಚಿಸಲು ಇಸ್ರೇಲ್‌ ಇಂತಹ ಟೀಕೆಗಳನ್ನು ಬಳಸಿಕೊಳ್ಳುತ್ತದೆ ಎಂದು ಇಸ್ರೇಲ್‌ನ ಟೀಕಾಕಾರರು ಹೇಳಿದ್ದಾರೆ. ಪ್ರತಿಭಟನೆ, ಧರಣಿಯಲ್ಲಿ ಇದ್ದ ಕೆಲವರು ಯಹೂದಿ ವಿರೋಧಿ ಮಾತುಗಳನ್ನಾಡಿದ್ದಾರೆ. ಆದರೆ, ಪ್ರತಿಭಟನೆಗಳನ್ನು ಆಯೋಜಿಸಿರುವವರು, ಇವರಲ್ಲಿ ಯಹೂದಿಗಳೂ ಇದ್ದಾರೆ, ಇದು ಪ್ಯಾಲೆಸ್ಟೀನಿಯನ್ನರ ಹಕ್ಕುಗಳನ್ನು ರಕ್ಷಿಸಲು ನಡೆದಿರುವ ಶಾಂತಿಯುತ ಹೋರಾಟ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT