ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬಾಕ್ಸರ್‌ಗಳಿಗೆ 7 ಚಿನ್ನ

Published 7 ಮೇ 2024, 23:38 IST
Last Updated 7 ಮೇ 2024, 23:38 IST
ಅಕ್ಷರ ಗಾತ್ರ

ಅಸ್ತಾನಾ (ಕಜನಕಸ್ತಾನ),: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಟಿಕೆಟ್‌ ಗಿಟ್ಟಿಸಿರುವ ಪ್ರೀತಿ ಅವರನ್ನು ಒಳಗೊಂಡಂತೆ ಭಾರತದ ಏಳು ಮಂದಿ ಬಾಕ್ಸಿಂಗ್ ಪಟುಗಳು, ಮಂಗಳವಾರ ಮುಕ್ತಾಯಗೊಂಡ ಏಷ್ಯನ್ 22 ವರ್ಷದೊಳಗಿನವರ ಮತ್ತು ಯೂತ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು. ಇದರಿಂದ ಈ ಕೂಟದಲ್ಲಿ ಭಾರತ 43 ಪದಕಗಳನ್ನು ಗಳಿಸಿದಂತಾಯಿತು.

54 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಪ್ರೀತಿ, ಮೊದಲ ಸುತ್ತಿನ 0–5 ಹಿನ್ನಡೆಯಿಂದ ಚೇತರಿಸಿ ಅಂತಿಮವಾಗಿ 3–0 ಯಿಂದ ಕಜಕಸ್ತಾನದ ಬಝರೋವಾ ಎಲಿನಾ ಅವರನ್ನು ಮಣಿಸಿದರು.

ಭಾರತದ ಬಾಕ್ಸರ್‌ಗಳು ಈ ಕೂಟದಲ್ಲಿ 12 ಸ್ವರ್ಣ, 14 ರಜತ ಮತ್ತು 17 ಕಂಚಿನ ಪದಕಗಳನ್ನು ಕೊರಳಿಗೆ ಹಾಕಿಕೊಂಡರು. ಆತಿಥೇಯ ಕಜಕಸ್ತಾನದ (48 ಪದಕ) ನಂತರ ಪದಕ ಗಳಿಕೆಯಲ್ಲಿ ಭಾರತ ಎರಡನೇ ಸ್ಥಾನ ಪಡೆಯಿತು.

ದಿನದ ಮೊದಲ ಚಿನ್ನದ ಪದಕವನ್ನು 48 ಕೆ.ಜಿ. ವಿಭಾಗದಲ್ಲಿ ವಿಶ್ವನಾಥ ಸುರೇಶ್ ಗೆದ್ದುಕೊಂಡರು. ಅವರು 5–0 ಯಿಂದ ಕಜಕಸ್ತಾನದ ಕರಪ್ ಯೆರ್ನಾರ್ ಅವರನ್ನು ಸೋಲಿಸಿದರು. ನಿಖಿಲ್‌ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಗೆದ್ದರು. ಸಬಿರ್ ಯರ್ಬೊಲತ್ ವಿರುದ್ಧ ಮೂರನೇ ಸುತ್ತಿನಲ್ಲಿ ರೆಫ್ರಿ ಸೆಣಸಾಟ ನಿಲ್ಲಿಸಿ ಭಾರತೀಯ ಸ್ಪರ್ಧಿಯನ್ನು ವಿಜಯಿ ಎಂದು ಘೋಷಿಸಿದರು. ಆಕಾಶ್‌ ಗೋರ್ಖಾ (60 ಕೆ.ಜಿ) 4–1 ರಿಂದ ಆತಿಥೇಯ ದೇಶದ ರಸ್ಲಾನ್ ಕುಜಿಯುಬಯೇವ್ ಅವರನ್ನು ಸೋಲಿಸಿ ಪುರುಷರ ವಿಭಾಗದಲ್ಲಿ ಮೂರನೇ ಚಿನ್ನ ತಂದುಕೊಟ್ಟರು.

ಮಹಿಳಾ ವಿಭಾಗದಲ್ಲಿ ಪೂನಂ ಪೂನಿಯಾ (57 ಕೆ.ಜಿ) ಮತ್ತು ಪ್ರಾಚಿ (63 ಕೆ.ಜಿ) ಅವರು ಕ್ರಮವಾಗಿ ಕಜಕಸ್ತಾನದ ಸಕೀಶ್ ಅನೆಲ್ ಮತ್ತು ಅನರ್ ತುರ್ಸಿನ್‌ಬೆಕ್‌ ಅವರನ್ನು ಏಕರೀತಿಯ 4–1 ಅಂತರದಿಂದ ಸೋಲಿಸಿದರು.

ಮುಸ್ಕಾನ್‌ (75 ಕೆ.ಜಿ) ಅವರು ತೀವ್ರ ಪೈಪೋಟಿಯ ಸೆಣಸಾಟದಲ್ಲಿ 3–2 ವಿಭಜಿತ ತೀರ್ಪಿನಲ್ಲಿ ಉಜ್ಬೇಕಿಸ್ತಾನ ದ ಝೊಕಿರೋವಾ ಅಝಿಝಾ ಅವರನ್ನು ಸೋಲಿಸಿ ಭಾರತಕ್ಕೆ ಏಳನೇ ಚಿನ್ನ ಗಳಿಸಿಕೊಟ್ಟರು.

ಪ್ರೀತ್ ಮಲಿಕ್ (67 ಕೆ.ಜಿ), ಗುಡ್ಡಿ (48 ಕೆ.ಜಿ), ತಮನ್ನಾ (50 ಕೆ.ಜಿ), ಸನ್ಹೇ (70 ಕೆ.ಜಿ) ಮತ್ತು ಅಲ್ಫಿಯಾ ಪಠಾನ್ (81 ಕೆ.ಜಿ) ಅವರು ತಮ್ಮ ವಿಭಾಗದಲ್ಲಿ ಬೆಳ್ಳಿಯ ಪದಕಗಳನ್ನು ಗಳಿಸಿದರು.

22 ವರ್ಷದೊಳಗಿನವರ ವಿಭಾಗದಲ್ಲಿ ಭಾರತ ಒಟ್ಟು 21 ಪದಕಗಳನ್ನು (7 ಚಿನ್ನ, 5 ಬೆಳ್ಳಿ ಮತ್ತು 9 ಕಂಚು) ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT