ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ವೀನ್‌ ಹೂಡಾಗೆ ತಪ್ಪಿದ ಪ್ಯಾರಿಸ್ ಒಲಿಂಪಿಕ್ ಕೋಟಾ

ನೀಡದ ವಾಸ್ತವ್ಯ ಮಾಹಿತಿ: 57 ಕೆ.ಜಿ ವಿಭಾಗದಲ್ಲಿ ಹೊಸ ಸ್ಪರ್ಧೆ
Published 18 ಮೇ 2024, 4:34 IST
Last Updated 18 ಮೇ 2024, 4:34 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತೆ ಪರ್ವೀನ್ ಹೂಡಾ ಅವರು 12 ತಿಂಗಳಲ್ಲಿ ಮೂರು ಬಾರಿ ವಾಸ್ತವ್ಯದ ಮಾಹಿತಿ ನೀಡಲು ವಿಫಲವಾದ ಕಾರಣ ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಅವರನ್ನು ಅಮಾನತುಗೊಳಿಸಿದೆ. ಹೀಗಾಗಿ ಅವರು ಪ್ಯಾರಿಸ್ ಒಲಿಂಪಿಕ್ ಕೋಟಾ ಕಳೆದುಕೊಂಡಿದ್ದಾರೆ.

ಈ ಮುಜುಗರದಿಂದಾಗಿ, ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಹೊಸದಾಗಿ ಟ್ರಯಲ್ಸ್‌ ನಡೆಸಬೇಕಿದೆ.

ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಹೂಡಾ ಅವರನ್ನು 22 ತಿಂಗಳು ಅಮಾನತುಗೊಳಿಸಿದೆ. ಕಳೆದ ವರ್ಷ ಏಷ್ಯನ್ ಗೇಮ್ಸ್ ಕಂಚಿನ ಪದಕದೊಂದಿಗೆ ಒಲಿಂಪಿಕ್ ಕೋಟಾ ಪಡೆದಿದ್ದ ಬಾಕ್ಸರ್, ವಾಡಾ ನಿಯಮಗಳ ಪ್ರಕಾರ ಏಪ್ರಿಲ್ 2022 ರಿಂದ ಮಾರ್ಚ್ 2023 ರ ಅವಧಿಯಲ್ಲಿ ತಮ್ಮ ವಾಸ್ತವ್ಯದ ಮಾಹಿತಿಯನ್ನು ನೀಡಲು ವಿಫಲರಾಗಿದ್ದಾರೆ.

‘ಪರ್ವೀನ್ ಅವರನ್ನು ಅಂತರರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಐಟಿಎ) 22 ತಿಂಗಳ ಕಾಲ ಅಮಾನತುಗೊಳಿಸಿದೆ’ ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಆದಾಗ್ಯೂ, ಸಂಬಂಧಪಟ್ಟ ಸಂಸ್ಥೆಯೊಂದಿಗೆ ಚರ್ಚಿಸಿದ ನಂತರ, ಪರ್ವೀನ್ ಅವರ ಅಮಾನತು ಶಿಕ್ಷೆಯನ್ನು ಪೂರ್ವಾನ್ವಯವಾಗುವಂತೆ ಮಾಡಲಾಗಿದೆ. ಅವರು ಈಗ ಶುಕ್ರವಾರದಿಂದ 14 ತಿಂಗಳು ಅಮಾನತು ಶಿಕ್ಷೆಯನ್ನು ಅನುಭವಿಸಬೇಕಾಗಿದೆ. ಹೀಗಾಗಿ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.

ನಿಖತ್ ಜರೀನ್ (50 ಕೆಜಿ), ಪ್ರೀತಿ (54 ಕೆಜಿ) ಮತ್ತು ಲವ್ಲಿನಾ ಬೊರ್ಗೊಹೈನ್ (75 ಕೆಜಿ) ಮಾತ್ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಗುಂಪಿನಲ್ಲಿ ಉಳಿದಿದ್ದಾರೆ. 

ಮೇ 24ರಿಂದ ಬ್ಯಾಂಕಾಕ್‌ನಲ್ಲಿ ಆರಂಭವಾಗಲಿರುವ ಅಂತಿಮ ಒಲಿಂಪಿಕ್ ಅರ್ಹತಾ ಸುತ್ತಿನ ಪಂದ್ಯ ಭಾರತಕ್ಕೆ 57 ಕೆ.ಜಿ ವಿಭಾಗದಲ್ಲಿ ಅರ್ಹತೆ ಪಡೆಯುವ ಮತ್ತೊಂದು ಅವಕಾಶ ಸಿಗಲಿದೆ. ಆದರೆ ದೇಶವು ಏಪ್ರಿಲ್ 11 ರೊಳಗೆ ನೋಂದಾಯಿಸಿದ ಕಾಯ್ದಿರಿಸಿದ ಆಟಗಾರರನ್ನು ಮಾತ್ರ ಕಣಕ್ಕಿಳಿಸಬಹುದು.

‘ಇದರರ್ಥ 60 ಕೆ.ಜಿ ಮತ್ತು 66 ಕೆ.ಜಿ ವಿಭಾಗದಲ್ಲಿ ಕಾಯ್ದಿರಿಸಿರುವ ಇಬ್ಬರು ಬಾಕ್ಸರ್‌ಗಳು ಮಾತ್ರ ಬ್ಯಾಂಕಾಕ್‌ನಲ್ಲಿ ಸ್ಪರ್ಧಿಸಲು ಅರ್ಹರಾಗಿದ್ದಾರೆ’ ಎಂದು ಬಿಎಫ್ಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT