ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಬಿಜೆಪಿ ಖಚಿತಪಡಿಸುತ್ತದೆ: ಅಮಿತ್ ಶಾ

Published 6 ಮೇ 2024, 2:42 IST
Last Updated 6 ಮೇ 2024, 2:42 IST
ಅಕ್ಷರ ಗಾತ್ರ

ಹೈದರಾಬಾದ್: ದೇಶದ ಸಂಸತ್ತಿನಲ್ಲಿ ಕನಿಷ್ಠ ಒಬ್ಬ ಬಿಜೆಪಿ ಸಂಸದ ಇರುವವರೆಗೂ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿ ಅಂತ್ಯವಾಗಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ತೆಲಂಗಾಣದ ಕಾಗಜ್‌ನಗರ ಮತ್ತು ನಿಜಾಮಾಬಾದ್‌ನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನ ನೀಡಿದರೆ ಮೀಸಲಾತಿ ಅಂತ್ಯವಾಗಲಿದೆ ಎಂದು ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಕಿಡಿಕಾರಿದರು.

ಮೋದಿಗೆ ಬಹುಮತ ಬಂದರೆ ಮೀಸಲಾತಿಯನ್ನು ರದ್ದು ಮಾಡುತ್ತಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ಕಳೆದ 10 ವರ್ಷಗಳಿಂದ ಮೋದಿಗೆ ಬಹುಮತವಿತ್ತು. ಹಾಗಾದರೆ, ಮೀಸಲಾತಿ ಏಕೆ ರದ್ದಾಗಿಲ್ಲ ಎಂದು ಪ್ರಶ್ನಿಸಿದರು.

ಬಹುಮತವನ್ನು ಮೋದಿ ಮೀಸಲಾತಿ ರದ್ದು ಮಾಡಲು ಬಳಸಲಿಲ್ಲ. ಅದರ ಬದಲು ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ಸ್ಥಾನಮಾನ ತೆಗೆಯಲು, ತ್ರಿವಳಿ ತಲಾಖ್‌ಗೆ ಅಂತ್ಯ ಹಾಡಲು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಿಸಲು, ರಾಮ ಮಂದಿರ ನಿರ್ಮಾಣ ಮಾಡಲು ಬಳಸಿದ್ದಾರೆ ಎಂದು ಹೇಳಿದರು.

‘ನಾವು ಮೀಸಲಾತಿಯನ್ನು ಅಂತ್ಯಗೊಳಿಸುತ್ತೇವೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ನಾನು ಇಂದು ಮೋದಿ ಗ್ಯಾರಂಟಿಯನ್ನು ನೀಡುತ್ತೇನೆ. ಸಂಸತ್ತಿನಲ್ಲಿ ಕನಿಷ್ಠ ಪಕ್ಷ ಒಬ್ಬ ಬಿಜೆಪಿ ಸಂಸದನಿರುವವರೆಗೂ ದಲಿತರು, ಆದಿವಾಸಿಗಳು ಮತ್ತು ಒಬಿಸಿ ಮೀಸಲಾತಿ ಅಂತ್ಯವಾಗಲು ಬಿಡುವುದಿಲ್ಲ’ಎಂದು ಗುಡುಗಿದರು.

ತಮ್ಮ ತಿರುಚಿದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಹ ವಿಡಿಯೊ ಫಾರ್ವರ್ಡ್ ಮಾಡಿದ್ದಾರೆ ಎಂದು ಹೇಳಿದರು.

ಮುಸ್ಲಿಂ ಮೀಸಲಾತಿ ಸಾಂವಿಧಾನಿಕವಾದುದಲ್ಲ. ಬಿಜೆಪಿ ತೆಲಂಗಾಣದಲ್ಲಿ ಸರ್ಕಾರ ರಚಿಸಿದ ಬಳಿಕ ಅದನ್ನು ರದ್ದು ಮಾಡಲಿದೆ. ಆದಿವಾಸಿ ಮತ್ತು ದಲಿತರ ಮೀಸಲಾತಿಯನ್ನು ಹೆಚ್ಚಿಸಲಿದೆ. ಮುಸ್ಲಿಮರಿಗೆ ಮೀಸಲಾತಿ ನೀಡಲು ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಕಾಂಗ್ರೆಸ್ ಮೊಟಕುಗೊಳಿಸಿದೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ತ್ರಿವಳಿ ತಲಾಖ್ ತೆಗೆದು ಹಾಕಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮರುಜಾರಿ ಮಾಡಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ ಎಂದು ಶಾ ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT