ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಘೋಷಣೆ | ಆದೇಶಕ್ಕೆ ಜೂನ್‌ ಅಂತ್ಯದ ಗಡುವು: ಅಧಿಕಾರಿಗಳಿಗೆ CM ನಿರ್ದೇಶನ

Published 18 ಮೇ 2024, 4:29 IST
Last Updated 18 ಮೇ 2024, 4:29 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಮಾಡಿರುವ ಎಲ್ಲ ಘೋಷಣೆಗಳ ಅನುಷ್ಠಾನಕ್ಕೆ ಜೂನ್‌ ಅಂತ್ಯದೊಳಗೆ ಆದೇಶಗಳನ್ನು ಹೊರಡಿಸುವಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ನಿರ್ದೇಶನ ನೀಡಿದರು.

ವಿಧಾನಸೌಧದಲ್ಲಿ ವಿವಿಧ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿ ಗಳು ಮತ್ತು ಕಾರ್ಯದರ್ಶಿಗಳ ಜತೆ ಸಭೆ ನಡೆಸಿದ ಅವರು, ಬಜೆಟ್‌ ಘೋಷಣೆಗಳ ಅನುಷ್ಠಾನಕ್ಕೆ ನಡೆಸಿರುವ ಸಿದ್ಧತೆ ಕುರಿತು ಪರಿಶೀಲಿಸಿದರು. ಅಧಿಕಾರಿ ಗಳಿಂದ ಇಲಾಖಾವಾರು ಮಾಹಿತಿ ಪಡೆದರು. ‘ಬಜೆಟ್‌ನಲ್ಲಿ ಮಾಡಿರುವ ಎಲ್ಲ ಘೋಷಣೆಗಳ ಅನುಷ್ಠಾನಕ್ಕೆ ಜೂನ್‌ ಅಂತ್ಯದೊಳಕ್ಕೆ ಆದೇಶ ಹೊರಡಿಸಲೇಬೇಕು. ಬಜೆಟ್‌ ಘೋಷಣೆ ಗಳಲ್ಲಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಕ್ರಿಯಾ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಿ, ಜೂನ್‌ ಅಂತ್ಯದೊಳಗೆ ಟೆಂಡರ್‌ ಪ್ರಕ್ರಿಯೆ ಆರಂಭಿಸಬೇಕು ಎಂಬ ನಿರ್ದೇಶನವನ್ನು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ವಿಪತ್ತು ನಿರ್ವಹಣೆಗೆ ಸಿದ್ಧತೆ: ‘ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಈ ಬಾರಿ ಅತಿವೃಷ್ಟಿಯಾಗುವ ಸಾಧ್ಯತೆಗಳಿವೆ. ಹೆಚ್ಚು ಮಳೆ ಬಿದ್ದರೆ ಸಂಭವಿಸಬಹುದಾದ ನೈಸರ್ಗಿಕ ವಿಕೋಪಗಳನ್ನು ಎದುರಿಸಲು ಸಂಬಂಧಿ ಸಿದ ಇಲಾಖೆಗಳು ತಕ್ಷಣದಿಂದಲೇ ಸಿದ್ಧತೆ ಆರಂಭಿಸಬೇಕು’ ಎಂಬ ಸೂಚನೆಯನ್ನು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸಂಭವನೀಯ ಪ್ರವಾಹ ಪ್ರದೇಶ ಗಳನ್ನು ಗುರುತಿಸಬೇಕು. ತಗ್ಗು ಪ್ರದೇಶ ಗಳಲ್ಲಿ ಜನವಸತಿಗಳನ್ನೂ ಗುರುತು ಮಾಡಬೇಕು. ಭೂ ಕುಸಿತ ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಿ, ಅಪಾಯ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ಕೃಷಿ ಇಲಾಖೆ ಸಿದ್ಧತೆ ನಡೆಸಬೇಕು. ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಉದ್ಭವಿಸಬಾರದು. ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿರುವ ಅಹವಾಲುಗಳನ್ನು ಎಲ್ಲ ಇಲಾಖೆಗಳೂ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ.

ಕೇಂದ್ರಕ್ಕೆ ಪತ್ರ:

ಬಿತ್ತನೆ ಮಾಡಿದ್ದು, ಬೆಳೆ ಚಿಗುರೊಡೆಯದ ಜಮೀನುಗಳ ಮಾಲೀಕರಿಗೂ ಬರ ಪರಿಹಾರ ನೀಡುವಂತೆ ಕೆಲವು ಶಾಸಕರು ಬೇಡಿಕೆ ಇಟ್ಟಿರುವ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಆ ರೀತಿ ಪರಿಹಾರ ನೀಡಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗಸೂಚಿಗಳಲ್ಲಿ ಅವಕಾಶ ಇಲ್ಲ ಎಂಬುದನ್ನೂ ಗಮನಕ್ಕೆ ತಂದರು.‌

‘ಬಿತ್ತನೆ ಮಾಡಿದ್ದು, ಮೊಳಕೆಯೊಡೆಯದೇ ಇದ್ದರೂ ಅಂತಹ ಪ್ರಕರಣಗಳಲ್ಲಿ ಪರಿಹಾರ ವಿತರಿಸಲು ಅವಕಾಶವಾಗುವಂತೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಮುಖ್ಯಮಂತ್ರಿ ಸೂಚಿಸಿದರು’ ಎಂದು ಮೂಲಗಳು ತಿಳಿಸಿವೆ.

ಕೆರೆ ಭರ್ತಿಗೆ ಮನವಿ

ಬೆಂಗಳೂರಿನಲ್ಲಿ 6,900 ಕೊಳವೆ ಬಾವಿಗಳು ಬತ್ತಿ ಹೋಗಿರುವ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ನಗರದ ಕರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಭರ್ತಿ ಮಾಡುವಂತೆ ಹಾಗೂ ಮಳೆ ನೀರು ಸರಾಗವಾಗಿ ಕೆರೆ ತಲುಪಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸಭೆಯಲ್ಲಿ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT