ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾವಾಣಿ: ‘ಎವರೆಸ್ಟ್‌’ನಲ್ಲೂ ಸ್ವಚ್ಛತಾ ಅಭಿಯಾನ!

ನೇಪಾಳ ಸೇನೆಯ ನೇತೃತ್ವದಲ್ಲಿ ಆಯೋಜನೆ; ಶೆರ್ಪಾಗಳ, ಪರ್ವತಾರೋಹಿಗಳ ಸಹಕಾರ
Published 1 ಮೇ 2024, 23:30 IST
Last Updated 1 ಮೇ 2024, 23:30 IST
ಅಕ್ಷರ ಗಾತ್ರ

ಮೌಂಟ್‌ ಎವರೆಸ್ಟ್ ಪರ್ವತ ಪ್ರದೇಶದಲ್ಲಿ ಎವರೆಸ್ಟ್‌ ಸ್ವಚ್ಛತಾ ಅಭಿಯಾನ (Everest Cleaning Campaign) – 2024 ಅನ್ನು ನೇಪಾಳ ಸೇನೆ ಆರಂಭಿಸಿದೆ. ಈ ಸ್ವಚ್ಛತಾ ಅಭಿಯಾನದಡಿ ಎವರೆಸ್ಟ್‌ ಪರ್ವತದಲ್ಲಿ ಸಂಗ್ರಹಿತವಾಗಿರುವ ಮಾನವ ನಿರ್ಮಿತ ತ್ಯಾಜ್ಯವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಮಾಲಿನ್ಯ ಮಟ್ಟವನ್ನು ನಿಯಂತ್ರಿಸುವ ಹಾಗೂ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಲಾಗಿದೆ. ಈ ಬಾರಿಯ ಅಭಿಯಾನ ‘ಕಸ ನಿರ್ಮೂಲಿಸಿ; ಹಿಮಾಲಯ ಉಳಿಸಿ’ ಎಂಬ ಧ್ಯೇಯವಾಕ್ಯದಡಿ ನಡೆಯುತ್ತಿದೆ.

ಕಠ್ಮಂಡುವಿನಲ್ಲಿ ನೇಪಾಳ ಸೇನಾ ಮುಖ್ಯಸ್ಥ ಜನರಲ್ ಪ್ರಭುರಾಮ್ ಶರ್ಮಾ ಈಚೆಗೆ ಈ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಸಾಗರಮಾತಾ (ಹಿಮಾಲಯ) ಪ್ರದೇಶದಲ್ಲಿ ಮಾನವ ನಿರ್ಮಿತ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ, ಪರಿಸರ ಕಾಳಜಿಯ ಅಗತ್ಯ ಹೆಚ್ಚಾಗಿದೆ. ಹಿಮಾಲಯ ಪರ್ವತದ ಪರಿಸರ ಸಂರಕ್ಷಣೆ ಸಾರ್ವಜನಿಕ ಕಾಳಜಿಯ ವಿಷಯ ಆಗಿರುವುದರಿಂದ ಈ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲ ಪಾಲುದಾರರು ಸಹಕರಿಸಬೇಕು ಮತ್ತು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಕೋರಿದ್ದಾರೆ.

ಮೇಜರ್ ಆದಿತ್ಯ ಕರ್ಕಿ ನೇತೃತ್ವದ 12 ಜನ ನೇಪಾಳ ಯೋಧರ ತಂಡ ಏಪ್ರಿಲ್ 14 ರಿಂದ ಎವರೆಸ್ಟ್ ಬೇಸ್ ಕ್ಯಾಂಪ್‌ನಿಂದ ಈ ಅಭಿಯಾನ ಆರಂಭಿಸಿದೆ. 18 ಶೆರ್ಪಾಗಳ ತಂಡ ಕೂಡ ಈ ಸ್ವಚ್ಛತಾ ಅಭಿಯಾನದಡಿ ನೇಪಾಳ ಸೈನಿಕರೊಂದಿಗೆ ಸಹಕರಿಸಲಿದೆ. ಈ ಅಭಿಯಾನಕ್ಕೆ ನೇಪಾಳದ ಅರಣ್ಯ ಮತ್ತು ಪರಿಸರ ಸಚಿವಾಲಯ, ಪ್ರವಾಸೋದ್ಯಮ ಇಲಾಖೆ ಮತ್ತು ನೇಪಾಳ ಪರ್ವತಾರೋಹಿಗಳ ಸಂಘಗಳು ನೆರವು ನೀಡುತ್ತಿವೆ. ಈ ಸ್ವಚ್ಛತಾ ಅಭಿಯಾನ 50 ದಿನಗಳವರೆಗೆ ನಡೆಯಲಿದೆ.

ಈ ತಂಡ ಮೌಂಟ್ ಎವರೆಸ್ಟ್, ಮೌಂಟ್ ಲೊಟ್ಸೆ ಮತ್ತು ಮೌಂಟ್ ನಪ್ಟ್ಸೆಗಳಿಂದ ಕಸವನ್ನು ಸಂಗ್ರಹಿಸಿ ತರಲಿದೆ. ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಜೈವಿಕ ತ್ಯಾಜ್ಯವನ್ನು ಬೇಸ್‌ ಕ್ಯಾಂಪಿನಿಂದ ‘ನಾಮ್ಚೆ ಬಜಾರ್‌’ ಪಟ್ಟಣಕ್ಕೆ ತಂದು ಅಲ್ಲಿನ ಸರ್ಕಾರೇತರ ಸೇವಾ ಸಂಸ್ಥೆ ‘ಸಾಗರಮಾತಾ ಮಾಲಿನ್ಯ ನಿಯಂತ್ರಣ ಸಮಿತಿ’ಗೆ (SPCC: Sagarmatha Pollution Control Committee’) ಹಸ್ತಾಂತರಿಸಲಿದೆ. ಸಾಗರಮಾತಾ ಮಾಲಿನ್ಯ ನಿಯಂತ್ರಣ ಸಮಿತಿ ಆ ಜೈವಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಘಟಿಸಿ, ಯಾವುದೇ ಅಪಾಯವಿಲ್ಲದಂತೆ ವಿಲೇವಾರಿ ಮಾಡಲಿದೆ. ಜೈವಿಕವಲ್ಲದ ತ್ಯಾಜ್ಯ ಮತ್ತು ಮೃತ ದೇಹಗಳನ್ನು ಹೆಲಿಕಾಪ್ಟರ್‌ ಮೂಲಕ ಕಠ್ಮಂಡುವಿಗೆ ತರಲಾಗುತ್ತದೆ. ಹೀಗೆ ತಂದ ಘನ ಅವಶೇಷಗಳನ್ನು ಕಠ್ಮಂಡು ಬಳಿ ಇರುವ ‘ಕ್ಸಿನ್ಹುವಾ ಬ್ಲೂ ವೆಸ್ಟ್‌’ ಸಂಸ್ಥೆಯ ವಿಶೇಷ ಕಸ ವಿಲೇವಾರಿ ಘಟಕದಲ್ಲಿ ಸಂಗ್ರಹಿಸಿ ಪ್ಲಾಸ್ಟಿಕ್, ಗಾಜು, ಕಬ್ಬಿಣ, ಅಲ್ಯೂಮಿನಿಯಂ ಮತ್ತು ಬಟ್ಟೆಯಂಥ ವಿವಿಧ ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಅವುಗಳಲ್ಲಿ ಮರುಬಳಕೆಗೆ ಸಾಧ್ಯವಿರುವ ವಸ್ತುಗಳನ್ನು ಪರಿಷ್ಕರಣೆಗೆ ಕಳುಹಿಸಲಾಗುತ್ತದೆ. ಮರುಬಳಕೆಗೆ ಅಸಾಧ್ಯವಾದ ವಸ್ತುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ ಎಂದು ನೇಪಾಳ ಸೇನೆಯ ವಕ್ತಾರ ಬ್ರಿಗೇಡಿಯರ್‌ ಕೃಷ್ಣ ಪ್ರಸಾದ್ ಭಂಡಾರಿ ಮಾಹಿತಿ ನೀಡಿದ್ದಾರೆ.

ನೇಪಾಳ ಸೇನೆ 2019 ರಿಂದ ಎವರೆಸ್ಟ್ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ. ನೇಪಾಳ ಸೇನೆಯ ನೇತೃತ್ವದಲ್ಲಿ ನಡೆಯುತ್ತಿರುವ ನಾಲ್ಕನೇ ಸ್ವಚ್ಛತಾ ಅಭಿಯಾನ ಇದಾಗಿದೆ. 2019ರಲ್ಲಿ ನಡೆಸಿದ ಮೊದಲ ಅಭಿಯಾನದಲ್ಲಿ 10 ಟನ್‌ ಕಸ ಹಾಗೂ 4 ಶವಗಳನ್ನು ಸಂಗ್ರಹಿಸಲಾಗಿತ್ತು. ಈ ಅಭಿಯಾನದಡಿ 2.3 ಕೋಟಿ ನೇಪಾಳ ರೂಪಾಯಿ ವ್ಯಯಿಸಲಾಗಿತ್ತು. 2022ರಲ್ಲಿ ನಡೆಸಿದ ಎರಡನೇ ಅಭಿಯಾನದಲ್ಲಿ 8 ಟನ್‌ ಕಸ ಹಾಗೂ 2 ಶವಗಳನ್ನು ಸಂಗ್ರಹಿಸಲಾಗಿತ್ತು. 2023ರಲ್ಲಿ ನಡೆಸಿದ ಮೂರನೇ ಅಭಿಯಾನದಲ್ಲಿ 7 ಟನ್‌ ಕಸ ಹಾಗೂ 3 ಶವಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗಿತ್ತು. ಈ ಬಾರಿ 2024ರ ‘ಮೌಂಟೇನ್ ಕ್ಲೀನಿಂಗ್ ಕ್ಯಾಂಪೇನ್‌’ ಅಭಿಯಾನದಡಿ ಮೌಂಟ್‌ ಎವರೆಸ್ಟ್ ಪರ್ವತ ಪ್ರದೇಶದಿಂದ ಪ್ಲಾಸ್ಟಿಕ್‌ ತ್ಯಾಜ್ಯ, ಬಳಸಿ ಬಿಸಾಡಿದ ವಸ್ತುಗಳು ಸೇರಿದಂತೆ ಸುಮಾರು 10 ಟನ್ ಕಸ ಮತ್ತು ಐದು ಮೃತದೇಹಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಈಚೆಗೆ ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ ಹಿಮ ಕರಗುತ್ತಿದ್ದು, ಹಿಮದಡಿ ವರ್ಷಗಳಿಂದ ಸಿಲುಕಿದ್ದ ತ್ಯಾಜ್ಯ ಹಾಗೂ ಮಾನವ ಶವದ ಅವಶೇಷಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ. ಆದರೆ, ಹಿಮಾಲಯ ಪರ್ವತ ಪ್ರದೇಶದಲ್ಲಿನ ಕಡಿಮೆ ತಾಪಮಾನ, ಎತ್ತರ, ಮತ್ತಿತರ ಪ್ರಾಕೃತಿಕ ಅಡೆತಡೆಗಳಿಂದ ಅವುಗಳನ್ನು ತೆರವುಗೊಳಿಸುವುದು ಅಥವಾ ಸಂಗ್ರಹಿಸುವುದು ಸವಾಲಿನ ಕೆಲಸವಾಗಿದೆ.

ಚಾರಣಕ್ಕೆ ಹೆಸರಾಗಿರುವುದೇ ಎವರೆಸ್ಟ್‌ಗೆ ಮುಳುವಾಗುತ್ತಿದೆ!

ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್ ಸಮುದ್ರ ಮಟ್ಟದಿಂದ 8,848 ಮೀಟರ್ (29,029 ಅಡಿ) ಎತ್ತರದಲ್ಲಿದೆ. ಹೀಗಾಗಿ, ಎವರೆಸ್ಟ್ ಪ್ರತಿ ವರ್ಷ ಸಾವಿರಾರು ಪರ್ವತಾರೋಹಿಗಳು ಮತ್ತು ಚಾರಣಿಗರನ್ನು ಆಕರ್ಷಿಸುತ್ತದೆ. ಪ್ರತಿ ವರ್ಷ ಸುಮಾರು 80 ಸಾವಿರಕ್ಕೂ ಹೆಚ್ಚು ಪರ್ವತಾರೋಹಿಗಳು ಮೌಂಟ್ ಎವರೆಸ್ಟ್‌ ಏರಲು ಪ್ರಯತ್ನಿಸುತ್ತಾರೆ. ಬೆಟ್ಟ ಇಳಿಯುವ ಸಂದರ್ಭದಲ್ಲಿ ಉಸಿರಾಡಲು ಕಷ್ಟಪಡುವ ಪರ್ವತಾರೋಹಿಗಳಿಗೆ ವಾಕರಿಕೆ ಸಮಸ್ಯೆಯೂ ಕಾಡುತ್ತದೆ. ಹೀಗಾಗಿ, ಅವರು ತಮ್ಮ ಟೆಂಟುಗಳನ್ನು ಹೊತ್ತುತರುವ ಬದಲು ಅಲ್ಲಿಯೇ ಬಿಟ್ಟುಬಿಡುತ್ತಾರೆ. ಯಾವ ತಂಡದ ಟೆಂಟು ಎಂಬುದು ಗೊತ್ತಾಗದಿರಲಿ ಎಂಬ ಕಾರಣಕ್ಕೆ ಟೆಂಟ್‌ ಮೇಲಿರುವ ಲಾಂಛನವನ್ನೂ ಕಿತ್ತುಹಾಕುತ್ತಾರೆ. ಅಲ್ಲದೇ, ತಮ್ಮ ಜೊತೆಗೆ ತಂದಿದ್ದ ಡಬ್ಬಗಳು, ಪ್ಲಾಸ್ಟಿಕ್ ಚೀಲಗಳು, ಒಲೆ, ಮತ್ತಿತರ ಉಪಕರಣಗಳು, ಆಮ್ಲಜನಕ ಟ್ಯಾಂಕ್‌ಗಳು ಮತ್ತು ಪರ್ವತಾರೋಹಣ ಸಾಮಗ್ರಿಗಳನ್ನು ಅಲ್ಲಿಯೇ ಬಿಟ್ಟು ಬರುತ್ತಾರೆ. ಇದಲ್ಲದೇ, ಟನ್‌ಗಟ್ಟಲೇ ಮಾನವ ಮಲ ಈಗಾಗಲೇ ಎವರೆಸ್ಟ್‌ನಲ್ಲಿ ಸಂಗ್ರಹವಾಗಿದೆ. ಹೀಗಾಗಿ, ಎವರೆಸ್ಟ್‌ ಮಡಿಲಲ್ಲಿ ಕಸದ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಕಸ ಸಂಗ್ರಹಿಸಿ ತಂದರೆ ಬಹುಮಾನ!

2018ರಲ್ಲಿ ಎವರೆಸ್ಟ್ ಏರುವ ಪರ್ವತಾರೋಹಿಗಳು ಕನಿಷ್ಠ 8 ಕೆಜಿ ಕಸವನ್ನು ಹೆಕ್ಕಿ ತಂದರೆ 4000 ಡಾಲರ್‌ ಹಣ ಮರುಪಾವತಿ ಮಾಡುವುದಾಗಿ ನೇಪಾಳ ಸರ್ಕಾರ ಘೋಷಿಸಿತ್ತು. ನಂತರ ಎವರೆಸ್ಟ್‌ ಪರ್ವತ ಪ್ರದೇಶದಿಂದ ಕನಿಷ್ಠ 1 ಕೆಜಿ ಕಸವನ್ನು ಹೆಕ್ಕಿ ತಂದವರಿಗೂ ಕೂಡ ಸೂಕ್ತ ಬಹುಮಾನ ನೀಡಲಾಗುವುದು ಎಂದು ನೇಪಾಳ ಸರ್ಕಾರ ತಿಳಿಸಿದೆ. ಒಟ್ಟಿನಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಎವರೆಸ್ಟ್ ಸ್ವಚ್ಛತೆ ಒಂದೋ ಎರಡೋ ವರ್ಷಗಳಲ್ಲಂತೂ ಮುಗಿಯುವುದು ಅಸಾಧ್ಯ. ಇದೊಂದು ನಿರಂತರ ಅಭಿಯಾನವಾಗಿ ಮುಂದುವರಿದರೆ ಮಾತ್ರ ಮುಂದೊಂದು ದಿನ ‘ಸ್ವಚ್ಛ ಎವರೆಸ್ಟ್‌’ ಅನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ ಎಂಬುದು ನೇಪಾಳ ಸರ್ಕಾರದ ಅಭಿಮತ.

ಭಾರತ, ಟಿಬೆಟ್‌, ಚೀನಾದಿಂದಲೂ ನಡೆದಿತ್ತು ಸ್ವಚ್ಛತಾ ಅಭಿಯಾನ 

2015ರ ಏಪ್ರೀಲ್‌ ಹಾಗೂ ಮೇ ತಿಂಗಳಲ್ಲಿ ಭಾರತೀಯ ಸೇನೆಯ 34 ಯೋಧರ ತಂಡ ಮೇಜರ್‌ ರಣವೀರ್ ಸಿಂಗ್ ಜುಮ್ವಾವಲ್ ನೇತೃತ್ವದಲ್ಲಿ ‘ಸ್ವಚ್ಛ ಭಾರತ ಅಭಿಯಾನ’ದ ಭಾಗವಾಗಿ ಎವರೆಸ್ಟ್‌ನಿಂದ 4 ಟನ್‌ ಕಸ ಸಂಗ್ರಹಿಸಿ ತಂದಿತ್ತು. ಭಾರತದ ಲೆಫ್ಟನೆಂಟ್‌ ಕಮಾಂಡರ್‌ ಎಂ.ಎಸ್.ಕೋಹ್ಲಿ ನೇತೃತ್ವದ ತಂಡ ಎವರೆಸ್ಟ್ ಏರಿ 50 ವರ್ಷಗಳನ್ನು ಪೂರ್ಣಗೊಳಿಸಿದ ಸಾಧನೆಯ ಸ್ಮರಣಾರ್ಥ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಎವರೆಸ್ಟ್‌ ಶಿಖರದಲ್ಲಿ ಬಳಸಿ ಬಿಸಾಕಿರುವ ಬಾಟಲಿ, ಪ್ಲಾಸ್ಟಿಕ್, ಟೆಂಟ್, ಸ್ಲೀಪಿಂಗ್ ಬ್ಯಾಗ್, ಆಕ್ಸಿಜನ್ ಸಿಲಿಂಡರ್‌ಗಳನ್ನು ಹಾಗೂ ಎರಡು ಶವಗಳನ್ನು ಈ ತಂಡ ಕೆಳಕ್ಕೆ ತಂದಿತ್ತು. 2017ರ ಮೇನಲ್ಲಿ ಟಿಬೆಟ್‌ ಒಂಬತ್ತು ದಿನಗಳ ಎವರೆಸ್ಟ್‌ ಸ್ವಚ್ಛತಾ ಅಭಿಯಾನವನ್ನು ಕೈಗೊಂಡು ಸುಮಾರು 5 ಟನ್‌ ಕಸ ಸಂಗ್ರಹಿಸಿತ್ತು. 2018 ರಲ್ಲಿ ಚೀನಾ ಮತ್ತು ಇತರ ದೇಶಗಳ 60 ಸ್ವಯಂಸೇವಕರು ಸೇರಿಕೊಂಡು ಐದು ದಿನಗಳಲ್ಲಿ ನಾಲ್ಕು ಟನ್ ಕಸವನ್ನು ಎವರೆಸ್ಟ್‌ನಿಂದ ಸಂಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT