ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ನಮಾಮಿ ಗಂಗೆ: ಕುಂಟುತ್ತಲೇ ಸಾಗುತ್ತಿದೆ ಶುದ್ಧೀಕರಣ ಕ್ರಿಯೆ
ಆಳ–ಅಗಲ | ನಮಾಮಿ ಗಂಗೆ: ಕುಂಟುತ್ತಲೇ ಸಾಗುತ್ತಿದೆ ಶುದ್ಧೀಕರಣ ಕ್ರಿಯೆ
Published 14 ಮೇ 2024, 23:35 IST
Last Updated 14 ಮೇ 2024, 23:35 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಮಧ್ಯೆ ಕಾಂಗ್ರೆಸ್‌ನ ಜೈರಾಮ್‌ ರಮೇಶ್ ಅವರು ‘ನಮಾಮಿ ಗಂಗೆ’ ಯೋಜನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇದು ಯಶಸ್ವಿಯೇ ಆಗಿಲ್ಲ ಎಂಬುದು ಅವರ ಆರೋಪ. ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ದಿನವೇ ಅವರು ಈ ಬಗ್ಗೆ ಮಾತನಾಡಿದ್ದಾರೆ. ಹತ್ತಾರು ಸಾವಿರ ಕೋಟಿ ವೆಚ್ಚದ ಈ ಯೋಜನೆಯಿಂದ ಆಗುತ್ತಿರುವ ಅನುಕೂಲಗಳೇನು ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ

ಗಂಗಾ ನದಿಯ ನೀರನ್ನು ಶುದ್ಧೀಕರಿಸುವ ‘ನೈರ್ಮಲ್ಯ ಗಂಗಾ’ ಯೋಜನೆಗೆ 2014ರ ಜೂನ್‌ನಲ್ಲಿ ‘ನಮಾಮಿ ಗಂಗೆ’ ಎಂದು ಮರುನಾಮಕಾರಣ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದ ಈ ಯೋಜನೆ ಅಡಿಯಲ್ಲಿ, ಗಂಗಾ ನದಿಗೆ ಹರಿದುಬರುವ ಕೊಳಚೆ ನೀರನ್ನು ಸಂಪೂರ್ಣವಾಗಿ ಶುದ್ಧೀಕರಿಸುವ ಗುರಿ ಹಾಕಿಕೊಳ್ಳಲಾಗಿತ್ತು. 2014ರಲ್ಲಿ ಹಾಕಿಕೊಳ್ಳಲಾಗಿದ್ದ ಯೋಜನೆ ಪ್ರಕಾರ 2021ರ ಮಾರ್ಚ್‌ ಅಂತ್ಯದ ವೇಳೆಗೆ ಈ ಕಾಮಗಾರಿಗಳನ್ನು ಪೂರ್ಣಗೊಳ್ಳಬೇಕಿತ್ತು. ಗುರಿ ತಲುಪುವುದು ಸಾಧ್ಯವಾಗದೇ ಇದ್ದಾಗ 2021ರ ಯೋಜನೆಯನ್ನು 2026ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ. ಯೋಜನೆಯ ವೆಚ್ಚವನ್ನೂ ದುಪ್ಪಟ್ಟುಗೊಳಿಸಲಾಗಿದೆ. ಯೋಜನೆಯ ಗಡುವು ಇನ್ನೂ ಎರಡು ವರ್ಷಗಳಷ್ಟು ದೂರವಿದೆ. ಆದರೆ ಗಂಗಾ ಬಯಲಿನ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಎಲ್ಲಿಯೂ ಈಗಲೂ ನೇರವಾಗಿ ಕುಡಿಯಲು ನದಿಯ ನೀರನ್ನು ಬಳಸುವಂತಹ ಸ್ಥಿತಿ ಇಲ್ಲ. ಕುಡಿಯುವುದಕ್ಕೆ ಇರಲಿ, ಸ್ನಾನ ಮಾಡಲೂ ಈ ನೀರನ್ನು ಬಳಸಲು ಸಾಧ್ಯವಿಲ್ಲ ಎಂಬುದನ್ನು ಆಯಾ ಸರ್ಕಾರಗಳ ವರದಿಗಳೇ ಹೇಳುತ್ತವೆ.

ಗಂಗಾ ನದಿ ಮತ್ತು ಅದರ ಕೆಲವು ಉಪನದಿಗಳ ನೀರು ಉತ್ತರಾಖಂಡದ ವ್ಯಾಪ್ತಿಯಲ್ಲಿ ಹರಿಯುವಾಗ ಶುದ್ಧವಾಗಿಯೇ ಇರುತ್ತದೆ. ರಾಜ್ಯದ ಉದ್ದಕ್ಕೂ ನದಿ ಹರಿಯುವೆಡೆಯಲ್ಲಿ ನೇರವಾಗಿ ಕುಡಿಯಲು ಬಳಸಬಹುದಾದಷ್ಟು ನೀರಿನ ಗುಣಮಟ್ಟ ಉತ್ತಮವಾಗಿದೆ. ಆದರೆ ಉತ್ತರ ಪ್ರದೇಶವನ್ನು ಗಂಗಾ ಪ್ರವೇಶಿಸಿದಂತೆ ನೀರಿನ ಗುಣಮಟ್ಟ ಕುಸಿಯುತ್ತಾ ಹೋಗುತ್ತದೆ. ಉತ್ತರ ಪ್ರದೇಶದಲ್ಲೇ ಹಲವು ಉಪನದಿಗಳು ಗಂಗಾ ನದಿಯನ್ನು ಕೂಡಿಕೊಳ್ಳುತ್ತವೆ. ಅವೂ ಗಂಗಾ ನದಿಯ ಮಾಲಿನ್ಯದ ಮಟ್ಟವನ್ನು ಹೆಚ್ಚಿಸುತ್ತವೆ. ಬಿಹಾರದಲ್ಲಿ ಮಾಲಿನ್ಯ ಇನ್ನಷ್ಟು ಮತ್ತು ಪಶ್ಚಿಮ ಬಂಗಾಳದಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ. ಉತ್ತರಾಖಂಡದಲ್ಲಿ ಗಂಗಾ ನದಿಯ ನೀರಿನ ಗುಣಮಟ್ಟ ಉತ್ತಮವಾಗಿಯೇ ಇದ್ದರೂ ವರ್ಷದಿಂದ ವರ್ಷಕ್ಕೆ ಗುಣಮಟ್ಟ ಇಳಿಕೆಯಾಗುತ್ತಲೇ ಇದೆ. ಹೀಗಾಗಿ ಇಷ್ಟೂ ರಾಜ್ಯಗಳಲ್ಲಿ ‘ನಮಾಮಿ ಗಂಗೆ’ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿತ್ತು. ಗಂಗಾ ನದಿಯ ಪ್ರಮುಖ ಉಪನದಿಯಾದ ಯಮುನೆ ಹಾದು ಬರುವ ಹರಿಯಾಣ ಮತ್ತು ದೆಹಲಿಯನ್ನೂ ಯೋಜನೆಯ ವ್ಯಾಪ್ತಿಗೆ ತರಲಾಗಿತ್ತು. 

ಗಂಗಾ ನದಿಯ ದಂಡೆಯ ಪಟ್ಟಣಗಳು ಮತ್ತು ದೊಡ್ಡ ಜನವಸತಿ ಪ್ರದೇಶಗಳಿಂದ ಕೊಳಚೆ ನೀರು ನೇರವಾಗಿ ನದಿ ನೀರು ಸೇರುವುದನ್ನು ತಡೆಯುವುದು ಯೋಜನೆಯ ಪ್ರಮುಖ ಗುರಿಗಳಲ್ಲಿ ಒಂದು. ಜತೆಗೆ ಕೈಗಾರಿಕಾ ಪ್ರದೇಶಗಳಿಂದ ಮಾಲಿನ್ಯಕಾರಕ ಮತ್ತು ವಿಷಕಾರಿ ಅಂಶವುಳ್ಳ ರಾಸಾಯನಿಕಗಳು ನದಿ ನೀರು ಸೇರುವುದನ್ನು ತಡೆಯುವುದೂ ಪ್ರಮುಖ ಗುರಿಯಾಗಿತ್ತು. ಅಲ್ಲದೆ, ನದಿ ದಂಡೆಯಲ್ಲಿ ನಡೆಯುವ ಶವಸಂಸ್ಕಾರದ ತ್ಯಾಜ್ಯಗಳು ನದಿ ಸೇರುವುದನ್ನು ಮತ್ತು ಶವಗಳನ್ನು ನದಿಗೆ ಎಸೆಯುವುದನ್ನು ತಡೆಯುವುದೂ ಯೋಜನೆಯ ಭಾಗವಾಗಿತ್ತು. ಈ ಎಲ್ಲಾ ಗುರಿಗಳ ಭಾಗವಾಗಿ ಒಟ್ಟು 450 ಕಾಮಗಾರಿಗಳನ್ನು ‘ನಮಾಮಿ ಗಂಗೆ’ ವಿಭಾಗವು ಆರಂಭಿಸಿತ್ತು. 2021ರ ಮಾರ್ಚ್‌ ಅಂತ್ಯದ ವೇಳೆಗೆ ಈ ಎಲ್ಲಾ ಕಾಮಗಾರಿಗಳು ಮುಗಿಯಬೇಕಿದ್ದವು. ಆ ಗಡುವಿನೊಳಗೆ ಕಾಮಗಾರಿಗಳು ಮುಗಿಯಲಿಲ್ಲ. ಹೀಗಾಗಿ ಯೋಜನೆಯನ್ನು 2026ರವರೆಗೆ ವಿಸ್ತರಿಸಲಾಯಿತು. ಆದರೆ ಈಗ ಕಾಮಗಾರಿ ಪೂರ್ಣಗೊಂಡಿರುವುದು 270 ಸ್ಥಳಗಳಲ್ಲಿ ಮಾತ್ರ. ಇನ್ನೂ 180 ಕಾಮಗಾರಿಗಳು ನಡೆಯುತ್ತಲೇ ಇವೆ.

ನೀರು ಶುದ್ಧೀಕರಣ ಘಟಕಗಳು ಕಾರ್ಯಾರಂಭ ಮಾಡಿದ್ದರೆ, ನದಿಯ ನೀರಿನ ಗುಣಮಟ್ಟ ಹೆಚ್ಚಲೇಬೇಕು. ಬಹುತೇಕ ಎಲ್ಲಾ ನೀರಿನ ಗುಣಮಟ್ಟ ಪರಿಶೀಲನಾ ಕೇಂದ್ರಗಳಲ್ಲಿ ನದಿನೀರಿನ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಸುಧಾರಿಸಿದೆ ಎಂದು ನಾಲ್ಕೂ ರಾಜ್ಯಗಳ ಸರ್ಕಾರಗಳು ವರದಿ ನೀಡಿವೆ. ಆದರೆ ಇಷ್ಟೂ ರಾಜ್ಯಗಳಲ್ಲಿ ಎಲ್ಲಿಯೂ ಗಂಗಾ ನದಿಯ ನೀರನ್ನು ನೇರವಾಗಿ ಬಳಸಲು ಸಾಧ್ಯವೇ ಇಲ್ಲ ಎಂಬುದು ಆ ಸರ್ಕಾರಗಳ ತಾಂತ್ರಿಕ ವರದಿಗಳಲ್ಲಿನ ದತ್ತಾಂಶಗಳು ಹೇಳುತ್ತವೆ. ಹರಿಯಾಣ (ಯಮುನಾ), ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಪರಿಶೀಲನಾ ಕೇಂದ್ರಗಳಲ್ಲಿ ಸಂಗ್ರಹಿಸಿದ ನದಿ ನೀರಿನ ಮಾದರಿಯಲ್ಲಿ ಆಮ್ಲೀಯ ಪ್ರಮಾಣ 7ಪಿಎಚ್‌ಗಿಂತ ಹೆಚ್ಚೇ ಇದೆ. ಜತೆಗೆ ಕೊಲಿಫಾರ್ಮ್‌ ಬ್ಯಾಕ್ಟೀರಿಯಾಗಳ ಸಂಖ್ಯೆಯೂ ಅಪಾಯಕಾರಿ ಮಟ್ಟದಲ್ಲಿಯೇ ಇದೆ. ಯೋಜನೆಯಲ್ಲಿ ಹಾಕಿಕೊಂಡ ಕಾಮಗಾರಿಗಳು ಪೂರ್ಣಗೊಂಡರೆ ಸಾಲದು. ಬದಲಿಗೆ ನೀರಿನ ಆಮ್ಲೀಯ ಪ್ರಮಾಣ ಮತ್ತು ಬ್ಯಾಕ್ಟೀರಿಯಾಗಳ ಸಂಖ್ಯೆ ಸುರಕ್ಷಿತ ಮಟ್ಟಕ್ಕೆ ಇಳಿಯಬೇಕು. ಆಗ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಬಿಹಾರದಲ್ಲಿ ‘ನಮಾಮಿ ಗಂಗೆ’ಯ ಪ್ರಗತಿಯ ಬಗ್ಗೆ ಮಹಾಲೇಖಪಾಲರು (ಸಿಎಜಿ) ಸಿದ್ಧಪಡಿಸಿದ್ದ ವರದಿಯಲ್ಲೂ ಇದೇ ಮಾತನ್ನು ಹೇಳಲಾಗಿತ್ತು.

ಉತ್ತರಾಖಂಡ

ರಾಜ್ಯದ 13 ಜಿಲ್ಲೆಗಳಿಂದ ಪ್ರತಿದಿನ 70 ಕೋಟಿ ಲೀಟರ್‌ನಷ್ಟು ಕೊಳಚೆ ನೀರನ್ನು ಶುದ್ಧೀಕರಿಸದೆ ಗಂಗಾ ನದಿಗೆ ಬಿಡಲಾಗುತ್ತಿದೆ. ‘ನಮಾಮಿ ಗಂಗೆ’ ಯೋಜನೆ ಅಡಿ ಕೈಗೊಳ್ಳಲಾದ ಕಾಮಗಾರಿಗಳು ಮತ್ತು ಶುದ್ಧೀಕರಣ ಘಟಕಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿಯನ್ನು ರಾಜ್ಯ ಸರ್ಕಾರ ಒದಗಿಸುತ್ತಿಲ್ಲ ಎಂದು ಇದೇ ಫೆಬ್ರುವರಿಯಲ್ಲಿ ಎನ್‌ಜಿಟಿ ನೋಟಿಸ್‌ ನೀಡಿತ್ತು.

13 ಜಿಲ್ಲೆಗಳಲ್ಲಿ ಇನ್ನೂ ಲಕ್ಷಾಂತರ ಮನೆಗಳನ್ನು ಒಳಚರಂಡಿ ವ್ಯವಸ್ಥೆಯ ವ್ಯಾಪ್ತಿಗೆ ತಂದಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಈ ಗುರಿಗಳನ್ನು ಸಾಧಿಸಲು ಸಾಧ್ಯವಾಗದೇ ಇರುವುದರಿಂದಲೇ, ನದಿ ನೀರಿನ ಶುದ್ಧತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನೋಟಿಸ್‌ನಲ್ಲಿ
ವಿವರಿಸಲಾಗಿತ್ತು.

ಉತ್ತರ ಪ್ರದೇಶ

ಗಂಗಾ ನದಿಯ ನೀರಿನ ಗುಣಮಟ್ಟದ ಬಗ್ಗೆ ಉತ್ತರ ಪ್ರದೇಶ ಸರ್ಕಾರವು ಪ್ರತಿ 15 ದಿನಗಳಿಗೆ ಒಮ್ಮೆ ತಾಂತ್ರಿಕ ವರದಿ ಪ್ರಕಟಿಸುತ್ತದೆ. ರಾಜ್ಯದಲ್ಲಿ 31 ಸ್ಥಳಗಳಲ್ಲಿ ನೀರಿನ ಗುಣಮಟ್ಟ ಪರಿಶೀಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಈಚೆಗೆ ನಡೆಸಿದ ಪರಿಶೀಲನೆಯಲ್ಲಿ ರಾಜ್ಯದಲ್ಲಿ ಗಂಗಾ ನದಿ ಹರಿಯುವ ಎಲ್ಲಿಯೂ ನೀರಿನ ಗುಣಮಟ್ಟ ಉತ್ತಮವಾಗಿಲ್ಲ ಎಂಬುದು ಪತ್ತೆಯಾಗಿದೆ.

ಈ 31 ಕೇಂದ್ರಗಳಲ್ಲಿ, ಪರಿಶೀಲಿಸಲಾದ ನೀರಿನ ಮಾದರಿಗಳಲ್ಲಿ ಆಮ್ಲೀಯ ಮಟ್ಟ 7 ಪಿಎಚ್‌ಗಿಂತ ಹೆಚ್ಚೇ ಇದೆ. ಕೆಲವು ಕೇಂದ್ರಗಳಲ್ಲಿ ಆಮ್ಲೀಯ ಮಟ್ಟ 8ಪಿಎಚ್‌ ಅನ್ನು ದಾಟಿದೆ. ಜತೆಗೆ ಕೊಲಿಫಾರ್ಮ್‌ ಬ್ಯಾಕ್ಟೀರಿಯಾಗಳ ಸಂಖ್ಯೆ ಅಪಾಯಕಾರಿಮಟ್ಟದಲ್ಲಿ ಇದೆ. 31 ಕಡೆಯೂ ನದಿಯ ನೀರು ನೇರವಾಗಿ ಸ್ನಾನಕ್ಕೆ ಬಳಸಲೂ ಯೋಗ್ಯವಾಗಿಲ್ಲ. ಹಲವು ಹಂತದ ಶುದ್ಧೀಕರಣದ ನಂತರವಷ್ಟೇ ಕುಡಿಯಲು ಬಳಸಬಹುದು ಎಂದು ತಾಂತ್ರಿಕ ವರದಿಗಳು ಹೇಳುತ್ತವೆ. 

ಬಿಹಾರ

‘ಬಿಹಾರದಲ್ಲಿ ಹರಿಯುವ ಗಂಗಾ ನದಿ ಸಂಪೂರ್ಣ ಕಲುಷಿತವಾಗಿಯೇ ಇದೆ. ಸ್ನಾನ ಮಾಡುವುದಕ್ಕೂ ಯೋಗ್ಯವಾದಷ್ಟು ಶುಚಿತ್ವ ಮಟ್ಟವೂ ಗಂಗಾ ನದಿಯ ನೀರಿಗಿಲ್ಲ’ ಎಂದು ಬಿಹಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇದೇ ಫೆಬ್ರುವರಿಯಲ್ಲಿ ವರದಿ ನೀಡಿತ್ತು. ರಾಜ್ಯದಲ್ಲಿ ಗಂಗೆಯು ಹರಿದುಹೋಗುವ ಒಟ್ಟು 34 ಸ್ಥಳಗಳಲ್ಲಿ (ನೀರಿನ ಪರಿಶೀಲನಾ ಕೇಂದ್ರಗಳು) ನೀರಿನ ಪರೀಕ್ಷೆಯನ್ನು ಮಾಡಲಾಗಿದೆ. ಜೊತೆಗೆ, ಗಂಗೆ ಹಾಗೂ ಅದರ ಉಪನದಿಗಳಿಗೆ ಕೊಳಚೆ ನೀರು ಸೇರುವ ಸ್ಥಳಗಳಲ್ಲಿನ ನೀರಿನ್ನೂ ಕಾರ್ಖಾನೆಗಳಿಂದ ಹೊರಬರುವ ನೀರನ್ನೂ ಸಂಗ್ರಹಿಸಿ ಮಂಡಳಿಯ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ. 2023ರ ಡಿಸೆಂಬರ್‌ವರೆಗಿನ ಮಾಹಿತಿಯು ಈ ವರದಿಯಲ್ಲಿದೆ.

ಗಂಗಾ ನದಿನೀರಿನ ಮಾದರಿಗಳನ್ನು ಪರಿಶೀಲಿಸಿದಾಗ, ಮಾನವ ತಾಜ್ಯದಿಂದ ಉಂಟಾಗುವ ಫೀಕಲ್‌ ಕೊಲಿಫಾರ್ಮ್‌ ಬ್ಯಾಕ್ಟೀರಿಯಾ ಸಂಖ್ಯೆಯು ಗಂಗಾ ನದಿನೀರಿನ ಪ್ರತಿ 100 ಎಂ.ಎಲ್‌ಗೆ 92 ಸಾವಿರದಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕೊಳಚೆ ನೀರನ್ನು ಸಂಸ್ಕರಿಸದೇ ನೇರವಾಗಿ ಗಂಗಾ ನದಿಗೆ ಬಿಡಲಾಗುತ್ತಿದೆ. ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ವಿವಿಧ ಜಿಲ್ಲೆಗಳಲ್ಲಿ ‘ನಮಾಮಿ ಗಂಗೆ’ ಯೋಜನೆಯಡಿ ಕಟ್ಟಿಸಲಾಗುತ್ತಿದೆ ಎಂದು ಬಿಹಾರ ಸರ್ಕಾರ ಹೇಳಿದೆ.

ಪಶ್ಚಿಮ ಬಂಗಾಳ

‘ಪಶ್ಚಿಮ ಬಂಗಾಳದಲ್ಲಿ ಹರಿಯುವ ಗಂಗಾ ನದಿಯ ಸ್ಥಿತಿಯೂ ಬದಲಾಗಿಲ್ಲ. ಕನಿಷ್ಠ ಸ್ನಾನ ಮಾಡುವಷ್ಟೂ ನೀರು ಶುದ್ಧವಾಗಿಲ್ಲ’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹೇಳಿದೆ. ಗಂಗಾ ನದಿಯ ಸ್ವಚ್ಛತೆಯ ಕುರಿತು ವಿವಿಧ ರಾಜ್ಯಗಳು ಕೈಗೊಂಡ ಕಾರ್ಯಗಳ ಬಗ್ಗೆ, ಆಯಾ ರಾಜ್ಯಗಳೇ ನೀಡಿದ ವರದಿಗಳ ಪರಿಶೀಲನೆ ವೇಳೆ ಮಂಡಳಿಯು ಈ ರೀತಿ ಹೇಳಿದೆ. ಪಶ್ಚಿಮ ಬಂಗಾಳದ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ಕೂಡ ಇದನ್ನೇ ಹೇಳುತ್ತಿದೆ.

ಗಂಗಾ ನದಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಟ್ಟು 14 ಕಡೆಗಳಲ್ಲಿ ನೀರಿನ ಪರಿಶೀಲನಾ ಕೇಂದ್ರಗಳಿವೆ. ಇಲ್ಲಿ ಎಲ್ಲ ಕಡೆಗಳಲ್ಲಿಯೂ ನೀರಿನ ಗುಣಮಟ್ಟವು ಸ್ನಾನ ಮಾಡುವುದಕ್ಕೂ ಯೋಗ್ಯವಿಲ್ಲದ ಸ್ಥಿತಿಯಲ್ಲಿದೆ. ಜೊತೆಗೆ, ನ್ಯಾಯಮಂಡಳಿಗೆ ರಾಜ್ಯವು ನೀಡಿದ ವರದಿಯಲ್ಲಿ ಪ್ರಮುಖವಾದ ಇನ್ನೊಂದು ಅಂಶವಿದೆ. ರಾಜ್ಯದಲ್ಲಿ ಗಂಗಾ ನದಿಗೆ ಪ್ರತಿ ದಿನ 25.87 ಕೋಟಿ ಲೀಟರ್‌ನಷ್ಟು ಕೊಳಚೆ ನೀರು ಸೇರುತ್ತಿದೆ. ಪೂರ್ವ ಮೇಧಿನಿಪುರ ಜಿಲ್ಲೆ ಸೇರಿ‌ದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಒಂದೂ ಕೊಳಚೆ ನೀರು ಸಂಸ್ಕರಣಾ ಘಟಕವಿಲ್ಲ. ಇದನ್ನು ಗಮನಿಸಿದ ನ್ಯಾಯಮಂಡಳಿಯು, ರಾಜ್ಯಕ್ಕೆ ಎಚ್ಚರಿಕೆಯನ್ನೂ ನೀಡಿದೆ.

ವೆಚ್ಚ ಹೆಚ್ಚಳ

ಯೋಜನೆಯ ಅವಧಿ ವಿಸ್ತರಣೆಯಾದ ಕಾರಣಕ್ಕೆ ಯೋಜನಾ ವೆಚ್ಚವೂ ಏರಿಕೆಯಾಗಿದೆ. ಆದರೆ 2021ರ ಮಾರ್ಚ್‌ ವೇಳೆಗೆ ಕಾಮಗಾರಿ ಮುಗಿಸಲು ಗಡುವು ಹಾಕಿಕೊಂಡಿದ್ದ ಯೋಜನೆಗಳಿಗೆ ಬಿಡುಗಡೆ ಮಾಡಬೇಕಿದ್ದಷ್ಟು ಹಣವನ್ನು, 2023ರ ಡಿಸೆಂಬರ್‌ ವೇಳೆಗೂ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರಲಿಲ್ಲ

  • ₹20,000 ಕೋಟಿ 2014ರಲ್ಲಿ ಯೋಜನೆ ಆರಂಭಿಸಿದಾಗ ಯೋಜನೆಯ ಒಟ್ಟು ವೆಚ್ಚ

  • ₹42,000 ಕೋಟಿ 2021ರಲ್ಲಿ ಯೋಜನೆಯ ಅವಧಿಯನ್ನು ವಿಸ್ತರಿಸಿದ ನಂತರ ಯೋಜನೆಯ ಒಟ್ಟು ವೆಚ್ಚ

  • ₹38,000 ಕೋಟಿ 2023ರ ಡಿಸೆಂಬರ್ ವೇಳೆಗೆ ಮಂಜೂರಾಗಿದ್ದ ಅನುದಾನದ ಮೊತ್ತ

  • ₹16,011 ಕೋಟಿ 2023ರ ಡಿಸೆಂಬರ್ ವೇಳೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನದ ಮೊತ್ತ.

ಆಧಾರ: ಪಿಟಿಐ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳ ವರದಿಗಳು, ರಾಜ್ಯಸಭೆಗೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ನೀಡಿದ ಉತ್ತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT