ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್ ಚಾಂಪಿಯನ್‌ಷಿಪ್: ಭಾರತಕ್ಕೆ ದಾಖಲೆಯ 43 ಪದಕ ಖಚಿತ

ಏಷ್ಯಾ ಯುವ ಮತ್ತು 22 ವರ್ಷದೊಳಗಿನವರ ಬಾಕ್ಸಿಂಗ್ ಚಾಂಪಿಯನ್‌ಷಿಪ್
Published 4 ಮೇ 2024, 23:30 IST
Last Updated 4 ಮೇ 2024, 23:30 IST
ಅಕ್ಷರ ಗಾತ್ರ

ಅಸ್ತಾನಾ (ಕಜಕಸ್ತಾನ): ಆಕಾಶ್ ಗೋರ್ಖಾ, ವಿಶ್ವನಾಥ್ ಸುರೇಶ್, ನಿಖಿಲ್ ಮತ್ತು ಪ್ರೀತ್ ಮಲಿಕ್ ಇಲ್ಲಿ ನಡೆಯುತ್ತಿರುವ ಏಷ್ಯಾ 22 ವರ್ಷದೊಳಗಿನವರ ಮತ್ತು ಯುವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ 22 ವರ್ಷದೊಳಗಿನವರ ಫೈನಲ್ ತಲುಪಿದ್ದಾರೆ. ಇದರೊಂದಿಗೆ ವಿವಿಧ ವಿಭಾಗಗಳಲ್ಲಿ ಭಾರತಕ್ಕೆ 43 ಪದಕಗಳು ಖಚಿತವಾಗಿದೆ.  

ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಆಕಾಶ್ 60 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಇಲ್ಯಾಸೊವ್ ಸಯಾತ್ ವಿರುದ್ಧ 5-0 ಅಂತರದಿಂದ ಜಯಗಳಿಸುವ ಮೂಲಕ ಪ್ರಾಬಲ್ಯ ಮುಂದುವರಿಸಿದರು. 

ಹಾಲಿ ಯುವ ವಿಶ್ವ ಚಾಂಪಿಯನ್ ವಿಶ್ವನಾಥ್ (48 ಕೆಜಿ) ಅವರು 5–2 ಅಂತರದಲ್ಲಿ ಫಿಲಿಪ್ಪೀನ್ಸ್ ನ ಬರಿಕುವಾಟ್ರೊ ಬ್ರಿಯಾನ್ ವಿರುದ್ಧ ಗೆದ್ದರು.

ಇತರ ಇಬ್ಬರು ಸೆಮಿಫೈನಲ್ ಸ್ಪರ್ಧಿಗಳಾದ ನಿಖಿಲ್ (57 ಕೆಜಿ) ಮತ್ತು ಪ್ರೀತ್ (67 ಕೆಜಿ) ಕ್ರಮವಾಗಿ ಮಂಗೋಲಿಯಾದ ಡೊರ್ಜ್ನ್ಯಾಂಬು ಗನ್ಬೋಲ್ಡ್ ಮತ್ತು ಕಿರ್ಗಿಸ್ತಾನದ ಅಲ್ಮಾಜ್ ಒರೋಜ್ಬೆಕೊವ್ ವಿರುದ್ಧ 5-2 ಅಂತರದಲ್ಲಿ ಗೆಲುವು ಸಾಧಿಸಿದರು.

ಜಾದುಮಣಿ ಸಿಂಗ್ (51 ಕೆಜಿ), ಅಜಯ್ ಕುಮಾರ್ (63.5 ಕೆಜಿ), ಅಂಕುಶ್ (71 ಕೆಜಿ), ಧ್ರುವ್ ಸಿಂಗ್ (80 ಕೆಜಿ), ಜುಗ್ನೂ (86 ಕೆಜಿ) ಮತ್ತು ಯುವರಾಜ್ (92 ಕೆಜಿ) ಅವರು 22 ವರ್ಷದೊಳಗಿನವರ ಸೆಮಿಫೈನಲ್‌ನಲ್ಲಿ ಸೋತು, ಕಂಚಿನ ಪದಕಗಳೊಂದಿಗೆ ತಮ್ಮ ಅಭಿಯಾನವನ್ನು ಕೊನೆಗೊಳಿಸಿದರು.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಪ್ರೀತಿ (54 ಕೆಜಿ) ಸೇರಿದಂತೆ ಒಂಬತ್ತು ಮಹಿಳಾ ಬಾಕ್ಸರ್‌ಗಳು 22 ವರ್ಷದೊಳಗಿನವರ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಫೈನಲ್ ಪಂದ್ಯ ಮಂಗಳವಾರ ನಡೆಯಲಿದೆ.

ಶುಕ್ರವಾರ ರಾತ್ರಿ ನಡೆದ ಯುವ ಮಹಿಳಾ ಸೆಮಿಫೈನಲ್‌ನಲ್ಲಿ ಹಾಲಿ ಜೂನಿಯರ್ ವಿಶ್ವ ಚಾಂಪಿಯನ್ ನಿಶಾ (52 ಕೆಜಿ) ಮತ್ತು ಏಷ್ಯನ್ ಯುವ ಚಾಂಪಿಯನ್ ನಿಕಿತಾ ಚಂದ್ (60 ಕೆಜಿ) ಅವರು ಇತರ ಐವರು ಬಾಕ್ಸರ್‌ಗಳ ಜೊತೆ ಫೈನಲ್‌ ತಲುಪಿದರು.

ಯುವ ವಿಭಾಗದಲ್ಲಿ ಲಕ್ಷಯ್ ರಾಠಿ (92+ ಕೆಜಿ), ಅನ್ನು (48 ಕೆಜಿ), ಯಾತ್ರಿ ಪಟೇಲ್ (57 ಕೆಜಿ), ಪಾರ್ಥವಿ ಗ್ರೆವಾಲ್ (66 ಕೆಜಿ), ಆಕಾಂಕ್ಷಾ ಫಲಸ್ವಾಲ್ (70 ಕೆಜಿ) ಮತ್ತು ನಿರ್ಜಾರಾ ಬಾನಾ (+81 ಕೆಜಿ) ಸೋತು ಕಂಚಿನ ಪದಕಗಳೊಂದಿಗೆ ತಮ್ಮ ಅಭಿಯಾನವನ್ನು ಕೊನೆಗೊಳಿಸಿದರು.

ಯುವ ವಿಭಾಗದ ಫೈನಲ್‌ನಲ್ಲಿ ಭಾರತದ 14 ಬಾಕ್ಸರ್‌ಗಳು ಭಾಗವಹಿಸಲಿದ್ದು, ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ ಏಳು ಮಂದಿ ಚಿನ್ನಕ್ಕಾಗಿ ಸೆಣಸಲಿದ್ದಾರೆ. ಫೈನಲ್ ಪಂದ್ಯಗಳು ಸೋಮವಾರ ನಡೆಯಲಿವೆ.

ಒಟ್ಟಾರೆಯಾಗಿ ಪ್ರತಿಷ್ಠಿತ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು 43 ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ. ಪ್ರಬಲ  ಬಾಕ್ಸಿಂಗ್ ರಾಷ್ಟ್ರಗಳಾದ ಚೀನಾ, ಭಾರತ, ಕಜಕಿಸ್ತಾನ, ಉಜ್ಬೇಕಿಸ್ತಾನ ಸೇರಿದಂತೆ 24ಕ್ಕೂ ಹೆಚ್ಚು ದೇಶಗಳ 390ಕ್ಕೂ ಅಧಿಕ ಬಾಕ್ಸರ್‌ಗಳ 25 ತೂಕ ವಿಭಾಗಗಳಲ್ಲಿ ಪದಕಗಳಿಗೆ ಸೆಣಸಾಟ ನಡೆಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT