ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಕ್ಷೀರಕ್ಕೆ ಸೊಳ್ಳೆ ಪರದೆ

Last Updated 23 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

‘ಸಾರ್, ಇಲ್ನೋಡಿ ಸಂಜೆಯಾಗುತ್ತಿದ್ದಂತೆ ಇಲ್ಲಿರುವ ಗೂಟಗಳಿಗೆ ಮನೆಯ ಎಲ್ಲ ದನಕರುಗಳನ್ನು ಕಟ್ತೇವೆ. ನಂತರ ಈ ಸೊಳ್ಳೆ ಪರದೆಯನ್ನು ಎಳೆದು ಮರೆ ಮಾಡಿಬಿಡ್ತೇವೆ. ಹಾಲು ಕರೆಯುವ ಹಸು, ಎಮ್ಮೆ, ಸಣ್ಣ ಸಣ್ಣ ಕರುಗಳು ಎಲ್ಲಾ ಭೇಷ್ ಮಲಗ್ತವೆ...’ ಎಂದು ವಿವರಿಸಿದರು ಬಳ್ಳಾರಿಯ ರೈತ ವಿಜಯರಾಘವ ರೆಡ್ಡಿ.

ಮನೆಯ ಎದುರಿಗಿರುವ ವಿಶಾಲವಾದ ಅಂಗಳದಲ್ಲಿ ಸುಮಾರು ಸಾವಿರ ಚದರಡಿ ಜಾಗವನ್ನು ಮರೆಮಾಡುವಂತೆ ಕಟ್ಟಲಾಗಿದ್ದ ಸೊಳ್ಳೆ ಪರದೆಯನ್ನೇ ದಿಟ್ಟಿಸುತ್ತ ‘ರೆಡ್ಡಿಯವರೇ, ಈ ಸೊಳ್ಳೆ ಪರದೆಯನ್ನು ಇಲ್ಲ್ಯಾಕೆ ಕಟ್ಟಿದ್ದೀರಿ...?’ ಎಂದು ಕೇಳಿದ ನಮ್ಮ ಕುತೂಹಲದ ಪ್ರಶ್ನೆಗೆ ಅವರ ಉತ್ತರ ಅದಾಗಿತ್ತು. ಮನುಷ್ಯರಂತೆಯೇ ದನಕರುಗಳಿಗೂ ಇಂತಹ ಸುಸಜ್ಜಿತ ವ್ಯವಸ್ಥೆ ನೋಡಿ ನಾವೆಲ್ಲ ಹುಬ್ಬೇರಿಸಿದೆವು.

ಭತ್ತವೇ ಪ್ರಮುಖ ಬೆಳೆಯಾದ ಬಳ್ಳಾರಿ, ಗಂಗಾವತಿ, ಸಿಂಧನೂರು ಹಾಗೂ ಸಿರುಗುಪ್ಪ ಭಾಗದ ರೈತರ ಮತ್ತೊಂದು ಪ್ರಮುಖ ಉಪ ಕಸುಬು ಹೈನುಗಾರಿಕೆ. 15 ರಿಂದ 20 ಲೀಟರ್ ಹಾಲು ನೀಡುವ ಮಿಶ್ರತಳಿ ಆಕಳುಗಳನ್ನಲ್ಲದೆ, ಮುರ್ರಾ, ಸ್ಫೂರ್ತಿ ಮತ್ತು ಜಫಾರಬಾದಿಗಳಂತಹ ಉತ್ಕೃಷ್ಟ ಎಮ್ಮೆ ತಳಿಗಳನ್ನೂ ಅಲ್ಲಿಯ ರೈತರು ಸಾಕುತ್ತಾರೆ. ನೂರಾರು ಲೀಟರ್ ಹಾಲನ್ನು ಹಾಲಿನ ಡೈರಿಗಳಿಗೆ ಹಾಕುವ ಅಥವಾ ಇತೆರೆಡೆಗೆ ಮಾರಾಟ ಮಾಡುವ ರೈತ ಕುಟುಂಬಗಳೂ ಇಲ್ಲಿವೆ.

ನಿತ್ಯವೂ ನಿಗದಿತ ಹಾಲಿನ ಇಳುವರಿಯನ್ನು ಕಾಯ್ದುಕೊಳ್ಳುವುದು ಇವರೆಲ್ಲರಿಗೂ ಸೋಲರಿಯಬಾರದ ಸವಾಲು. ಶಿಫಾರಸು ಮಾಡುವ ಪಶುಪಾಲನಾ ಪದ್ಧತಿಗಳ ಅಳವಡಿಕೆಯೂ ಕಡಿಮೆಯೇ ಎನ್ನುವಂತೆ ಕೆಲವೊಮ್ಮೆ ಇಳುವರಿಯಲ್ಲಿ ವ್ಯತ್ಯಯವಾಗುವುದುಂಟು.
ಒಮ್ಮೊಮ್ಮೆ ಡೈರಿಯವರು ‘ಡಿಗ್ರಿ’ (ಹಾಲಿನ ಕೊಬ್ಬುರಹಿತ ಘನ ಪದಾರ್ಥದ ಪ್ರಮಾಣವನ್ನು ಅಳೆಯುವ ಬಗೆ) ನಿಗದಿತ ಪ್ರಮಾಣದಲ್ಲಿ ಇಲ್ಲ ಎಂಬ ಕಾರಣಕ್ಕೆ ಇಡೀ ಹಾಲನ್ನು ತೆಗೆದುಕೊಳ್ಳಲು ನಿರಾಕರಿಸುವುದಿದೆ. ಇದರಿಂದಾಗಿ ರೈತರಿಗೆ ಆರ್ಥಿಕ ನಷ್ಟದ ಬರೆ. ಇದಕ್ಕೆಲ್ಲ ಈ ಸೊಳ್ಳೆಪರದೆ ಪರಿಹಾರ ನೀಡಿದೆ.

ಸೊಳ್ಳೆ ಕಡಿತದ ಪರಿಣಾಮಗಳು
ಭತ್ತದ ಗದ್ದೆಗಳಿರುವಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚು. ಭತ್ತದ ಗದ್ದೆಯ ನಿಂತ ನೀರಿನಲ್ಲಿ ತಮ್ಮ ಸಂತಾನವನ್ನು ವೃದ್ಧಿಸಿಕೊಳ್ಳುವ ಸೊಳ್ಳೆಗಳು, ರಾತ್ರಿಯಾಗುತ್ತಿದ್ದಂತೆ ಹತ್ತಿರದಲ್ಲೇ ಇರುವ ಕೊಟ್ಟಿಗೆಗಳಿಗೆ ದಾಳಿ ಇಟ್ಟು ಅವುಗಳನ್ನು ಕಾಡುತ್ತವೆ. ರಾತ್ರಿಯ ನೀರವತೆಯಲ್ಲಿ ಆರಾಮವಾಗಿ ಮಲಗಿ ಹೊಟ್ಟೆ (ಮೆಲುಕು ಚೀಲ)ಯೊಳಗಿನ ಅರೆ ಜೀರ್ಣವಾದ ಮೇವನ್ನು ಮತ್ತೊಮ್ಮೆ ಬಾಯಿಗೆ ತಂದು, ಚೆನ್ನಾಗಿ ಜಗಿದು ಅಧಿಕ ಲಾಲಾರಸದೊಡನೆ ಪುನಃ ನುಂಗುವುದು ಎಲ್ಲಾ ಮೆಲುಕುಹಾಕುವ ಪ್ರಾಣಿಗಳ ಸಹಜ ಶಾರೀರಿಕ ಕ್ರಿಯೆ.

ಈ ಪ್ರಕ್ರಿಯೆ ಅವುಗಳ ಆರೋಗ್ಯಕ್ಕೂ ಅತ್ಯವಶ್ಯಕ. ಕೆಚ್ಚಲಿನ ಸಂಕೀರ್ಣ ರಚನೆಯಲ್ಲಿ ತಯಾರಾಗುವ ಹಾಲಿನ ಇಳುವರಿ ಮತ್ತದರ ಗುಣಮಟ್ಟ ಕಾಯ್ದುಕೊಳ್ಳುವಲ್ಲೂ ಇದು ಸಹಾಯಕಾರಿ. ಈ ಮೆಲುಕು ಹಾಕುವ ಕ್ರಿಯೆಗೆ ಅಡಚಣೆ ಉಂಟಾದಲ್ಲಿ, ರಾಸುಗಳ ಆರೋಗ್ಯ ಹಾಗೂ ಉತ್ಪಾದನಾ ಸಾಮರ್ಥ್ಯದಲ್ಲಿ ಏರುಪೇರಾಗುತ್ತದೆ. ‘ಗುಂಯ್’ಗುಟ್ಟುತ್ತ ಗುಂಪುಗೂಡಿ ಒಮ್ಮೆಲೇ ದಾಳಿಯಿಡುವ ಸೊಳ್ಳೆಗಳು ದನಗಳ ದೇಹದ ಒಂದಿಂಚನ್ನೂ ಬಿಡದೆ ಕಚ್ಚಲಾರಂಭಿಸುತ್ತವೆ.

ಆರಾಮವಾಗಿ ಮಲಗಿ ಮೆಲುಕು ಹಾಕಬೇಕಾದ ರಾಸುಗಳು, ಸೊಳ್ಳೆ ಓಡಿಸುವ ಗಾಬರಿಯಲ್ಲಿ ಹೈರಾಣಾಗಿ ರಾತ್ರಿಯೆಲ್ಲ ನಿಂತೇ ಕಾಲ ತಳ್ಳುತ್ತವೆ. ಗೋದಲಿಯಲ್ಲಿರುವ ಮೇವೂ ಖಾಲಿಯಾಗದೆ ಹಾಗೆಯೇ ಉಳಿಯುತ್ತದೆ. ಬೆಳಗಿನ ಹೊತ್ತಿಗೆಲ್ಲ ಪ್ರತಿ ಜಾನುವಾರುವೂ ಮೈತುಂಬ ರಕ್ತದ ಕಲೆಗಳನ್ನು ಹೊತ್ತು, ಸಪ್ಪೆ ಮೋರೆ ಮಾಡಿ ನಿಂತಿರುತ್ತದೆ. ಗಾಬರಿ ಹಾಗೂ ನಿರಂತರ ಕಿರಿಕಿರಿಯ ಒತ್ತಡದ ಕಾರಣವಾಗಿ ದೇಹದಲ್ಲಿ ಅಧಿಕವಾಗಿ ಸ್ರವಿಸುವ ‘ಕಾರ್ಟಿಕೋ ಸ್ಟಿರಾಯ್ಡ್’ ಗಳೆಂಬ ಹಾರ್ಮೋನ್‌ಗಳೂ ಹಾಲು ಉತ್ಪಾದನೆಯನ್ನು ಕುಗ್ಗಿಸುತ್ತವೆ.

ಅಂದು ಸಹಜವಾಗಿ ಹಿಂಡಬೇಕಾದ ಹಾಲಿಗಿಂತ ಕಡಿಮೆ ಹಾಲು ಕೆಚ್ಚಲಿನಿಂದ ರೈತನ ಪಾತ್ರೆಯನ್ನು ಸೇರುತ್ತದೆ. ದಿನವೂ ಸೊಳ್ಳೆಗಳ ಕಾಟ ಹೀಗೇ ಮುಂದುವರಿದರೆ, ರಾಸುಗಳ ಹಾಲು ಉತ್ಪಾದನೆ ಗಣನೀಯವಾಗಿ ಕುಸಿಯುತ್ತದೆ. ಆಹಾರ ಸೇವನೆ ಮತ್ತು ಜೀರ್ಣಕ್ರಿಯೆಯಲ್ಲೂ ವ್ಯತ್ಯಯಗಳಾಗಿ ಹಾಲಿನ ಗುಣಮಟ್ಟ ನಿರ್ಧರಿಸುವ ಶೇಕಡಾವಾರು ಕೊಬ್ಬು ಮತ್ತು ಕೊಬ್ಬುರಹಿತ ಇತರೆ ಘನ ಪದಾರ್ಥಗಳ ಪ್ರಮಾಣವು ಇಳಿಮುಖವಾಗುತ್ತದೆ. ಇದು ರೈತನಿಗೆ ನಷ್ಟದ ಬಾಬ್ತು.

ಕೆಚ್ಚಲಿನಲ್ಲಿನ ಕಡಿಮೆ ಹಾಲಿಗೆ ಸೊಳ್ಳೆಗಳೂ ಕಾರಣ ಎಂದು ಗೊತ್ತಾಗಿದ್ದೇ, ಅವುಗಳ ನಿಯಂತ್ರಣಕ್ಕಾಗಿ ರೈತಾಪಿ ವರ್ಗದವರು ಕಾರ್ಯಸನ್ನದ್ಧರಾಗುವುದು ಮಾಮೂಲು. ಕೆಲವೆಡೆ ಬೇವಿನ ಎಲೆ ಸುಟ್ಟು ಹೊಗೆ ಎಬ್ಬಿಸಿ ಸೊಳ್ಳೆ ಓಡಿಸುವ ಸಾಂಪ್ರದಾಯಿಕ ಪದ್ಧತಿಗಳಿವೆ. ಆದರೆ ಇದು ಅಷ್ಟೆಲ್ಲ ಪರಿಣಾಮಕಾರಿಯಾಗಿ ಕೆಲಸ ಮಾಡದ ಕಾರಣ, ಜಾಣ ರೈತನ್ಯಾರೋ ಸೊಳ್ಳೆ ಪರದೆ ಕಂಡುಹಿಡಿದಿದ್ದಾನೆ. ಇದು ಕೆಲ ವರ್ಷಗಳಿಂದ ಈ ಭಾಗಗಳಲ್ಲಿ ಜನಪ್ರಿಯವಾಗುತ್ತಿದೆ. ಸೊಳ್ಳೆ ಪರದೆಯ ಅಳವಡಿಕೆಗೆ ಮಾಡುವ ಖರ್ಚು ಹಾಲಿನ ಇಳುವರಿ ಕಾಯ್ದಕೊಳ್ಳುವ ಲಾಭಕ್ಕಿಂತ ದೊಡ್ಡದಲ್ಲ ಎಂದು ರೈತರಿಗೆ ಮನವರಿಕೆಯಾಗಿದೆ.

ಸೊಳ್ಳೆ ಪರದೆಯ ಉಪಯೋಗ
ಸೊಳ್ಳೆಗಳನ್ನು ರಾಸುಗಳಿಂದ ದೂರವಿಟ್ಟರೆ ಆಗುವ ಅನೇಕ ಅನುಕೂಲಗಳನ್ನು ಈ ಭಾಗದ ರೈತರು ಪಟ್ಟಿ ಮಾಡುತ್ತಾರೆ. ಅವೆಂದರೆ:
*ಪಶುಗಳಲ್ಲಿ ಮೆಲುಕು ಹಾಕುವ ಸ್ವಾಭಾವಿಕ ಪ್ರಕ್ರಿಯೆ ಅನಿರ್ಬಂಧಿತವಾಗಿ ಸಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮ ಗೊಂಡು, ಪಶು ತಿಂದ ಮೇವು ಹಾಗು ಪಶು ಆಹಾರದಲ್ಲಿನ ಪೋಷಕಾಂಶಗಳು ಸರಿಯಾಗಿ ರಕ್ತಗತವಾಗುತ್ತವೆ. ಬದಲಾಗಿ ಆರೋಗ್ಯ ವೃದ್ಧಿಸುತ್ತದೆ. ಇದು ಹಾಲಿನ ಇಳುವರಿ ಮತ್ತು ಗುಣಮಟ್ಟದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.

*ಸೊಳ್ಳೆ ಹಾಗೂ ಇತರೆ ಅನೇಕ ಉಪದ್ರವಿ ಕೀಟಗಳು ಹಲವು ಸೋಂಕು ರೋಗಕಾರಕಗಳ ವಾಹಕಗಳಾಗಿಯೂ ಕೆಲಸ ನಿರ್ವಹಿಸುವುದನ್ನು ಪಶುವೈದ್ಯರು ದೃಢಪಡಿಸುತ್ತಾರೆ. ಬೇಸಿಗೆಯಲ್ಲಿ ಸೊಳ್ಳೆಗಳ ಸಂಖ್ಯೆ ವೃದ್ಧಿಸುವ ಸಮಯದಲ್ಲಿ ದನಗಳಲ್ಲಿ ಹೆಚ್ಚಾಗಿ ಕಂಡುಬರುವ, ಪಶುವೈದ್ಯರು ಇದು ‘ಮೂರೇ ದಿನದ ಬೇನೆ’ ಎಂಬ ಅಭಯ ನೀಡಿದರೂ, ರೋಗ ಲಕ್ಷಣಗಳ ತೀವ್ರತೆಯಿಂದ ರೈತರಲ್ಲಿ ದಿಗಿಲು ಹುಟ್ಟಿಸುವ ‘ಎಫಿಮಿರಲ್ ಜ್ವರ’ ಎಂಬ ವೈರಾಣು ರೋಗವು ಸೊಳ್ಳೆ ಪರದೆಗಳ ಬಳಕೆಯ ನಂತರ ಹೆಚ್ಚಾಗಿ ಕಾಣಿಸಿಕೊಳ್ಳದಿರುವುದೂ ರೈತರಿಗೆ ಮತ್ತೊಂದು ಪ್ರಮುಖ ಉಪಯೋಗವಾಗಿ ಕಂಡಿದೆ.

*ಸೊಳ್ಳೆ ಪರದೆಯ ಮರೆ ಚಳಿಗಾಳಿಯಿಂದಲೂ ಅಲ್ಪಮಟ್ಟಿನ ರಕ್ಷಣೆಯನ್ನು ಪಶುಗಳಿಗೆ ನೀಡುತ್ತದೆ.
*ಸೊಳ್ಳೆ ಪರದೆಯಡಿಯ ಆರಾಮ ಹಾಗೂ ತನ್ನ ತಾಯಿಯೊಂದಿಗಿನ ಅಭಾದಿತ ಸಖ್ಯ, ಕರುಗಳ ಬೆಳವಣಿಗೆಗೂ ಪೂರಕವಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ಸೊಳ್ಳೆ ಪರದೆಗಳ ಬಳಕೆಯು ಹೈನುಗಾರಿಕೆಯ ಪ್ರಮುಖ ನಿರ್ವಹಣಾ ಕ್ರಮವಾಗಿ ಸೇರ್ಪಡೆಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT