ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯವರ್ಧಕ, ಲಾಭದಾಯಕ ಟರ್ಕಿ

Last Updated 2 ಜೂನ್ 2014, 19:30 IST
ಅಕ್ಷರ ಗಾತ್ರ

90ರ ದಶಕದಲ್ಲಿ ಕರ್ನಾಟಕಕ್ಕೆ ಕಾಲಿಟ್ಟಿರುವ ಉತ್ತರ ಅಮೆರಿಕ ಮೂಲದ ಟರ್ಕಿಗೀಗ ಭಾರಿ ಬೇಡಿಕೆ. ಹೃದ್ರೋಗಿಗಳಿಗೆ ಉತ್ತಮ ಆಹಾರವಾಗಿಯೂ, ರುಚಿಯಲ್ಲಿ ನಾಟಿ ಕೋಳಿಯಂತೆ ಬಾಯಲ್ಲಿ ನೀರೂರಿಸುವ ಈ ಕೋಳಿಯ ಸಾಕಾಣಿಕೆಗೆ ಕಡಿಮೆ ಬಂಡವಾಳ ಸಾಕು.

ಸಾಕಾಣಿಕೆಯ ಮೊದಲು ಐದು ವಾರಗಳಲ್ಲಿ ಹೆಚ್ಚು ಜಾಗ್ರತೆ ವಹಿಸಿದರೆ ಮುಂದೆ ತೊಂದರೆ ಇಲ್ಲ. ಡಿಸೆಂಬರ್‌ನಲ್ಲಿ ಕ್ರೈಸ್ತರು ಇದನ್ನು ಹೆಚ್ಚಾಗಿ ಉಪಯೋಗಿಸುವ ಕಾರಣ ‘ಡಿಸೆಂಬರ್‌ ಪಕ್ಷಿ’ ಎನ್ನಲಾಗುತ್ತದೆ. ಇದನ್ನು ರಾಜ್ಯಕ್ಕೆ ಪರಿಚಯಿಸಿದ್ದು ಕೇಂದ್ರ ಕುಕ್ಕುಟ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ ಹಾಗೂ ಪಶುಸಂಗೋಪನಾ ಇಲಾಖೆ.

ಸಾಕುವ ವಿಧಾನ
ನಾಲ್ಕು ಗಂಡು ಮತ್ತು ಒಂದು ಹೆಣ್ಣು ಕೋಳಿಯ ಅನುಪಾತದಲ್ಲಿ ಇದರ ವಂಶಾಭಿವೃದ್ಧಿ ಮಾಡಬೇಕು. ಮೊಟ್ಟೆಗಳನ್ನು ಅಥವಾ ಚಿಕ್ಕ ಮರಿಗಳನ್ನು ಕೇಂದ್ರೀಯ ಕುಕ್ಕುಟ ಸಂಸ್ಥೆ, ಪಶು ಸಂಗೋಪನಾ ಇಲಾಖೆ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಖರೀದಿಸಿದರೆ ಉತ್ತಮ. ಏಕೆಂದರೆ ಇಲ್ಲಿ ವೈಜ್ಞಾನಿಕವಾಗಿ ಅವುಗಳ ಪೋಷಣೆ ನಡೆಸಲಾಗುತ್ತದೆ. ಈ ಕಾರಣದಿಂದ ರೋಗಬಾಧೆ ತಗುಲುವುದು ಕಡಿಮೆ.

‘ಈ ಕೇಂದ್ರಗಳಲ್ಲಿ ಮೊದಲು ಮೊಟ್ಟೆಯನ್ನು ಎ.ಸಿ ಚೇಂಬರ್‌ನಲ್ಲಿ ಮೂರರಿಂದ ಏಳು ದಿನಗಳವರೆಗೆ ಇಡಲಾಗುತ್ತದೆ. ಅದಕ್ಕೆ ಪೊಟಾಷಿಯಂ ಪರಮಾಂಗನೇಟ್ ಮತ್ತು ಪಾಮಲಿನ್‌ ಬಳಸಿ ರೋಗಾಣುಮುಕ್ತವಾಗಿ ಕಾಪಾಡಲಾಗುತ್ತದೆ. ಮರಿ ಮಾಡಲು ಇನಕ್ಯುಬೇಟರ್ ಯಂತ್ರ ಬಳಸಿ ಅದರಲ್ಲಿ 24 ದಿನ ಇಡಲಾಗುವುದು.

ಇಲ್ಲಿ ಮರಿಗಳಿಗೆ ರೆಕ್ಕೆ ಪುಕ್ಕ, ಕಾಲು, ಮೂತಿ ಇತ್ಯಾದಿ ಬೆಳವಣಿಗೆ ಆಗುವುದು. ನಂತರ ‘ಹ್ಯಾಚರ್‌’ ಯಂತ್ರದಲ್ಲಿ ಮೊಟ್ಟೆ ಒಡೆದು ಮರಿಯಾಗಿ ಹೊರಬರುವುದು. ಈ ಪ್ರಕ್ರಿಯೆ ಮುಗಿಯಲು 28 ದಿನಗಳು ಬೇಕು. ನಂತರ ಮರಿಗಳನ್ನು ವಿವಿಧ ಬಾಕ್ಸ್‌ಗಳಿಗೆ ಹಾಕಿ ಬೇಡಿಕೆ ಆಧಾರದ ಮೇಲೆ ಮಾರಾಟ ಮಾಡಲಾಗುತ್ತದೆ’ ಎನ್ನುತ್ತಾರೆ ಬೆಂಗಳೂರಿನ ಕೇಂದ್ರೀಯ ಕುಕ್ಕಟ, ಅಭಿವೃದ್ಧಿ ಸಂಘಟನೆ ಮತ್ತು ತರಬೇತಿ ಕೇಂದ್ರದ ಸಹ ನಿರ್ದೇಶಕ ಡಾ.ಎ.ಜಿ.ಕುಲಕರ್ಣಿ.

ಟರ್ಕಿ ಕೋಳಿಯ ಮೊಟ್ಟೆ ತಂದು ನಾಟಿ ಕೋಳಿಯ ಮೊಟ್ಟೆಗಳ ಜೊತೆ ಇಟ್ಟರೂ ಪರವಾಗಿಲ್ಲ. ನಾಟಿ ಕೋಳಿಯೇ ಕಾವು ಕೊಟ್ಟು ಇವುಗಳನ್ನೂ ತನ್ನ ಮೊಟ್ಟೆಗಳ ಜೊತೆ ಮರಿ ಮಾಡುತ್ತದೆ.

ಮರಿಗಳ ರಕ್ಷಣೆ
ಚಿಕ್ಕಮರಿ ಸಾಮಾನ್ಯ ವಾತಾವರಣಕ್ಕೆ ಹೊಂದಿಕೊಳ್ಳಲು ಸುಮಾರು 20 ದಿನಗಳು ಬೇಕು. ಆ ದಿನಗಳಲ್ಲಿ ಮರಿಗಳನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕು. ಹುಟ್ಟಿದ ದಿನದಿಂದ ಮೊದಲ 20 ದಿನಗಳವರೆಗೆ ಅದನ್ನು 95 ಡಿಗ್ರಿ ಉಷ್ಣತೆ ವಾತಾವರಣದಲ್ಲಿ ಇಡಬೇಕು. ನಂತರ ವಾರಕ್ಕೊಮ್ಮೆ ಐದು ಡಿಗ್ರಿ ಉಷ್ಣಾಂಶವನ್ನು ಕಡಿಮೆ ಮಾಡುತ್ತಾ ಬರಬೇಕು. ಹೀಗೆ ಐದು ವಾರ ಬೆಚ್ಚಗಿನ ವಾತಾವರಣದಲ್ಲಿ ಮರಿಗಳನ್ನು ಕಾಪಾಡಬೇಕು.

ಟರ್ಕಿ ಕೋಳಿಗಳು ಬಲು ಸೋಮಾರಿ, ಜೊತೆಗೆ ಮಂದದೃಷ್ಟಿ. ತಾನೇ ಆಹಾರವನ್ನಾಗಲೀ, ನೀರನ್ನಾಗಲಿ ಹುಡುಕಿ ಹೋಗುವುದಿಲ್ಲ. ಆದ್ದರಿಂದ ಮೊದಲ 20 ದಿನಗಳು ಅವುಗಳಿಗೆ ಆಹಾರವಾಗಿ ಬೇಯಿಸಿದ ಮೊಟ್ಟೆಯ ಬಿಳಿಭಾಗವನ್ನು ಚೂರುಚೂರು ಮಾಡಿ ತಿನಿಸಬೇಕು.

ಮೊಟ್ಟೆ ಬದಲು ಹಸಿ ಬಟಾಣಿಯನ್ನೂ ತಿನ್ನಿಸಬಹುದು. ಹಾಲು ನೀಡಬೇಕು, ಹಾಲಿನ ಬದಲು ನೀರಿನಲ್ಲಿ ಹಾಲಿನ ಪುಡಿ ಹಾಕಿದರೂ ಪರವಾಗಿಲ್ಲ. ಐದು ವಾರಗಳ ನಂತರ ನಾಟಿ ಕೋಳಿ ಜೊತೆ ಬಿಟ್ಟರೆ ಅವುಗಳ ಜೊತೆ ಇವು ಚೆನ್ನಾಗಿ ಹೊಂದಿಕೊಳ್ಳುತ್ತವೆ.

ಟರ್ಕಿ ಕೋಳಿಗಳಿಗೆ ಹುಲ್ಲೆಂದರೆ ತುಂಬ ಇಷ್ಟ. ಎಷ್ಟು ಬೇಕಾದರೂ ಹಸಿರು ಹುಲ್ಲನ್ನು ಇವು ಮೇಯುತ್ತವೆ. ಇವು ಹುಲ್ಲನ್ನು ಅರಗಿಸಿಕೊಳ್ಳುವಷ್ಟು ಚೆನ್ನಾಗಿ ಬೇರಾವ ಪಕ್ಷಿಗಳೂ ಅರಗಿಸಿಕೊಳ್ಳಲಾರವು. ಆದ್ದರಿಂದ ಇದನ್ನು ಕೂಡಿ ಸಾಕುವ ಬದಲು ಹೊರಗಿನ ವಾತಾವರಣದಲ್ಲೇ ಬಿಡಬೇಕು.

‘ಪ್ರಾಯಕ್ಕೆ ಬಂದ ಟರ್ಕಿ ಕೋಳಿಯನ್ನು ಕುರಿ ಸಾಕಾಣಿಕೆಗೆ ಹೋಲಿಸಲಾಗುತ್ತದೆ. ಕುರಿಗಳನ್ನು ಷೆಡ್‌ ಇತ್ಯಾದಿಗಳಲ್ಲಿ ಸಾಕುವುದು ಹೇಗೆ ಸಮಂಜಸವಲ್ಲವೋ ಟರ್ಕಿ ಕೂಡ ಹಾಗೆಯೇ. ಇವುಗಳಿಗೆ ಶೇ 75ರಷ್ಟು ಹಸಿರು ಹುಲ್ಲು ಹಾಗೂ
ಶೇ 25ರಷ್ಟು ಕಾಳು ಬೇಕು. ಆದ್ದರಿಂದ ಸ್ವತಂತ್ರವಾಗಿ ಅವುಗಳನ್ನು ಮೇಯಲು ಬಿಡಬೇಕು’ ಎನ್ನುತ್ತಾರೆ ಬೆಂಗಳೂರಿನ ಕೇಂದ್ರೀಯ ಕುಕ್ಕಟ, ಅಭಿವೃದ್ಧಿ ಸಂಘಟನೆ ಮತ್ತು ತರಬೇತಿ ಕೇಂದ್ರದ ಸಹ ನಿರ್ದೇಶಕ ಡಾ.ಪಿ.ಎಸ್‌.ಮಹೇಶ್.

ಆರ್ಥಿಕ ಸಬಲತೆ
ಟರ್ಕಿ ಕೋಳಿಯ ಮಾಂಸಕ್ಕಷ್ಟೇ ಅಲ್ಲದೇ ಇದರ ಮೊಟ್ಟೆ ಹಾಗೂ ಮರಿಗಳಿಗೂ ಭಾರಿ ಬೇಡಿಕೆ. ಹೆಣ್ಣು ಕೋಳಿ 26 ರಿಂದ 28 ವಾರಗಳಲ್ಲಿ ಪ್ರಾಯಕ್ಕೆ ಬಂದು ಮೊಟ್ಟೆ ಇಡುತ್ತವೆ. ವರ್ಷಕ್ಕೆ 80 ರಿಂದ 100 ಮೊಟ್ಟೆಗಳನ್ನು ಇದು ಇಡಬಲ್ಲದು.

ಸಾಮಾನ್ಯ  ಕೋಳಿಯ ಮೊಟ್ಟೆಗಿಂತ ಈ ಮೊಟ್ಟೆ ಶೇ 1.3ರಷ್ಟು ಹೆಚ್ಚಿಗೆ ತೂಗುತ್ತವೆ. 10-12 ವಾರಗಳಲ್ಲಿ ಗಂಡು ಟರ್ಕಿ 5-6 ಕೆ.ಜಿ. ತೂಗಿದರೆ, ಹೆಣ್ಣು 4-5 ಕೆ.ಜಿ. ತೂಗುತ್ತದೆ. 16 ರಿಂದ 18 ವಾರಗಳಲ್ಲಿ ಗಂಡಿನ ತೂಕ 10 ರಿಂದ 12 ಇದ್ದರೆ ಹೆಣ್ಣು ಟರ್ಕಿ 6ರಿಂದ 8 ಕೆ.ಜಿ. ಹಾಗೂ 20–24 ವಾರಗಳಲ್ಲಿ ಗಂಡು 12 ರಿಂದ 14 ಕೆ.ಜಿ ಹಾಗೂ ಹೆಣ್ಣು 8 ರಿಂದ 10ಕೆ.ಜಿ ತೂಗುತ್ತವೆ. ‘ಗಂಡು ಕೋಳಿಯ ತೂಕ ಹೆಣ್ಣು ಕೋಳಿಗಿಂತ ಹೆಚ್ಚಿಗೆ.

ಆದ್ದರಿಂದ ಸಂತಾನೋತ್ಪತ್ತಿ ಸಂದರ್ಭದಲ್ಲಿ ಹೆಣ್ಣಿಗೆ ಕಷ್ಟ ಆಗುವ ಸಾಧ್ಯತೆ ಇದೆ. ಆದ್ದರಿಂದ ಸಂತಾನಕ್ರಿಯೆ ಸರಿಯಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು’ ಎನ್ನುತ್ತಾರೆ ಹಾಸನದ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಓ.ಆರ್‌.ನಟರಾಜು.

ಟರ್ಕಿ ಕೋಳಿಗಳಿಗೆ 6ರಿಂದ 8ನೇ ವಯಸ್ಸಿನಲ್ಲಿ ಲಸಿಕೆ ಕೊಡಿಸಬೇಕು. ಇವುಗಳಲ್ಲಿ ಸಾಮಾನ್ಯ ಕೋಳಿಗಳಿಂತ ರೋಗ ನಿರೋಧಕ  ಶಕ್ತಿ ಹೆಚ್ಚು. ಆದ್ದರಿಂದ ಸಾಮಾನ್ಯವಾಗಿ ಇವುಗಳಿಗೆ ಕೊಕ್ಕರೆ ರೋಗ, ಸಿಡುಬು ರೋಗ ಬಾಧಿಸುವುದಿಲ್ಲ.

ಸಾಕಾಣಿಕೆ ಸರಾಸರಿ ವೆಚ್ಚ
ಈ ಕೋಳಿಯ ಒಂದು ಮೊಟ್ಟೆಗೆ 10 ರಿಂದ 30 ರೂಪಾಯಿಗಳಿವೆ. ಮರಿಗೆ 50 ರೂಪಾಯಿ. ಒಂದು ಟರ್ಕಿ ಕೋಳಿಯ ಸಾಕಾಣಿಕೆ ವೆಚ್ಚ ಸರಾಸರಿ 140-150 ರೂಪಾಯಿ. ಪ್ರತಿ ಕೋಳಿಯಲ್ಲಿ ಸಿಗುವ ಮಾಂಸದ ತೂಕ ಸರಾಸರಿ 10-12 ಕೆ.ಜಿ. ಪ್ರತಿ ಕೆ.ಜಿ ಮಾಂಸಕ್ಕೆ 100 ರೂಪಾಯಿ ಬೆಲೆ.

ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡರೆ ಒಂದು ಟರ್ಕಿ ಕೋಳಿಯಿಂದ ಸರಾಸರಿ 700 ರಿಂದ 900 ರೂಪಾಯಿ ಲಾಭ ಗಳಿಸಬಹುದು. ಇವುಗಳ ಉತ್ತಮ ಬೆಳವಣಿಗೆಗೆ ಒಂಟಿಯಾಗಿ ಸಾಕುವುದಕ್ಕಿಂತ ಗುಂಪಾಗಿ ಸಾಕುವುದು ಹೆಚ್ಚು ಸೂಕ್ತ. ಆದ್ದರಿಂದ ಸ್ವಸಹಾಯ ಸಂಘಗಳು ನೂರಾರು ಕೋಳಿಗಳನ್ನು ಖರೀದಿಸಿ ಪ್ರತಿಯೊಬ್ಬರು 5-10 ಕೋಳಿಗಳ ಉಸ್ತುವಾರಿ ವಹಿಸಿಕೊಂಡರೆ ಹೆಚ್ಚಿನ ಲಾಭ ಗಳಿಸಬಹುದು.

ಮಾಹಿತಿ ಹಾಗೂ ಈ ಕೋಳಿ ಮೊಟ್ಟೆ, ಮರಿಗಳಿಗಾಗಿ ಕೃಷಿ ವಿಶ್ವವಿದ್ಯಾಲಯ- ಬೆಂಗಳೂರು (080-23419883) ಅಥವಾ ಕೃಷಿ ವಿಜ್ಞಾನ ಕೇಂದ್ರ- ಹಾಸನ (08172-256092) ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT