ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ‘ದೆವ್ವ’ ಮೆಣಸು!

Last Updated 28 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಮೆಣಸಿನ ಕಾಯಿಯ ಹಲವು ವಿಧಗಳಲ್ಲಿ ಅತ್ಯಂತ ಖಾರದ್ದೆಂದು ಪ್ರಸಿದ್ಧಿಯಾಗಿರುವ ತಳಿಯೊಂದಿದೆ. ಇದನ್ನು ಅಸ್ಸಾಮಿ ಭಾಷೆಯಲ್ಲಿ ಭೂತ್ ಜೊಲೋಕಿಯ ಅಥವಾ ನೋಗಾ ಜೊಲೋಕಿಯ ಎಂದೂ, ಇಂಗ್ಲಿಷ್‌ನಲ್ಲಿ ಘೋಸ್ಟ್  ಪೆಪ್ಪರ್ ಎಂದೂ ಕರೆಯುತ್ತಾರೆ. ಯಥಾವತ್ತು ಅದನ್ನು ಕನ್ನಡದಲ್ಲಿ ಇಳಿಸಿದರೆ ‘ದೆವ್ವ  ಮೆಣಸು’ ಆಗುತ್ತದೆ!

ಈ  ಮೆಣಸಿನಕಾಯಿಯು ತನ್ನ ಖಾರದ ಗುಣಕ್ಕಾಗಿಯೇ 2007ರಲ್ಲಿ  ಗಿನ್ನೆಸ್ ದಾಖಲೆ ಮಾಡಿರುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದರ  ಖಾರದ ತೀವ್ರತೆಯನ್ನು ಸ್ಕೋವಿಲ್ಲೇ ಹೀಟ್ ಯೂನಿಟ್ (ಎಸ್.ಎಚ್.ಯು) ಗಳಲ್ಲಿ ಅಳೆಯುತ್ತಾರೆ.

‘ಘೋಸ್ಟ್ ಪೆಪ್ಪರ್ ಸೊಲಾನೇಸೀ’ ಕುಟುಂಬಕ್ಕೆ ಸೇರಿದೆ ಈ ಮೆಣಸಿನಕಾಯಿ. ಇದನ್ನು ಅಸ್ಸಾಂ,  ಬಾಂಗ್ಲಾ ದೇಶ, ಮಣಿಪುರ ಹಾಗೂ  ನಾಗಾಲ್ಯಾಂಡ್‌ಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಈ ಪ್ರಭೇದದ ಗಿಡವು 17–47 ಎತ್ತರದವರೆಗೆ ಬೆಳೆಯುತ್ತದೆ. ಎಳೆಯದಿದ್ದಾಗ  ಹಸಿರಿದ್ದ ಕಾಯಿಗಳು ಬಲಿಯುತ್ತಾ ಹೋದಂತೆ, ಕೆಂಪು, ಕಂದು, ಕಿತ್ತಳೆ ಅಥವಾ ನೇರಳೆ  ಬಣ್ಣಕ್ಕೆ  ತಿರುಗುತ್ತವೆ. ಒಂದು ಮೆಣಸಿನಕಾಯಿಯಲ್ಲಿ 19–35 ಬೀಜಗಳು ಇರುತ್ತವೆ.

ಈ ಮೆಣಸಿನಲ್ಲಿ  ಬೀಜದಿಂದ  ಸಸ್ಯೋತ್ಪತ್ತಿ  ಮಾಡುತ್ತಾರೆ. ಆದರೆ ಈ  ಪ್ರಕ್ರಿಯೆಯು ಬಹಳ ಸಂಕೀರ್ಣವಾಗಿದ್ದು  ಈ ಕೆಳಗಿನ  ಮುನ್ನೆಚ್ಚರಿಕೆ  ಕ್ರಮಗಳನ್ನು ಅನುಸರಿಸುವುದು ಬಹಳ ಅಗತ್ಯವಾಗಿದೆ.

* ಮಣ್ಣು ಸಾಕಷ್ಟು ಸಾವಯವ  ವಸ್ತುಗಳಿಂದ ಕೂಡಿದ್ದು ನೀರು ಆಳಕ್ಕೆ ಇಳಿಯುವಂತಿರಬೇಕು. ಮಣ್ಣಿನ  ಆಮ್ಲೀಯತೆ6.0–605  ಪಿ.ಹೆಚ್ ಇರಬೇಕು.

*  ಬೀಜಗಳನ್ನು ನೇರವಾಗಿ ಮಣ್ಣಿನಲ್ಲಿ ನೆಡುವ ಮೊದಲು ಹಿಂದಿನ ರಾತ್ರಿಯೇ ನೀರಿನಲ್ಲಿ ನೆನೆಸಿರಬೇಕು. ನಂತರ  ಅವುಗಳನ್ನು  ಮೊಳಕೆ  ಬರಿಸುವ ಟ್ರೇನಲ್ಲಿ ನೆಡಬೇಕು. ಸೌರ ದೀಪಗಳ ಸಹಾಯದಿಂದ  ಮಣ್ಣಿನ ಉಷ್ಣತೆ ಯಾವಾಗಲೂ 80–90 ಡಿಗ್ರಿ ಎಫ್. ಇರುವಂತೆ ನೋಡಿಕೊಳ್ಳಬೇಕು.

* ಮಣ್ಣು ಸದಾಕಾಲ ತೇವದಿಂದ ಇರಬೇಕು. ಆದರೆ ಮಣ್ಣಿನ ಮಟ್ಟದಿಂದ ಮೇಲೆ ನೀರು ನಿಲ್ಲಬಾರದು. ತೇವಾಂಶವನ್ನು ಕಾಪಾಡಲು  ಮಣ್ಣನ್ನು ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಬೇಕು.

ಈ ವಿಧಾನ ಅನುಸರಿಸಿದರೆ ಬೀಜಗಳು 35  ದಿನಗಳಲ್ಲಿ ಮೊಳೆಯುತ್ತವೆ. ಸುಮಾರು 40 ದಿನಗಳ ನಂತರ ಎರಡನೇ  ಜೋಡಿ ಎಲೆಗಳು ಕಾಣಿಸಿಕೊಳ್ಳುತ್ತವೆ. ಆಗ ಅವುಗಳನ್ನು 4ಅಂಗುಲ ಅಗಲವಿರುವ ಕುಂಡಕ್ಕೆ ವರ್ಗಾಯಿಸಬೇಕು. ಸುಮಾರು 10 ದಿನಗಳ  ಕಾಲ  ಕುಂಡಗಳನ್ನು ಬೆಳಗಿನ ಹೊತ್ತು ಬಯಲಿನ ಬಿಸಿಲಿನಲ್ಲಿ ಇರಿಸಿ ರಾತ್ರೆಯ ವೇಳೆ ಮನೆಯೊಳಗೆ  ತಂದಿಟ್ಟುಕೊಳ್ಳಬೇಕು.

ರಾತ್ರಿಯ  ವೇಳೆ  ವಾತಾವರಣದ  ಉಷ್ಣತೆಯು 70 ಡಿಗ್ರಿ  ಎಫ್ ನಷ್ಟು  ಸ್ಥಿರವಿದ್ದಾಗ ಹಾಗೂ ಸಸಿಗಳು  ಆರು  ಅಂಗುಲಗಳಷ್ಟು  ಉದ್ದವಾದಾಗ ಅವುಗಳನ್ನು  ಬಹಳ  ಎಚ್ಚರಿಕೆಯಿಂದ  ತೇವವಾದ ಮಣ್ಣಿಗೆ  ವರ್ಗಾಯಿಸಬೇಕು. ಒಂದು ಸಸಿಗೂ ಮತ್ತೊಂದು  ಸಸಿಗೂ  ನಡುವೆ  2–9 ಅಡಿಗಳ ಅಂತರವಿರಬೇಕು.  ಬೀಜಗಳನ್ನು  ನೆಟ್ಟ  100–120 ದಿನಗಳ ನಂತರ ಫಲ ನೀಡಲಾರಂಭಿಸುತ್ತವೆ.

   ಈ  ಮೆಣಸಿನಕಾಯಿಗಳನ್ನು ಸಾಂಬಾರ ಪದಾರ್ಥದ ರೂಪದಲ್ಲಿ ಉಪ್ಪಿನ  ಕಾಯಿ,  ವಿವಿಧ  ಬಗೆಯ  ಪಲ್ಯಗಳು. ಚಟ್ನಿ ಇತ್ಯಾದಿಗಳ  ತಯಾರಿಕೆಯಲ್ಲಿ ಬಳಸುತ್ತಾರೆ. ಇವು ಈ ಪದಾರ್ಥಗಳಿಗೆ ವಿಶೇಷ ರುಚಿ  ಕೊಡುತ್ತವೆ. ಉತ್ತರ  ಭಾರತದಲ್ಲಿ ಇವುಗಳನ್ನು ಬೇಲಿಗಳಿಗೆ  ಸವರಿ ಕಾಡಾನೆಗಳನ್ನು ದೂರವಿರಿಸುತ್ತಾರೆ. ಇತ್ತೀಚೆಗೆ ಕೆಲವು ಭಾರತೀಯ ವಿಜ್ಞಾನಿಗಳು ಇವುಗಳನ್ನು ಹೊಗೆ ಕಾರುವ ಬಾಂಬ್ ಗಳಲ್ಲಿ  ಬಳಸಿ ಉಗ್ರಗಾಮಿಗಳನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿ ಅವರ ದಾಳಿ ತಡೆಗಟ್ಟಬಹುದೆಂದು ಶಿಫಾರಸು ಮಾಡಿದ್ದಾರೆ. ಈ ಮೆಣಸಿನ  ಕಾಯಿಗಳನ್ನು ಬಳಸಬೇಕಾದರೂ ಕೈಗಳಿಗೆ  ಗ್ಲೌಸ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT