ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕೋಸಲ್ಲಿ ಪತಂಗ ಕಾಟ

Last Updated 5 ಜನವರಿ 2015, 19:30 IST
ಅಕ್ಷರ ಗಾತ್ರ

ಎಲೆಕೋಸು ನಮ್ಮ ದೇಶದ ಬಹು ಮುಖ್ಯ ತರಕಾರಿ ಬೆಳೆ. ಭಾರತವು 3,724 ಹೆಕ್ಟೇರ್ ಭೂ ಪ್ರದೇಶದಲ್ಲಿ ಎಲೆಕೋಸು ಬೆಳೆಯುತ್ತದೆ ಹಾಗೂ ಪ್ರತಿ ಹೆಕ್ಟೇರ್‌ಗೆ 22.9 ಮೆಟ್ರಿಕ್ ಟನ್ ಉತ್ಪಾದನೆಯೊಂದಿಗೆ 85,342 ಟನ್ ಉತ್ಪಾದನೆ ಹೊಂದಿದೆ. ವಿಶ್ವದ ಒಟ್ಟು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ತರಕಾರಿ ಬೆಳೆಯುವ ಒಟ್ಟು ಭೂ ಪ್ರದೇಶದಲ್ಲಿ ಶೇ 4ರಷ್ಟು ಭೂಮಿಯಲ್ಲಿ ಎಲೆಕೋಸು ಬೆಳೆಯುತ್ತಿದ್ದೇವೆ.

ಆದರೆ ವಜ್ರಕವಚದ ಪತಂಗ ಹುಳುವಿನ ಬಾಧೆಯಿಂದ ಎಲೆಕೋಸು ಬೆಳೆ ಚಿಗುರಿನಲ್ಲಿಯೇ ಕಮರುತ್ತಿದ್ದು ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಪತಂಗವನ್ನು ವೈಜ್ಞಾನಿಕವಾಗಿ ಪ್ಲೂಟೆಲ್ಲಾ ಜೈಲೋಸ್ಟೇಲ್ಲ ಎಂದು ಕರೆಯುತ್ತಾರೆ. ಪ್ರಪಂಚದ ಎಲೆಕೋಸು ಬೆಳೆಯುವ ದೇಶಗಳ ಎಲ್ಲಾ ಪ್ರದೇಶಗಳಲ್ಲಿ ಸರ್ವೆಸಾಮಾನ್ಯವಾಗಿ ಕಂಡು ಬರುವ ಅತ್ಯಂತ ಹಾನಿಕಾರಕ ಕೀಟ. ಬಹುಮುಖ್ಯವಾಗಿ ಚೀನಾ, ಭಾರತ, ಜಪಾನ್, ಮಲೇಷಿಯಾ ಇನ್ನಿತರೆ ದೇಶಗಳಲ್ಲಿ ಇದರ ಹಾವಳಿ ಹೆಚ್ಚು.

ಕೀಟದ ಜೀವನ ಪರಿಚಯ
ವಜ್ರಕವಚದ ಪತಂಗವು 8 ರಿಂದ 10 ಮಿ.ಮೀ. ಉದ್ದವಿದ್ದು ಮೊದಲ ಜೋಡಿ ರೆಕ್ಕೆಗಳು ಕಂದು ಬಣ್ಣ ಮತ್ತು ಎರಡನೆಯ ಜೋಡಿ ರೆಕ್ಕೆಗಳು ಬಿಳಿ ಬಣ್ಣದ್ದಾಗಿರುತ್ತವೆ ಹಾಗೂ ಕುಳಿತ ಭಂಗಿಯಲ್ಲಿ ಮೂರು ವಜ್ರಾಕಾರದ ಗುರುತುಗಳು ಕಾಣುತ್ತವೆ, ಹಾಗಾಗಿ ಈ ಪತಂಗವನ್ನು ವಜ್ರಕವಚದ ಪತಂಗ (ಡೈಮಂಡ್ ಬ್ಯಾಕ್ ಮಾತ್) ಎಂದು ಕರೆಯುತ್ತಾರೆ.

ಮೊಟ್ಟೆಯೊಡೆದು ಹೊರ ಬಂದ ಚಿಕ್ಕ ಮರಿಹುಳುಗಳು (ಕ್ಯಾಟರ್ ಪಿಲ್ಲರ್ / ಲಾರ್ವ) 0.6  ಮಿ. ಮೀ. ಉದ್ದವಿದ್ದು, ದೇಹ ತಿಳಿ ಕಂದು ಬಣ್ಣ ಹೊಂದಿರುತ್ತದೆ. ಬೆಳೆಯುತ್ತಾ ದೇಹವು ತಿಳಿ ಕಂದು ಬಣ್ಣದಿಂದ ಹಸಿರು ಬಣ್ಣಕ್ಕೆ ತಿರುಗುತ್ತದೆ ಮತ್ತು 10 ರಿಂದ 12 ಮಿ. ಮೀ. ಉದ್ದವಾಗಿ ತನ್ನ ಪ್ರೌಢಾವಸ್ಥೆಗೆ ಹೋಗುತ್ತದೆ. ಪ್ರೌಢಾವಸ್ಥೆಯ ಕೀಟವು ಕಡು ಹಸಿರು ಬಣ್ಣದ್ದಾಗಿರುತ್ತದೆ ಮತ್ತು ಲರ್ವಾವಸ್ಥೆಯ ನಾಲ್ಕು ಹಂತ ಪೂರೈಸಿ ಕೋಶಾವಸ್ಥೆಗೆ ಹೋಗುತ್ತದೆ.

ಕೋಶಾವಸ್ಥೆಯ 8 ರಿಂದ 12 ದಿನಗಳ ನಂತರ ಪತಂಗವಾಗಿ ಹೊರಬರುತ್ತದೆ. ಹೊರಬಂದ ಪತಂಗಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿಕೊಳ್ಳುತ್ತವೆ. ಸುಮಾರು 200 ರಿಂದ 300 ರಷ್ಟು ತಿಳಿ ಹಳದಿ ಬಣ್ಣದ, 1 ಮಿ.ಮೀ. ಗಿಂತಲೂ ಚಿಕ್ಕ ಮೊಟ್ಟೆಗಳನ್ನು ಒಂದೊಂದಾಗಿ ಅಥವಾ ಎರಡು, ಮೂರು ಗುಂಪುಗಳಾಗಿ ಇಡುತ್ತದೆ. ವಾತಾವರಣದಲ್ಲಿನ ಉಷ್ಣಾಂಶದ ಆಧಾರದ ಮೇಲೆ, ಮೊಟ್ಟೆಯಿಟ್ಟ 5 ರಿಂದ 10 ದಿನಗಳಲ್ಲಿ ಮರಿಹುಳುಗಳು ಮೊಟ್ಟೆಯಿಂದ ಹೊರಬರುತ್ತವೆ.

ಎಲೆಕೋಸಿನ ಹಾನಿಯ ಲಕ್ಷಣಗಳು
ಎಲ್ಲಾ ಮೊದಲ ಹಂತದ ಲಾರ್ವಾಗಳು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ನಂತರದ ಹಂತದ ಲಾರ್ವಾಗಳು ಸಂಪೂರ್ಣ ಎಲೆಯ ಹಸಿರು ಭಾಗ ತಿಂದುಹಾಕುತ್ತವೆ. ಎಲೆಗಳು ಗಡ್ಡೆಯಾದಾಗ, ಗಡ್ಡೆಯಲ್ಲಿ ರಂಧ್ರ ಕೊರೆದು ತಿನ್ನುತ್ತವೆ. ಈ ರೀತಿ ಕೊರೆದ ರಂಧ್ರಗಳಿಂದ ಕೀಟವು ತನ್ನ ತ್ಯಾಜ್ಯ ಹೊರಹಾಕುತ್ತದೆ ಹಾಗೂ ಹೊರಹಾಕಿದ ತ್ಯಾಜ್ಯ ಎಲೆಯೊಂದಿಗೆ ಕೊಳೆತುಹೋಗಿ ಕೆಟ್ಟ ವಾಸನೆ ಬರುತ್ತದೆ. ಇಂತಹ ಕೋಸುಗಳು ಮಾರುಕಟ್ಟೆಯ ಮೌಲ್ಯ ಕಳೆದುಕೊಳ್ಳುತ್ತವೆ.

ಕಳೆದ ಎರಡು ವರ್ಷಗಳ ಅಧ್ಯಯನದ ಪ್ರಕಾರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ,  ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೆ.ಜಿ.ಎಫ್., ಕೋಲಾರ, ಬೆಂಗಳೂರು ಗ್ರಾಮಾಂತರ ತಾಲ್ಲೂಕಿನ ಹಳ್ಳಿಗಳಲ್ಲಿ, ಪ್ರತಿ ವರ್ಷವೂ ಈ ಕೀಟಗಳು ಕಾಣಸಿಕ್ಕಿವೆ. ಮಾತ್ರವಲ್ಲದೆ, ಸುಮಾರು ಶೇ 20 ರಿಂದ 35 ಬೆಳೆ ಹಾನಿ ಮತ್ತು ನಷ್ಟದ ಪ್ರಮಾಣ ದಾಖಲಾಗಿದೆ. ಈ ಕೀಟಗಳು ವರ್ಷದಾದ್ಯಂತ ಬೆಳೆಯ ಎಲ್ಲಾ ಹಂತಗಳಲ್ಲಿ ಬರುತ್ತವೆ ಹಾಗೂ ಬೇಸಿಗೆಯಲ್ಲಿ ಇದರ ಹಾವಳಿ ಅತಿ ಹೆಚ್ಚು. ಹಾಗಾಗಿ ಬೇಸಿಗೆಯಲ್ಲಿ ಇಳುವರಿಯು ಗಣನೀಯವಾಗಿ ಕಡಿಮೆಯಾಗುತ್ತದೆ. 

ಕೀಟಗಳ ನಿರ್ವಹಣೆ
** ಕಟಾವಿನ ನಂತರ, ಹೊಲದಲ್ಲಿ ಉಳಿದ ಕೋಸಿನ ಎಲೆ ಮತ್ತು ಗಿಡಗಳನ್ನು ನಾಶಪಡಿಸಬೇಕು. ಏಕೆಂದರೆ, ಕೀಟಗಳು ಕೋಸಿನ ಜಾತಿಯ ಬೆಳೆಯ ಮೇಲೆ ಮುಂದಿನ ಬೆಳೆಯ ನಾಟಿಯ ತನಕ ಪರ್ಯಾಯವಾಗಿ ಜೀವಿಸುತ್ತವೆ.
** ಬೇಸಿಗೆಯಲ್ಲಿ ಎಲೆಕೋಸು ಬೆಳೆಯದಿರುವುದು ಉತ್ತಮ. ಏಕೆಂದರೆ, ಬೇಸಿಗೆಯಲ್ಲಿ ಈ ಕೀಟದ ಹಾವಳಿ ಅತೀ ಹೆಚ್ಚು. ಮಾಗಿ ಉಳುಮೆ ಆಳವಾಗಿ ಮಾಡಬೇಕು (ಈ ರೀತಿ ಮಾಡುವುದ ರಿಂದ ಮಣ್ಣಿನಲ್ಲಿ ಹುದುಗಿರುವ ಹುಳುಗಳು, ಕೋಶಾವಸ್ಥೆಯ ಕೀಟಗಳು ಸಹ ಮೇಲೆ ಬರುತ್ತವೆ, ಇವುಗಳನ್ನು ಕೀಟ ಭಕ್ಷಕ ಪಕ್ಷಿಗಳು ಹೆಕ್ಕಿ ತಿನ್ನುತ್ತವೆ ಮತ್ತು ಸೂರ್ಯನ ಬಿಸಿಲಿನ ಶಾಖದಿಂದಲೂ ಹುಳುಗಳು ಸಾಯುತ್ತವೆ).
** ಉತ್ತಮ ತಳಿಗಳನ್ನು ಬಿತ್ತನೆಗೆ ಆಯ್ಕೆಮಾಡಿಕೊಳ್ಳಬೇಕು.
** ಗಿಡದಿಂದ ಗಿಡಕ್ಕೆ ಒಂದೂವರೆ ಅಡಿಗೆ ಹಾಗೂ ಸಾಲಿನಿಂದ ಸಾಲಿಗೆ ಎರಡು ಅಡಿಗೆ ನಾಟಿಮಾಡಬೇಕು.
** ಎಲೆಕೋಸಿನ ಜೊತೆ ಸಾಸಿವೆಯನ್ನು ಅಂತರ (ಅಕ್ಕಡಿ ಸಾಲು) ಬೆಳೆಯಾಗಿ ಬೆಳೆದರೆ, ಈ ಕೀಟ ಸಾಸಿವೆ ಬೆಳೆಗೆ ಹೆಚ್ಚು ಆಕರ್ಷಿತವಾಗುತ್ತದೆ ಮತ್ತು ಕೋಸಿಗೆ ಹಾನಿ ಕಡಿಮೆಯಾಗುತ್ತದೆ.
** ಕೀಟಗಳು ಕಾಣಿಸಿಕೊಂಡ ತಕ್ಷಣ, ಎಲೆಯ ಸಹಿತ ಕಿತ್ತು ನಾಶಪಡಿಸುವುದು ಉತ್ತಮ.
** ಈ ಕೀಟಗಳು ಎಲೆಯ ಕೆಳಭಾಗ ಹಾಗೂ ಸಂದುಗಳಲ್ಲಿ ಇಡುವ ಮೊಟ್ಟೆಗಳನ್ನು ಗುರುತಿಸಿ ನಾಶಪಡಿಸುವುದು.
** ಸಾರಜನಕ (ಯೂರಿಯಾ) ಹೆಚ್ಚಾದರೆ, ಎಲೆಗಳು ದಟ್ಟವಾಗಿ ಬೆಳೆದು ಕೀಟಗಳಿಗೆ ಉತ್ತಮ ಆಹಾರವಾಗುತ್ತದೆ, ಆದ್ದರಿಂದ ಸಾರಜನಕಯುಕ್ತ ರಸಗೊಬ್ಬರದ ಬಳಕೆ ಕಡಿಮೆಮಾಡಬೇಕು.
** ಎಲೆಕೋಸು ಬೆಳೆಗೆ, ತುಂತುರು (ಸ್ಪ್ರಿಂಕ್ಲರ್) ನೀರಾವರಿಯ ಮುಖಾಂತರ ಸಂಜೆಯ ಸಮಯದಲ್ಲಿ ನೀರು ಕೊಟ್ಟಲ್ಲಿ, ಚಿಮ್ಮುವ ನೀರು ಪತಂಗಗಳ ಹಾರಾಟ ಮತ್ತು ಸಂತಾನಾಭಿವೃದ್ಧಿಯ ಸಂವಹನ ಕ್ರಿಯೆಗೆ ತಡೆಯುಂಟಾಗಿ ಕೀಟಗಳ ಸಂಖ್ಯೆ ಕಡಿಮೆಯಾಗುತ್ತದೆ.
** ಪ್ರಕೃತಿಯಲ್ಲಿ ಸಾಮಾನ್ಯವಾಗಿ ಕೀಟ ಭಕ್ಷಕ ಕೀಟಗಳು, ಕೀಟ ಭಕ್ಷಕ ಪಕ್ಷಿಗಳು ಇರುತ್ತವೆ, ಈ ಭಕ್ಷಕ ಕೀಟಗಳು ಈ ಹುಳುವನ್ನು ಉತ್ತಮವಾಗಿ ನಿರ್ವಹಣೆ ಮಾಡಬಲ್ಲವು.
** ಹತ್ತಕ್ಕೂ ಹೆಚ್ಚು ಬಗೆಯ ಪರಾವಲಂಬಿ ಕೀಟಗಳು ಈ ಹುಳುವಿನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಅವುಗಳಿಗೆ ಹಾನಿಯಾಗದ ಹಾಗೆ ಅತ್ಯಂತ ಕಡಿಮೆ ರಾಸಾಯನಿಕಗಳನ್ನು ಬಳಸಿ ಕೀಟಗಳ ನಿರ್ವಹಣೆ ಮಾಡಬೇಕು. ಕೀಟಗಳ ಸಂಖ್ಯೆ ಕಡಿಮೆ ಇರುವಾಗಲೇ ಹತೋಟಿ ಕ್ರಮ ಕೈಗೊಳ್ಳುವುದು ಉತ್ತಮ.
** ಬೇವಿನ ಬೀಜಗಳನ್ನು ನೆನೆಸಿದ ದ್ರಾವಣ ಅಥವಾ ಬೇವಿನ ಎಣ್ಣೆ 5–10 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು.
** ಪ್ರತಿ ಸಲ ಒಂದೇ ತರಹದ ಕೀಟನಾಶಕವನ್ನು ಉಪಯೋಗಿಸಬಾರದು. ಹಾಗೆ ಒಂದೇ ತರಹದ ಕೀಟನಾಶಕ ಉಪಯೋಗಿಸಿದಲ್ಲಿ ಕೀಟಗಳು ಆ ಕೀಟನಾಶಕಕ್ಕೆ ನಿರೋಧಕ ಶಕ್ತಿಪಡೆದುಕೊಳ್ಳುತ್ತವೆ.  
ನಾವು ನಮ್ಮ ಅಧ್ಯಯನದಲ್ಲಿ, ಬೇವಿನ ಎಣ್ಣೆ, ಹೊಂಗೆ ಎಣ್ಣೆ ಮತ್ತು ಮೀನಿನ ಎಣ್ಣೆಗಳ ಒಂದು ಕರಾರುವಕ್ಕಾದ ಮಿಶ್ರಣ ತಯಾರಿಸಿ, ಕೆಲವಾರು ರಾಸಾಯನಿಕ ಕೀಟನಾಶಕಗಳೊಂದಿಗೆ ಬೇರೆ ಬೇರೆ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಿ ನೋಡಿದಾಗ, ಇಂಡಾಕ್ಸಾಕಾರ್ಬ್ 0.25 ಮಿ.ಲೀ. ಯೊಂದಿಗೆ 2 ಮಿ.ಲೀ. ಎಣ್ಣೆಗಳ ಮಿಶ್ರಣ, ಕ್ವೀನಾಲ್ಫಾಸ್ 1.5 ಮಿ.ಲೀ. ನೊಂದಿಗೆ 2 ಮಿ.ಲೀ. ಎಣ್ಣೆಗಳ ಮಿಶ್ರಣ ಮತ್ತು ಸ್ಪೀನೋಸಾಡ್ 0.3 ಮಿ.ಲೀ.ಯೊಂದಿಗೆ 2 ಮಿ.ಲೀ. ಎಣ್ಣೆಗಳ ಮಿಶ್ರಣ ಅತ್ಯುತ್ತಮ ಮತ್ತು ಪರಿಣಾಮಕಾರಿ ಕೀಟ ನಿಯಂತ್ರಣ ಕ್ರಮ ಎಂದು ಕಂಡುಬಂದಿದೆ. ಈ ರೀತಿಯ ಮಿಶ್ರಣಕ್ಕೆ ಕಳೆದ ಕೆಲ ವರ್ಷಗಳ ನಮ್ಮ ಅಧ್ಯಯನದಲ್ಲಿ, ಕೀಟಗಳು, ರಾಸಾಯನಿಕ ಕೀಟನಾಶಕಗಳಿಗೆ  ಪ್ರತಿರೋಧ (ನಿರೋಧಕತೆ) ತೋರಿದ ಉದಾಹರಣೆ ಕಡಿಮೆಯೆಂದು ಹೇಳಬಹುದು. ಮಾಹಿತಿಗೆ: 9141838367.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT