ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಿ ಮೇಯ್ದು ಕೊಬ್ಬಿದ ಕುರಿ...!

Last Updated 10 ನವೆಂಬರ್ 2014, 19:30 IST
ಅಕ್ಷರ ಗಾತ್ರ

‘ಕುರೀನ ಕೊಬ್ಬಿಸೋದು ಕಷ್ಟ ಅಲ್ಲ ಸಾರ್. ಆದ್ರೆ ಮರಿಗಳನ್ನು ಯಾವಾಗ ತಂದು, ಯಾವಾಗ ಮಾರಾಟ ಮಾಡಬೇಕು ಎಂಬ ತಿಳಿವಳಿಕೆ ಇರಬೇಕು. ಇಲ್ಲಾಂದ್ರೆ ಅಂದುಕೊಂಡಷ್ಟು ಲಾಭ ಮಾಡೋಕಾಗಲ್ಲ’. ನಾಲ್ಕು ವರ್ಷದ ಕುರಿಸಾಕಾಣಿಕೆಯಲ್ಲಿನ ತಮ್ಮ ಅನುಭವವನ್ನು ಯುವಕ ಸೂರ್ಯನರೇಶ್ ವಿವರಿಸುತ್ತಿದ್ದರು. ಎಂ.ಬಿ.ಎ. ಪದವಿಯ ತರಗತಿಗಳಲ್ಲಿ ಕಲಿತ ಮಾರುಕಟ್ಟೆ ತಂತ್ರಗಳನ್ನು ಕುರಿ ಸಾಕಾಣಿಕೆಯಲ್ಲೂ ಅಳವಡಿಸಿಕೊಂಡ ಹೆಮ್ಮೆ ಅವರ ಮಾತುಗಳಲ್ಲಿತ್ತು.

ಕಲಿಕೆಯ ನಂತರದ ಬೆಂಗಳೂರಿನ ಕಾರ್ಪೊರೇಟ್ ಆಫೀಸ್ ಒಂದರ ಕೆಲಸ ಸ್ವಾವಲಂಬನೆ ಮತ್ತು ನೆಮ್ಮದಿಯನ್ನು ಅರಸುವ ತನಗಲ್ಲ ಎಂದು ತಿಳಿದದ್ದೇ, ಸ್ವಂತ ಊರು ಬಳ್ಳಾರಿಯ ಕೃಷ್ಣಾನಗರ ಕ್ಯಾಂಪಿಗೆ ಬಂದು ನೆಲೆಸಿದರು. ಚಿಕ್ಕಪ್ಪ ಕೊಟ್ಟ ಸಲಹೆಯಂತೆ ‘ಕಟ್ಟಿ ಮೇಯಿಸುವ ಪದ್ಧತಿ’ಯಲ್ಲಿ ಕುರಿ ಸಾಕಾಣಿಕೆಯನ್ನು ಕೈಗೊಂಡರು.

ಐದು ಸಾವಿರ ಚದರಡಿಯಷ್ಟು ವಿಸ್ತೀರ್ಣದ, ನೆಲಮಟ್ಟದಿಂದ ಮೇಲಿರುವ ‘ಮಾಳಿಗೆ ಮಾದರಿ’ಯ ಕೊಟ್ಟಿಗೆ ೫೫೦-೬೦೦ ಕುರಿಗಳನ್ನು ಸಾಕುವಷ್ಟು ದೊಡ್ಡದಿದೆ. ಅದನ್ನು ನಾಲ್ಕು ಭಾಗಗಳಾಗಿ ಪ್ರತ್ಯೇಕಿಸಲಾಗಿದೆ. ಕೆಂಗುರಿ, ದೆಕ್ಕನಿ ಕುರಿ ತಳಿಗಳ ಜೊತೆಯಲ್ಲಿ, ತೆಲಿಚೆರಿ ಮತ್ತು ಸಿರೋಹಿ ಮೇಕೆ ತಳಿಗಳನ್ನೂ ಈ ಭಾಗಗಳಲ್ಲಿ ಪ್ರತ್ಯೇಕವಾಗಿ ಸಾಕಾಲಾಗಿದೆ. ಹನ್ನೆರಡರಿಂದ ಹದಿನೈದು ಕೆ.ಜಿ. ತೂಕದ ಮೂರು ತಿಂಗಳು ವಯಸ್ಸಿನ ಕುರಿಮರಿಗಳನ್ನು (ವಿಶೇಷವಾಗಿ ಗಂಡು ಮರಿಗಳನ್ನು) ಬಾಗಲಕೋಟೆಯ ಅಮೀನಗಡ, ಕೆರೂರು ಅಥವಾ ಕೊಪ್ಪಳ, ಸಿಂಧನೂರಿನ ಕುರಿ ಸಂತೆಗಳಲ್ಲಿ ೨೮೦೦-೩೧೦೦ ರೂಪಾಯಿಗಳಿಗೆ ಒಂದರಂತೆ ಖರೀದಿಸಲಾಗುತ್ತದೆ.

ಖರೀದಿಯನ್ನು ಸಂಕ್ರಾಂತಿಯ ಆಚೀಚಿನ ದಿನಗಳಲ್ಲೆ ಮಾಡಲಾಗುತ್ತದೆ. ಅದಕ್ಕೆ ವಿಶೇಷ ಕಾರಣವನ್ನು ನರೇಶ್ ಹೇಳುವುದು ಹೀಗೆ... ‘ನಮ್ಮ ಈ ಸಂತೆಗಳಿಗೆ ತಮಿಳುನಾಡಿನ ವ್ಯಾಪಾರಿಗಳು ಬಂದು ಕುರಿಗಳನ್ನು ಕೊಂಡೊಯ್ಯವುದು ಸಾಮಾನ್ಯ. ಆದರೆ ಸಂಕ್ರಾಂತಿ (ಪೊಂಗಲ್) ಆಚರಣೆಯ ಸಂದರ್ಭದಲ್ಲಿ ತಮಿಳರಲ್ಲಿ ಕುರಿ ಖರೀದಿಸುವ ಪದ್ಧತಿ ಇರುವಂತೆ ಕಾಣುವುದಿಲ್ಲ. ಹಾಗಾಗಿ ಆ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕುರಿಧಾರಣೆ ಕುಸಿದು, ಉತ್ತಮ ಮರಿಗಳು ‘ಸುಸ್ತಾ’ ಸಿಗುತ್ತವೆ.

ಹೀಗೆ ಕಡಿಮೆ ಬೆಲೆಗೆ ವ್ಯಾಪಾರ ಕುದುರಿಸಿ ಕೊಂಡು ತಂದ ಮರಿಗಳನ್ನು ಏಳರಿಂದ ಎಂಟು ತಿಂಗಳು ಕೊಬ್ಬಿಸಿ, ಅವು ೪೦ ರಿಂದ ೪೫ ಕೆ.ಜಿ ತೂಗುವ ಸಮಯಕ್ಕೆ ಸರಿಯಾಗಿ ಬಕ್ರೀದ್ ಹಬ್ಬ ಸಮೀಪಿಸಿರುತ್ತದೆ. ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಕುರಿಗಳಿಗೆ ಬೇಡಿಕೆಯು ಹೆಚ್ಚುವ ಕಾಲವದು. ಅದಕ್ಕೆ ಸರಿ ಹೊಂದುವಂತೆ ಬಳ್ಳಾರಿಯಲ್ಲಿ ಕೊಬ್ಬಿದ ಕುರಿಗಳು ಬೆಂಗಳೂರಿನ ಸಂತೆಗಳನ್ನು ಸೇರುತ್ತವೆ.

ಕುರಿ ಕೊಬ್ಬಿಸುವ ರೀತಿ
ಕೊಟ್ಟಿಗೆಯಲ್ಲೇ ಮೇವುಣಿಕೆಗಳ ಸಹಾಯದಿಂದ ಕುರಿಗಳಿಗೆ ಬೇಕಾದ ಮೇವು ಮತ್ತು ಆಹಾರವನ್ನು ನೀಡಲಾಗುತ್ತದೆ. ಶುದ್ದ ನೀರು ಪೂರೈಕೆಗೂ ನೀರುಣಿಕೆಗಳ ವ್ಯವಸ್ಥೆ ಇದೆ. ವರ್ಷದ ಆರು ತಿಂಗಳು ದೊರೆಯುವ ತುಂಗಾಭದ್ರ ನೀರನ್ನು ಉಪಯೋಗಿಸಿಕೊಂಡು ವಿವಿಧ ಮೇವಿನ ಬೆಳೆಗಳನ್ನು ಬೆಳೆಯಲಾಗಿದೆ. ಬಹುವಾರ್ಷಿಕ ನೇಪಿಯರ್ (ಅಔ-೩, ಅಔ-೪), ಮೇವಿನ ಮೆಕ್ಕೆಜೋಳದ ಜೊತೆ ಸ್ವಲ್ಪ ಪ್ರಮಾಣದ ಸೆಣಬಿನ ಸಸಿಗಳನ್ನು ದಿನವೂ ಮೇವು ಕತ್ತರಿಸುವ ಯಂತ್ರದಿಂದ ತುಂಡರಿಸಿ ದಿನಕ್ಕೆ ನಾಲ್ಕೈದು ಬಾರಿ ತಿನ್ನಿಸಲಾಗುತ್ತದೆ.

ಪ್ರತಿ ಸಾರಿ ಕೊಟ್ಟಾಗಲೂ ಪ್ರತಿ ಕುರಿಗೆ ೧ ಕೆ.ಜಿ ಯಷ್ಟು ಮೇವು ದೊರೆಯುವಂತೆ ಎಚ್ಚರವಹಿಸಲಾಗುತ್ತದೆ. ಮಾರುಕಟ್ಟೆಗೆ ಕಳುಹಿಸುವ ಮೂರು ತಿಂಗಳು ಮುಂಚಿತವಾಗಿ ಮೆಕ್ಕೆಜೋಳ, ದ್ವಿದಳ ಧಾನ್ಯಗಳ ಸಿಪ್ಪೆ ಮತ್ತು ಖನಿಜ ಮಿಶ್ರಣಗಳನ್ನು ಒಳಗೊಂಡ ಆಹಾರವನ್ನು ವಿಶೇಷವಾಗಿ ತಿನ್ನಿಸಿ, ಕುರಿಗಳ ನಿರೀಕ್ಷಿತ ಬೆಳವಣಿಗೆಯನ್ನು ಕಾಯ್ದಕೊಳ್ಳಲಾಗುತ್ತದೆ. 

ಕುರಿಗಳನ್ನು ಚೆನ್ನಾಗಿ ಕೊಬ್ಬಿಸಲು ರಸಮೇವನ್ನು ತಿನ್ನಲು ಕೊಡಲೇಬೇಕು ಎಂಬುದನ್ನು ಅನೇಕರು ಪ್ರಚುರಪಡಿಸುತ್ತಿರುವ ಬಗ್ಗೆ ಕೇಳಿದಾಗ, ನರೇಶ್ ನಕಾರಾತ್ಮವಾಗಿ ಉತ್ತರಿಸುತ್ತ ನನಗೂ ಹಾಗೆಯೇ ತಿಳಿಸಲಾಗಿತ್ತು. ಅದಕ್ಕಾಗಿ ರಸಮೇವಿನ ಗುಂಡಿಗಳನ್ನೂ ನಿರ್ಮಿಸಿಕೊಂಡೆ. ರಸಮೇವನ್ನೂ ತಯಾರು ಮಾಡಿ ತಿನ್ನಿಸಿದೆ. ಇದರಿಂದ ಬೆಳವಣಿಗೆಯಲ್ಲಿ ಯಾವುದೇ ಗಣನೀಯ ಹೆಚ್ಚಳ ಕಂಡು ಬರಲಿಲ್ಲ. ಬದಲಾಗಿ ನಾವು ಶೇಖರಿಸುವ ಅತ್ಯುತ್ತಮ ಹುಲ್ಲಿನಲ್ಲಿ ಶೇಕಡ ೧೦ ರಷ್ಟು ಹಾಳಾಗುತ್ತದೆ.

ಯಾವುದೇ ಉತ್ತಮ ಗುಣಮಟ್ಟದ ಹಸಿರು ಹುಲ್ಲಿಗೆ ರಸಮೇವು ಖಂಡಿತ ಪರ್ಯಾಯ ಅಲ್ಲ; ಶ್ರೇಷ್ಠವೂ ಅಲ್ಲ. ಕಟ್ಟಿ ಮೇಯಿಸುವ ಕುರಿಗಳಿಗೆ ರಸಮೇವು ತಿನ್ನಿಸಲೇಬೇಕೆಂದು ಹೇಳುವುದು ರಸಮೇವು ತಯಾರಿಸಿಕೊಡುವವರ ಮಾರುಕಟ್ಟೆ ತಂತ್ರ. ಇನ್ನೇನೂ ಅಲ್ಲ. ಆದರೆ ಹಸಿರು ಮೇವು ಸಿಗುವುದೇ ಇಲ್ಲ ಎಂಬ ಸಮಯದಲ್ಲಿ ರಸಮೇವು ಇದ್ದರೆ ಉಪಯೋಗವಾಗುತ್ತ.

ನನಗೂ ಬೇಸಿಗೆಯ ಐದಾರು ತಿಂಗಳು ಕಾಲುವೆಯಲ್ಲಿ ನೀರು ಇರುವುದಿಲ್ಲ. ಆ ಸಮಯದ ನೀರಿನ ಸಮಸ್ಯೆ ನೀಗಿಸಲು, ಕಾಲು ಎಕರೆ ವಿಸ್ತೀರ್ಣದ ಈ ಕೃಷಿ ಹೊಂಡವನ್ನು ನಿರ್ಮಿಸಿಕೊಂಡಿದ್ದೇನೆ’ ಎಂದು ತುಂಬಿದ ವಿಶಾಲವಾದ ಹೊಂಡವನ್ನು ಉತ್ಸಾಹದಿಂದ ತೋರಿಸುತ್ತಾರೆ.  ಸಾರ್, ಕಾಲುವೆಯಲ್ಲಿ ನದಿ ನೀರು ಬಾರದ ದಿನಗಳಲ್ಲಿ ಕುರಿಗಳಿಗೆ ಕುಡಿಯುವ ನೀರು ಒದಗಿಸಲು, ಮೇವಿನ ಬೆಳೆಗಳನ್ನು ಬೆಳೆಯಲು ಇದರಲ್ಲಿ ಶೇಖರಿಸಿರುವ ನೀರನ್ನೇ ಉಪಯೋಗಿಸುತ್ತೇನೆ. ಈ ಹೊಂಡ ಮಾಡಿಕೊಂಡಾಗಿನಿಂದ ವರ್ಷವಿಡೀ ನನಗೆ ಮೇವಿನ ಸಮಸ್ಯೆ ಕಾಡಿದ್ದೇ ಇಲ್ಲ ಎನ್ನುತ್ತಾರೆ.

ಕುರಿ ವ್ಯಾಪಾರ
ಬಕ್ರೀದ್ ಹಬ್ಬ ಸಮೀಪಿಸುತ್ತಿದೆ ಎಂದಾಕ್ಷಣ, ಬೆಂಗಳೂರಿನ ವ್ಯಾಪಾರಿಗಳು ಮನೆಬಾಗಿಲಿಗೇ ಬಂದು ಕುರಿಗಳನ್ನು ಖರೀದಿಸಿ ಲಾರಿಗಳಲ್ಲಿ ಹೊತ್ತೊಯ್ಯುತ್ತಾರೆ.  ಪ್ರತಿ ಕೆ.ಜಿ. ದೇಹತೂಕಕ್ಕೆ ಇನ್ನೂರ ಇಪ್ಪತ್ತು ರೂಪಾಯಿಯಂತೆ ಕುರಿಗಳು ಮಾರಾಟವಾಗುತ್ತವೆ. ದೂರದ ಕೊಯಮತ್ತೂರಿನಿಂದ ತಂದು ಸಾಕುವ ತೆಲಿಚೆರಿ ಮೇಕೆಗಳ ಸಾಗಣಿಕೆ ವೆಚ್ಚವನ್ನು ಹೊಂದಿಸಲು ಪ್ರತಿ ಕೆ.ಜಿ. ದೇಹ ತೂಕಕ್ಕೆ ₨ ೩೪೦ ರಂತೆ ಮಾರಾಟ ಮಾಡಲಾಗುತ್ತದೆ. ಖರ್ಚೆಲ್ಲಾ ಕಳೆದು ಪ್ರತಿ ಕುರಿಯಿಂದಲೂ ಏಳೆಂಟು ತಿಂಗಳಲ್ಲೇ ೩೮೦೦-೪೨೦೦ ರೂಪಾಯಿಗಳವರೆವಿಗೂ ಲಾಭವನ್ನು ಗಳಿಸುತ್ತಾರೆ.

ಕೆಂಪು ಅಥವಾ ಕಪ್ಪು ಕುರಿಗಳಿಗಿಂತ ಬಿಳಿ ಬಣ್ಣದ ಕುರಿಗಳಿಗೆ ಹೆಚ್ಚು ಬೇಡಿಕೆ ಇರುವುದು ಇವರ ಗಮನಕ್ಕೆ ಬಂದಿದೆ. ಹೀಗೆ ಪ್ರತಿ ವರ್ಷ ೨೫೦- ೩೦೦ ಕುರಿಗಳನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಆದಾಯವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಕೊಟ್ಟಿಗೆಯ ಇನ್ನುಳಿದ ಜಾಗದಲ್ಲಿ ಬೆಳೆದು ನಿಂತ ಮಂದೆಯಿಂದ ಅತ್ಯುತ್ತಮ ಹೆಣ್ಣು ಮತ್ತು ಒಂದೆರೆಡು ಗಂಡು ಕುರಿಗಳನ್ನು ಗುರುತಿಸಿ, ಅವುಗಳನ್ನು ಸಂತಾನೋತ್ಪತ್ತಿಗಾಗಿ ಬಳಸಿಕೊಳ್ಳಲಾಗುತ್ತದೆ. ಈಗಾಗಲೇ ತಮ್ಮ ಕೊಟ್ಟಿಗೆಯಲ್ಲೇ ಹುಟ್ಟಿ ಬೆಳೆದ ಅನೇಕ ಮರಿಗಳನ್ನು ಮಾರಾಟ ಮಾಡಿ ಆದಾಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ.

ಕುರಿ ರೋಗಗಳ ನಿಯಂತ್ರಣ
‘ಬರೀ ಆದಾಯದ್ದೇ ಮಾತಾಯಿತಲ್ಲ! ಯಾವುದೇ ರೋಗ ರುಜಿನಗಳಿಂದ ನಷ್ಟವನ್ನು ಅನುಭವಿಸಿಲ್ಲವೇ?’ ಎಂಬ ನಮ್ಮ ಪ್ರಶ್ನೆಗೆ ಮುಗುಳ್ನಗುವ ನರೇಶ್, ಕುರಿಗಳಲ್ಲಿ ಕಾಣಿಸಿಕೊಳ್ಳುವ ಎಲ್ಲ ಪ್ರಮುಖ ಕಾಯಿಲೆಗಳಿಗೂ ಲಸಿಕೆಗಳಿವೆ ಸಾರ್. ಪಶುವೈದ್ಯರ ಸಲಹೆಯಂತೆ ನಿಯಮಿತವಾಗಿ ಗಂಟಲುಬೇನೆ, ಕರಳುಬೇನೆ, ಪಿಪಿಆರ್, ಕುರಿ ಸಿಡುಬು ಇತ್ಯಾದಿ ರೋಗಗಳಿಗೆ ಲಸಿಕೆ ಹಾಕಿಸುತ್ತೇನೆ.  ಈ ನಾಲ್ಕು ವರ್ಷದಲ್ಲಿ ಹೆಚ್ಚೆಂದರೆ ೧೦-೧೫ ಕುರಿಗಳು ಬೇರೆ ಬೇರೆ ಕಾರಣಗಳಿಗೆ ಸತ್ತಿರಬಹುದು.

ದಿನದಲ್ಲಿ ಒಮ್ಮೆ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ, ನಾಲ್ಕು ತಿಂಗಳಿಗೊಮ್ಮೆಯಂತೆ ತಪ್ಪದೇ ಜಂತುನಾಶಕ ಔಷಧಿ ಕುಡಿಸಿದರೆ, ರೋಗಗಳ ಭಯವೇ ಇಲ್ಲ ಎನ್ನುತ್ತ ತಾವು ಲಸಿಕೆ ಹಾಕಿಸಿದ ದಾಖಲೆಗಳನ್ನು ತೋರಿಸುತ್ತಾರೆ. ಕಡಿಮೆ ಬೆಲೆಗೆ ದೊರೆಯಬಹುದು ಎಂಬ ಕಾರಣಕ್ಕೆ, ಅಲೆಮಾರಿ ಕುರಿಗಾರರಿಂದ ಕುರಿಗಳನ್ನು ಕೊಂಡು ತಮ್ಮ ಕೊಟ್ಟಿಗೆಯ ಮರಿಗಳೊಂದಿಗೆ ಸೇರಿಸಬಾರದು.

ಇದರಿಂದ ಕಾಣದ ರೋಗಗಳು ಪ್ರಸಾರಗೊಂಡು ಇಡೀ ಮಂದೆಯ ಜೀವಕ್ಕೆ ಸಂಚಕಾರ ಬಂದೊದಗಬಹುದು ಎಂಬುದು ಅವರ ಜಾಣ್ಮೆಯ ನುಡಿ.  ಆದರೂ ಅನಿರೀಕ್ಷಿತ ಅವಘಡಗಳ ಬಗ್ಗೆ ಎಚ್ಚರವಹಿಸಲು ತಾವು ತಂದ ಕುರಿಗಳಿಗೆ ಪ್ರತಿ ವರ್ಷವೂ ವಿಮೆ ಮಾಡಿಸುವುದನ್ನು ಅವರು ಮರೆಯುವುದಿಲ್ಲ. ಸ್ಪಷ್ಟ ಯೋಜನೆ ಮತ್ತು ಅದನ್ನು ಅನುಷ್ಠಾನಗೊಳಿಸಲು ಹಗಲಿರಳು ಶ್ರಮಿಸುವ ಬದ್ಧತೆಯನ್ನು ರೂಢಿಸಿಗೊಂಡಿರುವ ನರೇಶ್, ಸ್ವಯಂಉದ್ಯೋಗ ಬಯಸುವ ಯುವಕರಿಗೆ ಮಾದರಿಯಾಗಿ ನಿಲ್ಲುತ್ತಾರೆ. ನರೇಶರವರ ಈ- ಮೇಲ್ ವಿಳಾಸ: gsnfarming@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT