ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆಯಲ್ಲ ಇದು ಮೇಕೆ !

Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಸಾರ್ ಅಚ್ಚಮ್ಮನ ಹಳ್ಳಿ ಹತ್ರ ಒಂದು ಮೇಕೆ ಇದೆ, ನೋಡೋಕೆ ಕುದುರೆ ತರ ಇದೆ ಸಾರ್!’ ಎಂದು ಗೆಳೆಯ ಹೇಳಿದಾಗ ಆ ಬಗ್ಗೆ ಅಷ್ಟಾಗಿ ಕಿವಿಕೊಡಲಿಲ್ಲ. ಒಂದೆರಡು ವಾರದ ನಂತರ ಅದರ ಫೋಟೊ ತೋರಿಸಿದಾಗ, ಒಮ್ಮೆಲೇ ಬೆಚ್ಚಿದೆ. ಏಕೆಂದರೆ ಅದು ಯಾವ ಕೋನದಿಂದಲೂ ಮೇಕೆ ತರಹ ಕಾಣಿಸಲಿಲ್ಲ. ಅತ್ತ ಕುದುರೆನೂ ಅಲ್ಲ, ಇತ್ತ ಕೆಂದ ಕರಡಿನೂ ಅಲ್ಲ, ಈ ಎರಡನ್ನೂ ಹೋಲುತ್ತಿರುವ ಪ್ರಾಣಿಯನ್ನು ಮೇಕೆ ಅಂಥಾನಲ್ಲ? ಎಂದು ಅಚ್ಚರಿಯಾಯಿತು.

ಈ ಮೇಕೆಯನ್ನು ಗುಣಗಾನ ಮಾಡಿದಾಗ ನನಗೋ ನೋಡದೇ ಇರಲು ಆಗಲಿಲ್ಲ. ನಾನೂ ಹೋಗಿ ನೋಡಿದಾಗ ಅಚ್ಚರಿಯೋ ಅಚ್ಚರಿ. ಈ ಮೇಕೆ ಇರೋದು, ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆ ಪಟ್ಟಣಕ್ಕೆ ಹೊಂದಿಕೊಂಡಿರುವ ಜೆ.ಅಚ್ಚಮ್ಮನಹಳ್ಳಿ ಎಂಬ ಊರಿನಲ್ಲಿ. ಇದರ ಮಾಲೀಕ ಬಿ.ಲಿಂಗಪ್ಪ. ಮೂಲ ಕೃಷಿಕ. ಇದರ ಜೊತೆಗೆ ಕಳೆದ 15 ವರ್ಷಗಳಿಂದ ಮೇಕೆ ಸಾಕಾಣಿಕೆ ಮಾಡುವುದು ಇವರ ಉಪಕಸುಬು. ಪಾವಗಡದ ಸುತ್ತಮುತ್ತ ಪ್ರಚಲಿತವಿರುವ ಮೇಕೆ ತಳಿಗಳನ್ನು ಸಾಕುತ್ತಿದ್ದರು. ಈ ತಳಿಗಳಿಂದ ಅಷ್ಟಾಗಿ ಲಾಭ ಬರುತ್ತಿರಲಿಲ್ಲ. ಜೊತೆಗೆ ಬಂಡೆ ಕಲ್ಲುಗಳ ಮೇಲೆ ತಿರುಗಾಡಿದ ಮೇಕೆ ಮಾಂಸ ಎಷ್ಟು ಬೇಯಿಸಿದರೂ ಬೇಯುವುದಿಲ್ಲವಂತೆ. ಆದ್ದರಿಂದ ಪಾವಗಡದ ಕಡೆ ಮೇಕೆಗಳು ಎಂದರೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತವೆ. ಇವು ಹೆಚ್ಚು ಅಂದರೆ ಒಂದು ಮೇಕೆಗೆ 20ರಿಂದ 25 ಕೆ.ಜಿ ತೂಕ ಬರುತ್ತಿದ್ದವು.

ಮಾರಮ್ಮನ ಹಬ್ಬ, ಊರಬ್ಬ ಬಂದಾಗ ಇಂಥ ಐದಾರು ಮೇಕೆ ತಂದು ಕಡಿದರೂ ಬಂದ ನೆಂಟರಿಗೆ ಸಾಕಾಗುತ್ತಿರಲಿಲ್ಲ ಎಂದು ಬೇಸರದಲ್ಲಿದ್ದ  ನಿಂಗಪ್ಪ ಅವರಿಗೆ ಹೆಚ್ಚು ತೂಕ ಬರುವ, ಮಾಂಸಕ್ಕೆ ಉತ್ತಮ ಬೆಲೆಯಿರುವ ಮೇಕೆ ತಳಿ ತಂದು ಸಾಕಬೇಕು ಎಂದುಕೊಂಡರು. ಈ ಸಮಯಕ್ಕೆ ಈ ಜಮುನಪಾರಿ ತಳಿಯ ಬಗ್ಗೆ ಮಾಹಿತಿ ಸಿಕ್ಕಿತು.

ಬೆಂಗಳೂರಿನ ಪಕ್ಕದಲ್ಲಿರುವ ಹೊಸಕೋಟೆಯಲ್ಲಿ ಒಬ್ಬರು ಈ ತಳಿ ಸಾಕಿರುವ ಬಗ್ಗೆ ತಿಳಿದ ಲಿಂಗಪ್ಪ, ಒಂದು ಗಂಡು ಮರಿಯನ್ನು ತಂದು ಸಾಕಲು ನಿರ್ಧರಿಸಿ, ಪಾವಗಡದಿಂದ ಅದನ್ನು ಹುಡುಕಿಕೊಂಡು ಹೋಗಿ ತಂದೇ ಬಿಟ್ಟರು. ಕೇವಲ 2 ತಿಂಗಳ ಮರಿಗೆ ಅವರು ಕೊಟ್ಟಿದ್ದು ರೂ10 ಸಾವಿರ. ಈಗ ಈ ಜಮುನಪಾರಿ ಓತದ ವಯಸ್ಸು ಮೂರೂವರೆ ವರ್ಷ. ಸುಮಾರು 5 ಅಡಿ ಎತ್ತರ ಬೆಳೆದು ಸುಮಾರು 120 ಕೆ.ಜಿ ತೂಕ ಹೊಂದಿದೆ. ಇದನ್ನು ಹಗ್ಗದಿಂದ ಕಟ್ಟಿ ನಿಲ್ಲಿಸಲು ಸಾಧ್ಯವಾಗುವುದಿಲ್ಲ, ಕಬ್ಬಿಣದ ಸರಪಳಿಯಿಂದ ಮಾತ್ರ ಕಟ್ಟಿ ನಿಲ್ಲಿಸಬಹುದು.
ಇದು ರೇಷ್ಮೆ ಕಸವನ್ನು, ಸೊಪ್ಪನ್ನು ಬಹಳ ಇಷ್ಟಪಟ್ಟು ತಿನ್ನುತ್ತದೆ. ಇದರ ಜೊತೆಗೆ, ಶೇಂಗಾ ಹೊಟ್ಟು, ನೆಲಗಡಲೆ ಗಿಡದ ಒಣ ಸೊಪ್ಪು, ನೇಪಿಯರ್ ಹಸಿ ಹುಲ್ಲು, ಮಿನರಲ್ ಮಿಕ್ಸ್ ಸಹ ಇದಕ್ಕೆ ಆಹಾರವಾಗಿ ನೀಡಲಾಗುತ್ತಿದೆ. ಪಾವಗಡದಲ್ಲಿ ಸ್ಥಳೀಯವಾಗಿ ಸಾಕುತ್ತಿರುವ ಮೇಕೆಗಳ ಈ ತಳಿಯನ್ನು ಕ್ರಾಸ್ ಮಾಡಿ ಉತ್ಪತ್ತಿಮಾಡಲು ಸಾಧ್ಯವಾಗದ ಕಾರಣ ಮುಂಬೈ ಕಡೆಯಿಂದ ಶಿರೋಹಿ ತಳಿಯ ಹೆಣ್ಣು ಮೇಕೆಗಳನ್ನು ತಂದು ಅದರೊಟ್ಟಿಗೆ ಸಮ್ಮಿಲನ ಮಾಡಿಸಿ ಈ ತಳಿಯನ್ನು ಉತ್ಪತ್ತಿ ಮಾಡುತ್ತಿದ್ದಾರೆ. ಇವರ ಬಳಿ ಸುಮಾರು 20 ಮಿಶ್ರತಳಿ ಜಮುನಪಾರಿ ಮೇಕೆ ಮರಿಗಳು ಮತ್ತು ಪ್ರಾಯದ ಮೇಕೆಗಳಿದ್ದು ಇವುಗಳ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಸುಮಾರು 12 ಮರಿಗಳನ್ನು ಮಾರಾಟ ಮಾಡಿ ಸುಮಾರು ರೂ 1.2 ಲಕ್ಷ ಆದಾಯವನ್ನೂ ಗಳಿಸಿದ್ದಾರೆ. ಈಗ ಊರಿನಲ್ಲಿ ಎಲ್ಲರ ಕಣ್ಣು ಈ ತಳಿಯ ಮೇಕೆಗಳ ಮೇಲೆ ಬಿದ್ದಿದೆ. ಈಚೆಗೆ ಆಂಧ್ರದಿಂದ ಬಂದ ಗ್ರಾಹಕರೊಬ್ಬರು ಈ ಮೇಕೆಯನ್ನು ಒಂದು ಲಕ್ಷ ರೂಪಾಯಿಗೆ ಖರೀದಿ ಮಾಡುವುದಾಗಿ ಬೇಡಿಕೆ ಇಟ್ಟರೂ ಲಿಂಗಪ್ಪ ಒಪ್ಪಲಿಲ್ಲ.

‘ಮೇಕೆಗೆ ಸಮ ಶೀತ, ಸಮ ಉಷ್ಣ ಇರುವಂತೆ ನೋಡಿಕೊಳ್ಳಬೇಕು, ಇವು ಹೆಚ್ಚು ಶೀತ ತಡೆಯುವುದಿಲ್ಲ, ಬಿಸಿಲಿದ್ದರೆ ಉತ್ತಮ. ನೇಪಿಯರ್ ಹುಲ್ಲಿನ ಜೊತೆಗೆ ಒಣ ಹುಲ್ಲು ಸೊಪ್ಪು ಸೇರಿಸಿ ನೀಡಬೇಕು. ಬರೀ ನೇಪಿಯರ್ ಹಸು ಹುಲ್ಲು ನೀಡುವುದರಿಂದ ಬೇಧಿ ಮಾಡಿಕೊಂಡು ಸತ್ತು ಹೊಗುತ್ತವೆ’ ಎಂದು ಲಿಂಗಪ್ಪ ಈ ಮೇಕೆ ಸಾಕಾಣಿಕೆಯ ಸೂಕ್ಷ್ಮತೆಯನ್ನು ಹಂಚಿಕೊಂಡರು.

ಶಿರೋಹಿ ತಳಿ ಮೇಕೆಗಳು ಹಸುಗಳಂತೆ ಹಾಲು ಕೊಡುತ್ತವೆ ಮತ್ತು ಹೆಚ್ಚು ದಪ್ಪಗೆ ಬೆಳೆಯುತ್ತವೆ. ಜಮುನಪಾರಿ ತಳಿಗಳು ಕುದುರೆಯಂತೆ ಬೆಳೆದು ನಿಲ್ಲುತ್ತವೆ. ಮಾಂಸಕ್ಕಾಗಿ ಸಾಕುವಾಗ ಇವು ಹೆಚ್ಚು ಲಾಭದಾಯಕ. ರೇಷ್ಮೆ ಸಾಕುವವರು ಇಂಥ  ಮೇಕೆಗಳನ್ನು ಸಾಕುವುದರಿಂದ ಹೆಚ್ಚುವರಿ ಆದಾಯ ಗಳಿಸಬಹುದು. ಹೆಚ್ಚಿನ ಮಾಹಿತಿಗೆ: 98806 98049

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT