ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಡ್ಲಿಹುಳು:­ ರೈತರ ಗೋಳು

Last Updated 10 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಕೃಷಿಕರು ಅಪಾರ ನಷ್ಟ ಅನುಭವಿಸಿ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿರುವ ಇಂದಿನ ಸನ್ನಿವೇಶದಲ್ಲಿ ಗಾಯದ ಮೇಲೆ ಬರೆ ಎಂಬಂತೆ ಈಗ ಕೊಂಡ್ಲಿ ಹುಳುವಿನ ಕಾಟ ಶುರುವಾಗಿದೆ. ಈ ಹುಳುಗಳು ರಾತ್ರಿ, ಹಗಲು ಎನ್ನದೇ ತೋಟಗಳಲ್ಲಿ ಇಟ್ಟ ಬೆಳೆಯನ್ನೆಲ್ಲಾ ತಿನ್ನುತ್ತಿವೆ. ಆರಂಭದಲ್ಲಿ ಹರಳು ಗಿಡಗಳನ್ನು ಮಾತ್ರ ಆಕ್ರಮಿಸಿಕೊಂಡಿದ್ದ ಈ ಹುಳ ಈಗ ಎಲ್ಲಾ ಬೆಳೆಗಳನ್ನು ತಿನ್ನತೊಡಗಿವೆ.

ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ರಸ್ತೆಗಳಲ್ಲಿ ಇವು ಹರಿದಾಡುತ್ತಿರುತ್ತವೆ. ಮೊದಲು ಚಿಕ್ಕ ಗಾತ್ರ ಹೊಂದುವ ಇವು ಕೆಲವೇ ದಿನಗಳಲ್ಲಿ ರೇಷ್ಮೆ ಹುಳುವಿನ ಗಾತ್ರ ಹೋಲುತ್ತವೆ. ಕೋರಿ ಹುಳುವಿನ ತರಹ ಓಡಾಡುತ್ತಿರುತ್ತವೆ. ಇವು ಕಪ್ಪಾದ ಬಣ್ಣ ಹೊಂದಿದ್ದು, ದಾರಿಯಲ್ಲಿ ಓಡಾಡುವ ಜನರ ಕಾಲಿಗೆ ಸಿಕ್ಕಿ ತುಳಿದರೆ ಅವುಗಳಿಂದ ಹೊರಹೊಮ್ಮುವ ರಸವು ಕಾಲು ಹಾಗೂ ಬಟ್ಟೆಗಳಿಗೆಲ್ಲಾ ಸಿಡಿಯುತ್ತದೆ. ದಿನವೂ ರಸ್ತೆಗಳಲ್ಲಿ ಇವುಗಳದೇ ಸಾಲು ಸಾಲು. ಒಬ್ಬರ ಹೊಲದಿಂದ ಮತ್ತೊಬ್ಬರ ಹೊಲಕ್ಕೆ ಹರಿಹಾಯುತ್ತಲೇ ಇರುತ್ತವೆ.

‘ಪ್ರತಿ ವರ್ಷವೂ ಈ ಹುಳುಗಳ ಕಾಟ ಇದದ್ದೇ. ಆದರೆ ಮಳೆ ಕಡಿಮೆ ಇದ್ದಾಗ  ಬೆಳೆಗಳು ಒಣಗಿರುವ ವೇಳೆ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಇವು, ಮಳೆ ಬಿದ್ದ ತಕ್ಷಣ  ಸಾಯುತ್ತಿದ್ದವು. ಆದರೆ ಈ ವರ್ಷ ನೋಡಿದರೆ ಇದ್ದಕ್ಕಿದ್ದಂತೇ ಇವುಗಳ ಸಂಖ್ಯೆ ಹೆಚ್ಚಾಗಿವೆ. ಮಳೆ ಚೆನ್ನಾಗಿ ಬಂದರೂ ಹುಳುಗಳು ಸಾಯುತ್ತಿಲ್ಲ. ಮಳೆ ಚೆನ್ನಾಗಿ ಸುರಿದಿರುವ ಕಾರಣ, ಗಿಡಗಳೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದವು. ಇಂತಹ ಸಂದರ್ಭದಲ್ಲಿ ನಮಗೆ ಎದುರಾದುದ್ದು ಈ ಕೊಂಡ್ಲಿ ಹುಳು. ಮಳೆಯಿಂದ ಸಾಯುತ್ತವೆ ಎಂದುಕೊಂಡು ಕಾದು ಕುಳಿತಿರುವ ನಮಗೆ ಆತಂಕ. ಏಕೆಂದರೆ ದಿನದಿಂದ ದಿನಕ್ಕೆ ಇವು ಹೆಚ್ಚುತ್ತಲೇ ಇವೆ’ ಎನ್ನುತ್ತಿದ್ದಾರೆ ರೈತರು.

ಸೂರ್ಯಕಾಂತಿ, ತೊಗರಿ, ರಾಗಿ, ಮೆಣಸಿನಗಿಡ, ರೇಷ್ಮೆ ಹೀಗೆಯೇ ನೀರಾವರಿ ಜಮೀನು ದಿಣ್ಣೆ ಬೇಸಾಯ ಎರಡರಲ್ಲೂ ಇವುಗಳು ವಾಸಿಸುತ್ತವೆ. ಅಲ್ಲಿ ಬೆಳೆ ಇಟ್ಟಿರುವ ಸಸಿಗಳ ಸುಳಿಗಳನ್ನು ತಿಂದು ಅವುಗಳು ಬೆಳೆಯದಂತೆ ಮಾಡುತ್ತವೆ. ಸೂರ್ಯಕಾಂತಿ ಹಾಗೂ ಮೆಣಸಿನ ಗಿಡಗಳನ್ನು ನೆಟ್ಟಿರುವ ಸ್ಥಳಗಳಲ್ಲಿ ಎಲೆ ಹಾಗೂ ಕಾಂಡಗಳನ್ನೆಲ್ಲ ತಿಂದು ಗಿಡಗಳೇ ಇಲ್ಲದಂತೆ ಮಾಡುತ್ತವೆ. ಇದರಿಂದ ಈ ಬೆಳೆಗಳು ಒಣಗುತ್ತಿವೆ.

ರೇಷ್ಮೆ ತೋಟಗಳಲ್ಲಿ ಸೊಪ್ಪನ್ನು ಚಿಗುರಲು ಬಿಡುವುದಿಲ್ಲ, ಚಿಗುರುಗಳನ್ನೆಲ್ಲಾ ತಿಂದು ಸೊಪ್ಪಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ರೇಷ್ಮೆ ಹುಳುಗಳಿಗೆ ರಸವಾಗಿರುವ ಸುಳಿಸೊಪ್ಪನ್ನು ಹಾಕಬೇಕು. ಸುಳಿಗಳೇ ಇಲ್ಲದಂತಾಗುವುದರಿಂದ ರೇಷ್ಮೆ ಹುಳುಗಳು ಗಾತ್ರದಲ್ಲಿ ಕುಗ್ಗಿ ಬೆಳೆಗಳು ಉತ್ತಮವಾಗಿ ಬರುತಿಲ್ಲ. ಆರಂಭದಲ್ಲಿ ಹರಳು ಗಿಡಗಳಿಗೆ ಬಿದ್ದ ಈ ಹುಳುಗಳು ಇಂದು ಹಲವಾರು ಬೆಳೆಗಳನ್ನು ನಾಶ ಮಾಡುತ್ತಿವೆ. ಇಲ್ಲದೇ ದಿನದಿಂದ ದಿನಕ್ಕೆ ಇವುಗಳ ಸಂತತಿ ನಿರಂತರವಾಗಿ ಹೆಚ್ಚುತ್ತಾ ಇದೆ.

ಜೋಳ ಮತ್ತು ಕಡಲೆಕಾಯಿ ಬೆಳೆಗಳ ಜೊತೆಗೆ ಹರಳು ಗಿಡಗಳನ್ನು ಮಿಶ್ರ ಬೆಳೆಗಳಾಗಿ ಇಟ್ಟಿದ್ದರು. ಜೋಳ ಹಾಗೂ ಕಡಲೆ ಕಾಯಿ ಬೆಳೆಗಳು ಕೊಯ್ಲಿಗೆ ಬಂದ ತಕ್ಷಣ ಹರಳು ಗಿಡಗಳು ತಲೆ ಎತ್ತಿದ್ದವು. ನಂತರ ಜೋಳ ಹಾಗೂ ಕಡಲೆ ಕಾಯಿ ಬೆಳೆಗಳನ್ನು ಕೂಡಿಟ್ಟುಕೊಂಡ ತಕ್ಷಣ ಹರಳು ಫಸಲಿಗೆ ಬರುತಿತ್ತು. ಆದರೆ ಈ ವರ್ಷ ಹರಳು ಬೀಜಗಳನ್ನು ರೈತರು ನೆಟ್ಟಿಲ್ಲ ಎಂದು ಎನಿಸದಿರದು. ಏಕೆಂದರೆ ಕೊಂಡ್ಲಿ ಹುಳುಗಳು ಒಂದು ಗಿಡದ ಕಾಂಡವನ್ನು  ಬಿಡದಂತೆ ತಿಂದು ಒಣಗಿಸಿ ಬಿಟ್ಟವೆ. ಪ್ರತಿ ವರ್ಷ ಹರಳಿನಿಂದ 20 ರಿಂದ 30 ಸಾವಿರ ಪಡೆಯುತ್ತಿದ್ದ ರೈತರು ಈ ವರ್ಷ ಒಂದು ರೂಪಾಯಿ ಸಹ ಇಲ್ಲದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಆತಂಕ ಸೃಷ್ಟಿ
ಆರಂಭದಲ್ಲಿ ಪ್ರತಿ ವರ್ಷವೂ ಬಿದ್ದಂತೆ ಬೀಳುತ್ತವೆ ಹೋಗುತ್ತವೆ ಎಂದು ತಲೆ ಕೆಡಿಸಿಕೊಳ್ಳದೆ ಇದ್ದ ರೈತರು ಇಂದು ಇವುಗಳನ್ನು ಹೋಗಲಾಡಿಸಲು ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ. ಹರಳಿನ ಗಿಡಗಳು ಮುಗಿದ ನಂತರ ಈ ಹುಳುಗಳು ಜೋಳ, ರಾಗಿ, ರೇಷ್ಮೆಯಂತಹ ಇನ್ನಿತರ ಬೆಳೆಗಳನ್ನು ನಾಶ ಪಡಿಸುತ್ತಿವೆ. ಅಲ್ಲದೆ ಇವುಗಳಿಗೆ ಔಷಧಿ ಸಿಂಪಡಿಸಲು ಆಗುತ್ತಿಲ್ಲ. ಏಕೆಂದರೆ ಸುತ್ತಮುತ್ತ ರೇಷ್ಮೆ ಬೆಳೆಗಾರರು ಅಧಿಕವಾಗಿರುವುದರಿಂದ ಅವರ ಬೆಳೆಗಳು ಹಾಳಾಗುತ್ತವೆ, ಅಲ್ಲದೆ ಸೂಜಿಚುಚ್ಚಲು ತಾವಿಲ್ಲದಂತೆ ಇರುವ ಇವುಗಳಿಗೆ ಒಂದಿಂಚು ಜಾಗ ಬಿಡದೆ ಔಷಧಿ ಸಿಂಪಡಿಸಲು ಹೇಗೆ ಸಾಧ್ಯ?

ಈ ಕೊಂಡ್ಲಿ ಹುಳುಗಳನ್ನು ಯಾವುದೇ ಪ್ರಾಣಿ ಪಕ್ಷಿಗಳು ತಿನ್ನುವುದಿಲ್ಲ. ಇದರಿಂದ ಇವುಗಳ ಸಂತತಿ ಇನ್ನಷ್ಟು ಹೆಚ್ಚಾಗಿದೆ. ಅಲ್ಲದೇ ಮನೆಯ ಗೋಡೆಗಳ ಮೇಲೂ ಇವುಗಳದ್ದೇ ಕಾಟ. ನೆಲದಲ್ಲಿ ಮಲಗಿದರೆ ಅವು ಕಿವಿಗೆ ಹೋಗುತ್ತವೆ. ಮಕ್ಕಳ ಕಿವಿಗೆ ಹೋಗಿ ಈಗಾಗಲೇ ಹಿಂಸೆ ಕೊಟ್ಟಿದೆ. ಇದರಿಂದಾಗಿ ಮನೆಯ ಸುತ್ತಲೂ ಗೆದ್ದಲು ಪೌಡರುಗಳನ್ನು  ಹಾಕಿ ಮಲಗುವ ಪರಿಸ್ಥಿತಿ. ಆದರೂ ಇವು ಮನೆಯೊಳಕ್ಕೆ ಬರುತ್ತಿವೆ. ಈ ಹುಳುವಿನ ನಿಯಂತ್ರಣಕ್ಕೆ ಕೂಡಲೇ ಸೂಕ್ತ ಔಷಧ ಕಂಡುಹಿಡಿಯಬೇಕಿದೆ.

ಕಾರ್ಯಾಗಾರ
ನೈಸರ್ಗಿಕ ಕೃಷಿಕ ಸುಭಾಷ್ ಪಾಳೇಕರ್ ಅವರಿಂದ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಕುರಿತಾಗಿ ಇದೇ ನವೆಂಬರ್ 19ರಿಂದ 23ರವರೆಗೆ ಮೈಸೂರಿನ ಕಲಾಮಂದಿರದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಜನಚೇತನಾ ಟ್ರಸ್ಟ್‌ ಏರ್ಪಡಿಸಿರುವ ಈ ಕಾರ್ಯಾಗಾರದಲ್ಲಿ ಊಟ, ವಸತಿ ಸೌಲಭ್ಯಗಳೂ ಇವೆ. ಹೆಚ್ಚಿನ ಮಾಹಿತಿಗೆ ಶಂಕರಣ್ಣ ದೊಡ್ಡಣ್ಣವರ ಅವರ ಸಂಪರ್ಕ ಸಂಖ್ಯೆ 9448916370.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT