ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡದ ನೀರಿಂದ ಬಗೆ ಬಗೆ ತರಕಾರಿ

Last Updated 7 ಜುಲೈ 2014, 19:30 IST
ಅಕ್ಷರ ಗಾತ್ರ

ಗುಡ್ಡದ ನೀರಿಂದ ತರಕಾರಿ ವೈವಿಧ್ಯ ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ತಮಗೆ ಬೇಕಾಗುವಷ್ಟು ತರಕಾರಿಗಳನ್ನು ತಾವೇ ಬೆಳೆದುಕೊಳ್ಳುವುದು ರೂಢಿ. ವಿಶೇಷ ಸಮಾರಂಭಗಳಲ್ಲಿ ಮಾತ್ರ ಪೇಟೆಯ ಸಂತೆಯ ತರಕಾರಿ ಅನಿವಾರ್ಯ.

ಉತ್ತರ ಕನ್ನಡದ ಸಿದ್ದಾಪುರ ತಾಲ್ಲೂಕಿನ ಹಿರೇಕೈ ಗ್ರಾಮ ಒಂದು ಅರಣ್ಯ ಮಧ್ಯದೊಳಗಿನ 16 ಮನೆಗಳಿರುವ ಪುಟ್ಟ ಊರು. ಇಲ್ಲಿ ವರ್ಷವಿಡೀ ಅಬ್ಬಿನೀರು (ಸಹಜವಾಗಿ ಗುಡ್ಡದಿಂದ ಹರಿದು ಬರುವ ನೀರು) ಸಿಗುತ್ತದೆ. ಹರಿದು ಬರುವ ನೀರಿಗೆ ಪೈಪ್ ಜೋಡಿಸಿ ಟ್ಯಾಂಕ್ ಮೂಲಕ ನೀರನ್ನು ಪಡೆದುಕೊಳ್ಳುತ್ತಾರೆ. ಇಲ್ಲಿನ ಯಾವುದೇ ಮನೆಗಳಲ್ಲಿ ಬಾವಿಗಳಿಲ್ಲದಿರುವುದು ವಿಶೇಷ. ವರ್ಷವಿಡೀ ನೀರು ಯಥೇಚ್ಛವಾಗಿ ಸಿಗುವುದರಿಂದ ನೀರು ಬಳಸಿ ಬೆಳೆಯುವ ತರಕಾರಿಗಳು ವರ್ಷವಿಡೀ ಲಭ್ಯ.

ಹಿರೇಕೈ ಊರಿನ ಜಿ.ಡಿ.ಹೆಗಡೆ ಮತ್ತು ಕಮಲಾಕ್ಷಿ ಹೆಗಡೆ ದಂಪತಿ ಹತ್ತಾರು ವರ್ಷಗಳಿಂದ ಸಾವಯವ ಬಳಸಿ ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಮನೆ ಗುಡ್ಡದ ಹಿತ್ತಲಲ್ಲಿ ಇವರ ತರಕಾರಿ ಕೈತೋಟ ಸ್ವಾವಲಂಬನೆಗೆ ಸಾಕ್ಷಿಯಾಗಿದೆ. ಇವರು ಮಾಡಿದ ಮುಳ್ಳುಸೌತೆ ಚಪ್ಪರದಲ್ಲಿ ದೊಡ್ಡ ಆಕಾರದಲ್ಲಿ, ಒತ್ತು ಒತ್ತಾಗಿ ಕಾಯಿಗಳು ಬೆಳೆದಿವೆ. ಬಳ್ಳಿಯ ತುಂಬೆಲ್ಲ ಸೌತೆಕಾಯಿ ಜೋತುಬಿದ್ದಿವೆ. ಬಳ್ಳಿಗೆ ಕಾಯಿ ಭಾರವೇ ಎನ್ನುವಂತಿದೆ!

ಒಂದು ಕಡೆ ಸೌತೆ ಕಾಯಿ ಚಪ್ಪರವಾದರೆ ಮತ್ತೊಂದು ಕಡೆ ಬೆಂಡೆಕಾಯಿ ಗಿಡದ ಸಾಲು. ಇನ್ನೊಂದು ಕಡೆ ಮೂಲಂಗಿ, ಜತೆಗೆ ಕ್ಯಾಬೇಜ್. ಇವುಗಳ ಪಕ್ಕವೇ ಬೀಟ್‌ರೂಟ್, ಗೆಡ್ಡೆಕೋಸು, ಬದನೆ, ಹಾಗಲ ಗಿಡ ಬಳ್ಳಿಗಳಿವೆ. ಮೆಂತ್ಯ, ಗೋಳಿ ಸೊಪ್ಪು ಕೂಡ ಬೆಳೆಯುತ್ತಾರೆ. ಈಗ ಹರಿವೆ ಸೊಪ್ಪು ಮೇಲೇಳುತ್ತಿವೆ.

ಸಾವಯವದಿಂದ ಬೆಳೆದ ಹರಿವೆ ಸೊಪ್ಪು ತಿನ್ನಲು ಬಹುರುಚಿ. ಪೇಟೆಯಲ್ಲಿ ಸಿಗುವ ಹರಿವೆ ಸೊಪ್ಪಿಗಿಂತ ವಿಶೇಷ ರುಚಿ ಇವಕ್ಕಿದೆ. ಹೀಗೆ ವರ್ಷವಿಡೀ ವಿವಿಧ ತರಕಾರಿ ಬೆಳೆದು ಇವರು ಮಾದರಿ ಸ್ವಾವಲಂಬಿಗಳಾಗಿದ್ದಾರೆ. ಹಳ್ಳಿಮನೆಗಳು ಅವಗಣನೆಗೆ ಈಡಾಗುತ್ತಿರುವ ಪ್ರಸ್ತುತ ಸಂದರ್ಭ ದಲ್ಲಿ ಇಂಥ ಮನೆಗಳ ಸೊಬಗನ್ನು ನೋಡಬೇಕು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT