ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀರೋದಿಂದ ಜರ್ಮನ್‌ವರೆಗೆ...

Last Updated 6 ಮೇ 2013, 19:59 IST
ಅಕ್ಷರ ಗಾತ್ರ

`ಯಾರು ದೂರ ತಳ್ಳಿದರೂ ಭೂಮಿತಾಯಿ ನಂಬಿದವರನ್ನು ಎಂದೂ ಕೈಬಿಡುವುದಿಲ್ಲ' ಎನ್ನುವ ಇವರ ಮಾತಿನಲ್ಲಿ ಎರಡು ದಶಕಗಳ ಅನುಭವವಿದೆ. ಇದ್ದಷ್ಟೇ ಭೂಮಿಯಲ್ಲಿ ಸಾವಯವ ಕೃಷಿ, ಎರೆಹುಳು ತಯಾರಿಕೆ ಮಾಡುತ್ತ ಸ್ವಾವಲಂಬಿ ಬದುಕು ಕಟ್ಟಿಕೊಂಡ ಅಪರೂಪದ ಏಕಾಂಗಿ ಮಹಿಳೆ ದುಮ್ಮಳ್ಳಿ ಶಿವಮ್ಮ.

ಏಕಾಂಗಿಯಾಗಿ ಜೀರೋದಿಂದ ಕೃಷಿ ಆರಂಭಿಸಿರುವ ಶಿವಮ್ಮ, ಈಗ ತಮ್ಮ ಅಭೂತಪೂರ್ವ ಕೃಷಿಯ ಯಶೋಗಾಥೆಯನ್ನು ಸಾರಲು ಜರ್ಮನ್ ಪ್ರವಾಸ ಕೈಗೊಳ್ಳಲಿದ್ದಾರೆ. ಶಿವಮೊಗ್ಗದ ತೊಟಗಾರಿಕಾ ಇಲಾಖೆಯಿಂದ ರೈತ ಮಹಿಳೆಯರಿಗೆ ಕೈಗೊಳ್ಳುವ ವಿದೇಶಿ ಪ್ರವಾಸಕ್ಕೆ ಶಿವಮ್ಮ ಆಯ್ಕೆಯಾಗಿದ್ದಾರೆ.

ಶಿವಮೊಗ್ಗದಿಂದ ಭದ್ರಾವತಿಗೆ ಹೋಗುವ ಹೆದ್ದಾರಿಯಲ್ಲಿ ಆರು ಕಿಲೋಮೀಟರ್ ಚಲಿಸಿದರೆ ದುಮ್ಮಳ್ಳಿ ಕ್ರಾಸ್ ಸಿಗುತ್ತದೆ. ಅಲ್ಲಿಂದ ಬಲಕ್ಕೆ ಸುಮಾರು ಮೂರು ಕಿಲೋಮೀಟರ್ ಸಾಗಿದರೆ ಹಸಿರುಹೊದ್ದ ತೋಟವೊಂದು ಎದುರಾಗುತ್ತದೆ. ತಂಪು ವಾತಾವರಣ, ತುಂತುರು ಹನಿ ನೀರಾವರಿಯಿಂದ ಮೈ ಒದ್ದೆ ಮಾಡಿಕೊಂಡು ಸ್ವಲ್ಪ ಮುಂದೆ ಸಾಗಿದರೆ ಹುಲುಸಾಗಿ ಬೆಳೆದ ಅಡಿಕೆ, ಬಾಳೆ, ನಿಂಬೆ, ತೆಂಗು, ಕೊಕೊ, ಏಲಕ್ಕಿ, ಕಾಳುಮೆಣಸು, ಸಪೋಟಾ, ಹಲಸು, ಮಾವು, ದಾಳಿಂಬೆ, ವೀಳ್ಯೆದೆಲೆ, ತೇಗ ಮುಂತಾದ ಗಿಡಮರಗಳು, ಎರೆಹುಳು ತೊಟ್ಟಿಗಳು, ಹಕ್ಕಿ-ಪಕ್ಷಿಗಳ ಚಿಲಿಪಿಲಿ.

ಆಹ್ಲಾದಕರ ಅನುಭವದಿಂದ ಇನ್ನೂ ಸ್ವಲ್ಪ ಮುಂದೆ ಸಾಗಿದರೆ ಬೆವರು ಸುರಿಸಿ ದುಡಿಯುತ್ತಿರುವ ಇಳಿ ವಯಸ್ಸಿನ ಮಹಿಳೆಯೊಬ್ಬರು ಗುದ್ದಲಿ ಹಿಡಿದು ನೆಲ ಅಗೆಯುತ್ತಾ ಮುಗುಳ್ನಕ್ಕು ಸ್ವಾಗತಿಸುತ್ತಾರೆ. ಇವರೇ ದುಮ್ಮಳ್ಳಿ ಶಿವಮ್ಮ.
ಹುಟ್ಟೂರು ತರೀಕೆರೆ ತಾಲ್ಲೂಕು ಅಜ್ಜಂಪುರ ಸಮೀಪದ ಕಲ್ಲಶೆಟ್ಟಿಹಳ್ಳಿ.

ಓದಿದ್ದು ಒಂದನೇ ತರಗತಿ. ಹದಿನಾರನೇ ವಯಸ್ಸಿನಲ್ಲೇ ದುಮ್ಮಳ್ಳಿಯ ಚನ್ನಬಸಪ್ಪನವರೊಂದಿಗೆ ವಿವಾಹ. ಕೇವಲ 28 ದಿನಗಳ ವೈವಾಹಿಕ ಜೀವನ. ವಾಂತಿ-ಭೇದಿ ಕಾಯಿಲೆಯಿಂದ ಚನ್ನಬಸಪ್ಪ ಇಹಲೋಕ ತ್ಯಜಿಸಿದಾಗ ಶಿವಮ್ಮನಿಗೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಯಿತು. ತವರಿಗೆ ಕರೆದೊಯ್ಯಲು ಹೆತ್ತವರ ಪ್ರಯತ್ನ.

`ಕೊಟ್ಟ ಹೆಣ್ಣು ಕುಲದ ಹೊರಗೆ, ಇಲ್ಲಿಯೇ ಇದ್ದು ಏನನ್ನಾದರೂ ಸಾಧಿಸುತ್ತೇನೆ' ಎನ್ನುವ ಶಿವಮ್ಮನ ದೃಢ ನಿರ್ಧಾರಕ್ಕೆ ತಂದೆ-ತಾಯಿ ಮಣಿದು ಮಗಳನ್ನೇ ಸೇರಿಕೊಂಡರು. ಕೆಲವೇ ದಿನಗಳಲ್ಲಿ ಅತ್ತೆ ಮಗನ ದಾರಿ ಹಿಡಿದರು. ಪತಿಯ ಹೆಸರಿನಲ್ಲಿದ್ದ ಎರಡು ಎಕರೆ ಖುಷ್ಕಿ ಜಮೀನು. 50 ಸಾವಿರ ರೂಪಾಯಿ ಸಾಲದ ಹೊರೆ. ಒಬ್ಬೊಂಟಿ ಶಿವಮ್ಮನಿಗೆ ಊರು, ಜನ, ಸಂಬಂಧ ಎಲ್ಲ ಹೊಸದು.

ತೀರಿದ ಸಾಲ
ಓದು-ಬರಹ ಗೊತ್ತಿಲ್ಲದಿದ್ದರೂ ಕೃಷಿ ಕೆಲಸದಲ್ಲಿ ಶಿವಮ್ಮ ಚತುರೆ. ರೈತ ಕುಟುಂಬದಲ್ಲಿ ಹುಟ್ಟಿದ್ದರಿಂದ ಬಿತ್ತುವುದು, ಕಳೆ ತೆಗೆಯುವುದು, ನೇಗಿಲು ಉಳುಮೆ ಕೂಡಾ ಗೊತ್ತಿದ್ದರಿಂದ ಕೃಷಿಯಲ್ಲಿ ತೊಡಗಿಕೊಳ್ಳುವುದು ಕಷ್ಟವೆನಿಸಲಿಲ್ಲ. ಬೆವರು ಸುರಿಸಿ ದುಡಿದ ಪರಿಣಾಮವಾಗಿ ಆರು ವರ್ಷದಲ್ಲಿ ಸಾಲ ತೀರಿತು. ಆತ್ಮವಿಶ್ವಾಸವೂ ಮೂಡಿತು. ಸ್ಲೇಟ್ ಬಳಪ ಕೈಗೆತ್ತಿಕೊಂಡು ಓದು-ಬರಹ ಕಲಿತರು. ತಮ್ಮ ವ್ಯವಹಾರ, ಲೆಕ್ಕ-ಪತ್ರಗಳನ್ನು ತಾವೇ ನೋಡಿಕೊಳ್ಳುವಷ್ಟು ಸ್ವಾವಲಂಬನೆ ಬಂತು.

1983ರಲ್ಲಿ ಕೈಗೊಂಡ ಕೃಷಿ ಪ್ರವಾಸ ಹಾಗೂ ಬಿಜಿಕೆರೆ ವೀರಭದ್ರಪ್ಪನವರ ತೋಟದಲ್ಲಿ ನಡೆದ ಎರೆಹುಳು ತರಬೇತಿ ಇವರ ಜೀವನದಲ್ಲಿ ನೀಡಿದ ತಿರುವು. ತರಬೇತಿಯಲ್ಲಿ ನೀಡಿದ ಮುನ್ನೂರು ಎರೆಹುಳುಗಳನ್ನು ಬಕೆಟ್‌ನಲ್ಲೇ ಸಾಕಿದರು. ಆನಂತರ ಪ್ರಯೋಗವೊಂದಕ್ಕೆ ಕೈಹಾಕಿದರು.

20ಅಡಿ ಉದ್ದ 10ಅಡಿ ಅಗಲ ಹಾಗೂ ಎರಡು ಅಡಿ ಆಳದ ತೊಟ್ಟಿ ನಿರ್ಮಿಸಿ, ಭತ್ತದ ಹುಲ್ಲು, ತೆಂಗಿನ ಸೋಗೆ, ಕಬ್ಬಿನ ರವದಿ, ಸಗಣಿ ತುಂಬಿ ಎರೆಹುಳು ಬಿಟ್ಟರು. ಎರಡು ತಿಂಗಳಲ್ಲಿ ನಿರೀಕ್ಷೆಗೂ ಮೀರಿದ ಎರೆಹುಳು ಉತ್ಪಾದನೆ ಕಂಡು ಕೃಷಿ ತಜ್ಞರೂ ಬೆರಗಾದರು. ಮನೆಯಲ್ಲಿರುವ ಮೂರು ಎಮ್ಮೆಗಳು ಮನೆಗೆ ಹಾಲು ಕೊಡುವ ಜೊತೆಗೆ ಅವುಗಳ ಸಗಣಿ ಎರೆಹುಳುಗಳಿಗೆ ಆಹಾರವಾಯಿತು.

ಸಾವಯವ ಕೃಷಿ ಆರಂಭಿಸಿದೊಡನೆ ಆಳುಗಳೊಂದಿಗೆ ಆಳಾಗಿ ಹಗಲು ರಾತ್ರಿ ಎನ್ನದೇ ದುಡಿಮೆ. 1997ರಲ್ಲಿ ಎರಡೂ ಕಾಲು ಎಕರೆ ಜಮೀನಿನಲ್ಲಿ ತೀರ್ಥಹಳ್ಳಿ ಲೋಕಲ್ ಅಡಿಕೆ ತಳಿ ನೆಟ್ಟರು. ಭದ್ರಾ ಎಡದಂಡೆ ಕಾಲುವೆಯಿಂದ ತೋಟಕ್ಕೆ ಬರುವ ನೀರು ಸಾಕಾಗಲಿಲ್ಲ.  ಬೋರ್‌ವೆಲ್ ಕೊರೆಸಿದರು. ನೀರಿನ ಸಮರ್ಪಕ ಬಳಕೆಗಾಗಿ ಸ್ಪ್ರಿಂಕ್ಲರ್ (ತುಂತುರು ನೀರಾವರಿ) ಅಳವಡಿಸಿದರು. ಶಿವಮ್ಮ ಮತ್ತೆ ಹಿಂದೆ ನೋಡಲೇ ಇಲ್ಲ; ಜಿಲ್ಲೆಯಾದ್ಯಂತ ಇವರ ಹೆಸರು ಪ್ರಚಲಿತವಾಯಿತು.

25 ಕ್ವಿಂಟಾಲ್ ಅಡಿಕೆ
ಈಗ ಪ್ರತಿವರ್ಷ 25 ಕ್ವಿಂಟಾಲ್ ಅಡಿಕೆ ಇಳುವರಿ ಪಡೆಯುತ್ತಿದ್ದಾರೆ. ಕಾಲು ಎಕರೆ ಜಾಗದಲ್ಲಿ ಹತ್ತು ಎರೆಹುಳು ತೊಟ್ಟಿಗಳಿವೆ. ಸಿಮೆಂಟ್ ತೊಟ್ಟಿ ಇಲ್ಲದೆಯೂ ತೋಟದಲ್ಲಿ ಸಹಜವಾಗಿ ಇರುವ ನೆರಳಿನಲ್ಲಿ ಎರೆಹುಳುಗಳನ್ನು ಬೆಳೆಯುವ ಕಲೆ ಬೆಳೆಸಿಕೊಂಡಿದ್ದು ಇವರ ಸ್ವಂತಿಕೆ. ಅದರಲ್ಲಿ ಆಫ್ರಿಕನ್ ನೈಟ್ ತಳಿಯ ಎರೆಹುಳುಗಳಿವೆ. ವರ್ಷಕ್ಕೆ ಸುಮಾರು ನೂರು ಟನ್ ಎರೆಗೊಬ್ಬರ ಹಾಗೂ 300ಕೆ.ಜಿ. ಎರೆಹುಳುಗಳ ಉತ್ಪಾದನೆಯಾಗುತ್ತದೆ.

ಇವರ ಬನಶಂಕರಿ ಎರೆಹುಳು ಸಾಕಾಣಿಕಾ ಕೇಂದ್ರ ಪ್ರತಿವರ್ಷ ಕೆ.ಜಿ.ಗೆ 200ರೂ.ಗಳಂತೆ ನಾಲ್ಕು ಲಕ್ಷ ಎರೆಹುಳು ವ್ಯಾಪಾರ ನಡೆಸುತ್ತಿದೆ. ಅಡಿಕೆ, ನಿಂಬೆ, ತೆಂಗು, ಎರೆಹುಳು, ಎರೆಗೊಬ್ಬರ, ಬಾಳೆ ಹಾಗೂ ಅಡಿಕೆ ಸಸಿ ಮಾರಾಟದಿಂದ ಸುಮಾರು ಐದು ಲಕ್ಷ ನಿವ್ವಳ ಲಾಭ ದೊರೆಯುತ್ತಿದೆ. ಇವರ ಸ್ವಯಾರ್ಜಿತ ಗದ್ದೆಯಲ್ಲಿ ಎರಡು ಬೆಳೆ ಸೇರಿ 60 ಕ್ವಿಂಟಾಲ್ ಭತ್ತದ ಇಳುವರಿ ಪಡೆಯುತ್ತಾರೆ. 

ಎರೆಹುಳು ಸಾಕಣೆಯ ತರಬೇತಿ ನೀಡುವ ತಂತ್ರಗಾರಿಕೆ ಬೆಳೆಸಿಕೊಂಡಿದ್ದಾರೆ. ಆಕಾಶವಾಣಿಯಲ್ಲಿ ಎರೆಹುಳು ಬಗ್ಗೆ ನೀಡಿದ ಸಂದರ್ಶನಗಳು ಹಲವು ಬಾರಿ ಪ್ರಸಾರವಾಗಿವೆ. ಸರ್ಕಾರ ಹಾಗೂ ಅನೇಕ ಸಂಘ ಸಂಸ್ಥೆಗಳು ಶಿವಮ್ಮನ ಸಾಧನೆಯನ್ನು ಗುರುತಿಸಿ ನೀಡಿದ ಸನ್ಮಾನ ಬಹುಮಾನಗಳಿಗೆ ಲೆಕ್ಕವಿಲ್ಲ.

ಕೃಷಿ ಪಂಡಿತೆ ಪ್ರಶಸ್ತಿ, ಅತ್ಯುತ್ತಮ ಕೃಷಿ ಮಹಿಳೆ, ಅತ್ಯುತ್ತಮ ತೋಟಗಾರಿಕಾ ರೈತ ಮಹಿಳೆ ಪ್ರಶಸ್ತಿ ಇತ್ಯಾದಿ ಇತ್ಯಾದಿ. ಶಿವಮ್ಮನ ಮನೆ ತುಂಬ ಸ್ಮರಣಿಕೆಗಳ ರಾಶಿ ರಾಶಿ. ಈಗ ಇವರ ತೋಟವೇ ಪಾಠಶಾಲೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ನೆರೆ ರಾಜ್ಯಗಳಿಂದ ಹಲವಾರು ಆಸಕ್ತ ರೈತರು, ವಿಜ್ಞಾನಿಗಳು, ತೋಟಕ್ಕೆ ಭೇಟಿ ನಿಡುತ್ತ್ದ್ದಿದಾರೆ.

ಇಳಿ ವಯಸ್ಸಲ್ಲೂ ಉತ್ಸಾಹ
ಶಿವಮ್ಮನಿಗೆ ಈಗ 65ರ ವಯಸ್ಸು. ಯುವಕ-ಯುವತಿಯರನ್ನು ಮೀರಿಸುವ ಚೈತನ್ಯ. ಬೆಳಿಗ್ಗೆ 5 ಗಂಟೆಗೆ ದಿನಚರಿ ಆರಂಭಿಸುತ್ತಾರೆ. `ಸಗಣಿ ಬಾಚುವುದು, ಎಮ್ಮೆ ಮೇಯಿಸುವುದು ನನಗೆ ತುಂಬಾ ಇಷ್ಟ' ಎನ್ನುವಾಗ ಶಿವಮ್ಮನ ಮುಖ ಅರಳುತ್ತದೆ. ಬೆಳಿಗ್ಗೆ 8 ಗಂಟೆಗೆ ತಿಂಡಿ ಊಟ ತಯಾರಿಸಿ ಸ್ಕೂಟಿ ಏರಿ ತೋಟ ಸೇರಿದರೆ ಮತ್ತೆ ಮನೆ ಸೇರುವುದು ರಾತ್ರಿಯೇ.

ಪ್ರತಿ ದಿನ ತೋಟದ ಕೆಲಸಕ್ಕೆ ಬರುವ ಸೋಗಾನೆ ಹೊಸೂರಿನ ರಂಗಸ್ವಾಮಿ ಆಳುಗಳನ್ನು ಕರೆ ತರುವುದು, ತೋಟ ಹಾಗೂ ಮನೆಗೆಲಸದಲ್ಲಿ ನೆರೆವಾಗುವುದರಿಂದ ಮನೆ ಮಗನಂತೆಯೇ ಆಗಿದ್ದಾನೆ. ಮನೆ ಬಾಗಿಲಿಗೆ ಬಂದು ಇವರ ಎಮ್ಮೆ ನಾಯಿಗಳಿಗೆ ಚಿಕಿತ್ಸೆ ನೀಡುವ ಪಶುವೈದ್ಯ ಡಾ.ಪ್ರಸನ್ನ ಎಂದರೆ ಶಿವಮ್ಮನಿಗೆ ಅಭಿಮಾನ.

`ಇಲಾಖೆಯಲ್ಲಿ ನೀಡುವ ಸಲಹೆ, ಸೂಚನೆ, ಮಾರ್ಗದರ್ಶನ ಹಾಗೂ ಸವಲತ್ತುಗಳನ್ನು ಶಿವಮ್ಮ ಸದುಪಯೋಗಪಡಿಸಿಕೊಂಡಿದ್ದಾರೆ. ಎರೆಹುಳು ಸಾಕಣೆ ಬಗ್ಗೆ ನೀಡುವ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ನೀಡುತ್ತಾರೆ' ಎನ್ನುತ್ತಾರೆ ಶಿವಮೊಗ್ಗ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀಕಾಂತ.

`ಜಿಲ್ಲೆಯ ರೈತ ಮಹಿಳೆಯರಿಗೆ ಶಿವಮ್ಮ ತಮ್ಮ ಕೃಷಿ ಹಾಗೂ ಎರೆಹುಳು ಸಾಧನೆಯಿಂದ ಮಾದರಿಯಾಗಿದ್ದಾರೆ' ಎನ್ನುವುದು ಸಹಾಯಕ ಕೃಷಿ  ನಿರ್ದೇಶಕ ಡಾ. ಡಿ. ಎಂ. ಬಸವರಾಜ ಅಭಿಪ್ರಾಯ.
ಭತ್ತದ ಗದ್ದೆಯಲ್ಲಿ ಅಡಿಕೆ ತೋಟ ಕಟ್ಟುವುದು, ಔಷಧಿ ಹಾಗೂ ಸುಗಂಧ ದ್ರವ್ಯ ಸಸ್ಯಗಳನ್ನು ಬೆಳೆಯುವುದು ಇವರ ಮುಂದಿನ ಗುರಿ. ಸಂಪರ್ಕಕ್ಕೆ 08182-241216 (ರಾತ್ರಿ 8 ಗಂಟೆಯ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT