ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಂತವೀ ಜೀವಜಲ

Last Updated 29 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಒಂದೆಡೆ ಕಬ್ಬು, ಭತ್ತದ ಬೆಳೆಯ ಹಸಿರ ಸಿರಿ, ಇನ್ನೊಂದೆಡೆ, ಬಹುತೇಕ ಒಣ ಮತ್ತು ಮಳೆ ಆಶ್ರಿತ ಪ್ರದೇಶ. ಇದು ಹಳೇ ಮೈಸೂರು ಭಾಗವನ್ನು ಕಾವೇರಿ, ಎರಡು ವೈರುಧ್ಯಕರ ಭೂಪ್ರದೇಶವಾಗಿಸಿರುವ ರೀತಿ.

ಈ ಪೈಕಿ, ಒಣ ಮತ್ತು ಮಳೆ ಆಶ್ರಿತ ಪ್ರದೇಶಗಳಾದ ಮಳವಳ್ಳಿ, ನಾಗಮಂಗಲ ಇತ್ಯಾದಿ ತಾಲ್ಲೂಕುಗಳಲ್ಲಿ ಕಾಲುವೆ ಇರುವೆಡೆ ನೀರು ದೊರೆತರೂ, ಅಣೆಕಟ್ಟಿನ ಮೊದಲ ನೀರು ಈ ಹಳ್ಳಿಗಳನ್ನು ಮುಟ್ಟುವುದೇ ಇಲ್ಲ. ಉದಾಹರಣೆಗೆ, ಒಡೆದ ಕಾಲುವೆ, ಬಿರುಕು ಬಿಟ್ಟ ತಡೆಗೋಡೆ, ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಮಂಡ್ಯ ಜಿಲ್ಲೆಯ ಅರ್ಧದಷ್ಟು ಕೃಷಿಭೂಮಿಯನ್ನು ನೀರಾವರಿ ಯೋಜನೆ ಸಮರ್ಪಕವಾಗಿ ತಲುಪೇ ಇಲ್ಲ.

ಇದು ಕೇವಲ ಮಂಡ್ಯದ ಸ್ಥಿತಿಯಲ್ಲ. ಯಾವುದೇ ಅಣೆಕಟ್ಟು ಅಥವಾ ನೀರಾವರಿ ಜಮೀನಿನ ಪರಿಸ್ಥಿತಿ. ಇದಕ್ಕಿರುವ ಏಕೈಕ ಪರಿಹಾರವೆಂದರೆ ಮಳೆನೀರು ಸಂಗ್ರಹ. ಅದು ದೀರ್ಘಕಾಲದ ಯೋಜಿತ ಮಳೆನೀರು ಸಂಗ್ರಹವಾಗಿದ್ದರೆ ನೀರಾವರಿ, ಕೊಳವೆಬಾವಿಯ ಅವಶ್ಯಕತೆಯನ್ನೇ ತಗ್ಗಿಸಬಹುದು. ಇದರಿಂದ ಕೃಷಿ, ಮನೆಬಳಕೆಯಲ್ಲಿ ಜೀವಜಲದ ಸ್ವಾವಲಂಬನೆಯೂ ಸಾಧ್ಯ.

ಮಳೆನೀರನ್ನು ಹಿಡಿದಿಡುವ ಸರಳ ಮತ್ತು ಶತಮಾನವಾದರೂ ಸುರಕ್ಷಿತವಾಗಿರಿಸಬಲ್ಲ ಹಲವಾರು ಮಾರ್ಗಗಳಿವೆ. ಮಳವಳ್ಳಿಯಿಂದ ಮಂಡ್ಯಕ್ಕೆ ಸಂಪರ್ಕ ಕಲ್ಪಿಸುವ ಟಿಪ್ಪುಸುಲ್ತಾನ್ ರಸ್ತೆಯಲ್ಲಿನ ಮಾಗನೂರು ಕಾಲೋನಿಯಲ್ಲಿ ‘ಪ್ರಶ್ನೆ’ ಎನ್ನುವ ಮನೆಯಲ್ಲಿ ಇಂತಹ ಒಂದು ಪ್ರಯತ್ನ ಮಾಡಲಾಗಿದೆ. ಈ ವರ್ಷ ಉತ್ತಮ ಮಳೆಯಾದ್ದರಿಂದ 20 ಸಾವಿರ ಲೀಟರ್ ಪ್ರಮಾಣದ ತೊಟ್ಟಿ ಮುಕ್ಕಾಲು ಭಾಗ ತುಂಬಿದ್ದು, ಇದೇ ನೀರನ್ನು ನೇರವಾಗಿ ಕುಡಿಯಲು ಬಳಸುತ್ತಿದ್ದಾರೆ ಕಿರಣ ಪಿ.ಆರ್. ‘ಕುಡಿಯಲು ಮಾತ್ರ ಈ ನೀರನ್ನು ಬಳಸುವುದಾದರೆ, ದಿನಕ್ಕೆ 20 ಲೀಟರ್‌ನಂತೆ ಮೂರು ವರ್ಷ ಬಳಸ ಬಹುದು. ನಮ್ಮ ಮಳೆ ಸಂಪೂರ್ಣವಾಗಿ ಮಾಯವಾಗಿಲ್ಲವಾದ್ದ ರಿಂದ, ಸಂಪ್ ಮತ್ತೆ ಮತ್ತೆ ತುಂಬುತ್ತದೆ. ಹಾಗಾಗಿ ದಿನಕ್ಕೆ 100 ಲೀಟರನಂತೆ ಬಳಸಿದರೂ ಅಡ್ಡಿಯಿಲ್ಲ. ವರ್ಷಪೂರ್ತಿ ನೀರು ಸಿಗುತ್ತದೆ’ ಎನ್ನುತ್ತಾರೆ ಕಿರಣ.

‘ಸಂಗ್ರಹಿತ ನೀರು ಕೆಲದಿನಗಳಲ್ಲಿ ಕೆಡುವುದಿಲ್ಲವೇ’ ಎಂಬ ಪ್ರಶ್ನೆ ಏಳುವುದು ಸಹಜ. ಅದಕ್ಕೆ ಕಿರಣ್‌ ಉತ್ತರಿಸುವುದು ಹೀಗೆ: ‘ನಾವು ಬೋರ್‌ವೆಲ್ ಹಾಕಿ ಬಗೆದುಕೊಳ್ಳುತ್ತಿರುವ ನೀರು ಕೂಡ ಹೀಗೆ ಶತಮಾನಗಳಿಂದ ಸಂಗ್ರಹವಾದ ನೀರೇ ಅಲ್ಲವೇ? ಈ ನೀರು ಗಾಳಿ, ಬೆಳಕು ಬೀಳದಷ್ಟು ಆಳದಲ್ಲಿ ಇರುವುದರಿಂದ ಸುರಕ್ಷಿತವಾಗಿರುತ್ತದಷ್ಟೆ. ಆದರೆ ಹಳ್ಳ, ಕುಂಟೆಯ ತೆರೆದ ನೀರು ಬಹುಬೇಗ ಕೆಡುತ್ತದೆ. ಮಳೆನೀರಿಗಿಂತ ಸಮೃದ್ಧ ನೀರು ಇನ್ನೊಂದಿಲ್ಲ’.

ನಮ್ಮ ಬಹುತೇಕ ಜನರು ಅರಿಯದ ವಿಷಯವೆಂದರೆ ನೀರನ್ನು ಸುರಕ್ಷಿತವಾಗಿಟ್ಟರೆ ದಶಕಗಳ ಕಾಲ ಹಾಳಾಗುವ ಪ್ರಮೇಯವೇ ಇಲ್ಲವೆಂಬ ಸತ್ಯ. ಮಳೆ ನೀರನ್ನು ಸಂಗ್ರಹಿಸುವುದು ಒಂದು ಹಂತ; ಸಂಗ್ರಹಿತ ನೀರನ್ನು ಗಾಳಿ-ಬೆಳಕಿನಿಂದ ಸಂರಕ್ಷಿಸುವುದು ಇನ್ನೊಂದು ಹಂತ. ಹೀಗೆ ಜತನ ಮಾಡಿದ ನೀರು, ನೂರಾರು ವರ್ಷ ಹಾಳಾಗುವುದೇ ಇಲ್ಲ. ಇದಕ್ಕೆಲ್ಲಾ ಬೇಕಾಗಿರುವುದು ನಿರ್ಮಾಣ ಹಂತದ ಯೋಜನೆ ಮತ್ತು ದೂರದೃಷ್ಟಿತ್ವ ಮಾತ್ರ. ಜೊತೆಗೆ ಸರ್ಕಾರದ ಹಲವು ಯೋಜನೆಗಳನ್ನು ಬಳಸಿಕೊಂಡು ನಿರ್ಮಾಣದ ವೆಚ್ಚವನ್ನೂ ಹಿಂಪಡೆಯಬಹದು.

ಶುದ್ಧೀಕರಣ ಘಟಕ ಹೀಗಿರಬೇಕು
ತಾರಸಿ ಮೇಲಿನ ನೀರನ್ನು ನೇರವಾಗಿ ತೊಟ್ಟಿಗೆ ಹರಿಸಲಾಗುವುದಿಲ್ಲ. ಕಸ ಕಡ್ಡಿ ಎಲ್ಲಾ ಒಂದೆಡೆ ಸೇರಿ, ಸಂಗ್ರಹಿತ ನೀರನ್ನು ವಿಷಪೂರಿತ ಮಾಡಿಬಿಡುತ್ತವೆ. ಆದ್ದರಿಂದ ಒಂದೊಂದು ಹನಿ ನೀರು ಪರಿಶುದ್ಧವಾಗಿ ತೊಟ್ಟಿ ಸೇರುವಂತೆ ಮಾಡಬೇಕು.

ಸಂಪ್‌ನ ಒಂದು ಅಂಚಿನಲ್ಲಿ ಕಿರಣ ಅವರು 6 ಅಡಿ ಉದ್ದದ ಎರಡು ಅಡಿ ಎತ್ತರದ ತೊಟ್ಟಿಯನ್ನು ನಿರ್ಮಿಸಿ ದ್ದಾರೆ. ಈ ತೊಟ್ಟಿಗೆ ಮೇಲಿನಿಂದ ನೇರವಾಗಿ ನೀರು ಹರಿಸುವುದರಿಂದ, ನೀರಿನ ಒತ್ತಡಕ್ಕೆ ಕಸವೂ ಸೇರುವ ಸಂಭವವಿರುತ್ತದೆ. ಆದ್ದರಿಂದ ವಿರುದ್ಧ ದಿಕ್ಕಿಗೆ ನೀರು ಸೋಸಿಕೊಂಡು ಹೊರಹೋಗುವಂತೆ ನಿರ್ಮಿಸಬೇಕು. ಅಂದರೆ, ಮಳೆ ನೀರು ಶುದ್ಧೀಕರಣ ತೊಟ್ಟಿಯ ಕೆಳಭಾಗಕ್ಕೆ ಬರಬೇಕು. ಹಾಗೆ ಬಂದ ನೀರು ಹಲವು ಪದರಗಳನ್ನು ದಾಟಿ ಮೇಲ್ಮುಖವಾಗಿ ಹರಿದು, ಸಂಗ್ರಹತೊಟ್ಟಿಯನ್ನು ಸೇರಬೇಕು. ಇಲ್ಲಿ ಪ್ರತೀ ಪದರಕ್ಕೂ ವಿವಿಧ ಗಾತ್ರದ ಕಲ್ಲುಗಳನ್ನು ಮತ್ತು ಪರದೆಯನ್ನು ಹಾಕಬೇಕು.

ತೊಟ್ಟಿಯ ಒಳಗೆ ಮೊದಲು ರಂಧ್ರವಿರುವ ಪೈಪ್ (ಪರ್ಫೊರೇಟೆಡ್ ಪೈಪ್ಸ್) ಹಾಸಬೇಕು. ಇವು ಸಿಗದಿದ್ದರೆ, ಸಾಮಾನ್ಯ ಪೈಪ್‌ಗಳನ್ನು ತೆಗೆದುಕೊಂಡು ರಂಧ್ರಗಳನ್ನು ಪ್ರತ್ಯೇಕವಾಗಿ ಮಾಡಿಸಿಕೊಳ್ಳಬಹುದು. ಹೊರಭಾಗದಿಂದ ಬರುವ ನೀರು ಈ ಕೊಳವೆ ಮೂಲಕವೇ ಬರಬೇಕು. ಅಂದರೆ ನೀರು ಒಮ್ಮೆಲೆ ನೇರವಾಗಿ ಬರದೆ, ಈ ರಂಧ್ರವುಳ್ಳ ಕೊಳವೆ ಮೂಲಕ ನಿಧಾನವಾಗಿ ಬರುವುದಲ್ಲದೆ, ಕಸ ಹೊರಹೋಗುವಂತೆ ಮಾಡಲು ಅನುವಾಗುತ್ತದೆ. ನೆಲಮಟ್ಟದಿಂದ ಒಂದು ವರಸೆ ದಪ್ಪ ಬೋರ್ಡಸ್ ಕಲ್ಲುಗಳನ್ನು ಹಾಕಬೇಕು. ಇದರ ಮೇಲೆ, ಬೇಬಿ ಬೋರ್ಡಸ್ ಅಥವಾ ಸಣ್ಣ ಜಲ್ಲಿ ಕಲ್ಲನ್ನು ಹಾಕಬೇಕು. ಇದಕ್ಕಿಂತ ಸಣ್ಣ ಜಲ್ಲಿಯ ಇನ್ನೊಂದು ಪದರ ಹಾಸಬೇಕು. ಇದರ ಮೇಲೆ ಸಣ್ಣ ಬೋರ್ಡಸ್ ಕಲ್ಲುಗಳನ್ನು ಹಾಕಬೇಕು. ಈ ಹಂತದಲ್ಲಿ ನೈಲಾನ್ ನೆಟ್ ಪರದೆ ಹಾಸಬೇಕು. ಇದು ಸಣ್ಣ ಮಣ್ಣಿನ ಕಣಗಳು ಬರಲು ಸಾಧ್ಯವಾಗದಂತೆ ತಡೆಯುತ್ತದೆ. ಈ ಪರದೆಯ ಮೇಲೆ, ಗೃಹನಿರ್ಮಾಣದ ವೇಳೆ ಮರಳನ್ನು ಸೋಸಿ ಬಿಸಾಡುವ ಜರಡಿ ಕಲ್ಲುಗಳನ್ನು ಚೆನ್ನಾಗಿ ತೊಳೆದು ಒಂದು ವರಸೆ ಹಾಕಬೇಕು. ಈ ಹಂತದಲ್ಲಿ ಮತ್ತೊಂದು ಪದರ ನೈಲಾನ್ ನೆಟ್ ಹಾಕಿ, ಅದು ಮೇಲೇಳದಂತೆ ಸುತ್ತಲೂ ತೂಕವುಳ್ಳ ಕಲ್ಲುಗಳನ್ನಿಡಬೇಕು. ಕೊನೆ ಹಂತವಾಗಿ, ಮತ್ತೆ ಪರ್ಫೊರೇಟೆಡ್ ಕೊಳವೆಯನ್ನು ಮೊದಲಿನಂತೆ ಅಳವಡಿಸಿ, ನೀರು ಹೊರ ಹರಿಯುವಂತೆ ಸಂಪಿಗೆ ಸಂಪರ್ಕ ಕಲ್ಪಿಸಬೇಕು. ಈ ವಿಧಾನದಿಂದ ಕೆಳಗಿನಿಂದ ಶೋಧಿತ ನೀರು ಮೇಲೆ ಬಂದು ಈ ಕೊಳವೆಯ ರಂಧ್ರಗಳಿಂದ ಹರಿದು ನೆಲಮಟ್ಟದ ತೊಟ್ಟಿಯನ್ನು ಸೇರಿಕೊಳ್ಳುತ್ತದೆ.

ಈ ನಾಲ್ಕು ಪದರಗಳು ಹೆಚ್ಚು ಕಡಿಮೆ ತೊಟ್ಟಿಯ ಮೂರನೇ ಎರಡರಷ್ಟು ಜಾಗ ಆಕ್ರಮಿಸಿಕೊಂಡಿರುತ್ತವೆ. 24 ಇಂಚಿನ ಕಿರಣ ಅವರ ಸೋಸು ತೊಟ್ಟಿಯಲ್ಲಿ ಸುಮಾರು 16 ಇಂಚು ಕಲ್ಲು ಮತ್ತು ನೈಲಾನ್ ಪದರವಿದೆ. ಮಿಕ್ಕ 8 ಇಂಚನ್ನು ಕೆಳಗಿನಿಂದ ಶೋಧಿಸಿದ ನೀರು ಸಂಗ್ರಹಕ್ಕೆ ಬಿಡಲಾಗಿದೆ. ಸಂಪ್‌ನಿಂದ ಸಣ್ಣ ಮೋಟಾರ್ ಬಳಸಿ ಅಥವಾ ಕೈ ಪಂಪ್ ಮೂಲಕ ಬೇಕೆನಿಸಿದಾಗ ಮಾತ್ರ ನೀರು ತೆಗೆದುಕೊಳ್ಳಬಹುದು. ಇನ್ನಾವುದೇ ಕಾರಣಕ್ಕೂ ಸಂಗ್ರಹತೊಟ್ಟಿಯನ್ನು ತೆರೆದಿಡಬಾರದು.

ನೆಲಮಟ್ಟದ ತೊಟ್ಟಿ ಹೀಗಿರಲಿ
ಇಡೀ ಮನೆಯನ್ನು ಕಟ್ಟುವಾಗ, ತಾರಸಿ ಮೇಲೆ ಒಂದು ಹನಿ ನೀರು ಕೂಡ ನಿಲ್ಲದೆ ಬಸಿದು ಹೋಗುವಂತೆ ನಿರ್ಮಿಸಬೇಕು. ಮಳೆ ನೀರು ಶುದ್ಧ ಕುಡಿಯುವ ನೀರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ತಾರಸಿಯನ್ನು ಕೊಳೆಯಿಂದ ಮುಕ್ತವಾಗಿಡಬೇಕಾಗುತ್ತದೆ. ಕಿರಣ ಅವರು ತಮ್ಮ ಮನೆಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಹೆಂಚಿನ ತಾರಸಿಯಾಗಿಸಿದ್ದಾರೆ. ತ್ರಿಭುಜಾಕಾರದಲ್ಲಿರುವ ಈ ಮಾಡಿನಲ್ಲಿ ಪ್ರತಿ ಹನಿ ನೀರು ಇಳಿಯುವುದಲ್ಲದೇ, ಯಾರೂ ಓಡಾಡಲೂ ಸಾಧ್ಯವಿಲ್ಲ. ಆದ್ದರಿಂದ ನೀರು ಸಾಧ್ಯವಾದಷ್ಟು ಕಸಮುಕ್ತವಾಗಿರುತ್ತದೆ. ಮನೆಯ ಮೇಲೆ ಸಂಗ್ರಹವಾಗುವ ನೀರಿನ ಅಗತ್ಯಕ್ಕನುಗುಣವಾಗಿ ಸಂಪ್ ಅಥವಾ ನೆಲಮಟ್ಟದಲ್ಲಿ ಸಂಗ್ರಹತೊಟ್ಟಿಯನ್ನು ನಿರ್ಮಿಸಿಕೊಳ್ಳಬೇಕು.
ಉದಾಹರಣೆಗೆ, 4 ಚದರಡಿಯಲ್ಲಿ ಸಂಗ್ರಹವಾಗುವ ನೀರಿಗೆ, 10 ಸಾವಿರ ಲೀಟರ್ ನೀರಿನ ಸಂಗ್ರಹ ತೊಟ್ಟಿ ಸಾಕಾಗುತ್ತದೆ. ಯಾವುದೇ ಕಾರಣಕ್ಕೂ ಈ ಸಂಪ್‌ಗೆ ಬೆಳಕು, ಗಾಳಿ ಬೀಳದಂತೆ ನೋಡಿ ಕೊಳ್ಳಬೇಕು. ಅಂದರೆ ನೆರಳಿನಲ್ಲಿ ಕಟ್ಟುವುದು ಸೂಕ್ತ. ಜಾಗದ ಅಭಾವವಿದ್ದರೆ ಮನೆಗೆ ಅಡಿಪಾಯ ಹಾಕುವಾಗಲೇ ಮನೆಯೊಳಗೆ ಸಂಪ್‌ ಬರುವಂತೆ ಕಟ್ಟಿದರಾಯಿತು. ತಾರಸಿಯ ಅಂಚಿನ ನಾಲ್ಕೂ ದಿಕ್ಕಿನಲ್ಲೂ ಅತೀ ಜೋರು ಮಳೆ ಬಂದಾಗಲೂ ತಡೆದುಕೊಳ್ಳುವ ಉತ್ತಮ ಗುಣ ಮಟ್ಟದ ಪೈಪ್‌ ಅಳವಡಿಸಬೇಕು. ಮಳೆ ನೀರು ಸಂಗ್ರಹಕ್ಕೆಂದೇ ಪ್ರತ್ಯೇಕ ಪೈಪ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ತೊಟ್ಟಿ ಅಥವಾ ಸಂಪ್ ಕಟ್ಟುವಾಗ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಕಿರಣ ಅವರು ತಮ್ಮ ಅಗತ್ಯ ಮತ್ತು ಆರ್ಥಿಕ ಮಿತಿಗೆ ಅನುಗುಣವಾಗಿ 14/9/8ರ ವಿಸ್ತೀರ್ಣದ ಸಂಪ್ ನಿರ್ಮಿಸಿಕೊಂಡಿದ್ದಾರೆ. ಈಗಾಗಲೇ ಇರುವ ಸಂಪ್ ಬಳಸಿಕೊಂಡರೂ 10–15 ಸಾವಿರದಲ್ಲಿ ಈ ವಿಧಾನ ಅನುಕರಿಸಬಹುದು.
ಹಳೆ ಮೈಸೂರು ಭಾಗದ ಜೀವನದಿಯಾದ ಕಾವೇರಿ ಬೆಂಗಳೂರಿಗೆ ತಲುಪುವುದು ಮಳವಳ್ಳಿ ಮಾರ್ಗವಾಗಿಯೇ. ಆದರೆ ಮಳವಳ್ಳಿಯ ಬಹುತೇಕರಿಗಿರುವ ಕುಡಿಯುವ ನೀರಿನ ಬವಣೆಯನ್ನು ಅವರನ್ನೇ ಕೇಳಿ ತಿಳಿಯಬೇಕು. ಇಂತಹ ಸಂದರ್ಭದಲ್ಲಿ ಸರ್ಕಾರ ಯೋಜನೆಗಳಿಗೂ ಪರ್ಯಾಯವಾಗಿ ನಡೆಯುತ್ತಿದೆ ಕಿರಣ ಅವರ ಪ್ರಯತ್ನ. ಸಂಪರ್ಕಕ್ಕೆ: 9448743928.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT