ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಕಾಯಿ ಕೊರೆವ ಹುಳುಗಳು

Last Updated 12 ಜನವರಿ 2015, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಟೊಮೆಟೊ ಬೆಳೆಯನ್ನು ಸುಮಾರು 880 ಸಾವಿರ  ಹೆಕ್ಟೇರ್‌ ಭೂ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ. ಪ್ರತಿ ಹೆಕ್ಟೇರ್‌ಗೆ  20.7 ಮೆಟ್ರಿಕ್ ಟನ್ ಸರಾಸರಿ ಉತ್ಪತ್ತಿಯಿಂದ ಒಟ್ಟು 18,227  ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯೊಂದಿಗೆ ವಿಶ್ವದ ಒಟ್ಟು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಅಡುಗೆಗೆ ಮಾತ್ರವಲ್ಲದೇ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಕಾರಣ, ಟೊಮೆಟೊಗೆ ಎಲ್ಲಾ ಕಾಲದಲ್ಲಿಯೂ ಬೇಡಿಕೆ ಇದ್ದದ್ದೇ. ಹೀಗೆ ಬಹು ಬೇಡಿಕೆಯಿರುವ ಟೊಮೆಟೊಗೆ ಕಾಯಿ ಕೊರೆಯುವ ಹುಳುಗಳು ಬಹು ದೊಡ್ಡ ಸವಾಲು. ಈ ಕೀಟಗಳು ಸುಮಾರು ಶೇ 50ಕ್ಕಿಂತಲೂ ಹೆಚ್ಚು ಬೆಳೆನಾಶಪಡಿಸಿ ದೊಡ್ಡ ಮೊತ್ತದ ನಷ್ಟ ಉಂಟುಮಾಡುತ್ತದೆ.

ಕೀಟಗಳ ಜೀವನ ಪರಿಚಯ
1. ತಂಬಾಕು ಎಲೆ ತಿನ್ನುವ ಹುಳು
(ಸ್ಪೊಡಾಪ್ಟರ  ಲಿಟೂರ) : ಮೊಟ್ಟೆಯೊಡೆದ ಚಿಕ್ಕ ಮರಿಹುಳುಗಳು (ಕ್ಯಾಟರ್‌ಪಿಲ್ಲರ್ / ಲಾರ್ವ) 3.5 ರಿಂದ 4 ಸೆಂಟಿ ಮೀಟರ್ ಉದ್ದವಿರುತ್ತದೆ, ನಂತರ ಬೆಳೆಯುತ್ತ ಸುಮಾರು 3 ರಿಂದ 4 ಇಂಚು ಉದ್ದವಾಗುತ್ತದೆ. ಇದರ ಕಡು ಹಸಿರು ಬಣ್ಣದ ದೇಹ ಕಂದು ಮಚ್ಚೆಗಳಿಂದ ಕೂಡಿರುತ್ತದೆ. ಈ ಹುಳು ಸುಮಾರು 20 ರಿಂದ 25 ದಿನಗಳಲ್ಲಿ ತನ್ನ ಪ್ರೌಢಾವಸ್ಥೆಯಿಂದ ಕೋಶಾವಸ್ಥೆಗೆ ಹೋಗುತ್ತದೆ. ಕೋಶಾವಸ್ಥೆಯ 6 ರಿಂದ 8 ದಿನಗಳ ನಂತರ ಪತಂಗವಾಗಿ ಹೊರಬರುತ್ತದೆ. ಹೊರಬಂದ ಪತಂಗಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿಕೊಳ್ಳುತ್ತವೆ. ಸುಮಾರು 500 ರಿಂದ 3 ಸಾವಿರಗಳಷ್ಟು ಮೊಟ್ಟೆಗಳನ್ನು ಗುಂಪು ಗುಂಪಾಗಿ ಇಡುವ ಹೆಣ್ಣು ಪತಂಗ ಅವುಗಳನ್ನು ತನ್ನ ಬಾಲದ ತುದಿಯ ಕೂದಲುಗಳಿಂದ ಮುಚ್ಚುತ್ತದೆ. ಈ ರೀತಿ ಮುಚ್ಚಲಾದ ಮೊಟ್ಟೆಗಳು ಭಕ್ಷಕ ಕೀಟಗಳಿಂದ ರಕ್ಷಣೆ ಪಡೆದುಕೊಳ್ಳುತ್ತವೆ.

2. ಅಮೆರಿಕನ್ ಬೋಲ್ ವರ್ಮ್ (ಹೆಲಿಕೊವರ್ಪ ಅರ್ಮಿಜರ): ಇವು ತನ್ನ ಜೀವಿತಾವಧಿಯಲ್ಲಿ ಸುಮಾರು 500ರಷ್ಟು ಮೊಟ್ಟೆಗಳನ್ನು ಇಡುತ್ತವೆ.   ಚಿಕ್ಕ ಮುತ್ತಿನಾಕಾರದ (0.4 ಮಿ.ಮೀ. ನಿಂದ 0.6 ಮಿ.ಮೀ.) ಮೊಟ್ಟೆಗಳನ್ನು ಒಂದೊಂದಾಗಿ ಗಿಡದ ಮೇಲ್ಭಾಗ ಮತ್ತು ಎಲೆಗಳ ಹಿಂಭಾಗದಲ್ಲಿ ಮತ್ತು ಹೂಗಳ ಮೇಲೆ ಇಡುತ್ತವೆ. ಮೊಟ್ಟೆಯೊಡೆದು ಚಿಕ್ಕ ಮರಿಹುಳು (ಕ್ಯಾಟರ್‌ಪಿಲ್ಲರ್ / ಲಾರ್ವ)ಗಳ ದೇಹ ಹಳದಿ ಅಥವಾ ಹಸಿರು ಬಣ್ಣದಿಂದ ಕೂಡಿದ್ದು,1.5 ಮಿ.ಮೀ. ನಷ್ಟು ಉದ್ದವಿರುತ್ತದೆ.

ನಂತರ ಬೆಳೆಯುತ್ತ 6 ಹಂತಗಳಲ್ಲಿ ಸುಮಾರು 15 ರಿಂದ 17 ದಿನಗಳಲ್ಲಿ 30 ರಿಂದ 32 ಮಿ.ಮೀ. ಉದ್ದವಾಗುತ್ತದೆ. ವಯಸ್ಕ ಹುಳುವಿನ ದೇಹ ಕಡು ಹಳದಿ ಅಥವಾ ಹಸಿರು ಬಣ್ಣದ ದೇಹದ ಮೇಲ್ಭಾಗವು ಕಂದು ಪಾರ್ಶ್ವ ಗೆರೆಗಳಿಂದ ಕೂಡಿರುತ್ತದೆ. ಈ ಹುಳು ಸುಮಾರು 20 ರಿಂದ 25 ದಿನಗಳಲ್ಲಿ ತನ್ನ ಪ್ರೌಢಾವಸ್ಥೆಯಿಂದ ಕೋಶಾವಸ್ಥೆಗೆ ಹೋಗುತ್ತದೆ. ಕೋಶಾವಸ್ಥೆಯ 6 ರಿಂದ 8 ದಿನಗಳ ನಂತರ ಪತಂಗವಾಗಿ ಹೊರಬರುತ್ತದೆ. ಹೊರಬಂದ ಪತಂಗಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿಕೊಳ್ಳುತ್ತವೆ. 

ಹಾನಿಯ ಲಕ್ಷಣಗಳು
ಮೊಟ್ಟೆಯಿಂದ ಹೊರಬಂದ ಚಿಕ್ಕ ಮರಿಹುಳುಗಳು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ, ನಂತರ ಗಿಡದ ಮೊಗ್ಗು, ಹೂಗಳನ್ನು ತಿನ್ನುತ್ತವೆ.  ಕಾಯಿ ಕಟ್ಟುತ್ತಿದ್ದಂತೆ ಕಾಯಿಯ ಮೇಲೆ ದಾಳಿಮಾಡುತ್ತವೆ, ಕಾಯಿ ಕೊರೆದು ತಿನ್ನುತ್ತದೆ, ಹಾಗೆ ತನ್ನ ದೇಹದ ಅರ್ಧ ಭಾಗದಷ್ಟು ಮಾತ್ರ ಕಾಯಿಯ ಒಳಗೆ ರಂಧ್ರ ಕೊರೆದು ತಿನ್ನುತ್ತದೆ ಮತ್ತು ತನ್ನ ತ್ಯಾಜ್ಯ ಹೊರಹಾಕುತ್ತದೆ, ಹೊರಹಾಕಿದ ತ್ಯಾಜ್ಯ ಕಾಯಿಯೊಂದಿಗೆ ಕೊಳೆತು ಕೆಟ್ಟ ವಾಸನೆ ಬರುತ್ತದೆ. ಇಂತಹ ಟೊಮೆಟೊ ಮಾರುಕಟ್ಟೆಯ ಮೌಲ್ಯ ಕಳೆದುಕೊಳ್ಳುತ್ತವೆ. ಈ ಕೀಟಗಳು ಎಳೆಯ ಕಾಯಿಯಿಂದ ಹಿಡಿದು ಸಂಪೂರ್ಣ ಹಣ್ಣಾದ ಎಲ್ಲಾ ಹಂತದ ಕಾಯಿಗಳನ್ನು ಕೊರೆದು ತಿನ್ನುತ್ತವೆ. ಹೀಗಾಗಿ ಇಳುವರಿಯು ಗಣನೀಯವಾಗಿ ಕಡಿಮೆಯಾಗುತ್ತದೆ.
ಅಧ್ಯಯನದ ಪ್ರಕಾರ, ಶೇ 20 ರಿಂದ 35 ಬೆಳೆ ಹಾನಿ ಮತ್ತು ನಷ್ಟದ ಪ್ರಮಾಣ ದಾಖಲಾಗಿದೆ. ಈ ಕೀಟಗಳು ವರ್ಷದಾದ್ಯಂತ ಬೆಳೆಯ ಎಲ್ಲಾ ಹಂತಗಳಲ್ಲಿ ಬರುತ್ತವೆ. ಚಿಕ್ಕಬಳ್ಳಾಪುರ, ಚಿಂತಾಮಣಿ, ದೇವನಹಳ್ಳಿ, ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೆ.ಜಿ.ಎಫ್., ಕೋಲಾರ, ಬೆಂಗಳೂರು ಗ್ರಾಮಾಂತರ ತಾಲ್ಲೂಕಿನ ಹಳ್ಳಿಗಳಲ್ಲಿ, ಪ್ರತಿ ವರ್ಷವೂ ಈ ಕೀಟಗಳು ಕಾಣಸಿಕ್ಕಿವೆ. ಮಾತ್ರವಲ್ಲದೆ ಇಳುವರಿಯು ಗಣನೀಯವಾಗಿ ಕಡಿಮೆಯಾಗುತ್ತದೆ. 
 
ಕೀಟಗಳ ನಿರ್ವಹಣೆ
ಬೇಸಿಗೆಯಲ್ಲಿ, ಆಳವಾಗಿ ಉಳುಮೆ ಮಾಡಬೇಕು. ಈ ರೀತಿ ಮಾಡುವುದರಿಂದ ಮಣ್ಣಿನಲ್ಲಿ ಹುದುಗಿರುವ ಹುಳುಗಳು, ಕೋಶಾವಸ್ಥೆಯ ಕೀಟಗಳು ಸಹ ಮೇಲೆ ಬರುತ್ತವೆ. ಇವುಗಳನ್ನು ಕೀಟ ಭಕ್ಷಕಪಕ್ಷಿಗಳು ಹೆಕ್ಕಿ ತಿನ್ನುತ್ತವೆ ಮತ್ತು ಸೂರ್ಯನ ಬಿಸಿಲಿನ ಶಾಖದಿಂದಲೂ ಹುಳುಗಳು ಸಾಯುತ್ತವೆ.

ಗಿಡಗಳ ಮೇಲೆ ಕಾಣುವ ಕೀಟಗಳನ್ನು ಹಿಡಿದು ನಾಶಪಡಿಸುವುದು. ಈ ಕೀಟಗಳು ಎಲೆಯ ಕೆಳಭಾಗದಲ್ಲಿ ಹೂಗಳ ಹತ್ತಿರ ಇಡುವ ಮೊಟ್ಟೆಗಳನ್ನು ಗುರುತಿಸಿ ನಾಶಪಡಿಸುವುದು. ಟೊಮೆಟೊ ಸುತ್ತ ಅಡೆ ಸಾಲು ಬೆಳೆಯಾಗಿ ಹರಳು ಅಥವಾ ತಂಬಾಕು ಅಥವಾ ಮುಸುಕಿನ ಜೋಳ ಅಥವಾ ಸೇವಂತಿಗೆ ಹೂ ಬೆಳೆದರೆ, ಈ ಕೀಟಗಳು ಹರಳು ಅಥವಾ ಸೇವಂತಿಗೆ ಹೂ ಗಿಡಗಳಿಗೆ ಹೆಚ್ಚು ಆಕರ್ಷಿತವಾಗುತ್ತದೆ ಮತ್ತು ಟೊಮೆಟೊ ಬೆಳೆಗೆ ಹಾನಿ ಕಡಿಮೆಯಾಗುತ್ತದೆ.

ಸಾರಜನಕಯುಕ್ತ (ಯೂರಿಯಾ) ರಸಗೊಬ್ಬರದ ಬಳಕೆ ಕಡಿಮೆ ಮಾಡಬೇಕು. ಸಾರಜನಕ ಹೆಚ್ಚಾದರೆ, ಗಿಡಗಳು ದಟ್ಟವಾಗಿ ಬೆಳೆದು ಕೀಟಗಳಿಗೆ ಉತ್ತಮ ಆಹಾರವಾಗುತ್ತದೆ. ಮೋಹಕ ಅಥವಾ ಆಕರ್ಷಿತ ಬಲೆ (ಮಾರುಕಟ್ಟೆಯಲ್ಲಿ ಲಭ್ಯ) ಅಳವಡಿಸಿದರೆ ಪತಂಗಗಳು ಬಂದು ಈ ಬಲೆಯೊಳಗೆ ಬೀಳುತ್ತವೆ.

ಟ್ರೈಕೋಗ್ರಾಮ ಎಂಬ ಪರಾವಲಂಬಿ ದುಂಬಿಗಳು ಟ್ರೈಕೋಕಾರ್ಡ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ, ಇವುಗಳನ್ನು ಎಕರೆಗೆ 1.5 ಸೀ. ಸೀ. ಕಾರ್ಡ್‌ಗಳನ್ನು ಗಿಡಗಳಿಗೆ ಕಟ್ಟಬಹುದು. ಟ್ರೈಕೋಗ್ರಾಮ ದುಂಬಿಯು, ಈ ಹುಳುಗಳ ಮೊಟ್ಟೆಯ ಒಳಗೆ ತನ್ನ ಮೊಟ್ಟೆಯಿಡುತ್ತವೆ ಹಾಗೂ ಟ್ರೈಕೋಗ್ರಾಮ ಮೊಟ್ಟೆಯಿಂದ ಹೊರಬಂದ ಮರಿದುಂಬಿಹುಳುಗಳು ಈ ಹುಳುಗಳ ಮೊಟ್ಟೆಯನ್ನು ಒಳಗಿನಿಂದಲೇ ತಿಂದು ಬೆಳೆಯುತ್ತವೆ. ಹಾಗಾಗಿ ಈ ಹುಳುಗಳ ಮೊಟ್ಟೆ ನಾಶವಾಗಿ ಈ ಕೀಟಗಳ ನಿಯಂತ್ರಣವಾಗುತ್ತದೆ.

ನ್ಯೂಕ್ಲಿಯರ್ ಪಾಲಿ ಹೈಡ್ರೋಸಿಸ್ ವೈರಸ್‌ ಅನ್ನು ಶೇ 2ರಷ್ಟು ಹಾಕಬೇಕು. ಇದು ಮಾರುಕಟ್ಟೆಯಲ್ಲಿ ಲಭ್ಯ. ಪ್ರತಿ ಲೀಟರ್ ನೀರಿಗೆ 1 ಮೀ.ಲೀ. ಬೆರೆಸಿ ಸಿಂಪಡಿಸಬಹುದು.ಬೇವಿನ ಬೀಜಗಳನ್ನು ನೆನೆಸಿದ ದ್ರಾವಣ ಅಥವಾ ಬೇವಿನ ಎಣ್ಣೆ 5–10 ಮೀ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು.

ಪ್ರಕೃತಿಗೆ ಹಾನಿಯಾಗದ ಹಾಗೆ ಅತ್ಯಂತ ಕಡಿಮೆ ರಾಸಾಯನಿಕಗಳನ್ನು ಬಳಸಿ ಕೀಟಗಳ ನಿರ್ವಹಣೆ ಮಾಡಬೇಕು ಮತ್ತು ಕೀಟಗಳ ಸಂಖ್ಯೆ ಕಡಿಮೆ ಇರುವಾಗಲೇ ಹತೋಟಿ ಕ್ರಮ ಕೈಗೊಳ್ಳುವುದು ಉತ್ತಮ. 4ಸ್ಪೀನೋಸಾಡ್ ಅಥವಾ ಫ್ಲೂಬೆಂಡಾಮೈಡ್ ಅಥವಾ ಇಂಡಾಕ್ಸಾಕಾರ್ಬ್ 0.5 ರಿಂದ 0.8 ಮಿ.ಲೀ. ಅಥವಾ ಕ್ವೀನಾಲ್ಫಾಸ್ 1 ಮೀ.ಲೀ. ಅಥವಾ ಪಾಸಲೋನ್ 1.3 ಮೀ.ಲೀ. ಯಾವುದಾದರೂ ಒಂದನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು. ಲೇಖಕರ ಸಂಪರ್ಕ ಸಂಖ್ಯೆ 9141838367.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT